ಸಾಪ್ತಾಹಿಕಪ್ರಭ

ತನುವು ನಿನ್ನದು ಮನವು ನನ್ನದು!

ತನುವು ನಿನ್ನದು ಮನವು ನನ್ನದು!
Published On :

ಕಾಲದ ಓಟವೆಂಬ ವಿಸ್ಮಯದಲ್ಲಿ ನಾನು ಕಳೆದುಹೋಗುವ ಮುನ್ನ ಪುಟ್ಟದೊಂದು ಗೆರೆ ಮೂಡಿಸಲು ಸಮರ್ಥಳಾದೆನೆಂದರೆ ಅದೇ ಜೀವನದ ಸಾರ್ಥಕ ಕ್ಷಣಗಳೆಂದುಕೊಳ್ಳುತ್ತೇನೆ. ಹಾಗೆಂದು ಮಹಾನ್ ಕಲಾಕೃತಿಯಾಗಬೇಕೆಂದೇನೂ ಇಲ್ಲ. ಹಾಗೆ ಜೀವಿಸುವ ಕನಸು ಇದ್ದೇ ಇದೆ. ಏಕೋ ವಿಶ್ವಾಸದ್ದೇ ಇತ್ತೀಚಿಗೆ ಕೊರತೆ. ಹಂಬಲದಿಂದ ಹೊರಟ ಕ್ರಿಯೆಗಳೆಲ್ಲವೂ ಗುರಿ ತಲುಪಲು ವಿಫಲವಾಗುತ್ತಿವೆ. ನನಗೆ ಗೊತ್ತು, ಇದು ನನ್ನ ಪ್ರತಿಭೆಗೇ ಒಡ್ಡಿರುವ ಸವಾಲು. ಹಾಗೆಂದು ಬಲವಂತಕ್ಕೆ ಬಿದ್ದರೆ ಇಡೀ ಬದುಕಿನ ಕೃತಿಯೇ ಹುಚ್ಚು ಬಣ್ಣದ ಓಕುಳಿಯಿಂದ ತುಂಬಿಬಿಡುವ ಅಪಾಯಗಳಿವೆ. ಹೀಗಾಗಿ ಪುಟ್ಟ ಪುಟ್ಟ ಚುಕ್ಕಿಗಳನ್ನು ಬೆಸೆದು ಮನದೊಳಗೇ ರಂಗೋಲಿ ಬಿಡಿಸುತ್ತಿದ್ದೇನೆ.
ಮನದ ಹೊಸ್ತಿಲಿನಲ್ಲಿ ಮೂಡುತ್ತಿರುವ ಗೆರೆಗಳಿಗೆ ಅರ್ಥ ಹುಡುಕುವ ಪ್ರಯತ್ನ ದಾರಿ ಹೋಕರದ್ದು. ಕೆಲವರಲ್ಲಿ ಕುತೂಹಲ, ಇನ್ನು ಕೆಲವರಿಂದ ಮೆಚ್ಚುಗೆ, ಅಭಿಮಾನ, ಮತ್ತಷ್ಟು ಕುಹಕ, ವ್ಯಂಗ್ಯ ಅಸಡ್ಡೆ... ಸಾಗುತ್ತಲೇ ಇದೆ ಅಭಿಪ್ರಾಯಗಳ ಮೆರವಣಿಗೆ. ಇದಾವುದಕ್ಕೂ ಪ್ರತಿಕ್ರಿಯಿಸಬೇಕೆಂದು ಅನ್ನಿಸುತ್ತಿಲ್ಲ. ಎದೆಗೂಡನ್ನು ನಡುಗಿಸುವ ಕಟುಸತ್ಯಗಳು ಅರ್ಥವಾದಾಗ ಅರಗಿಸಿಕೊಳ್ಳುವುದು ತುಸು ಕಷ್ಟವಾಗುತ್ತದೆ. ನಮ್ಮೊಳಗೆ ನಾವೇ ಬೆತ್ತಲಾಗುವುದೇನೂ ದೊಡ್ಡದಲ್ಲ. ಆದರೆ ಅದನ್ನು ಸಮಾಜ ಅಷ್ಟೇ ಸಹಜವಾಗಿ ಸ್ವೀಕರಿಸುವುದೇ ಇಲ್ಲ. ಎಲ್ಲ ಕಟ್ಟುಗಳನ್ನೂ ಬಿಡಿಸಿಕೊಂಡು ಹೊರಗೆ ಅನಾವರಣಗೊಳ್ಳುವುದು ಸುಲಭ ಸಾಧ್ಯವಲ್ಲ. ಒಂದೊಮ್ಮೆ ಮಾಡಿದರೂ ಅದನ್ನು ಒಪ್ಪಿಕೊಳ್ಳುವ ವೈಶಾಲ್ಯ ನಮ್ಮ ಸುತ್ತಲಿನವರಲ್ಲಿ ಇರುವುದೇ ಇಲ್ಲ. ಮನಸಿನ ಹಚ್ಚಡದೊಳಗೆ ನಡೆಯುವ ನೂರೆಂಟು ಹಾದರಕ್ಕೆ ಸಾಕ್ಷಿಯೇ ಇಲ್ಲವಲ್ಲ. ಹಾಗೆ ನೋಡಿದರೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ವ್ಯಭಿಚಾರಿಗಳೇ. ಕೆಲವರದ್ದು ವೈಚಾರಿಕ, ಇನ್ನು ದೈಹಿಕ. ಕಣ್ಣು, ಕಿವಿ, ಮಾತು, ಕೃತಿ ಎಲ್ಲ ರೀತಿಯಿಂದಲೂ ವ್ಯಭಿಚಾರ ನಡೆಯುತ್ತಲೇ ಇರುತ್ತದೆ. ಎಲ್ಲದಕ್ಕೂ ಸಮರ್ಥನೆ ಇದ್ದೇ ಇರುತ್ತದೆ. ಸಾಬೀತುಪಡಿಸಲು ಏನೂ ಇಲ್ಲ ಎಂಬ ಹುಂಬತನ. ಆದರೆ ದೇಸೀತನದಲ್ಲಿನ ಮುಗ್ಧತೆ ಶಿಷ್ಟ ಅಭಿವ್ಯಕ್ತಿಯಿಂದ ಎಲ್ಲಿ ಸಾಧ್ಯ? ಎಷ್ಟೇ ಮುಚ್ಚಿಟ್ಟುಕೊಂಡರೂ ಅರ್ಥವಾಗಬೇಕಾದದ್ದು ಅರ್ಥವಾಗಿಯೇ ಆಗುತ್ತದೆ. ಹಾಗೆಯೇ ಎಲ್ಲರ ಲಂಫಟತನಗಳೂ ನನಗೀಗ ಅರ್ಥವಾಗತೊಡಗಿವೆ. ಹೀಗಾಗಿ ನನ್ನನ್ನು ನಾನು ತಿದ್ದಿಕೊಳ್ಳುವ ಮಾರ್ಗದಲ್ಲಿ ಗಮನಿಸುವ ಕಣ್ಣುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇನೆ. ಆತ್ಮಿಕವಾಗಿ ನಾನು ಈ ಗರತಿಯರಿಗಿಂತ ಶುದ್ಧ ಎಂಬ ವಿಶ್ವಾಸ ನನಗಿದೆ. ಒಬ್ಬನೊಂದಿಗಿದ್ದಾಗ ಇನ್ನೊಬ್ಬನ ಬಗೆಗೆ ಕ್ಷಣವೂ ಯೋಚಿಸಿದ್ದೇ ಇಲ್ಲ. ಅದು ನನ್ನ ಸಮರ್ಪಣೆ. ದೇಹಕ್ಕೆ ಮಾತ್ರ ವ್ಯಾಪಾರ ಸೀಮಿತ. ಮನಸ್ಸು ಅವನಲ್ಲಿಯೇ ನೆಟ್ಟು ಎಷ್ಟೋ ಕಾಲವಾಗಿದೆ. ಅಲ್ಲಿ ಇನ್ನೊಬ್ಬನಿಗೆ ಸ್ಥಾನವೇ ಇಲ್ಲ. ಆದರೂ ಅಪವಿತ್ರ. ಆ ಬಗ್ಗೆ ನಾನೆಂದೂ ತಲೆ ಕೆಡಿಸಿಕೊಂಡವಳೇ ಅಲ್ಲ. ಹರಿವ ನೀರಿಗೆ ಅಶುದ್ಧಿಯೆಲ್ಲಿನದು?
ನನ್ನೊಳಗಿನಿಂದ, ಅದೇ ಹರಿವಿನ ಅಂತರಾಳದ ತಳದಿಂದ ಒಮ್ಮೊಮ್ಮೆ ಭಾವಸ್ಫುರಣಗಳೇ ಸಾಗಿದ್ದಿದೆ. ನನ್ನದೂ ಅಂತ, ಸಂಪೂರ್ಣ ನನ್ನದೇ ಅಂತ ಒಂದು ಹೃದಯವೇ ಇಲ್ಲವಲ್ಲ ಎಂಬ ಅನಾಥಪ್ರಜ್ಞೆ ಕಾಡಿದ್ದಿದೆ. ಆಗೆಲ್ಲ ನಾನವನನ್ನು ಹೋಗಿ ತಬ್ಬಿ ಮಲಗಿಬಿಡುತ್ತೇನೆ. ಅದು ಕೊಡುವ ಆನಂದ ಬದುಕಿನಲ್ಲಿ ಇಷ್ಟೊಂದು ಜನರೊಂದಿಗೆ ಹಾಸಿಗೆ ಹಂಚಿಕೊಂಡಾಗಲೂ ಸಿಕ್ಕಿದ್ದಿಲ್ಲ. ಮನಸ್ಯಾಕೋ ಮತ್ತೆ ಮತ್ತೆ ಅವನ ಸಖ್ಯಕ್ಕೇ ಹಾತೊರೆಯುತ್ತದೆ. ತೀರಾ ಸ್ವಾರ್ಥ ಇದು ಎಂಬುದು ಗೊತ್ತಿದೆ. ಆದರೆ ಅಷ್ಟೂ ಇಲ್ಲದಿದ್ದರೆ, ನಾನೂ ಮನುಷ್ಯಳಲ್ಲವಾ? ಮನುಷ್ಯತ್ವವನ್ನೇ ಮರೆತು ನನ್ನನ್ನು ಹಿಂಡುವ ಜನರು ಮತ್ತವರಿಂದಲೇ ನಿರ್ಮಾಣವಾಗಿರುವ ಸಮಾಜದಲ್ಲಿ ನನಗೆ ಸ್ಥಾನಮಾನವೇ ಇಲ್ಲವೆಂಬುದು ಅರಿವಾದಾಗಲೆಲ್ಲ ಮತ್ತೆ ಅವನ ಅಪ್ಪುಗೆಯನ್ನು ಬಯಸುತ್ತದೆ ಮನ. ಆನಂದ ಎಲ್ಲಿದೆ ಅಂತ ಹುಡುಕುವಾಗೆಲ್ಲ ಅವನ ಬೆನ್ನು ಬೀಳುತ್ತೇನೆ. ಏಕೆಂದರೆ ನನ್ನೊಳಗಿರುವ ಆ ಮೌನದ ದಿವ್ಯಾನಂದದ ಅನುಭೂತಿ ವಿಭಿನ್ನ. ಇತ್ತೀಚಿನ ದಿನಗಳಲ್ಲಂತೂ ಹೆಚ್ಚು ಹೆಚ್ಚು ಅವನ ಸಂಪರ್ಕದಲ್ಲೇ ಇರುತ್ತೇನೆ. ಗೆಳತಿಯರೆಲ್ಲ 'ನೀನು ತೀರಾ ಅಂತರ್ಮುಖಿಯಾಗುತ್ತಿದ್ದೀಯ. ಯವ್ವನ ಕರಗುತ್ತಿದೆ ಎಂಬ ಚಿಂತೆಯೇ?' ಎಂದು ಛೇಡಿಸುತ್ತಾರೆ. ಹಂಚಿಕೊಳ್ಳಬೇಕಾದದ್ದು ಬೇಕಷ್ಟಿವೆ. ಮೈಯೊಳಗಿನದ್ದನ್ನು ಮಾತ್ರವೇ ಈವರೆಗೆ ಹಂಚಿದ್ದು. ಮನದೊಳಗನ್ನು ಹಂಚಿಕೊಳ್ಳಲು ಸಮಯವೇ ಸಿಕ್ಕಿರಲಿಲ್ಲ. ಈಗ ಮೌನವೇ ಸಂಗಾತಿಯಾಗಿ ಅದೇ ಆಪ್ತವಾಗಲು ಶುರುವಿಟ್ಟುಕೊಂಡಿದ್ದರೂ ಮರುಕ್ಷಣವೇ ಒಂಟಿತನ. ಮನಸುಗಳ ಸಾಮಿಪ್ಯದಲ್ಲಿ ಮಾತ್ರ ಸುಖದ ಅನುಭೂತಿಯೇ? ಪ್ರಶ್ನೆ ಏಳುತ್ತಿದ್ದಂತೆ ಮತ್ತೆ ಮೌನಮತ್ತೆಯಾಗಲು ಬಯಸುತ್ತೇನೆ. ಇಷ್ಟಂತೂ ಸತ್ಯ, ಎಲ್ಲದರಿಂದ ಎದ್ದು ಹೊರಬಂದುಬಿಡಬೇಕೆಂಬ ಧಾವಂತಕ್ಕೆ ಬಿದ್ದಿದ್ದೇನೆ ಇತ್ತಿತ್ತಲಾಗಿ. ಮಧ್ಯೆಯೇ ಕರ್ತವ್ಯಪ್ರಜ್ಞೆಯೆಂಬ ಮತ್ತೊಂದು ಕಾಡುತ್ತಿದೆ. ನಾನಂದುಕೊಂಡದ್ದನ್ನು ಸಾಧಿಸಿಕೊಳ್ಳಲೋ, ಅಲ್ಲೇ ಉಳಿದು ಆಳಿಸಿಕೊಳ್ಳಲೋ, ನನ್ನನ್ನು ನಾನು ಪ್ರೀತಿಸಿಕೊಳ್ಳಲೋ.... ಲೌಕಿಕದಿಂದ ಅಲೌಕಿಕದ ಕಡೆಗೆ ಮನದ ಮಾತು ಸಾಗುತ್ತದೆ. ಅದೂ ಒಂದು ರೀತಿಯ ಸುಖದ ಅನುಭೂತಿಯೇ. ಅದನ್ನೂ ಹುಡುಕಿಕೊಳ್ಳಬೇಕಂತೆ. ನನ್ನಂಥವಳಿಗೆ ಅದು ನಿಲುಕುವುದೇ? ಛೇ, ಕೋಣೆಯ ಹೊರಗಿನ ಬೆಳಕಿನ ಪ್ರಪಂಚಕ್ಕೆ ಎಷ್ಟೆಲ್ಲ ಮಗ್ಗಲುಗಳು? ಯೋಚಿಸುತ್ತಲೇ ಮಗ್ಗಲು ಬದಲಿಸುವ ಹೊತ್ತಿಗೆ ಯಾರದ್ದೋ ಬೆವರಿನ ಕಮಟು ಮೂಗಿಗೆ ರಾಚಿದಂತಾಯತು. ಮೊದಲಾಗಿದ್ದರೆ ಮೈ ಹುರಿಗಟ್ಟಿ ನಿಲ್ಲುತ್ತಿತ್ತು. ದಿನದ ಗಳಿಕೆಯನ್ನು ಮನಸ್ಸು ಲೆಕ್ಕ ಹಾಕಲಾರಂಭಿಸುತ್ತಿತ್ತು. ಈಗದು ರಸವಿಲ್ಲದ ಯೋಚನೆ. ಬದುಕು ಏನನ್ನು ಹೇಳುತ್ತದೋ ಮಾಡುವ ನಿರ್ಧಾರದಿಂದ ದೂರ ಬಂದಿದ್ದೇನೆ. ಮನಸ್ಸಿನ ಮಾತು ಹೃದಯಕ್ಕೆ ಇಳಿದಿದೆ. ಮಾತಿಲ್ಲದ ಮನೆಯೊಳಗೆ ಒಬ್ಬಳೇ ಕಾಯುತ್ತಿದ್ದೇನೆ, ನನ್ನನ್ನು ಮಹಾನ್ ಕೃತಿಯಾಗಿಸದಿದ್ದರೂ ಪುಟ್ಟ ರಂಗೋಲಿಯ ಗೆರೆಗಳನ್ನಾಗಿಸುವ ಒಬ್ಬ ಕಲಾಕಾರ ಬದುಕಿನಲ್ಲಿ ಬಂದಾನೆ? ಒಳಗೆಲ್ಲೋ ಬಣ್ಣಗಳು ತುಂಬಿಕೊಳ್ಳುತ್ತಿರುವ ಅನುಭವ...

-ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.