ಕಿರಾನಾ ಘರಾಣೆಯಲ್ಲಿ ಜತೆಜತೆಯ ಪಯಣ

'ಸವಾಯಿ ಗಂಧರ್ವ' ಎಂದರೆ ಗಂಧರ್ವರಿಗಿಂತ ಕಾಲು ಪಟ್ಟು ಹೆಚ್ಚು (ಸವಾ- ಕಾಲು ಭಾಗ). ಸಂಗೀತದಲ್ಲಿ ಗಂಧರ್ವರಿಗಿಂತ ಕಾಲು ಭಾಗ ಹೆಚ್ಚೇ ಎಂಬ ಅರ್ಥದಲ್ಲಿ ಸವಾಯಿ ಗಂಧರ್ವ ಎಂಬ ಬಿರುದಾಂಕಿತವನ್ನು ಪಡೆದ ಪಂಡಿತ್ ರಾಂ ಭಾವು ಕುಂದಗೋಳ್ಕರ್ ಅವರು ಉಸ್ತಾದ್ ಅಬ್ದುಲ್ ಕರೀಂ ಖಾನರ ಹಿರಿಯ ಶಿಷ್ಯರು. ಕರ್ನಾಟಕದ ಕುಂದಗೋಳ ಅವರ ವಾಸಸ್ಥಾನ. ತಮ್ಮ ವಿಶಿಷ್ಟವಾದ ಗಾಯನದಿಂದ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆಯಂತೂ ಅವಿಸ್ಮರಣೀಯವೇ, ಅದರ ಜೊತೆಯಲ್ಲಿ ಶಾಸ್ತ್ರೀಯ ಸಂಗೀತ ಲೋಕವೆಲ್ಲ ಸದಾ ಅವರಿಗೆ ಋಣಿಯಾಗಿರುವಂತಹ ಸಂಗೀತ ದಿಗ್ಗಜರನ್ನು ತಯಾರು ಮಾಡಿ ಕಾಣಿಕೆ ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.
ಡಾ.ಗಂಗೂಬಾಯಿ ಹಾನಗಲ್ ಅವರ ಹೆಸರನ್ನು ಕೇಳದವರಾರು? ಈ ಶತಮಾನ ಕಂಡ ಅದ್ಭುತ ಗಾಯಕಿ. ಅವರ ಸಂಗೀತ ಅಂಥ ವಿಶಿಷ್ಟವಾದದ್ದೇಕೆಂದರೆ ಅದು 'ಈ ಭೌತಿಕ ಜಗತ್ತಿನ ಎಲ್ಲ ಅಂಶಗಳನ್ನೂ ಹೀರಿ - ಮೇರೆ ಮೀರಿ ನಿಂತತಂಥಹದ್ದು'. ಯಾವುದೂ ಅವರ ಸಂಗೀತಕ್ಕೆ ಅಡ್ಡ ಬರಲಾಗಲಿಲ್ಲ. ಆಗಿನ ಕಾಲದ ಸ್ಥ್ಥಿತಿಗತಿಯಲ್ಲಿ ಅವರು ಹೆಣ್ಣು ಎಂಬ ಅಂಶ, ಕಲಿಯಲು ಪ್ರತಿದಿನ ಹುಬ್ಬಳ್ಳಿಯಿಂದ ಕುಂದಗೋಳದವರೆಗೆ ಹೋಗಿ ಬರುವುದು, ಗುರುಗಳ ಕಠಿಣ ಸ್ವಭಾವ, ಪರಿಸರ, ಸಂಗೀತ ಕಲಿಯುವವರ ಬಗ್ಗೆ ಆಗಿನ ಕಾಲದಲ್ಲಿದ್ದ ತಾತ್ಸಾರ - ಯಾವುದೂ ಅವರಿಗೆ ಅಡ್ಡಿಯಾಗಲಿಲ್ಲ. ಅಲ್ಲದೇ ಅತ್ಯಂತ ಮಹತ್ವವಾಗಿ ಕೊನೆಗೆ ಅವರ ಧ್ವನಿಯಲ್ಲಿ ಉಂಟಾದ ಬದಲಾವಣೆ ಕೂಡ ಅವರ ಸಂಗೀತದ ಅಹರ್ನಿಶಿ ಪಯಣಕ್ಕೆ ಯಾವ ತೊಂದರೆಯನ್ನೂ ಮಾಡಲಾಗಲಿಲ್ಲ. ಇನ್ನಾರಾದರೂ ಇಂತಹ ಪರಿಸ್ಥಿತಿಯನ್ನೆದುರಿಸಿದ್ದರೆ ಬಹುಶ- 'ಗಾಯನ' ಎಂಬ ಪದವನ್ನೇ ಮರೆತುಬಿಡುತ್ತಿದ್ದರೇನೋ. ಆದರೆ ಡಾ.ಗಂಗೂಬಾಯಿಯವರು ಅದನ್ನು 'ಇದ್ದರೆ ಗಂಗೂಬಾಯಿಯವರಂಥ ಧ್ವನಿ ಇರಬೇಕು ಹೆಣ್ಣುಮಕ್ಕಳು ಹಾಡಿದರೆ ಅವರಂತೆ ಹಾಡಬೇಕು' ಎನ್ನುವ ಹಾಗೆ ಮಾರ್ಪಡಿಸಿಕೊಂಡು ಬಿಟ್ಟರು. ಅದು ಅವರ ಅದ್ಭುತ ಮನೋಸ್ಥೈರ್ಯ. ಕಿವಿಯ ಮೇಲೆ ಕೈಯಿಟ್ಟು, ಕಣ್ಣುಮುಚ್ಚಿ ಒಮ್ಮೆ ಆ ಮಾರ್ವಾ, ಯಮನ್, ತೋಡಿ, ಭಾಗೇಶ್ರೀ ಯಂತಹ ರಾಗಗಳ ಸ್ವರ ಹಚ್ಚಿದರೆಂದರೆ ಮುಗಿಯಿತು, ಅದನ್ನು ಕೇಳಿದವ ಸಾಯುವವರೆಗೂ ಅದನ್ನು ಮರೆಯಲಾರರು. ಅವರ ಹಾಡನ್ನು ಅವರೇ ಇನ್ನೊಮ್ಮೆ ಹುಟ್ಟಿಬಂದು ಹಾಡಬೇಕೇ ಹೊರತು ಇನ್ನಾರಿಂದಲು ಸಾಧ್ಯವಿಲ್ಲ ಎಂಬಂತೆ ತಮ್ಮ ಸಂಗೀತವನ್ನು ಅಗಾಧವಾಗಿ ಬೆಳೆಸಿದರು ಅವರು.
'ಪರಿಪೂರ್ಣ ಸಂವಹನ' - ಅವರ ಹಾಡಿನ ಪ್ರತೀ ಅಂಶ, ಪ್ರತೀ ಸ್ವರ, ಪ್ರತೀ ಕ್ಷಣ ಕೇಳುಗನನ್ನು ಸಮರ್ಥವಾಗಿ ತಲುಪಬಲ್ಲ ಸಾಮರ್ಥ್ಯ ಹೊಂದಿರುತ್ತಿತ್ತು. ಕಿರಾನಾ ಘರಾಣೆ ಕೇಳುಗರಿಗೆ ಆಪ್ತವಾಗುವುದು ಇಲ್ಲೇ. 'ಸ್ವರವನ್ನು ಬೆಳೆಸುತ್ತ ಹಾಡುವುದು' ಎಂಬ ಅದರ ಶೈಲಿಯಿಂದಲೇ. ಈ ಘರಾಣೆಯ ಗಾಯಕರು ಹತ್ತಾರು ಕೋನಗಳಿಂದ, ವಿವಿಧ ಭಾವಗಳಿಂದ, ವಿಚಾರಗಳಿಂದ ಒಂದೊಂದೂ ಸ್ವರದ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಕೇಳುಗ ಈ ಸಂವಾದದ ಭಾಗವಾದಾಗ ಅವನಿಗೂ ಆ ಸ್ವರದ ಜೊತೆ ಸಂಬಂಧ ಬೆಳೆಯತೊಡಗುತ್ತದೆ. ತಾನು ಸ್ವತಃ ಹಾಡಲಾಗದಿದ್ದರೂ ಆ ಸ್ವರವನ್ನು ಅರ್ಥೈಸಿಕೊಂಡು ಅನುಭವಿಸುವ ಆಪ್ತತೆ ಕೇಳುಗರಲ್ಲಿ ಮೂಡುತ್ತದೆ. ಗಾಯಕರ ಜೊತೆಜೊತೆಯಲ್ಲೇ ಅವರೂ ಸ್ವರಲೋಕದೊಳಗೆ ಪಯಣಿಸತೊಡಗುತ್ತಾರೆ. ಹೀಗಾಗಿ ಕಿರಾನಾ ಘರಾಣೆ ಗಾಯಕರು ಸಂಗೀತ ಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರು ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. < (ಮುಂದುವರಿಯುವುದು)
-ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


