ಮಾನವೀಯತೆ ಮೆರೆದ ರಾಜ
ಮಹಿಮಾಪುರದ ರಾಜ ರತ್ನವರ್ಮ ತುಂಬಾ ಕೋಪಿಷ್ಠ ಮತ್ತು ಮಹತ್ವಾಕಾಂಕ್ಷಿಯಾಗಿದ್ದ. ತಾನು ಹೇಳಿದ್ದೇ ನಡೆಯಬೇಕೆಂಬ ಹಠ ಸ್ವಭಾವದವ ಕೂಡ. ತನ್ನ ಪ್ರಜೆಗಳೆಲ್ಲಾ ತನ್ನ ಸೇವಕರು, ಅವರೆಲ್ಲಾ ತನ್ನ ಸೇವೆಗಾಗಿಯೇ ಇರುವವರು ಎಂಬ ಭಾವನೆಯನ್ನು ಬೆಳೆಸಿಕೊಂಡಿರುವವ. ತನ್ನ ರಾಜ್ಯದ ಸೀಮಾಗಡಿಯನ್ನು ವಿಸ್ತರಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದಾಗಿ ತನ್ನ ಸುತ್ತಮುತ್ತಲ ರಾಜ್ಯಗಳ ಮೇಲೆಲ್ಲಾ ವಿನಾಕಾರಣ ಯುದ್ಧ ಸಾರುತ್ತಿದ್ದ.
ರತ್ನವರ್ಮನ ರಾಜ್ಯಕ್ಕೆ ಹೊಂದಿಕೊಂಡಿರುವಂಥ ಒಂದು ಪುಟ್ಟ ರಾಜ್ಯ ಧರ್ಮಪುರ. ಅದರ ರಾಜ ದೇವದತ್ತ ಸಹನಾಶೀಲ, ಸಂಯಮಿ ಮತ್ತು ಸ್ನೇಹಶೀಲ ವ್ಯಕ್ತಿತ್ವವುಳ್ಳವನು. ಒಂದು ಸಲ ಧರ್ಮಪುರದ ಮೇಲೆ ರತ್ನವರ್ಮನ ಕಣ್ಣುಬಿತ್ತು. ಹೇಗಾದರೂ ಮಾಡಿ ಅದನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳಬೇಕೆಂದು ಆಲೋಚಿಸುತ್ತಿದ್ದ. ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಆ ರಾಜ್ಯದ ಮೇಲೆ ಯುದ್ಧ ಸಾರುವುದೊಂದೇ ದಾರಿ ಎಂದು ಮನಗಂಡ.
ಈ ವಿಷಯದ ಸುಳಿವು ತಿಳಿದ ದೇವದತ್ತ ರಾಜಿ ಸಂಧಾನಕ್ಕಾಗಿ ತನ್ನ ಸೇನಾಪತಿಯನ್ನು ರತ್ನವರ್ಮನ ದರ್ಬಾರಿಗೆ ಕಳುಹಿಸಿದ. ಆದರೆ ರಾಜಿಯಾಗುವುದನ್ನು ತಿರಸ್ಕರಿಸಿದ ಹಠಮಾರಿ ರಾಜ ಧರ್ಮಪುರದ ಮೇಲೆ ಯುದ್ಧ ಸಾರಿಯೇಬಿಟ್ಟ. ಇದರಿಂದ ಹತಾಶನಾದ ದೇವದತ್ತ ಅನಿವಾರ್ಯವಾಗಿ ಯುದ್ಧಕ್ಕೆ ಅಣಿಯಾಗಲೇಬೇಕಾಯಿತು.
ನಿಗದಿತ ದಿನದಂದು ಎರಡೂ ರಾಜ್ಯಗಳ ಸೇನೆಗಳು ರಣಾಂಗಣದಲ್ಲಿ ಎದುರುಬದುರಾದವು. ರಣಕಹಳೆ ಮೊಳಗಿದ ಕೂಡಲೇ ಎರಡೂ ರಾಜ್ಯಗಳ ಸೈನಿಕರ ನಡುವೆ ಘನಘೋರ ಯುದ್ಧ ನಡೆಯಿತು. ಎರಡೂ ಕಡೆಯ ನೂರಾರು ಆನೆಗಳು, ಕುದುರೆಗಳು, ಸಾವಿರಾರು ಸೈನಿಕರು ಹತರಾದರು. ನೂರಾರು ಸೈನಿಕರು ಗಾಯಾಳುಗಳಾದರು. ಸೂರ್ಯ ಮುಳುಗಿದೊಡನೆ ಅಂದಿನ ಯುದ್ಧಕ್ಕೆ ವಿರಾಮ ಘೋಷಿಸಲಾಯಿತು. ಸೈನಿಕರೆಲ್ಲಾ ತಮ್ಮ ತಮ್ಮ ಡೇರೆ ಸೇರಿ ವಿಶ್ರಾಂತಿ ತೆಗೆದುಕೊಳ್ಳಲಾರಂಭಿಸಿದರು. ಆದರೆ ಗಾಯಾಳುಗಳು ಮಾತ್ರ ರಣಾಂಗಣದಲ್ಲಿ ನರಳುತ್ತಾ ಬಿದ್ದಿದ್ದರು.
ಇದನ್ನರಿತ ರಾಜ ದೇವದತ್ತ ತಾನೇ ಸ್ವತಃ ರಣಾಂಗಣಕ್ಕೆ ತೆರಳಿ ಗಾಯಾಳುಗಳಿಗೆ ಸಮಾಧಾನ ಹೇಳಿ ಅವರ ಗಾಯಗಳಿಗೆ ಔಷಧ ಹಚ್ಚಿ ಉಪಚರಿಸಲಾರಂಭಿಸಿದನು. ಅವನು ಉಪಚರಿಸಿದ ಗಾಯಾಳುಗಳಲ್ಲಿ ವೈರಿ ಪಡೆಯ ಸೈನಿಕರೂ ಇದ್ದರು. ಇನ್ನೊಂದು ಕಡೆ ತನ್ನ ಗಾಯಾಳು ಸೈನಿಕರನ್ನು ಹುಡುಕುತ್ತಾ ರಣರಂಗಕ್ಕೆ ಬಂದ ರತ್ನವರ್ಮನಿಗೆ ತನ್ನ ಸೈನಿಕರ ಗಾಯಕ್ಕೆ ಪಟ್ಟಿ ಕಟ್ಟುತ್ತಿದ್ದ ದೇವದತ್ತನನ್ನು ಕಂಡು ಅವಾಕ್ಕಾಗಿಹೋದ. ಅವನು ದೇವದತ್ತನ ಹತ್ತಿರ ಬಂದು ಕೇಳಿದ, 'ಇದೇನು ಮಹಾರಾಜ, ನೀವು ನನ್ನ ಸೈನಿಕರ ಗಾಯಗಳಿಗೆ ಉಪಚರಿಸುತ್ತಿದ್ದೀರಲ್ಲ! ಅವರು ನಿಮ್ಮ ವೈರಿಗಳಲ್ಲವೇ?'. ಅದಕ್ಕೆ ದೇವದತ್ತ ಹೇಳಿದ, 'ಇಲ್ಲ ಮಹಾರಾಜ. ಇಲ್ಲಿ ಅವರು ನನ್ನ ಸೈನಿಕರು, ಇವರು ನಿನ್ನ ಸೈನಿಕರು ಎಂಬ ಭೇದಭಾವದ ಪ್ರಶ್ನೆ ಬರುವುದಿಲ್ಲ. ಮೊದಲು ಇವರು ಮನುಷ್ಯರು. ಎಲ್ಲರಂತೆ ಇವರಿಗೂ ನೋವು-ನಲಿವು ಎನ್ನುವುದಿದೆ. ಅವರೆಲ್ಲಾ ರಾಜಾಜ್ಞೆಯನ್ನು ಪಾಲಿಸುತ್ತಿದ್ದಾರೆ ಅಷ್ಟೇ. ಹೀಗಾಗಿ ಯುದ್ಧಕ್ಕೆ ಬಂದು ಗಾಯಗೊಂಡಿದ್ದಾರೆ. ಮಾನವೀಯತೆಯಿಂದ ಇವರನ್ನು ಉಪಚರಿಸುವುದು ಮಾನವ ಧರ್ಮ. ಇದನ್ನು ನಾನು ಮಾಡುತ್ತಿದ್ದೇನಷ್ಟೆ. ಯುದ್ಧ ಎಂದ ಮೇಲೆ ಜಯಾಪಜಯಗಳು ಇದ್ದದ್ದೇ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇದೆಲ್ಲ ನಮ್ಮಂಥ ರಾಜರಿಂದ ನಡೆಯುವ ತಪ್ಪುಗಳ ಫಲ.'
ದೇವದತ್ತನ ಈ ಮಾತುಗಳನ್ನು ಕೇಳಿ ರತ್ನವರ್ಮ ಮೂಕವಿಸ್ಮಿತನಾಗಿಹೋದ. ತನ್ನ ಹಠಮಾರಿತನದ ಧೋರಣೆಯೇ ಇದಕ್ಕೆಲ್ಲ ಕಾರಣ ಎಂದರಿತ ರತ್ನವರ್ಮ ನಡೆಯುತ್ತಿದ್ದ ಯುದ್ಧವನ್ನು ನಿಲ್ಲಿಸಿ ದೇವದತ್ತನಲ್ಲಿ ಕ್ಷಮೆಯಾಚಿಸಿ ತನ್ನ ಅರಮನೆಗೆ ತೆರಳಿದ.
-ಎಂ.ಬಿ. ನಾಯಕ, ಹಾಸನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

