ಭಾವಗಳ ಸ್ಫುರಣೆ

ಜನಪದ ರಾಗಗಳ ಜೀವಕಳೆ
ಮೊನ್ನೆ ದೆಹಲಿಯ ಸಂಗೀತ ಯುನಿವರ್ಸಿಟಿಯಲ್ಲಿ ಒಂದು ವಿಶಿಷ್ಟವಾದ ವಿಚಾರ ಸಂಕಿರಣ ನಡೆಯಿತು. ಅಲ್ಲಿ ವಿಚಾರ ವಿನಿಮಯಕ್ಕಾಗಿ ಇಟ್ಟಿದ್ದ ವಿಷಯ 'ಮೀಟಿಂಗ್ ಪಾಯಿಂಟ್ ಆಫ್ ಲೋಕ ಸಂಗೀತ್ (ಜಾನಪದ) ಆ್ಯಂಡ್ ಶಾಸ್ತ್ರೀಯ ಸಂಗೀತ್'... ಬಹಳ ಉಲ್ಲಾಸದಾಯಕವಾಗಿ ನಡೆದ ವಿಚಾರ ವಿನಿಮಯದಲ್ಲಿ ಎಲ್ಲೆಲ್ಲಿ ಎರಡೂ ಸಂಗೀತಗಳು ಸೇರುತ್ತವೆ ಎಂದು ಚಿಂತಿಸುತ್ತ, ಅಭಿಪ್ರಾಯಗಳನ್ನು ಹೇಳುತ್ತ, ಲೋಕ ಸಂಗೀತದ ವಿವಿಧ ಮಜಲುಗಳು, ವೈವಿಧ್ಯವನ್ನು ವಿಮರ್ಶಿಸುವಾಗ ಒಬ್ಬ ಕಲಾವಿದರ ವಿಚಾರ ಹಾಗೂ ವಿಮರ್ಶೆ, ಆ ಸಂಕಿರಣದ ವಿಷಯವನ್ನೇ ವಿಶಿಷ್ಟವಾಗಿ ಬದಲಾಯಿಸಿ ಅದಕ್ಕೊಂದು ಹೊಸ ಆಯಾಮವನ್ನೇ ಕೊಟ್ಟಿತು! ಅವರು ಹೇಳಿದರು- 'ಲೋಕ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಸಂಬಂಧ ಎಷ್ಟು ಗಹನವಾದದ್ದೆಂದರೆ ಅವೆರಡೂ ಸೇರುವ ಮೀಟಿಂಗ್ ಪಾಯಿಂಟ್ ಅಲ್ಲ ಅದು, ಬದಲಾಗಿ ಲೋಕಸಂಗೀತವೇ ಶಾಸ್ತ್ರೀಯ ಸಂಗೀತದ ಉಗಮ ಸ್ಥಾನ!'
ಶಾಸ್ತ್ರೀಯ ಸಂಗೀತದ ಹುಟ್ಟು ಇರುವುದೇ 'ಲೋಕ ಸಂಗೀತ್' ಅಥವಾ 'ಜನಪದ' ಸಂಗೀತದಲ್ಲಿ ನಮ್ಮ ರಾಷ್ಟ್ರದಲ್ಲಂತೂ ಒಂದೊಂದು ರಾಜ್ಯಗಳಲ್ಲಿ ಇಪ್ಪತ್ತೈದು- ಮೂವತ್ತು ಪ್ರಕಾರಗಳ ಲೋಕ ಸಂಗೀತಗಳು ರೂಢಿಯಲ್ಲಿವೆ. ನಮ್ಮ ಗೀಗೀಪದ, ಡೊಳ್ಳುಕುಣಿತ, ಕರಡಿ ಮಜಲು, ಲಾವಣಿ, ಯಕ್ಷಗಾನ, ಬೀಸುಕಲ್ಲಿನ ಹಾಡು, ಸುಗ್ಗಿ ಪದಗಳು, ಮದುವೆ ಹಾಡುಗಳು, ಗೌರೀ ಹಾಡುಗಳು, ತೊಟ್ಟಿಲಿಗೆ ಹಾಕುವ ಹಾಡುಗಳು , ಯುಪಿಯ ಹೋಲಿ, ಚೈತಿ, ರಸಿಯಾ, ದಾದರಾ, ಗುಜರಾತನ ಗರಬಾ, ಅಸ್ಸಾಂನ ಬಿಹೂ, ಕರಮಾ, ಕೋಲ್ಕತ್ತಾದ ಬಾವುಲ್, ಝೂಮರ್, ಪಂಜಾಬ್‌ನ ಟಪ್ಪಾ... ಹೀಗೆ ಕೊನೆಯೇ ಇಲ್ಲ ಅದಕ್ಕೆ. ಹುಟ್ಟಿದಾಗಿಂದ ಸಾಯುವ ತನಕ ಸಂಗೀತ ಮಯವಾಗಿದೆ ಈ ಜನಪದ ಲೋಕ!ಆಕಾಶವೇ ಚಾವಣಿ- ಭೂಮಿಯೇ ನೆಲೆಯಾಗಿ ಯಾವುದೇ ಪರಿಧಿಯಿಲ್ಲದ ಸ್ವಚ್ಛಂದ 'ಬಯಲು' ಜನಪದ ಸಂಗೀತವಾದರೆ, ಅದೇ ಬಯಲಲ್ಲಿ ಪರಿಧಿಗಳನ್ನೆಳೆದು ದೇಶ- ರಾಜ್ಯ- ನಿಯಮ- ವ್ಯವಸ್ಥೆ ಎಂದು ಸಂಸ್ಕೃತಿಯನ್ನು ಬೆಳೆಸುವುದು ಶಾಸ್ತ್ರೀಯ ಸಂಗೀತ.
ಜನಪದ ಸಂಗೀತ ಹೃದಯದ ಗಾಯನ. ಯಾವುದೋ ತೀವ್ರ ಭಾವನೆಗೆ, ನಿಸರ್ಗದ ಅಂದಕ್ಕೆ, ಹಕ್ಕಿಯ ಕಲರವಕ್ಕೆ, ಬಾನ ಕೆಂಪಿಗೆ, ಮಗುವಿನ ಮುದ್ದಾದ ನಗುವಿಗೆ ಹೀಗೆ ಮರುಳಾಗಿ ಅಲ್ಲಿ;ಛಕ್ಕನೆ ಒಂದು ಸ್ವರ ಸಮೂಹವೋ ಅಥವಾ ಒಂದು ಧುನ್ ಹುಟ್ಟುತ್ತದೆ. ಅದಕ್ಕೆ ಯಾವ ನಿಯಮಗಳಿಲ್ಲ; ತಪ್ಪು- ಸರಿ ಎಂಬ ಬುದ್ಧಿಯ ಕೆಲಸವಿಲ್ಲ. ತುಂಬಾ ಸಹಜವಾದ ಸಂಗೀತಮಯ ಭಾವಾಭಿವ್ಯಕ್ತಿ ಅದು. ಅದಕ್ಕೇ ಅದು ಜನರಿಗೆ ಅತೀ ಹತ್ತಿರ ನಮ್ಮ ಅನೇಕ ಜನಪದ ಗೀತೆಗಳು ಹಾಗೂ ಗಾಯಕರನ್ನು ನೋಡಿದಾಗ, ಅವರು ಶುದ್ಧ ಸ್ವರ- ವಿಕೃತ- ಸಪ್ತಕ- ತಾಳ- ಪೆಟ್ತು- ಹುಸಿ- ಸಮ್ ಎಂಬ ಯಾವ ವಿಚಾರಕ್ಕೂ ತಲೆಕೆಡಿಸಿಕೊಂಡಿರುವುದಿಲ್ಲ. ಅಥವಾ ಇಂಥದೇ ಪಕ್ಕವಾದ್ಯಗಳು ಬೇಕು- ಹೀಗಿರಬೇಕು- ಹಾಗಿರಬೇಕು ಎಂಬ ಯಾವ ನಿಯಮಗಳೂ ಇಲ್ಲ... ಎಲ್ಲಿಂದಲೋ ಹೊರಟ ಒಂದು ನಾದಕ್ಕೆ ಶ್ರುತಿ ಸೇರಿಸಿ ಅದ್ಭುತವಾಗಿ ಸಂಗೀತ ಲೋಕವನ್ನು ಸೃಷ್ಟಿಸುತ್ತಾರೆ ಅದರ ಸಾಹಿತ್ಯವೂ ಅಷ್ಟೇ ಸರಳ, ಅರ್ಥಗರ್ಭಿತವಾಗಿರುತ್ತದೆ.
ಹೀಗೆ ಹುಟ್ಟಿದ ಆ ಧುನ್‌ಗಳನ್ನೇ ವ್ಯವಸ್ಥಿತವಾಗಿ ರೂಪುಕೊಟ್ಟು, ಆಳವಾಗಿ ಅಧ್ಯಯನ ಮಾಡಿ, ಅದಕ್ಕೆ ನಿಯಮಗಳನ್ನು ರೂಪಿಸಿ, ಶಾಸ್ತ್ರದ ಚೌಕಟ್ಟನ್ನು ಕಟ್ಟಿ ಅಲ್ಲಿ ಅದ್ಭುತ ಕ್ರಿಯಾಶೀಲತೆಯನ್ನು ಪ್ರಯತ್ನಿಸುವುದು ಶಾಸ್ತ್ರೀಯ ಸಂಗೀತ. ಇಲ್ಲಿ 'ಶಾಸ್ತ್ರ' ಇರಲೇಬೇಕು, ನಿಯಮ ಇರಬೇಕು, ಕಟ್ಟಳೆಗಳು- ತಪ್ಪು- ಸರಿಗಳು ಇರಬೇಕು. ಆಗ ಬುದ್ಧಿಯು ಕೆಲಸಮಾಡತೊಡಗುತ್ತದೆ. ಬುದ್ಧಿಯ ಆ ಮೇಲ್‌ಸ್ತರದ ಜಾಗೃತಾವಸ್ಥೆಯಲ್ಲಿ ಹೃದಯ ಮಿಡಿಯುವ ಭಾವಗಳ ಸ್ಫುರಣವಾಗಬೇಕು- ಆಗ ಅದು ಶಾಸ್ತ್ರೀಯವಾಗುತ್ತದೆ.
ಒಂದು ಉದ್ಭವ ಮೂರ್ತಿಯಾದರೆ ಇನ್ನೊಂದು ಕಲಾವಿದನ ನೈಪುಣ್ಯದಿಂದ ಜೀವಕಳೆ ತುಂಬಿದ ಮೂರ್ತಿ. ಜನಪದ ಸಂಗೀತದ ಸಹಜತೆಯ ಸೊಗಡನ್ನು ನೋಡುವಾಗ, ಅಲ್ಲಮ ಪ್ರಭುಗಳು ಈ ಜಗತ್ತಿನ- ಜನನ, ಮರಣ, ಬೆಳಗು, ರಾತ್ರಿ, ದಿನ ಪ್ರಹರ ಎಂಬ ಯಾವ 'ನಿಯಮ'ಗಳಿಲ್ಲದ, ಸೃಷ್ಟಿಗೂ ಮುಂಚಿನ ಭಗವಂತನ ಸ್ಥಿತಿಯನ್ನು ವರ್ಣಿಸಿದ್ದು ನೆನಪಾಗುತ್ತದೆ- ಆಧಾರವಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ಸುರಾಳ ನಿರಾಳ ವಿಲ್ಲದಂದು, ಸಚರಾಚರಂಗಳೆಲ್ಲ ರಚನೆಗೆ ಬಾರದಂದು- ಗುಹೇಶ್ವರ ನೀನೊಬ್ಬನೇ ಇದ್ದೆಯಲ್ಲ, ಇಲ್ಲದಂತೆ!
- ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


