ಇನ್ನೊಂದು ಮುಖ ಮಮತಾ ಬ್ಯಾನರ್ಜಿ

ಇನ್ನೊಂದು ಮುಖ ಮಮತಾ ಬ್ಯಾನರ್ಜಿ
Updated on: 

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಮಹಾಯಾತ್ರೆಯ ಬೀದಿ ಹೋರಾಟಗಳನ್ನು ಕಂಡವರಿಗೆ, ಅವರಲ್ಲಿ ಕಲಾವಿದೆಯ ಮೃದು ಚಿಂತನೆ, ಕವಯತ್ರಿಯ ಸ್ಪಂದನಗಳೂ ಇವೆ ಎನ್ನುವುದು ಆ ರಾಜ್ಯದ ಹೊರಗಿನವರಿಗೆ ಗೊತ್ತಿರಲಿಕ್ಕಿಲ್ಲ.
ಕೋಲ್ಕತ್ತಾದ ಹರೀಂದ್ರ ಸರಣಿಯ ಒಂದು ಓಣಿಯಂತಹ ಪ್ರದೇಶದಲ್ಲಿನ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಎಳೆತನದಲ್ಲೇ ತಂದೆಯನ್ನು ಕಳೆದುಕೊಂಡು, ಕಷ್ಟಪಟ್ಟು ಕಾಲೇಜು ವಿದ್ಯಾಭ್ಯಾಸ ಮುಗಿಸಿ (ಎಂ.ಎ. ಹಾಗೂ ಕಾನೂನು ಪದವಿ) ರಾಜಕೀಯದಲ್ಲೇ ಮುಳುಗಿ ತಮ್ಮ ಯೌವ್ವನವನ್ನೆಲ್ಲ ಕಳೆದ ಮಮತಾ ಬ್ಯಾನರ್ಜಿ, ಈಗಲೂ ಮುಖ್ಯಮಂತ್ರಿಯಾಗಿ ಅವರ ಹಳೆಯ ಮನೆಯಲ್ಲೇ ಇರುವುದು.
ಅವರ ಹೋರಾಟವೆಲ್ಲವೂ ಕೋಲ್ಕತ್ತಾದ ಬೀದಿಗಳಿಗೇ ಸೀಮಿತವಾಗಿದ್ದ ದಿನಗಳೂ ಇದ್ದವು. ಕಮ್ಯುನಿಸ್ಟರು ಅಧಿಕಾರದಲ್ಲಿದ್ದಾಗ ಮಮತಾ ಬಂದ್‌ಗೆ ಕರೆ ನೀಡಿದರೆ ಕಮ್ಯುನಿಸ್ಟ್ ನಾಯಕರೂ ಬೀದಿಗೆ ಬರಲು ಹೆದರುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದ ಹೆಣ್ಣು ಮಮತಾ.
ಹಣದ ಬಲವಿಲ್ಲ. ಪ್ರತಿಷ್ಠಿತ ಕುಟುಂಬದ ಹಿನ್ನೆಲೆ ಇಲ್ಲ. ಯಾವ ವಿಚಾರದಲ್ಲೂ ಹೇಳಿಕೊಳ್ಳುವಂಥ ಪಾಂಡಿತ್ಯವೂ ಇಲ್ಲ. ಮಮತಾ ಎಂದರೆ ಬೀದಿ ಹೋರಾಟಕ್ಕೆ ಇನ್ನೊಂದು ಪದ ಎನ್ನುವಂತೆ ದಶಕಗಳ ಕಾಲ ಬೀದಿಯಲ್ಲೇ ಕಮ್ಯುನಿಸ್ಟರನ್ನು ಎದುರಿಸಿದರು.
ಸರಳ ಜೀವನ, ಭ್ರಷ್ಟಾಚಾರದಿಂದ ಗಾವುದ ಗಾವುದ ದೂರನಿಂತ ಮಮತಾ ಆ ಕಾರಣಕ್ಕಾಗಿಯೇ ವಂಗನಾಡಿನ ಕಿರಿಯರಿಗೆಲ್ಲ 'ದೀದಿ' ಆದರು. ಒಮ್ಮೆ ಮಾತ್ರ ಮನೆಯವರ ಜತೆ ಮನಸ್ತಾಪದ ಪರಿಣಾಮವಾಗಿ ಅಮ್ಮನ ಜತೆ ಕೆಲವು ತಿಂಗಳ ಕಾಲ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲೇ ಮೂರು- ನಾಲ್ಕು ತಿಂಗಳು ವಾಸ ಮಾಡಿದ್ದು. ಉಳಿದಂತೆ ಇಡೀ ಜೀವನ ಕಳೆದಿದ್ದು ಹರೀಂದ್ರ ಸರಣಿಯಲ್ಲೇ.
ಮಮತಾ ಬ್ಯಾನರ್ಜಿ ಅಖಿಲ ಭಾರತೀಯ ಖ್ಯಾತಿ ಗಳಿಸಿದ್ದು 1984ರಲ್ಲಿ, ಕೋಲ್ಕತ್ತಾದ ಜಾಧವಪುರ ಕ್ಷೇತ್ರದಲ್ಲಿ ಪ್ರಖ್ಯಾತ ಕಮ್ಯುನಿಸ್ಟ್ ನಾಯಕ ಸೋಮನಾಥ ಚಟರ್ಜಿ ಅವರನ್ನು ಸೋಲಿಸಿದಾಗ. ಅನಂತರ ಮಮತಾ ಆರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ರೈಲ್ವೆ ಮಂತ್ರಿ, ಅನಂತರ ಬಿಜೆಪಿ ನೇತೃತ್ವದ ಸರ್ಕಾರದಲ್ಲೂ ರೈಲ್ವೆ ಮಂತ್ರಿ. ಸಂಸತ್ತಿನಲ್ಲಿ ಮಹಿಳಾ ಮೀಸಲು ನಿಯಮವನ್ನು ವಿರೋಧಿಸಿದ್ದ ಸದಸ್ಯರನ್ನು ಕೈ ಹಿಡಿದು ದರದರನೆ ಹೊರಗೆ ಎಳೆದು ತಂದಿದ್ದರು.
ಮಮತಾ ಬ್ಯಾನರ್ಜಿ ಎಂದರೆ ಶುಭ್ರವಾದ ಹತ್ತಿನೂಲಿನ ಸೀರೆ, ಕಾಲಿಗೆ ಹವಾಯಿ ಚಪ್ಪಲಿ, ಹೆಗಲ ಮೇಲೆ ಒಂದು ಟ್ರೇಡ್ ಮಾರ್ಕ್ ಚೀಲ ಎನ್ನುವ ಚಿತ್ರವೇ ಕಣ್ಣೆದುರಿಗೆ ಬರುವುದು. ಬಹುಕಾಲ ತಲೆಗೆ ಎಣ್ಣೆ ಹಚ್ಚುತ್ತಿರಲಿಲ್ಲ. ಯಾವುದೇ ತರಹದ ಪ್ರಸಾದನಗಳನ್ನು ಬಳಸುತ್ತಿರಲಿಲ್ಲ.
ಆದರೆ ಅವರು ಮುಖ್ಯಮಂತ್ರಿಯಾದ ಅನಂತರ ಸ್ವಲ್ಪ ಬದಲಾಗಿದ್ದಾರೆ. ಈಗ ಇಸ್ತ್ರಿ ಮಾಡಿದ ಸೀರೆಯನ್ನು ಬಳಸುತ್ತಾರೆ. ಮುಖಕ್ಕೂ ಪ್ರಸಾದನ ಬಳಸುತ್ತಾರಂತೆ. ಕಾಲಿಗೆ ಬೇರೆ ಚಪ್ಪಲಿ ಬಂದಿದೆ. ಟ್ರೇಡ್ ಮಾರ್ಕ್ ಹೆಗಲ ಮೇಲಿನ ಚೀಲ ಆಗಾಗ ನಾಪತ್ತೆಯಾಗುವುದೂ ಉಂಟು.
ಒಂದು ಕಾಲದಲ್ಲಿ ಅಮೆರಿಕದ ಟೈಮ್ ಪತ್ರಿಕೆ ಜಗತ್ತಿನ ನೂರು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ನಮೂದಿಸಿತ್ತು. ಅವರ ಕೆಲಸಕ್ಕಿಂತ ಅವರ ಬೀದಿ ಚಟುವಟಿಕೆಯೇ ಅವರಿಗೆ ಆ ಖ್ಯಾತಿಯನ್ನು ತಂದುಕೊಟ್ಟಿದ್ದು.
ಮಮತಾ ಬ್ಯಾನರ್ಜಿ ಕರೆಯುತ್ತಾರೆ ಎಂದರೆ ಈಗಲೂ ಅವರ ಹಿರಿಯ ಮಂತ್ರಿಗಳು ಓಡೋಡಿ ಬರುತ್ತಾರಂತೆ. ಅಂತಹ ವಾತಾವರಣ ನಿರ್ಮಾಣವಾಗಿದೆ ಈಗ ಕೋಲ್ಕತ್ತಾದಲ್ಲಿ.
ಇದು ಅವರ ಒಂದು ಮುಖದ ಚಿತ್ರ.
ಅವರು ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುವ ಕಲೆಗಾರಿಕೆಯನ್ನು ಪ್ರದರ್ಶಿಸಿದ್ದಾರೆ. ಇತ್ತೀಚೆಗೆ ಅವರ ವರ್ಣ ಚಿತ್ರಗಳ ಒಂದು ಪ್ರದರ್ಶನ ನಡೆಯಿತು. ಸುಮಾರು 250 ಚಿತ್ರಗಳ ಪ್ರದರ್ಶನ ಅದು. ಅದೆಲ್ಲವನ್ನು ಅಭಿಮಾನಿಗಳು ಕೊಂಡು ಅದಕ್ಕೆ ಕೋಟಿ ರುಪಾಯಿಗಳ ಬೆಲೆಯನ್ನು ನೀಡಿದರಂತೆ.
ಆ ಕೃತಿಗಳನ್ನು ಯಾರೂ ಮಹಾಕೃತಿಗಳೆಂದು ಹೊಗಳಿಲ್ಲ. ಕಮ್ಯುನಿಸ್ಟ್ ಟೀಕಾಕಾರರನ್ನು ಬಿಟ್ಟರೆ, ಇತರರು ಯಾರೂ ಅದನ್ನು ಕಳಪೆ ಎಂದಿಲ್ಲ. ಹವ್ಯಾಸಿ ಕಲಾವಿದೆಯ ಪ್ರಯತ್ನ ಎನ್ನುವವರೇ ಜಾಸ್ತಿ. ಅವರ ಚಿತ್ರಗಳಿಗೆ ಜನ ಕೊಟ್ಟ ಕೋಟಿ ರುಪಾಯಿಗಳನ್ನು ತೃಣಮೂಲ ಕಾಂಗ್ರೆಸ್ ನಿಧಿಗೇ ಕೊಟ್ಟರಂತೆ. ಅದೇನೂ ದೊಡ್ಡದಲ್ಲ. ಮಮತಾ ಮೊದಲಿನಿಂದಲೂ ತಮಗೆ ಬರುವ ಸಂಬಳದ ಬಹುಭಾಗವನ್ನು ಪಕ್ಷಕ್ಕೇ ನೀಡುತ್ತಿದ್ದಾರೆ.
ಕೋಲ್ಕತ್ತಾದಲ್ಲಿನ ರೈಟರ್ಸ್ ಬಿಲ್ಡಿಂಗ್‌ನಲ್ಲಿನ (ಅದೇ ಅಲ್ಲಿನ ವಿಧಾನಸೌಧ) ಮುಖ್ಯಮಂತ್ರಿಯ ಕಾರ್ಯಾಲಯದಲ್ಲಿ ಒಂದು ಸಣ್ಣ ಕೊಠಡಿ ಇದೆ. ಅದು ಖಾಸಗಿ ಕೊಠಡಿ. ಈಗಂತೂ ಅದರೊಳಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಟ್ಟು ಬೇರೆ ಯಾರಿಗೂ ಪ್ರವೇಶವೇ ಇಲ್ಲ.
ಕೆಲಸದ ಒತ್ತಡ ಹೆಚ್ಚಾದಾಗ ಮಮತಾ ದೀದಿ ಆ ಕೊಠಡಿಯೊಳಗೆ ಹೋಗಿ ಚಿತ್ರ ಬರೆದು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರಂತೆ. ಅದು ಅವರ ಏಕಾಂತದ ಚಟುವಟಿಕೆ.
ಮಮತಾ ಬ್ಯಾನರ್ಜಿ ಇದುವರೆಗೆ ಸುಮಾರು 25 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಹುಮಟ್ಟಿಗೆ ಅವೆಲ್ಲವೂ ಅವರ ರಾಜಕೀಯ ಹೋರಾಟಗಳನ್ನು ಕುರಿತದ್ದು. ಅವ್ಯಾವುದರಲ್ಲಿಯೂ  ವೈಯಕ್ತಿಕ ಜೀವನದ ವಿವರಗಳು ಇಲ್ಲವೇ ಇಲ್ಲ.
ಅವರು ಕವಿತೆಗಳನ್ನು ರಚಿಸುವುದೂ ಉಂಟು ಎಂದು ಬಾಹ್ಯ ಜಗತ್ತಿಗೆ ಗೊತ್ತಾಗಿದ್ದು ಈಗಲೇ. ಕೋಲ್ಕತ್ತಾದ ಪುಸ್ತಕ ಮೇಳಕ್ಕೆ ಸಾರಸ್ವತ ಲೋಕದಲ್ಲಿ ಬಹುದೊಡ್ಡ ಹೆಸರಿದೆ. ಈ ಬಾರಿ ಆ ಉತ್ಸವದ ಸಮಯದಲ್ಲಿ ಮಮತಾ ದೀದೀಯ 'ಷನೀ' (ಅವಳಿಲ್ಲ) ಎನ್ನುವ ಕವನವನ್ನು ಒಳಗೊಂಡ ಒಂದು ಕವಿತಾ ಸಂಕಲನದ ಪುಸ್ತಕವೂ ಮಾರಾಟಕ್ಕಿತ್ತು. ಬಂಗಾಳದ ಪ್ರಖ್ಯಾತ 'ಡೇ' ಪ್ರಕಾಶನ ಸಂಸ್ಥೆಯ ಕಾಣಿಕೆ ಅದು.
ಯಾರು ಆ ಅವಳು?
 ದೆಹಲಿಯಲ್ಲಿ ಈಚೆಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸತ್ತ ಯುವತಿ. ಆ ಯುವತಿ ನಿಧನರಾದ ದಿನವೇ ಮಮತಾ ಬರೆದ ಕವಿತೆ ಅದು.
ನಿಜ. ಚಿತ್ರಕಲೆಯಲ್ಲಿ, ಸಾಹಿತ್ಯ ರಚನೆಯಲ್ಲಿ ಶಾಸ್ತ್ರೀಯವಾದ ಶಿಕ್ಷಣ ಪಡೆದವರಲ್ಲ ಮಮತಾ ಬ್ಯಾನರ್ಜಿ. ಆದರೂ ಅವರ ಈ ಹವ್ಯಾಸ ಜನರಿಗೆ ಗೊತ್ತೇ ಇರಲಿಲ್ಲ. ಅವರ ಸಮೀಪದ ಮಿತ್ರರನ್ನು ಕೇಳಿ ತಿಳಿದುಕೊಳ್ಳುವ ಪ್ರಯತ್ನವೂ ವಿಫಲವಾಗಿದೆ. ಅವರಿಗೆ ಮಿತ್ರರೇ ಇಲ್ಲವಂತೆ.
ಮಮತಾ ಬ್ಯಾನರ್ಜಿ ಅವರ ಹೊಸ ಪ್ರಯೋಗವಾದ ಕವಿತೆಗಳ ಸಂಗ್ರಹದ ಹತ್ತು ಸಾವಿರ ಪ್ರತಿಗಳು ಮಾರಾಟವಾಗಿದೆಯಂತೆ. ಇನ್ನೂ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಪ್ರಕಾಶಕರು. ಅವರು ಬಿಡಿಸಿದ ಚಿತ್ರಗಳಂತೆಯೇ, ಕವಿತೆಗಳ ವಿಚಾರದಲ್ಲೂ ಪ್ರಕಟವಾಗಿರುವುದು ಮಿಶ್ರ ಪ್ರತಿಕ್ರಿಯೆಯೇ. ಕೆಲವರು ಪರವಾಗಿಲ್ಲ ಎಂದರೆ ಹಲವರು ಚೆನ್ನಾಗಿದೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ಈಗ ಚಿತ್ರಕಲೆ- ಸಾಹಿತ್ಯ ಕುರಿತ ಮಾತುಕತೆಗೆ ಪುರುಸೊತ್ತೇ ಇಲ್ಲ. ಬಂಗಾಳದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಮಯ ಇದ್ದು ಎಲ್ಲ ಕಡೆಯಲ್ಲೂ ಪ್ರಚಾರಕ್ಕೆ 'ದೀದಿ' ಇರಲೇಬೇಕು. ಬಿಡುವಿಲ್ಲದ ತಿರುಗಾಟ.
ಗ್ರಾಮೀಣ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಎದುರಾಳಿಗಳು ಕಮ್ಯುನಿಸ್ಟರೇ. ಕೋಲ್ಕತ್ತಾ ಹಾಗೂ ಇತರ ಮಹಾನಗರ ಪಾಲಿಕೆಗಳಲ್ಲಿ ಬಹುತೇಕವಾಗಿ ಕಮ್ಯುನಿಸ್ಟರು ಸೋತಿದ್ದಾರೆ. ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇದೆಯಂತೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ವಿಪರೀತವಂತೆ.
ಮಮತಾ ದೀದಿಗೆ ಈಗ 57 ವಯಸ್ಸು.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com