ಸಾಪ್ತಾಹಿಕಪ್ರಭ

ನಾಯಿ ನೆರಳು

ಬಾಂಬ್‌' ಎಂಬುದು ಅವುಗಳ ಪಾಲಿಗೆ ಪುರಾತನ ಪದ. ಹುಟ್ಟಿದ ಆರೇ ತಿಂಗಳಲ್ಲಿ ಆ ಪದ ಕಿವಿಯೊಳಗೆ ಸ್ಫೋಟಿಸಿ ಗಟ್ಟಿಯಾಗಿದೆ. ಅದರ ಅರ್ಥಕ್ಕೆ ಅವೆಂದೂ ಡಿಕ್ಷನರಿ...

ನಾಯಿ  ನೆರಳು
Published On :

ನೂರಾರು ಸಂಗತಿಗಳಲ್ಲಿ ಬೆಂಗಳೂರಿಗರನ್ನು ಬಚಾವು ಮಾಡಿದ ಶ್ವಾನದಳದ ಮೂರು ಸೀನಿಯರ್ ನಾಯಿಗಳು ರಿಟೈರ್ಡ್ ಆಗಿ ಏಪ್ರಿಲ್ 12ರಂದು ವೃದ್ಧಾಶ್ರಮಕ್ಕೆನಡೆದವು. ಸರಿಯಾಗಿ ಐದನೇ ದಿನಕ್ಕೆ, ಏ.17ರಂದು ಮಲ್ಲೇಶ್ವರಂನಲ್ಲಿ ಉಗ್ರರು ಬಾಂಬನ್ನು ಹೂತಿಟ್ಟು ಹ್ಞೂಂಕರಿಸಿಬಿಟ್ಟರು! ಮಿಕ್ಕ ನಾಯಿಗಳು ನಮ್ಮನ್ನು ಕಾಪಾಡ್ತವಾ? ಇದೀಗ ಪ್ರಶ್ನೆ...

'ಬಾಂಬ್‌' ಎಂಬುದು ಅವುಗಳ ಪಾಲಿಗೆ ಪುರಾತನ ಪದ. ಹುಟ್ಟಿದ ಆರೇ ತಿಂಗಳಲ್ಲಿ ಆ ಪದ ಕಿವಿಯೊಳಗೆ ಸ್ಫೋಟಿಸಿ ಗಟ್ಟಿಯಾಗಿದೆ. ಅದರ ಅರ್ಥಕ್ಕೆ ಅವೆಂದೂ ಡಿಕ್ಷನರಿ ತಿರುವಿ ಹಾಕಿಲ್ಲ. ಬಾಂಬ್ ಎನ್ನುವುದು ಬೆಂಕಿಮಾತ್ರೆ. ಹಾಗೆಂದು ಭೌತ ತಜ್ಞರಂತೆ ಲೆಕ್ಚರ್ ಕೊಟ್ಟರೆ ಲೇಝಿಯಾಗಿ ಅವು ನಾಲಗೆ ಹೊರಹಾಕಿ ಜೊಲ್ಲು ಸುರಿಸುವುದನ್ನೂ ನಿಲ್ಲಿಸುವುದಿಲ್ಲ. ಅಮೋನಿಯಂ ನೈಟ್ರೇಟೋ, ಮತ್ತೊಂದೋ? ನೋಡಲೂ, ಕೈಹಾಕಲೂ ಅಸಹ್ಯವಾದ ಜಾಗಗಳಲ್ಲಿ ಅಡಗಿ ಕುಳಿತ ಆ 'ಬಾಂಬು', ಶ್ವಾನದಳಕ್ಕೆ ಕೇವಲ ಬಾಂಬು. ಅದರ ಪ್ರತಾಪಗಳನ್ನು ಸಿನಿಮಾ- ಡಿವಿಡಿಗಳಲ್ಲಿ ಕಂಡಿದ್ದಿಲ್ಲ. ಬಾಂಬು ಸಿಡಿಯುತ್ತದೆ; ಸಿಡಿದು ಸಮೀಪವಿದ್ದಿದ್ದನ್ನೆಲ್ಲ ಸಿಗಿಯುತ್ತದೆ; ನೋಡನೋಡುತ್ತಾ ತನ್ನಂತ ಸಜೀವ ಶರೀರಗಳಿಗೆ 'ಪಾರ್ಥಿವ ಶರೀರ'ವಾಗಿ ನಾಮಕರಿಸುತ್ತದೆ; ಕೆಂಪು ರಕ್ತವೂ ಕ್ಷಣದಲ್ಲಿ ಕಪ್ಪಾಗುತ್ತದೆ; ಅಲ್ಲಿನ ಕರಕಲು ಕೆಂಡದ ಬಿಸಿಗೆ ಸುತ್ತಲಿನವರ ಕಣ್ಣೀರೂ ಒಣಗದು ಎಂಬುದನ್ನೂ ಪೊಲೀಸ್ ನಾಯಿಗಳು ಸೆಂಟಿಮೆಂಟಾಗಿ ಯೋಚಿಸಿದ್ದೇ ಇಲ್ಲ.
ಅವುಗಳಿಗೆ ಮೂಸುವುದೇ ಡ್ಯೂಟಿ. ಮುನ್ಸೂಚನೆ ಸಿಗದೆ ಬೆಂಗಳೂರು ಹೊಗೆಯಾದಾಗಲೆಲ್ಲ, ಮುನ್ನೂರು ನಾನೂರು ಕಡೆ ಮೂಸುತ್ತಾ ಮುಂದಿನ ಸ್ಫೋಟಗಳನ್ನು ತಣ್ಣಗೆ ಮಾಡುತ್ತವಷ್ಟೇ. ಉಗ್ರರೂ ಈಗ ಜಾಣರಾಗಿದ್ದಾರೆ. ಹೂತಿಟ್ಟ ಬಾಂಬಿನೆದುರು ಪೊಲೀಸ್ ನಾಯಿಗಳು ಬೊಗಳಿದರೂ ಅವುಗಳ ಮೂನ್ನೂರ ಹತ್ತೊಂಬತ್ತು ಮೂಳೆಗಳೂ ಮುಲಾಜಿಲ್ಲದೆ ಪುಡಿಪುಡಿ. ಬೊಗಳುವ ಸೌಂಡಿಗೂ ಸಿಡಿಯುವ, ಕಾಲಿಟ್ಟರೂ ಕೆಂಡವಾಗಿಸುವ ಬಾಂಬುಗಳ ಯುಗದ ಸವಾಲುಗಳಿಗೂ ನಮ್ಮ ಶ್ವಾನದಳ ರೆಡಿ. ಬಾಂಬು ಪತ್ತೆಯಾದರೂ ಬೊಗಳದೆ, ಮೌನ ಭಾಷೆಯಲ್ಲೇ ಹ್ಯಾಂಡ್ಲರ್‌ಗಳನ್ನು ಕರೆದು ಸುಳಿವನ್ನು ಸೂಚಿಸುವ ಕಲೆ ಅವಕ್ಕೆ ಈಗೀಗ ರೂಢಿ.
ಬಾಂಬ್ ಪತ್ತೆಯೇ ಇರಲಿ, ಕತ್ತು ಕೊಯ್ದು ಕಾಲ್ಕಿತ್ತ ಅಪರಾಧಿಯ ನಾಪತ್ತೆಯೇ ಆಗಿರಲಿ... ಕರ್ನಾಟಕ ಡಾಗ್‌ಸ್ಕ್ವಾಡ್‌ನ ಅನುಭವಿ ನಾಯಿಗಳು ಶೆರ್ಲಾಕ್ ಹೋಮ್ಸ್‌ಗಿಂತ ಸ್ಪೀಡಾಗಿ ಸುಳಿವನ್ನು ಪತ್ತೆಹಚ್ಚಿವೆ. ಹೀಗೆ, ನೂರಾರು ಸಂಗತಿಗಳಲ್ಲಿ ಬೆಂಗಳೂರಿಗರನ್ನು ಬಚಾವು ಮಾಡಿದ ಶ್ವಾನದಳದ ಮೂರು ಸೀನಿಯರ್ ನಾಯಿಗಳು ರಿಟೈರ್ಡ್ ಆಗಿ ಏಪ್ರಿಲ್ 12ರಂದು ವೃದ್ಧಾಶ್ರಮಕ್ಕೆನಡೆದವು. ಸರಿಯಾಗಿ ಐದನೇ ದಿನಕ್ಕೆ, ಏ.17ರಂದು ಮಲ್ಲೇಶ್ವರಂನಲ್ಲಿ ಉಗ್ರರು ಬಾಂಬನ್ನು ಹೂತಿಟ್ಟು ಹ್ಞೂಂಕರಿಸಿಬಿಟ್ಟರು!
ಸಿಂಧು, ಪೆಪ್ಸಿ, ವರ್ಮಾ ಈಗ ಶ್ವಾನದಳದ ನಿವೃತ್ತ ಸಿಬ್ಬಂದಿ. ಈ ಮೂರು ಕಮ್ಯಾಂಡೋಗಳ ರಿಟೈರ್‌ಮೆಂಟು ಗಂಗೂಲಿ, ದ್ರಾವಿಡ್, ಲಕ್ಷ್ಮಣರ ನಿವೃತ್ತಿಯಷ್ಟೇ ಭೀಕರ. ಸಿಂಧು, ಪೆಪ್ಸಿಯದ್ದು ಹತ್ತುವರ್ಷ, ವರ್ಮಾದ್ದು ಒಂಬತ್ತೂವರೆ ವರ್ಷ ಸೇವೆ. ಆಲ್ ಇಂಡಿಯಾ ಪೊಲೀಸ್ ಡಾಗ್ ಮೀಟ್‌ನಲ್ಲಿ ಚಿನ್ನ ಗೆದ್ದಿದ್ದ ಲ್ಯಾಬ್ರಡಾರ್ ಜಾತಿಯ ಸಿಂಧುಗೆ ಕಿಡ್ನಿ ಪ್ರಾಬ್ಲಂ ಅಲ್ಲದೆ ಬ್ಯಾಕ್ ಜಾಯಿಂಟ್ ಪ್ರಾಬ್ಲಮ್ಮೂ ಇತ್ತು. ಬೆಳ್ಳಿಪದಕ ಗೆದ್ದಿದ್ದ ಡಾಬರ್‌ಮ್ಯಾನ್ ಜಾತಿಯ 'ಕ್ರೈಮ್ ನಾಯಿ' ಪೆಪ್ಸಿಗೆ ಇದ್ದಿದ್ದು ಕ್ಯಾನ್ಸರ್. ಲ್ಯಾಬ್ರಡಾರ್ 'ವರ್ಮಾ'ಗೆ ಕಣ್ಣಿನ ದೃಷ್ಟಿ ಕೈಕೊಟ್ಟಿತ್ತು. ಎಲ್ಲ ಸಂಗತಿಗಳು ದೃಢಪಟ್ಟ ಮೇಲೆಯೇ ಇವುಗಳಿಗೆ ಸಿಕ್ಕಿದ್ದು ನಿವೃತ್ತಿ ಪಟ್ಟ.

ಪುಕ್ಕಟೆ ವರ್ಗಾವಣೆ
ನಿವೃತ್ತಿ ಎಂದರೆ ನಾವು ನೀವೆಲ್ಲ ಕ್ಯಾಲ್ಕುಲೆಟರ್‌ನಲ್ಲಿ ಪೆನ್ಷನ್ನನ್ನು ಲೆಕ್ಕಿಸುತ್ತೇವೆ. ಪಾಪ ಅವಕ್ಕೆ ಪೆನ್ಷನ್ ಸಮನಾಗಿ ಸವಲತ್ತುಗಳೇನೂ ಸಿಗಲ್ಲ. 'ಶ್ವಾನ ಅನಾಥಾಲಯ'ದಂಥ ವೃದ್ಧಾಶ್ರಮಕ್ಕೆ ಪುಕ್ಕಟೆಯಾಗಿ ದಾಟಿಸಲಾಗುತ್ತದೆ. ಶ್ವಾನದಳದಲ್ಲಿ ಹತ್ತು ವರ್ಷ ಡ್ಯೂಟಿಯೇ ಗರಿಷ್ಠ ಸೇವೆ. ಅಷ್ಟು ವರ್ಷ ಪೂರೈಸಿದ ಮೇಲೆ ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆ ಅವುಗಳ ಉತ್ಸಾಹವನ್ನು ಕಸಿಯುತ್ತದೆ. ಅಲ್ಲಿಗೆ ಅವುಗಳ ಕಥೆ ಶೇ.90 ಮುಗಿದಂತೆಯೇ.

ಡ್ಯೂಟಿಯೇ ಮಾರಕ
ಮೂಗರಳಿಸಿಕೊಂಡು ಮೂಸುವುದೇ ಇವುಗಳ ಆರೋಗ್ಯಕ್ಕೆ ದೊಡ್ಡ ಹೊಡೆತ. ಟ್ರೈನಿಂಗ್‌ನಲ್ಲಿ ಗನ್‌ಪೌಡರ್‌ನ ವಾಸನೆ, ಸಾರ್ವಜನಿಕ ಸ್ಥಳಗಳಲ್ಲಿ ಅಡಗಿಸಿಟ್ಟ ಬಾಂಬಿನ ಗಾಳಿಗಳ ಸೇವನೆ ಇವುಗಳ ಕಿಡ್ನಿಗೆ ಮಾರಕ. ಹೀಗಾಗಿ, ಡಾಗ್‌ಸ್ಕ್ವಾಡ್‌ನ ಬಹುತೇಕ ನಾಯಿಗಳಿಗೆ ಕಾಡುವುದು ಇದೇ ಕಿಡ್ನಿ ಸಮಸ್ಯೆ. ಇನ್ನೊಂದು ಮುಖ್ಯ ರೋಗ, ಕುರುಡುತನ. ಕೆನೆಲ್‌ನಲ್ಲಿ (ನಾಯಿಗೂಡು) ಬೆಳಕಿನ ವ್ಯವಸ್ಥೆ ಸರಿಯಾಗಿರದೆ, ಕತ್ತಲು ಕಾರ್ಮೋಡದಂತೆ ಹಬ್ಬಿದ್ದರೆ ಕೆಲವೇ ವರ್ಷಗಳಲ್ಲಿ ಕಣ್ಣು ನಿಷ್ಪ್ರಯೋಜಕ ಅಂಗವಾಗುತ್ತದೆ.
ಸಮಾಜದ ಪಾಲು
ಹುಟ್ಟಿ ಮೂರು- ಆರು ತಿಂಗಳೊಳಗೆ ಇವಕ್ಕೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಗುತ್ತದೆ ಎಂದರೆ ಇವುಗಳ ಕೆಪಾಸಿಟಿ ಎಷ್ಟು, ಊಹಿಸಿ!

ಅಲ್ಲಿಯ ತನಕ ತಮಗೋಸ್ಕರ ಬದುಕುತ್ತಿದ್ದ ಅವು ಸಮಾಜದ ಪಾಲಾಗುತ್ತವೆ. ಸ್ವೇಚ್ಛಾಚಾರಕ್ಕೆ ತಡೆ. ಶ್ವಾನಕಾನೂನಿನ ನೆರಳಲ್ಲಿ ಸೇವೆ. ಮೊದಲ ವಾರದಲ್ಲಿ 'ಸಿಟ್‌', ಮರುವಾರ 'ಡೌನ್‌', ನಂತರ 'ಅಪ್‌', 'ರೋಲ್‌', 'ಸೆಲ್ಯೂಟ್‌', 'ಹ್ಯಾಂಡ್ಸ್‌ಅಪ್‌', 'ಸ್ಪೀಕ್‌', 'ಸರ್ಚ್‌'... ಹೀಗೆ ಒಂಬತ್ತು ತಿಂಗಳಲ್ಲಿ ಎಲ್ಲ ಪೊಲೀಸ್ ಭಾಷೆಗಳನ್ನೂ ಪಕ್ಕಾ ಮಾಡಿಕೊಳ್ಳಲೇಬೇಕು. ಒಬ್ಬ ಹ್ಯಾಂಡ್ಲರ್‌ಗೆ (ನಿರ್ವಾಹಕ) ಒಂದೇ ನಾಯಿ. ಆತನೇ ಮೇಷ್ಟ್ರು. ಹೊಡೆದು, ಬಡಿದು ಹೇಳಿಕೊಡುವುದಕ್ಕಿಂತ ಪ್ರೀತಿ ತೋರಿಸಿದರೇನೇ ಇವು ಹತ್ತಿರ ಆಗೋದು. ಶ್ವಾನದಳದಲ್ಲಿ ಇಂಗ್ಲಿಷ್ ಕಲಿಕಾ ಭಾಷೆ. ಆದರೆ, ನಿವೃತ್ತ ಸಿಂಧುಗೆ ಪಕ್ಕಾ ಕನ್ನಡ ಬರುತ್ತಿತ್ತು.

ಯಾವ ನಾಯಿ ಬೆಸ್ಟ್?
ಇದ್ದ ನಾಯಿಗಳಲ್ಲಿ ಡಾಬರ್‌ಮ್ಯಾನ್ ತುಂಬಾ ಕಿಲಾಡಿ. ಕ್ರೈಮ್‌ಗೆ ಹೆಚ್ಚು ಹೊಂದಿಕೊಳ್ಳುವ ನಾಯಿ. ಮಿಕ್ಕೆಲ್ಲದರಕ್ಕಿಂತ ತುಂಬಾ ವೇಗಿಯಾದ ಕಾರಣ ಅಪರಾಧಿಗಳ ಪತ್ತೆ ಇದಕ್ಕೆ ಸಲೀಸು. ಆದರೆ, ಬಾಂಬುಗಳ ಪತ್ತೆಗೆ ಇದನ್ನು ನಂಬಿಕೊಳ್ಳುವ ಹಾಗಿಲ್ಲ. ಚಂಚಲತೆ ಜಾಸ್ತಿ. ಮೆಂಟೇನ್ ಮಾಡುವವ ಎಂಟೆದೆ ಭಂಟನೇ ಆಗಿರಬೇಕು. ಆದರೆ, ಲ್ಯಾಬ್ರಡಾರ್ ಹಾಗಲ್ಲ. ಮೃದು ವ್ಯಕ್ತಿತ್ವ. ಸ್ನೇಹಪರ. ರಕ್ಷಣೆ ವಿಚಾರದಲ್ಲಿ ಸದಾ ಸಿದ್ಧಸೂತ್ರ. ಬಾಂಬುಗಳ ಪತ್ತೆಗೆ (ಎಕ್ಸ್‌ಪ್ಲೋರರ್) ಹೇಳಿಮಾಡಿಸಿದ ನಾಯಿ. ಮತ್ತೆ ಜರ್ಮನ್ ಶೆಫರ್ಡೂ ಪರ್ವಾಗಿಲ್ಲ. ಇವುಗಳನ್ನೂ ಬಾಂಬ್ ಪತ್ತೆಗೆ ಬಳಸುವುದುಂಟು. ರಾಜ್ಯ ಶ್ವಾನದಳದಲ್ಲಿ ಮುಖ್ಯವಾಗಿರುವುದು ಇವೇ ಮೂರು ಜಾತಿ.

ಮೈಂಡ್ ರೀಡ್ ಮಾಡ್ತವೆ!
ನಾಯಿಯನ್ನು ಸಂಭಾಳಿಸುವ ನಿರ್ವಾಹಕ (ಹ್ಯಾಂಡ್ಲರ್) ಫಿಟ್ ಆಗಿರದಿದ್ದರೂ ಅಡ್ಡಿಯಿಲ್ಲ, ಆದರೆ ಮಾತಿನಲ್ಲಿ ಗಡಸುತನವಿರಬೇಕು. ಅದಿಲ್ಲದೆ ಹೋದಲ್ಲಿ ನಿರ್ವಾಹಕನನ್ನೇ ನಾಯಿ ಹ್ಯಾಂಡ್ಲ್ ಮಾಡುವ ಸಾಧ್ಯತೆ ಇರುತ್ತದೆ. ಒಂದು ವರ್ಷದೊಳಗೆ ನಿರ್ವಾಹಕನ ಗುಣ, ಆಲೋಚನೆಗಳನ್ನೆಲ್ಲ ಅರಿಯುತ್ತವೆ. ಕೇವಲ ಡ್ಯೂಟಿಯ ಸಮಯದಲ್ಲಷ್ಟೇ ಅಲ್ಲ, ಫ್ರೀ ಇದ್ದಾಗಲೆಲ್ಲ ಹ್ಯಾಂಡ್ಲರ್ ಆ ನಾಯಿಯ ಜತೆಗಿರಬೇಕು. ಆಗಲೇ ಅದು 'ದಕ್ಷ ಸಿಪಾಯಿ' ಆಗಿ ಸಿದ್ಧವಾಗೋದು.

ಮೂರು ಶಿಫ್ಟ್‌ಗಳು
ರಾಜ್ಯ ಶ್ವಾನದಳದ ಆಡುಗೋಡಿ ಕೇಂದ್ರಕಚೇರಿಯಲ್ಲಿ ಸದ್ಯ 45 ನಾಯಿಗಳಿವೆ. ರಾಜ್ಯದಲ್ಲಿನ ಒಟ್ಟು ಶ್ವಾನಸಿಪಾಯಿಗಳು 154. ಮಿಕ್ಕೆಲ್ಲೆಡೆಗಿಂತ ಬೆಂಗಳೂರಿನ ದಳಕ್ಕೆ ಟೈಟು ಡ್ಯೂಟಿ. ಮೂರು ಶಿಫ್ಟುಗಳಲ್ಲಿ ಡ್ಯೂಟಿ. ಬೆಳಗ್ಗೆ 7ರಿಂದ ಮಧ್ಯಾಹ್ನ 1. ಮಧ್ಯಾಹ್ನ 1ರಿಂದ ರಾತ್ರಿ 8. ರಾತ್ರಿ 8ರಿಂದ ಬೆಳಗ್ಗೆ 7ರ ವರೆಗೆ. ಪೊಲೀಸ್ ಸಿಬ್ಬಂದಿಗೆ ಕೊನೇಪಕ್ಷ ಅರ್ಧ ತಾಸು ರೆಸ್ಟಾದರೂ ಸಿಗಬಹುದು. ಆದರೆ, ಇವಕ್ಕಿಲ್ಲ. ಡ್ಯೂಟಿ ಮುಗೀತು ಅಂತ ಕೆನೆಲ್‌ಗೆ ಬಂದ ಮೇಲೂ ಕೆಲವು ಹೊತ್ತು ಪ್ರ್ಯಾಕ್ಟೀಸ್ ಇದ್ದಿದ್ದೇ. ಬೆಳಗ್ಗೆ- ಮಧ್ಯಾಹ್ನ ಹೊಟ್ಟೆಗೆ ಹಾಲು, ಮೊಟ್ಟೆ, ತರಕಾರಿ, ರವೆ- ರಾಗಿ- ಸಬ್ಬಕ್ಕಿ ಗಂಜಿ, ಮೀನೆಣ್ಣೆ ಮತ್ತು ಕ್ಯಾಲ್ಷಿಯಂ ಸಿರಪ್‌ಗಳು. ಸಂಜೆ 5.30ಕ್ಕೇ ರಾತ್ರಿ ಊಟ!

ಗೋಮಾಂಸವೇ ಆಗ್ಬೇಕು!
ಶ್ವಾನಗಳಿಗೆ ರಾತ್ರಿ ಊಟಕ್ಕೆ ಬಡಿಸುವುದು ಗೋಮಾಂಸವನ್ನು! ಅದೂ ಅರ್ಧ ಕಿಲೋಗ್ರಾಂನಷ್ಟು. ಆ ಮಾಂಸ ಚೆನ್ನಾಗಿರುತ್ತೆ ಅಂತೇನೂ ಹೇಳೋಕ್ಕಾಗಲ್ಲ. ತರುವಾಗಲೇ ಅದು ಅರೆಕೊಳೆತು ಗಬ್ಬು ನಾರುತ್ತಿರುತ್ತದೆ. ಅಂಥ ಮಾಂಸವನ್ನು ತಿಂದೂ, ಫಿಟ್ ಎನ್ನಿಸಿಕೊಂಡು, ಸೇವೆ ಮಾಡುವ ಅವುಗಳ ಮನಸ್ಸುಗಳಿಗೆ ಸೆಲ್ಯೂಟ್ ಹೊಡೆಯೋರು ಇಲಾಖೆಯಲ್ಲಿ ತುಂಬಾ ಕಮ್ಮಿ. ನಾಯಿಗಳೇ ತಮಗೆ ಸೆಲ್ಯೂಟ್ ಹೊಡೆಯಬೇಕೆಂಬ ಕಾನೂನಿದೆಯಲ್ಲ!

ಬೆಂಗಳೂರು ರೌಂಡ್

ಬೆಂಗಳೂರಿನ ಶ್ವಾನದಳದ ನೈಟ್‌ಡ್ಯೂಟಿ ನಿಜಕ್ಕೂ ರಿಸ್ಕು. ರಾತ್ರಿ ಪೂರ್ತಿ ಬಿಎಂಟಿಸಿ ಬಸ್‌ಸ್ಟ್ಯಾಂಡ್‌ಗಳು, ರೇಲ್ವೆ ಸ್ಟೇಶನ್‌ಗಳು, ಡೌಟು ಬಂದಲ್ಲೆಲ್ಲ ಮೂಸುತ್ತಾ ಹೋಗೋದು ತುಂಬಾನೇ ಕಷ್ಟ. ಈ ಶಿಫ್ಟಿನ ನಾಯಿ ರಾತ್ರಿಪಾಳಿ ಮುಗಿಸಿ ಬೆಳಗ್ಗೆ 5.30ಕ್ಕೆ ರಾಜಭವನ್ ತಲುಪಬೇಕು. ಅಲ್ಲಿ ವೆಹಿಕಲ್ಲು, ರಾಜ್ಯಪಾಲರು ವಾಕಿಂಗ್ ಮಾಡುವ ಜಾಗಗಳನ್ನು ಪರೀಕ್ಷಿಸಬೇಕು. ನಂತರ ಆರು, ಆರೂಕಾಲಿಗೆ ಸಿಎಂ ಮನೆ. ಅಲ್ಲೂ ಎಡೆಬಿಡದೆ ಚೆಕ್ಕಿಂಗು. ಅದು ಮುಗಿದ ಮೇಲೆ 8 ಗಂಟೆಗೆ ಹೈಕೋರ್ಟಿನ ಸುತ್ತಮುತ್ತ. ವಿಐಪಿಗಳು ವಾಕಿಂಗ್ ಮಾಡುವ ಕಬ್ಬನ್ ಪಾರ್ಕಿಗೂ ವಿಸಿಟ್ಟು. ಇಷ್ಟೆಲ್ಲ ಮೈಮುರಿದು, ಪ್ರಾಣವನ್ನೇ ಪಣಕ್ಕಿಟ್ಟು ಸೇವೆಗೈಯ್ಯುವ ಶ್ವಾನಗಳಿಗೆ ಕೊನೆಗೆ ಹೇಳುವಂಥ ಮರ್ಯಾದೆಯೇ ಸಿಗೋದಿಲ್ಲ. ಕೆನೆಲ್‌ಗಳಲ್ಲಿ ಸೋತು ಮಲಗಿದ ನಾಯಿಗಳನ್ನು ಪ್ರೀತಿ ಇಟ್ಟುಕೊಂಡ ಹ್ಯಾಂಡ್ಲರ್‌ಗಳಷ್ಟೇ ಮಾತನಾಡಿಸಬೇಕಷ್ಟೇ. ಕೈಯಲ್ಲಿ ಏನೂ ಆಗದೇ ಇದ್ದಾಗ ನಿವೃತ್ತಿಗಾಗಿ ಮೇಲಧಿಕಾರಿಗಳಿಗೆ ಅರ್ಜಿ ಹಾಕಬೇಕು. ಅಲ್ಲಿಂದ ಗ್ರೀನ್‌ಸಿಗ್ನಲ್ ಸಿಕ್ಕಮೇಲೆ ಡಿಪಾರ್ಟ್‌ಮೆಂಟಿಗೂ ಆ ನಾಯಿಗೂ ಸಂಬಂಧವೇ ಇರೋದಿಲ್ಲ. ನಂತರ ನಾಯಿಯ ನಡಿಗೆ ನೆಟ್ಟಗೆ ವೃದ್ಧಾಶ್ರಮದ ಕಡೆಗೆ.
ಕಡೇಪಕ್ಷ ಹತ್ತು ವರ್ಷದಿಂದ ಮಗುವಿನಂತೆ ಸಾಕಿದ ಹ್ಯಾಂಡ್ಲರ್‌ಗೆ ವರ್ಗಾಯಿಸಿದರೂ ಅದಕ್ಕೆ ನೆಮ್ಮದಿಯ ಸಾವು ಸಿಗುತ್ತಿತ್ತೇನೋ? ಆ ವೃದ್ಧಾಶ್ರಮಕ್ಕಿಂತ ಉಗ್ರರು ಹೂತಿಟ್ಟ ಬಾಂಬನ್ನು ಮೆಟ್ಟಿ ಸಾಯುವುದೇ ಅವಕ್ಕೆ ಸುಖದ ಸಾವಾಗುತ್ತಿತ್ತೇನೋ? ಗೊತ್ತಿಲ್ಲ. ಏಕೆಂದರೆ, ನಾಯಿ ಮಾತಾಡುವುದಿಲ್ಲ!

ನನ್ಗೆ ಸಿಂಧು ಬೇಕು...

ಅದು 2003ರ ಸುಮಾರು. ಈಗ ನಿವೃತ್ತಿಯಾದ ಸಿಂಧುವಿಗೆ ಆಗ ನಾಲ್ಕು ತಿಂಗಳು. ಶ್ವಾನದಳದವರು ಇದನ್ನು ಖರೀದಿಸಿದ ಒಂದೇ ತಿಂಗಳಲ್ಲಿ 'ಸಿಂಧು' ಕಣ್ಣೀರಿಟ್ಟಳು. ದೊಡ್ಡ ಕರುಳು, ಸಣ್ಣ ಕರಳು ನಡುವೆ ಸಂಪರ್ಕವೇ ಕಡಿತಗೊಂಡು ವಿಲಿವಿಲಿ ಒದ್ದಾಡಿದಳು. ನಾಲ್ಕಾರು ವೈದ್ಯರು, ಸ್ಟೆಥಾಸ್ಕೋಪ್ ಹಿಡಿದು ದೇಹವನ್ನು ಸ್ಕ್ಯಾನ್ ಮಾಡಿ, ಇದು ಬಗೆಹರಿಯುವ ಕೇಸಲ್ಲ ಅಂತ ಕೈಬಿಟ್ಟರು. ಆದರೂ ಒಬ್ಬರು ವೈದ್ಯರು ಹೇಗೋ ಆಪರೇಶನ್ ನಡೆಸಿ ಆ ಮರಿಯನ್ನು ಬದುಕಿಸಿದರು. ಆಗ ಹಗಲೂ ರಾತ್ರಿ ಅದರೊಂದಿಗೇ ಕೆನೆಲ್‌ನಲ್ಲಿ ಮಲಗಿ ಸಿಂಧುವನ್ನು ಪೋಷಿಸಿದ್ದು ಹ್ಯಾಂಡ್ಲರ್ ಗೋವಿಂದಪ್ಪ. ಕೆಲವೊಮ್ಮೆ ತಮ್ಮ ಸಂಬಳದಲ್ಲೇ ಹಣ್ಣುಗಳನ್ನು ತಂದು ಅದರ ಆರೈಕೆ ಮಾಡಿದವರು. ಸಿಂಧು ಸುಧಾರಿಸಿಕೊಂಡ ಮೇಲೆ, ಮರುವರ್ಷವೇ ಆಲ್ ಇಂಡಿಯಾ ಪೊಲೀಸ್ ಡಾಗ್ ಮೀಟ್‌ನಲ್ಲಿ ಅದಕ್ಕೆ 'ಚಿನ್ನದ ಪದಕ' ಬರುವಂತೆ ಮಾಡಿದ್ದೂ ಗೋವಿಂದಪ್ಪನವರೇ!
ಈಗ ಸಿಂಧು ನಿವೃತ್ತಳಾಗಿರುವ ದುಃಖ ಅವರಿಂದ ತಡೆಯಲಾಗುತ್ತಿಲ್ಲ. ಹೇಗೋ ಹರಸಾಹಸ ಪಟ್ಟು, ಯಾರಿಂದಲೋ ವೃದ್ಧಾಶ್ರಮದ ಒಳಹೊಕ್ಕ ಸಿಂಧುವನ್ನು ತಮ್ಮ ಮನೆಗೆ ತಂದಿದ್ದಾರೆ. ಅದಕ್ಕೆ ಕಿಡ್ನಿ ಸಮಸ್ಯೆ ಇದೆಯಂತ ಗೊತ್ತು, ಮೂಳೆ ಪ್ರಾಬ್ಲಂ ಇದೆಯಂತಲೂ ಗೊತ್ತು... ಆದರೂ ಅದು ಹೆತ್ತಮಗುವಿಗೆ ಸಮ ಅಂತಾರೆ ಗೋವಿಂದಪ್ಪ. ಬರುವ ಸಂಬಳದಲ್ಲಿ 5 ಸಾವಿರ ರು.ಗಳನ್ನು ಅದರ ಆರೈಕೆಗೇ ಮೀಸಲಿಟ್ಟಿದ್ದಾರೆ. ಇದಕ್ಕಾಗಿ ಕುಡಿತ ಬಿಟ್ಟಿದ್ದಾರೆ ಆ ಪುಣ್ಯಾತ್ಮ. ವೃದ್ಧಾಶ್ರಮದಲ್ಲಿ ಮುದುಡಿದ್ದ ಸಿಂಧುವಿನ ಮುಖ ಈಗ ಅರಳಿದೆ... <


ಬಾಂಬ್ ಪತ್ತೆ ಹೇಗೆ?
ಕ್ರೈಮ್ ನಾಯಿಗಳನ್ನು ಬಾಂಬ್ ಪತ್ತೆಗೆ ಬಳಸುವುದಿಲ್ಲ. ಬಾಂಬ್ ಪತ್ತೆಗಾಗಿಯೇ ಇರೋದು ಎಕ್ಸ್‌ಪ್ಲೋರರ್ ನಾಯಿಗಳು. ಒಂದು ಹನಿಯಷ್ಟು ಗನ್‌ಪೌಡರ್ ಸುಟ್ಟು, ನಂತರ ಅದನ್ನು ತುಸು ಉಜ್ಜಿದಾಗ ಅದು ಬಾಂಬ್ ರೀತಿಯೇ ಸ್ಮೆಲ್ ಕೊಡುತ್ತೆ. ಈ ವಾಸನೆಯನ್ನು ಮೊದಲು ನಾಯಿಗೆ ಪರಿಚಯಿಸಲಾಗುತ್ತದೆ. ಆ ಗನ್‌ಪೌಡರ್ ಅನ್ನು ಹೂತಿಟ್ಟು 'ಸರ್ಚ್‌' ಎಂದು ಛೂ ಬಿಡ್ತಾರೆ ಹ್ಯಾಂಡ್ಲರ್‌ಗಳು. ಆ ಪೌಡರ್ ಎಲ್ಲಿದೆಯೋ ಅಲ್ಲಿಗೆ ಹೋಗಿ, ನಾಯಿಗಳದನ್ನು ಕೆದಕಿ ತೆಗೆಯುತ್ತವೆ.

ಹೆಣ್ಣು ನಾಯಿಗಳೇ ಫಿಟ್
ಶ್ವಾನದಳದಲ್ಲಿ ಹೆಚ್ಚು ಆ್ಯಕ್ಟಿವ್ ಇರೋದು ಹೆಣ್ಣು ನಾಯಿಗಳು. ಈ ಗಂಡು ನಾಯಿಗಳನ್ನು ನಂಬೋದಿಕ್ಕೇ ಆಗಲ್ಲ. ಗಂಡುನಾಯಿಗಳಿಗೆ ಚಂಚಲತೆ ಹೆಚ್ಚು. 6 ತಿಂಗಳಿಗೊಮ್ಮೆ ಸೆಕ್ಸ್ ಫೀಲಿಂಗ್ಸ್ ಬಂದಾಗ, ಹೆಣ್ಣು ನಾಯಿಗಳ ಮೇಲೆಯೇ ಇವಕ್ಕೆ ಕಣ್ಣು ಜಾಸ್ತಿ. ಕಾಲಡಿ ಬಾಂಬ್ ಇದ್ದರೂ ಮೂಸಿ ನೋಡುವುದಿಲ್ಲ. ಚಟ ತೀರಿದ ಮೇಲಷ್ಟೇ ಡ್ಯೂಟಿ ಮೇಲೆ ಗಮನ! ಹೀಗಾಗಿ, ಬಾಂಬ್ ಪತ್ತೆಗೆ ಹೆಣ್ಣು ನಾಯಿಗಳೇ ಫಿಟ್ ಅಂತಾರೆ ಪಾಟೀಲ್.

ಐಪಿಎಲ್‌ಗೆ ಆರೇ ನಾಯಿ!

ಬೆಂಗ್ಳೂರಲ್ಲಿ ಮೇಲಿಂದ ಮೇಲೆ ಹುಸಿಬಾಂಬ್ ಕರೆಗಳು ಬರುತ್ತವೆ. ಆಗೊಮ್ಮೆ ಈಗೊಮ್ಮೆ ಬಾಂಬ್ ಸ್ಫೋಟಗಳಾಗುತ್ತವೆ. ಇದಕ್ಕೆಲ್ಲ ಪರಿಹಾರವಾಗಿ 50 ಎಕ್ಸ್‌ಪ್ಲೋರರ್ ನಾಯಿಗಳಾದರೂ ಅಗತ್ಯ ಇದೆ. ಆದರೆ, ಆಡುಗೋಡಿಯ ಕೇಂದ್ರ ಕಚೇರಿಯಲ್ಲಿ ಒಟ್ಟು ಇರೋದೇ 45 ನಾಯಿಗಳು! ಈ ಮಹಾನಗರಕ್ಕೆ ಒಟ್ಟು 70 ನಾಯಿಗಳ ಅಗತ್ಯ ಖಂಡಿತಾ ಉಂಟು. ಐಪಿಎಲ್ ಪಂದ್ಯದ ರಕ್ಷಣೆಗೆ 8 ನಾಯಿಗಳನ್ನು ಕೇಳಿದರೆ, ಡಿಪಾರ್ಟ್‌ಮೆಂಟಿಂದ ಕಳ್ಸೋದು 6 ನಾಯಿಗಳನ್ನಷ್ಟೇ! ಈ ಬಗ್ಗೆ ಗೃಹ ಇಲಾಖೆ ತಲೆಕೆಡಿಸಿಕೊಳ್ಳಬೇಕಿದೆ.


- ಕೀರ್ತಿ ಕೋಲ್ಗಾರ್
kirthikolgar@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.