

ಪ್ರಸ್ತುತ ರಾಷ್ಟ್ರೀಯ ರಾಜಕಾರಣದಲ್ಲಿ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದ ಪ್ರಧಾನಿ ಸ್ಥಾನದ ಅಭ್ಯರ್ಥಿ ಯಾರು ಎನ್ನುವ ವಿಚಾರವೇ ದೊಡ್ಡ ವಿವಾದವಾಗಿ ಕೂತಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗಳಿಸಿ, ಬಿಜೆಪಿಯ ಕಣ್ಮಣಿಯಾಗಿರುವ ನರೇಂದ್ರ ಮೋದಿ ಅವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸಾರಬೇಕೆನ್ನುವ ಒತ್ತಡ ದೊಡ್ಡ ರೀತಿಯಲ್ಲೇ ಆ ಪಕ್ಷದಲ್ಲಿ ಬೆಳೆದು ನಿಂತಿದೆ.
ನಿಜ. ಆ ಕೂಟದಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷ. ಆ ಪಕ್ಷ ಆರಿಸಿದ ವ್ಯಕ್ತಿಗೇ ಕೂಟದ ಸಂಸದೀಯ ನಾಯಕತ್ವದ ಸ್ಥಾನವೂ ಸಿಗಬೇಕು ಎನ್ನುವುದು ತರ್ಕಬದ್ಧವಾದ ಮಾತು. ಆದರೆ, ಆ ತರ್ಕವನ್ನು ಕೂಟದ ಅಂಗ ಪಕ್ಷವಾದ ಬಿಹಾರದ ನಾಯಕ ನಿತೀಶ್ ಕುಮಾರ್ ಒಪ್ಪಿದರೂ, ಪ್ರಧಾನಿಯಾಗುವ ವ್ಯಕ್ತಿ ಅಪ್ಪಟ ಸೆಕ್ಯುಲರ್ ಗುಣಗಳಿಗೆ ಹೆಸರಾಗಿರಬೇಕೆಂದು ಹೇಳಿದ್ದಾರೆ. ಅದರ ಅರ್ಥ ನರೇಂದ್ರ ಮೋದಿ ಬೇಡ ಎಂದೇ.
ಈ ವಿವಾದವನ್ನು ಬಿಜೆಪಿ- ಸಂಯುಕ್ತ ಜನತಾ ದಳಗಳು ಶೀಘ್ರದಲ್ಲೇ ಬಗೆಹರಿಸಿಕೊಳ್ಳದೇ ಹೋದರೆ, ಆ ಕೂಟವೇ ಹೋಳಾಗುವ ಸಂಭವವಿದೆ. ಈ ಪ್ರಕ್ರಿಯೆಯಲ್ಲಿ ಬಿಜೆಪಿ ಬಿಹಾರದಲ್ಲಿ ಕೂಟ ಸರ್ಕಾರದಿಂದ ಹೊರಗೆ ಬರಬೇಕಾಗಬಹುದು.
ಆಗ ಅಲ್ಲಿ ಬಿಜೆಪಿಯ ಪರವಾಗಿ ವಿಧಾನಸಭೆಯಲ್ಲಿ 1995ರಿಂದಲೂ ವಿರೋಧ ಪಕ್ಷದ ನಾಯಕರಾಗಿ ಲಾಲೂ ಪ್ರಸಾದ ಯಾದವ್ ವಿರುದ್ಧ ಹೋರಾಡಿ, 1995ರ ಅನಂತರ ಬಿಜೆಪಿ- ಜೆಡಿಯು ಕೂಟ ಸರ್ಕಾರದ ಉಪಮುಖ್ಯಮಂತ್ರಿಯಾಗಿ, ವಿತ್ತಮಂತ್ರಾಲಯವನ್ನು ತುಂಬಾ ಸಂಯಮ, ವಿಚಕ್ಷಣೆ ಹಾಗೂ ಎಚ್ಚರಿಕೆಯಿಂದ ನಿಭಾಯಿಸಿದ ಸುಶೀಲ ಕುಮಾರ ಮೋದಿ ಅವರು ನಿಜಕ್ಕೂ ಇಕ್ಕಟ್ಟಿನಲ್ಲಿ ಸಿಕ್ಕಿಬೀಳುತ್ತಾರೆ.
ಬಿಜೆಪಿಯ ನಿಲವನ್ನು ನಿತೀಶ್ ಕುಮಾರ್ ಎಷ್ಟೇ ಕಟುವಾಗಿ ಖಂಡಿಸಿದರೂ, ಬಿಜೆಪಿ ನಾಯಕ ಸುಶೀಲ ಕುಮಾರ ಮೋದಿ ಅವರ ಸಹಕಾರ, ಹಾಗೂ ವಿತ್ತೀಯ ವಲಯ, ಆರ್ಥಿಕ ಅಭಿವೃದ್ಧಿಯ ವಲಯಗಳಲ್ಲಿ ಅವರ ಅಪಾರ ಸಾಧನೆಯನ್ನು ಮೆಚ್ಚಿದ್ದಾರೆ. ಅವರಿಬ್ಬರೂ ಅದೆಷ್ಟು ಆತ್ಮೀಯವಾಗಿದ್ದಾರೆಂದರೆ, ಒಬ್ಬರ ಪರವಾಗಿ ಇನ್ನೊಬ್ಬರು ಅಧಿಕಾರವಾಣಿಯಿಂದಲೇ ಮಾತಾಡುತ್ತಾರೆ.
ಇದುವರೆಗೂ ನರೇಂದ್ರ ಮೋದಿ- ನಿತೀಶ್ ಕುಮಾರ್ ವಿವಾದದಲ್ಲಿ ಸುಶೀಲ ಕುಮಾರ ಮೋದಿ ಏನನ್ನೂ ಹೇಳಿಲ್ಲ. ಆದರೂ ಬಿಹಾರದಲ್ಲಿ ರಾಷ್ಟ್ರೀಯ ಜನತಾಂತ್ರಿಕ ಕೂಟ ಹೋಳಾದರೆ, ಸುಶೀಲ ಕುಮಾರ ಮೋದಿ ಅವರೇ ಬಿಜೆಪಿ ನಾಯಕರೆನ್ನುವುದನ್ನು ಎಲ್ಲರೂ ಹೇಳುತ್ತಾರೆ. ಅವರ ಪಕ್ಷ ನಿಷ್ಠೆಯಲ್ಲಿ ಸಂಘ ಪರಿವಾರಕ್ಕೂ ಅನುಮಾನವಿಲ್ಲ, ಅವರ ಆತ್ಮೀಯ ನಿತೀಶ್ ಕುಮಾರ್ ಅವರಿಗೂ ಅನುಮಾನವಿಲ್ಲ.
ಈಚೆಗೆ ದೆಹಲಿಯಲ್ಲಿ ನಡೆದ ಒಂದು ಸಭೆಯಲ್ಲಿ ನಿತೀಶ್ ಕುಮಾರ್ ಬಿಜೆಪಿ ನಾಯಕ ಸುಶೀಲ ಕುಮಾರ್ ಮೋದಿಯನ್ನು ಬಾಯಿತುಂಬಾ ಹೊಗಳಿ ಅಂಥ ರಾಜಕೀಯ ಸಂಗಾತಿ ಸಿಗುವುದು ಕಷ್ಟ ಎಂದಿದ್ದರು. ಅದು ಎಸ್.ಕೆ. ಮೋದಿ ಅವರ ವ್ಯಕ್ತಿತ್ವ.
ಬಿಹಾರ ವಿಧಾನಸಭೆಯಲ್ಲಿ ಲಾಲೂ ಪ್ರಸಾದರ ಸರ್ಕಾರದ ವಿರುದ್ಧ, ವಿರೋಧ ಪಕ್ಷದ ನಾಯಕರಾಗಿ ದೊಡ್ಡ ಳಿಯನ್ನೇ ನಡೆಸಿದ್ದ ಮೋದಿ, ದನದ ಮೇವಿನ ಕಳ್ಳಮಾರಾಟದ ಹಗರಣ ಕುರಿತು ಪಟನಾ ಹೈಕೋರ್ಟಿನಲ್ಲಿ ರಿಟ್ ಅರ್ಜಿಯನ್ನು ಹೂಡಿದ್ದೇ ಲಾಲೂ ಪತನದ ಆರಂಭಕ್ಕೆ ಕಾರಣವಾಗಿತ್ತು.
ಅನಗತ್ಯವಾಗಿ ಹೇಳಿಕೆಗಳನ್ನು ಕೊಡುವುದಾಗಲಿ, ರೋಚಕವಾಗಿ ಭಾಷಣ ಮಾಡುವುದಾಗಲಿ ಅವರ ವ್ಯಕ್ತಿತ್ವಕ್ಕೆ ಒಗ್ಗುವ ವಿಚಾರವಲ್ಲವೆಂದು ಎಸ್.ಕೆ. ಮೋದಿ ಆಗಾಗ ಹೇಳುತ್ತಾರೆ, ಹಾಗೇ ನಡೆದುಕೊಂಡಿದ್ದಾರೆ.
ಅವರೇನೂ ಜನ್ಮತಃ ರಾಜಕೀಯ ಕುಟುಂಬದವರಲ್ಲ. ಅವರ ಮನೆತನ ವ್ಯಾಪಾರಿಗಳದ್ದು, ಸಿದ್ಧಪಡಿಸಿದ ಉಡುಪುಗಳ ವ್ಯಾಪಾರವಿದೆ. ಮೋದಿ 1952ರ ಜನವರಿಯಲ್ಲಿ ಹುಟ್ಟಿದ್ದು ಪಟನಾದಲ್ಲೇ ಅಲ್ಲೇ ಶಿಕ್ಷಣ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತಿ ನಿಷ್ಠ ಸದಸ್ಯರಲ್ಲಿ ಒಬ್ಬರು. ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರೂ ರಾಜಕೀಯದಲ್ಲಿ ಆಸಕ್ತಿಯನ್ನು ತೋರಿಸಿರಲಿಲ್ಲ. ಲೋಕನಾಯಕ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಯ ಆಂದೋಲನ ಆರಂಭವಾದಾಗ ಮೋದಿ ಹಿಂದೆ ಮುಂದೆ ನೋಡಲಿಲ್ಲ.
ತುರ್ತು ಪರಿಸ್ಥಿತಿಯಲ್ಲಿ ಹತ್ತೊಂಬತ್ತು ತಿಂಗಳ ಜೈಲುವಾಸ. ಹೊರಗೆ ಬಂದ ಕೂಡಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಬೆಂಬಲಿಗರ ಹಟ. ಮೋದಿ ಸ್ಪರ್ಧಿಸಲಿಲ್ಲ.
ಆದರೆ 1990 ರಲ್ಲಿನ ಬಿಹಾರದ ರಾಜಕೀಯದ ವಿಶಿಷ್ಟ ಸನ್ನಿವೇಶದಲ್ಲಿ ಮೋದಿ ವಿಧಾನಸಭೆಗೆ ಸ್ಪರ್ಧಿಸಲೇಬೇಕಾಯಿತು. ಗೆದ್ದರು. ವಿರೋಧ ಪಕ್ಷದ ನಾಯಕರೂ ಆದರು, 1995ರಲ್ಲೂ ಅದೇ ಸ್ಥಿತಿ. 2004ರ ಚುನಾವಣೆಯಲ್ಲಿ ಮೋದಿ ಲೋಕಸಭೆಗೆ ಸ್ಪರ್ಧಿಸಲೇಬೇಕೆಂದು ವಾಜಪೇಯಿ ಅವರೇ ಆದೇಶ ನೀಡಿದರು. ಆಯಿತು ಎಂದು ಹೇಳಿ, ಸ್ಪರ್ಧಿಸಿ ಗೆದ್ದರು. 2009ರಲ್ಲೂ ಅಷ್ಟೇ.
ಬಿಹಾರದಲ್ಲಿ ಜೆಡಿಯು- ಬಿಜೆಪಿ ಸರ್ಕಾರದ ರಚನೆಯಾದಾಗ, ಸುಶೀಲ ಕುಮಾರ ಮೋದಿ ಪಕ್ಷದ ಆದೇಶದಂತೆ ಬಿಹಾರಕ್ಕೆ ಹಿಂತಿರುಗಿ ಉಪಮುಖ್ಯಮಂತ್ರಿಯಾದರು, 2010ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದು 102 ಕ್ಷೇತ್ರಗಳಲ್ಲಿ ಮಾತ್ರ. ಗೆದ್ದಿದ್ದು 92. ಯಾವುದೇ ಪಕ್ಷವಾದರೂ ಇಂಥ ಸಾಧನೆಯಿಂದ ಹಿಗ್ಗಲೇ ಬೇಕು, ಮತ್ತೆ ಮೋದಿ ಉಪಮುಖ್ಯಮಂತ್ರಿ.
ಈಗ ಅವರು ವಸ್ತುಗಳ- ಸೇವೆಗಳ ಮೇಲಿನ ಏಕರೂಪ ತೆರಿಗೆಯ ಸಮಸ್ಯೆಗೆ ಪರಿಹಾರ ಸೂಚಿಸುವ ಅಧಿಕಾರ ಪಡೆದ ರಾಜ್ಯಗಳ ವಿತ್ತಮಂತ್ರಿಗಳ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಅಲ್ಲಿ ಇನ್ನೇನು ಆ ಕೆಲಸವೂ ಮುಗಿಯುತ್ತ ಬಂದಿದೆ.
ಇಂತಹ ಪರ್ವಕಾಲದಲ್ಲೇ ನರೇಂದ್ರ ಮೋದಿ- ನಿತೀಶ್ ಕುಮಾರ್ ಸಂಘರ್ಷ ಆರಂಭವಾಗಿದ್ದು, ಹೆಚ್ಚು ಕಡಿಮೆ ಅದು ಚರಮ ಸ್ಥಿತಿಯನ್ನು ಮುಟ್ಟಿದೆ.
ಈಗಲೂ ಮೋದಿ ಸಂಯಮದಿಂದಲೇ ಇದ್ದಾರೆ. ಹೆಚ್ಚು ಮಾತಾಡುತ್ತಿಲ್ಲ. ಮುಂದಿನ ಹೆಜ್ಜೆಯನ್ನಿಡಲು ಅವರು ಸ್ವತಂತ್ರರಲ್ಲ, ಪಕ್ಷದ ಆದೇಶವನ್ನೇ ಪಾಲಿಸುವುದಾಗಿ ಹೇಳಿಬಿಟ್ಟಿದ್ದಾರೆ.
ಅಂಥ ನಾಯಕರು ವಿರಳ.
- ಸತ್ಯ