ಬ್ಯಾಂಕಾಕಿನ ವ್ಯಾಟ್‌ಪೋದಲ್ಲಿ
ತಲೆಗೆ ಕೈಯಿಟ್ಟು ಶೇಷಶಾಯಿಯಂತೆ
ಕಾಲು ಚಾಚಿ ನೂರ ನಲವತ್ತೈದು ಅಡಿ ಉದ್ದ ಮಲಗಿದ್ದ ಬುದ್ಧ
ಒಂದು ರಾತ್ರಿ ಇದ್ದಕ್ಕಿದ್ದಂತೆ ಎದ್ದ
ಮೂರ್ತಿಯಿಂದ ಎದ್ದನವ ಅಗೋಚರ
ಜ್ಞಾನ ಗೋಡೆಗಳಲ್ಲಿ ಬಂಧಿಯಾದವನಿಗೆ
ಹೊಸಜಗತ್ತ ಕಾಣುವ ಕಾತರ
ಗರ್ಭಗುಡಿಯಿಂದ ಹೊರಗಿಡಲು ಹೆಜ್ಜೆ ಜೋಡು ಗೋಪುರಗಳು
ಪ್ರಾಂಗಣದಲ್ಲಿ ಇತ್ತ ಚತುರ್ಮುಖ ಬ್ರಹ್ಮ ಅತ್ತ ಪಣೆಗಣ್ಣ ಶಿವ
ಲಿಂಗಕ್ಕೆ ತರಹೆವಾರಿ ಹೂವು
ಕಂಪೌಂಡಿನಿಂದಾಚೆ ಪ್ರಖರ ಪ್ರಖರ ದೀಪಗಳ ಕೆಳಗೆ
ಮುಲುಗುಟ್ಟುವ ಅಂಗಾಂಗ ಮರ್ದನ
ಅಂಗಸಂಗಕ್ಕೆ ಕತ್ತಲೆ ಬೆಳಕಿನ ಹಂಗಿಲ್ಲ
ದೇಹಸುಖಕ್ಕೆ ದೇಗುಲ ಅಡ್ಡಿಯಲ್ಲ
ಜೊತೆಯಲ್ಲಿಲ್ಲ ಕುದುರೆ ಕಾಲಾಳು ಚನ್ನ
ಈಗ ಅವ ರಾಜಕುಮಾರ ಸಿದ್ಧಾರ್ಥನಲ್ಲ
ದಾರಿಯುದ್ದಕ್ಕೂ ಮಿನುಗುವ ರಾತ್ರಿ ಕೆಂಪನೇ ಹುರಿದ ನಕ್ಷತ್ರ
ಮೀನುಗಳು
ಬೇಯಿಸಿದ ವಿಲವಿಲ ವಿಚಿತ್ರ
ಹುಳುಗಳು
ವಾಯುವೇಗದ ಏರ್‌ಕಂಡಿಶನ್ಡ್ ಟ್ಯಾಕ್ಸಿ ಜಪಾನೀ ಕಾರುಗಳು
ದಾರಿಹೋಕರನ್ನು ಕಂಡರೆ ವೇಗ ತಗ್ಗಿಸುವ ಟಕ್‌ಟುಕ್ ರಿಕ್ಷಾಗಳು
ಮೇಲೆ ಸಾರ್ವಜನಿಕ ಹಿತಾಸಕ್ತಿಯ ಮಿ. ಕಾಂಡೋಮ್ ಬೋರ್ಡ್
ಕೆಳಗೆ ಕೈಯಲ್ಲಿ ನೂರೆಂಟು ರುದ್ರಾಕ್ಷಿ, ಬುದ್ಧಮೂರ್ತಿಗಳ ಹಿಡಿದು ತಿರುಗುವ
ಜೋರುದನಿಯ ವ್ಯಾಪಾರಿ ರಸ್ತೆ ಬದಿಗೆ ಸರಿದು ಪಿಸುಗುಡುತ್ತಾನೆ
ನೈಟ್‌ಶೋ, ನೈಟ್‌ಶೋ
ನಗರದ ಹೃದಯ ಭಾಗದಲ್ಲಿದೆ ಪ್ಯಾಟ್‌ಪಾಂಗ್- ಇದು ಕಾಮನ ಕಟ್ಟೆ
ಇಲ್ಲಿದೆ ಬುದ್ಧ ನೋಡಿದ ನಾಲ್ಕು ಪ್ರಮುಖ ದೃಶ್ಯಗಳ ಕಥೆ
ದೃಶ್ಯ ಒಂದು- ಮಾಯಾ ಕೆಫೆಯ ಹೊರಗೆ
ಗಿಜಿಗಿಡುವ ಜನಜಂಗುಳಿ ನಡುವೆ ಸೋತ ಮುಖದ ಜೋತ ಮೊಲೆಗಳ
ನಲವತ್ತೆರಡರ ಮುದುಕಿ
ನಿಂತಿದ್ದಾಳೆ ಕಪ್ಪು ಸಿಗರೇಟು-ತುಟಿಗಳಿಗೆ ರಂಗು ಮೆತ್ತುತ್ತ
ಚರಸ್ ಗಾಂಜಾಕ್ಕೆ ಗಿರಾಕಿ ಅರಸುತ್ತ ಗತಕಾಲದ ನಿಟ್ಟುಸಿರಲ್ಲಿ ಬೇಯುತ್ತ
ಅವಳಿಗೀಗ ಎಚ್‌ಐವಿ
ದೃಶ್ಯ ಎರಡು- ಮಾಯಾ ಕೆಫೆಯ ಒಳಗೆ
ಕಿವಿಗಡಚಿಕ್ಕುವ ಸಂಗೀತದಲ್ಲಿ ಕುಲುಕುಲು ನಗೆಯ ಸೊಕ್ಕಿದ ಮೊಲೆಗಳ
ಇಪ್ಪತ್ತೆರಡರ ತರುಣಿ
ಕುಣಿಯುತ್ತಿದ್ದಾಳೆ ಮದಿರೆಯ ರಸದುಟಿಗಳ ಆಹ್ವಾನ ನೀಡುತ್ತ
ಪರ್‌ಫ್ಯೂಮ್ ಮೈಗೆ ಮೈ ಹೊಸೆಯುತ್ತ ಅವಳ ಪರ್ಸಿನ ತುಂಬ ಈಗ
ಡಾಲರು ದಿನಾರು ರುಪಾಯಿ
ದೃಶ್ಯ ಮೂರು- ಮಾಯಾ ಕೆಫೆಯ ತಳಮನೆ
ಅಲ್ಲಿ ಗಾಜು ಪರದೆಯ ಹಿಂದೆ ಭಯಭೀತ ಕಣ್ಣುಗಳ ಚಿಗುರು ಮೊಲೆಗಳ
ಹನ್ನೆರಡರ ಹುಡುಗಿ
ಕುಳಿತಿದ್ದಾಳೆ ಫಿಶ್‌ಬೌಲಿನಲ್ಲಿ ನೀರಿಂದಾಚೆ ಬಿದ್ದ ಮೀನಿನಂತೆ ಒದ್ದಾಡುತ್ತ
ಮೊಣಕಾಲವರೆಗೆ ಬಟ್ಟೆ ಜಗ್ಗುತ್ತ ಮೈಮುದುರಿಕೊಳ್ಳುತ್ತ
ಅವಳ ಕೊರಳಲ್ಲೊಂದು ಫಲಕ
ಫ್ರೆಶ್, ನೋ ಎಚ್‌ಐವಿ
ದೃಶ್ಯ ನಾಲ್ಕು- ಮಾಯಾ ಕೆಫೆಯ ಹಿಂದೆ ಸಣ್ಣದೊಂದು ಗಲ್ಲಿ
ಅಲ್ಲಿ ಕಿಕ್ಕಿರಿದ ಕಿರಿದಾದ ಮನೆಗಳಲ್ಲಿ ಒಂದು ನಡುಮನೆಯಲ್ಲಿ
ತಾಯಿಮೊಲೆ ಹಿಡಿದ
ಹಸುಗೂಸು ಬಾಲೆ
ಮಲಗಿದ್ದಾಳೆ ನಸುನಗುತ್ತ, ಬಡತಂದೆ ಅವಳ ಮುಗ್ಧ ಕೆನ್ನೆಗಳನ್ನು ಸವರುತ್ತ
ಸಂತಸ ಪಡುತ್ತಾನೆ, ಥಾಯಿ ಭಾಷೆಯಲ್ಲಿ ಹುಟ್ಟಿದಳು ನಮಗಿಂದು ಮಹಾಲಕ್ಷ್ಮಿ
ಎನ್ನುತ್ತ ಕೃತಕೃತ್ಯನಾಗಿ ಅಡ್ಡಬೀಳುತ್ತಾನೆ
ಟೇಬಲ್ಲಿನ ಮೇಲೆ ತಲೆಗೆ ಕೈಯಿಟ್ಟು ಆರಿಂಚು ಉದ್ದ ಮಲಗಿದ ಮೂರ್ತಿಗೆ
'ಬುದ್ಧಂ ಶರಣಂ ಗಚ್ಛಾಮಿ'
-ರಶ್ಮಿ ಶ್ರೀಕಾಂತ್