ಎಲ್ಲರೂ ಸುಂದರರೇ
ಅನೇಕ ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಗೋಮತಿ ಎಂಬ ಪುಟ್ಟ ರಾಜ್ಯವನ್ನು ಚತುರ ಎಂಬ ದೊರೆ ಆಳುತ್ತಿದ್ದ. ತನ್ನ ದಕ್ಷತೆ, ಬುದ್ಧಿವಂತಿಕೆ...

ಅನೇಕ ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಗೋಮತಿ ಎಂಬ ಪುಟ್ಟ ರಾಜ್ಯವನ್ನು ಚತುರ ಎಂಬ ದೊರೆ ಆಳುತ್ತಿದ್ದ. ತನ್ನ ದಕ್ಷತೆ, ಬುದ್ಧಿವಂತಿಕೆ, ನ್ಯಾಯಪರತೆಗೆ ಹೆಸರಾಗಿದ್ದ ಆತ ಪ್ರಜೆಗಳ ಸಂಕಷ್ಟ, ನೋವು, ದುಃಖ, ಕೊರಗುಗಳಿಗೆ ಪರಿಣಾಮಕಾರಿ ಉಪಾಯಗಳನ್ನು ಸೂಚಿಸಿ ಸಂತೈಸುವುದರಲ್ಲಿಯೂ ಸಫಲನಾಗಿದ್ದ. ಒಂದು ದಿನ ಅರಸ ದರ್ಬಾರಿನಲ್ಲಿದ್ದಾಗ ಸುಮಾರು ಮೂವತ್ತರ ಯುವಕನೊಬ್ಬ ಭದ್ರತೆಯನ್ನು ಹೇಗೋ ದಾಟಿ ಮುನ್ನುಗ್ಗಿದ್ದ. 'ಪ್ರಭು ನನ್ನದೊಂದು ಅಳಲು. ತಾವು ದಯಮಾಡಿ ಆಲಿಸಿ ಪರಿಹರಿಸಬೇಕು. ಇದು ವಿಚಿತ್ರವೆಂದು ನನಗೆ ತಿಳಿದಿದೆ. ಆದರೆ ನೀವು ಮಾತ್ರವೇ ಬಗೆಹರಿಸಬಲ್ಲಿರಿ ಎನ್ನುವುದು ನನ್ನ ಅಚಲ ನಂಬಿಕೆ...' ಎನ್ನುತ್ತಿದ್ದ ಅವನನ್ನು ಅಂಗರಕ್ಷಕರು ತಡೆಯಲು ಮುಂದಾದರು. ಬೇಡಿ, ಸ್ವಲ್ಪ ಇರಿ ಅಂತ ಚತುರ ಆಜ್ಞಾಪಿಸಿದ. ಹೇಳು, ಏನು ನಿನ್ನ ಸಮಸ್ಯೆ ಎಂದು ಕೇಳಲು ಆ ಯುವಕ ಹೀಗೆ ವಿವರಿಸಿದ.
'ಹುಟ್ಟಿನಿಂದಲೂ ನಾನು ನನ್ನ ಮುಖವನ್ನು ಒಂದು ದಿನವೂ ತಪ್ಪದೆ ಶಪಿಸಿಕೊಳ್ಳುತ್ತಿದ್ದೇನೆ. ರಾಜ್ಯದಲ್ಲಿ ನನಗಿಂತ ಅದೆಷ್ಟೋ ಮಂದಿ ಸುಂದರರು ಇದ್ದಾರೆ. ನನಗೆ ಉದ್ದ ಮೂಗು, ಕಿವಿ ತುಸು ಕಿರಿದು. ಹಣೆಯೂ ಬಹಳ ಅಗಲ. ಕಣ್ಣುಗಳು ದೊಡ್ಡವೆಂದು ಎಲ್ಲರೂ ಗೇಲಿ ಮಾಡುತ್ತಾರೆ. ಖಂಡಿತವಾಗಿ ಆ ಪ್ರಕೃತಿ ನನಗೆ ಮೋಸ ಮಾಡಿದೆ. ತಮ್ಮಿಂದ ನನಗೆ ಪರಿಹಾರ ನೀಡಿ, ನಾನು ಒಟ್ಟಾರೆ ಸುಂದರ ಎನ್ನಿಸಬೇಕು. ನನ್ನ ಕೈ ಬಿಡಬೇಡಿ ಪ್ರಭು'.
'ಓಹೋ, ನಿನ್ನ ಸಂಕಟ ನನಗೆ ಅರ್ಥವಾಯಿತು. ಯೋಚನೆ ಬಿಡು. ನನ್ನಿಂದ ಇದಕ್ಕೆ ದಿಟವಾಗಿ ಪರಿಹಾರವಿದೆ. ನಾನು ಹೇಳಿದ ಹಾಗೆ ಮಾಡಬೇಕಷ್ಟೆ' ಎಂದ ಚತುರ.
'ಮಹಾಸ್ವಾಮಿ, ನನಗೆ ಅತೀವ ವಿಶ್ವಾಸವಿತ್ತು. ನೀವೇ ಸಂಕಷ್ಟಹರರು ಅಂತ. ಆದೇಶವಾಗಲಿ ದೊರೆ, ನಾನೇನು ಮಾಡಲಿ?' ಎಂದು ಯುವಕ ಕೈಜೋಡಿಸಿದ.
'ಸರಿ. ನಿನಗೆ ಒಪ್ಪಿಗೆಯಾಗುವಂಥ ಗಾತ್ರ, ಆಕಾರದ ಮೂಗು, ಕಿವಿ, ಹಣೆ, ಕಣ್ಣು ಎಲ್ಲೆಲ್ಲಿ ಯಾರ್ಯಾರಿಗಿದೆ ಗಮನಿಸು. ನಿನಗೆ ಮೆಚ್ಚಿಗೆಯಾದವನ್ನು ಕತ್ತರಿಸಿ ತರಬೇಕಾಗಿ ನಾನು ಅಪ್ಪಣೆ ಮಾಡುತ್ತಿಲ್ಲ. ಅವುಗಳ ಮೇಣದ ತದ್ರೂಪುಗಳನ್ನು ತಂದರಾಯಿತು. ನಿನಗೆ ಅವನ್ನು ಜೋಡಿಸುವ ಮುಂದಿನ ಹೊಣೆ ನನ್ನದು' ಎಂದು ದೊರೆ ಅಪ್ಪಣೆ ಮಾಡಿದ. ಆ ಸೌಂದರ್ಯಾಕಾಂಕ್ಷಿ ಯುವಕ ಒಂದು ವಾರದ ನಂತರ ರಾಜ ಆದೇಶಿಸಿದಂತೆ ತದ್ರೂಪಗಳನ್ನು ತಂದು ಸನ್ನಿಧಾನದ ಮುಂದಿರಿಸಿದ.
ಸ್ವತಃ ಚತುರನೇ ಯುವಕನ ತದ್ರೂಪದ ಮೂಗು, ಕಿವಿ, ಹಣೆ, ಕಣ್ಣುಗಳನ್ನು ತನ್ನ ಕತ್ತಿಯಿಂದ ಕತ್ತರಿಸಿದ. ಆಯಾ ಸ್ಥಾನಗಳಿಗೆ ಯುವಕ ತಂದಿದ್ದ, ಅವನು ಮೆಚ್ಚಿದ್ದ ಮೂಗು, ಕಿವಿ, ಹಣೆ, ಕಣ್ಣುಗಳನ್ನು ಜೋಡಿಸಿದ. 'ಅಯ್ಯಾ ಯುವಕನೆ, ಈಗ ನೋಡು ನಿನ್ನ ಹೊಸ ತದ್ರೂಪ ಹೇಗಿದೆ ಅಂತ' ಎಂದು ಚತುರ ಹೇಳಿದ. ಯುವಕ ಒಂದು ಕ್ಷಣ ಮೂಕನಾದ. ಆ ತದ್ರೂಪ ಅವನಿಗೆ ತೀರಾ ಕುರೂಪವಾಗಿ ಕಂಡಿತು. ಆಸ್ಥಾನದಲ್ಲಿದ್ದವರೆಲ್ಲ ಇದೂ ಒಂದು ರೂಪವೇ? ಛೆ! ಎಳೆಯ ಮಕ್ಕಳು ಚೀರಿಕೊಳ್ಳುತ್ತಾರಷ್ಟೆ, ಭಯಾನಕ ಮುಂತಾಗಿ ಒಳಗೊಳಗೆ ನಕ್ಕರು.
'ಪ್ರಭು, ನನಗೆ ಈಗ ಜ್ಞಾನೋದಯವಾಯಿತು. ಇನ್ನು ಮುಂದೆ ನಾನು ಸುಂದರನಲ್ಲ ಎಂದು ಪ್ರಲಾಪಿಸುವುದಿಲ್ಲ. ಪ್ರಕೃತಿ ಮಾತೆ ತನ್ನ ಸೃಷ್ಟಿಯಲ್ಲಿ ಪ್ರಮಾಣಬದ್ಧವಾಗಿಯೇ ಎಲ್ಲವನ್ನೂ ನಿಯೋಜಿಸಿದ್ದಾಳೆ. ವೈವಿಧ್ಯತೆಯನ್ನು ಬಣ್ಣಿಸಲಾಗದು. ಒಂದರಂತೆ ಇನ್ನೊಂದಿಲ್ಲ. ಸೃಷ್ಟಿಯ ನಕ್ಷೆ, ಉದ್ದೇಶಗಳನ್ನು ಎಷ್ಟು ಕೊಂಡಾಡಿದರೂ ಸಾಲದು. ಅಂತೂ ತಮ್ಮದೇ ರೀತಿಯಲ್ಲಿ ನನ್ನ ಕಣ್ಣು ತೆರೆಸಿಬಿಟ್ಟಿರಿ' ಎಂದ ಆ ಯುವಕ ಭಾವಪರವಶನಾದ.
ಅಷ್ಟು ಮಾತ್ರವಲ್ಲ ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸೌಂದರ್ಯ ಮುಖ್ಯ ಎಂದು ಚತುರನು ಯುವಕನ ಬೆನ್ನುತಟ್ಟಿದಾಗ ಆಸ್ಥಾನದಲ್ಲಿ ಮುಗಿಲುಮುಟ್ಟುವಂಥ ಚಪ್ಪಾಳೆ. ಪ್ರಪಂಚದಲ್ಲಿ ಕುರೂಪಿಗಳೇ ಇಲ್ಲ, ಎಲ್ಲರೂ ಸುಂದರರೇ ಎಂಬ ಸಂದೇಶ ಮಾರ್ದನಿಸಿತ್ತು. <
- ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


