ಸಾಪ್ತಾಹಿಕಪ್ರಭ

ನೆಗೆಟಿವ್

Published On :

ರಮ್ಮನೆ ತಲೆಗೆ ಬಿದ್ದ ಹೊಡೆತಕ್ಕೆ ಕೆಟ್ಟ ಸಿಟ್ಟಿನಲ್ಲಿ 'ಸೂಳೆಮಗನೆ' ಅಂತಾ ಕಿರುಚಿದ ಸೂರಿ, ಕೈಯಲ್ಲಿದ್ದ ಫಿಲಂ ರೋಲ್‌ಗಳನ್ನು ರುಕ್ಮಪ್ಪನ ಮುಖಕ್ಕೆ ರಪ್ಪನೆ ಎಸೆದು ಸ್ಟೂಡಿಯೋದ ಬಾಗಿಲನ್ನು ದಬಾಲನೆ ಹಾಕಿಕೊಂಡು ಮರದ ಮೆಟ್ಟಿಲುಗಳನ್ನು ಸದ್ದು ಮಾಡುತ್ತಾ ಇಳಿದು ಸಂದಿಯಂತಹ ಗೂಡಿನಿಂದ ಹೊರಬಿದ್ದು ಜನದಟ್ಟಣೆಯ ಬೀದಿಯ ದಾರಿಯೊಳಗೆ ನಡೆದು ಬಿಟ್ಟಿದ್ದ. ಇದ್ದಕ್ಕಿದ್ದಂತೆ ಆದ ಸದ್ದುಗಳಿಗೆ ಸುತ್ತಮುತ್ತಲ ಜನ ದಡಬಡಾಯಿಸಿ ಎದ್ದು ನೋಡುವಷ್ಟರಲ್ಲಿ ಸೂರಿ ಮಾಯವಾಗಿದ್ದ.  
ಎಡಕ್ಕಿದ್ದ ಬೀಡಾ ಅಂಗಡಿಯ ಜತಿನ್ ಭಾಯ್ ಹಾಗೂ ಬಲಕ್ಕಿದ್ದ ಟೈಲರ್ ಅಂಗಡಿಯ ಭೀಮೇಶ್ ಘಾಟ್ಗೆ ತಮ್ಮ ಇಳಿಮುಖವಾದ ವ್ಯಾಪಾರದ ನಡುವೆ, ಲವಲವಿಕೆಯ ಕೇಂದ್ರವಾಗಿದ್ದ ಸೂರಿ ರುಕ್ಮಪ್ಪನ ಜೊತೆ ಜಗಳವಾಡಿ ಹೋದ ರೀತಿಯಲ್ಲೇ ಆತ ಮತ್ತೆಂದೂ ಇತ್ತ ಬರಲಾರನೆಂದು ಅರ್ಥ ಮಾಡಿಕೊಂಡು ದೀರ್ಘವಾಗಿ ನಿಡುಸುಯ್ದರು.  
ರುಕ್ಮಪ್ಪನ 'ಭಗವಂತ ಫೋಟೋ ಸ್ಟೂಡಿಯೋ'ಗೆ ನಿಜವಾದ ಭಗವಂತನಂತೆ ಬಂದಿದ್ದ ಸೂರಿ, ರುಕ್ಮಪ್ಪನ ಭಾಗ್ಯವಂತನಾಗಿ ಮಾಡುವಷ್ಟರಲ್ಲಿ ಈ ಘಟನೆ ಘಟಿಸಿಹೋಗಿತ್ತು. ರುಕ್ಮ ನನ್ನ ತಲೆಗೆ ಹೊಡೆದದ್ದು ನಿಜ.. ತನ್ನ ನಿಯತ್ತಿಗೆ ಅವಮಾನ ಮಾಡಿದ್ದು ನಿಜ.. ದೇವರಂತಹ ಅಕ್ಕಳನ್ನು ತಾನು ಹೇಳದೇ ಬಿಟ್ಟು ಬಂದದ್ದು ನಿಜ.. ಇನ್ನು ತಾನು ನಿಜಕ್ಕೂ ಅನಾಥ.. ಸ್ಟೂಡಿಯೋ ತನ್ನ ಪಾಲಿಗೆ ಏನೂ ಅಲ್ಲ.. ಅಂತಾ ಸೂರಿ ಅಂದುಕೊಳ್ಳುವ ಹೊತ್ತಿಗಾಗಲೇ ಅವನಿಗೂ ಸ್ಟೂಡಿಯೋಗೂ ಎರಡು ವರ್ಷಗಳ ಗಾಢ ಸಂಬಂಧವಿತ್ತು. ಅವನು ಬಂದಾಗ ರುಕ್ಮಪ್ಪನಿಗೆ ಈಗಿರುವಷ್ಟು ಹೊಟ್ಟೆ ಇರಲಿಲ್ಲ, ಟೈಲರ್ ಭೀಮೇಶನಿಗೆ ಮದುವೆಯಾಗಿರಲಿಲ್ಲ, ಪಾನ್ವಾಲಾ ಜತಿನ್‌ಗೆ ತಲೆಕೂದಲು ಉದುರಿರಲಿಲ್ಲ. ಹಾಗೂ ಮುಖ್ಯವಾಗಿ ಸೂರಿಗೆ ಮೀಸೆ ಮೂಡಿರಲಿಲ್ಲ.  ನಿಜಕ್ಕೂ ಸೂರಿ ಮತ್ತೆ ಬರುವುದಿಲ್ಲವೆಂದು ಎಲ್ಲರಿಗೂ ಕಾಡುವ ಹೊತ್ತಿಗೆ ಎರಡು ವಾರ ಕಳೆದಿತ್ತು. ರುಕ್ಮನ ಹೆಂಡತಿ ಸುಂದ್ರಿ ಮಾತ್ರ ಎರಡು ವಾರವಾದರೂ ಸೂರಿ ಬೇಡಿ ತಿನ್ನುವವನಲ್ಲ.. ಹಸಿದುಕೊಂಡೇ ಎಲ್ಲೋ ಬಿದ್ದಿರುತ್ತಾನೆಂದು ಸೆರಗು ಒದ್ದೆ ಮಾಡಿಕೊಳ್ಳುತ್ತಿದ್ದಳು.
ಜತಿನ್, ಭೀಮೇಶ್, ತಿಮ್ಮಕ್ಕ ಹಾಗೂ ರುಕ್ಮಪ್ಪರು ವಾಸಿಸುವ ಬಿಲ್ಡಿಂಗಿನ ಒಳಗಿನ ಖಾಲಿ ಜಾಗದಲ್ಲಿ ಸೇರುವ ಜನರ ಬಾಯಲ್ಲಿ ಸೂರಿಯದ್ದೇ ಮಾತು. ಕೇಳಿ ಕೇಳಿ ರುಕ್ಮಪ್ಪನಿಗೂ ಸಾಕಾಗಿ ಹೋಗಿದೆ. ಎಲ್ಲಿ ಹೋಗಿರಬಹುದೆಂಬ ಪ್ರಶ್ನೆಗೆ ರುಕ್ಮಪ್ಪನ ಬಳಿಯಾಗಲೀ ಸುಂದ್ರಿಯ ಬಳಿಯಾಗಲೀ ಉತ್ತರವಿರಲಿಲ್ಲ. ಸುಂದ್ರಿಯ ದೂರದ ಸಂಬಂಧಿ ಅನ್ನುವ ಕಾರಣಕ್ಕೆ ಸೂರಿಯನ್ನು ಅಂಗಡಿ ಕೆಲಸಕ್ಕೆ ಇಟ್ಟುಕೊಂಡಿದ್ದ. ಕೆಲ ದಿನ ಮಗನಂತೆ ನಂತರ ತಮ್ಮನಂತೆ ನಂತರ ಅಣ್ಣನಂತೆಯೂ ಇದ್ದ ಹದಿನಾರರ ಪ್ರಾಯದ ಸೂರಿ ಕತ್ತಲಿಗೆ ಮಾತ್ರ ಹೆದರಿ ನಡುಗುತ್ತಿದ್ದ.  ಸ್ಟೂಡಿಯೋದ ಡಾರ್ಕ್ ರೂಮಿನಲ್ಲಿ ತನ್ನ ವೀಕ್‌ನೆಸ್ಸನ್ನು ತಿದ್ದಿಕೊಂಡು ಉದ್ಧಾರವಾಗುವಷ್ಟರಲ್ಲಿ ರುಕ್ಮಪ್ಪ ಅವನ ತಲೆಗೆ ವಿಚಿತ್ರ ಸೇಡಿನಲ್ಲಿ ಬಾರಿಸಿದ್ದ.   
ಅದಕ್ಕಿಂತ ತೀವ್ರವಾಗಿ ಅನೇಕ ಬಾರಿ ರುಕ್ಮ ಹೊಡೆದಿದ್ದ.  ಸುಮ್ಮನೆ ಸೂರಿ ಸಹಿಸಿಕೊಂಡಿದ್ದ. ನಿನ್ನ ಜೊತೆ ಇರುವುದಕ್ಕೆ ಅವಕಾಶ ಮಾಡಿಕೊಡು ಸಾಕಷ್ಟೇ ಎಂಬಂತೆ ತನ್ನ ಚಿಕ್ಕ ಕಣ್ಣಲ್ಲಿ ವಿನಂತಿ ಮಿನುಗಿಸಿದ್ದ. ಹಾಲುಗಲ್ಲದ ಮೀಸೆಮೂಡದ ಡಬ್ಬು ಮೈಯಿನ ಸೂರಿ ಸ್ಟೂಡಿಯೋ ಒಳಗೆ ಮೊದಲ ಬಾರಿ ಹೊಸ ಬೆಳಕಿನಂತೆ ಕಾಲಿಟ್ಟಿದ್ದೇ.. 'ಇವೇನಣ್ಣಾ ದೆವ್ವ ಇದ್ದಂಗಿದಾವೆ' ಅಂತಾ ಅಚ್ಚರಿಯಿಂದ ಕೈಗೆತ್ತಿಕೊಂಡಿದ್ದ ನೆಗೆಟಿವ್‌ಗಳನ್ನೆಲ್ಲ ಪಾಸಿಟಿವ್‌ಗಳಾಗಿ ಮಾಡಿ ತಿಂಗಳೆನ್ನುವಷ್ಟರಲ್ಲಿ ಅಲ್ಲಾಡುವ ಸ್ಟೂಡಿಯೋ ನೆಲೆನಿಲ್ಲುವಂತೆ ಸುಂದ್ರಿಯ ಬದುಕು ಸುಂದರವಾಗುವಂತೆ ಮಾಡಿದ್ದ. ಸುಂದ್ರಿಗೆ ಅವನ ಮೇಲೆ ಅಪಾರ ವಾತ್ಸಲ್ಯ. ಪರಮಮುಗ್ಧೆ ಸುಂದ್ರಿ ಯಾರನ್ನಾದರೂ ನಂಬಿಬಿಡುತ್ತಿದ್ದ ಕಾರಣ ಅವಳ ಬಿಟ್ಟು ಬೇರೆ ಜನರ ನಗಿಸಿ ಫೋಟೋ ತೆಗೆಯುವುದು ರುಕ್ಮನಿಗೆ ಪರಮ ಹಿಂಸೆಯಾಗಿ ಜೀವನ ಸಾಗಿಸುವುದು ಕಷ್ಟವಾಗಿತ್ತು. ಸೂರಿ ಬಂದ ನಂತರ ನಿಶ್ಚಿಂತೆಯಾದ ರುಕ್ಮ ರೀಲಿಗೂ ಮಿಕ್ಕಿ ಫೋಟೋ ಫ್ಲಾಶ್ ಮಾಡುವುದಕ್ಕೆ ಶುರು ಮಾಡಿದ್ದ. ಅಂತೂ ಸೂರಿಗೆ ಇದರ ವಾಸನೆ ಬಡಿದುಬಿಟ್ಟಿದ್ದೇ ರುಕ್ಮನಿಗಿಂತ ಮುಂಚೆ ಬಂದು ಬಚ್ಚಿಟ್ಟಿದ್ದ ರೋಲ್ ತೆಗೆದು ನೆಗೆಟಿವ್ ಮಾಡಿಕೊಂಡು ನೋಡುತ್ತ ತನ್ನಕ್ಕಳ ಜೀವನ ಹಳ್ಳ ಹಿಡಿಯುತ್ತಿದ್ದ ಬಗ್ಗೆ ಕಂಗಾಲಾಗುವ ಹೊತ್ತಿಗೆ ರುಕ್ಮ ಬಾರಿಸಿದ್ದ.
ಸೂರಿಯ ನಿರ್ಗಮನದ ನಂತರದ ಹಿಂಸೆ, ಹೆಂಡತಿಯ ನರಳಾಟ, ಜನರ ಕಾಟ ತಾಳಲಾರದೇ.. ಸೂರಿ ರೈಲಿಗೆ  ಬಿದ್ನಂತೆ, ಸೂರಿ ಪಿಚ್ಚರ್ ಟಾಕೀಸ್ನಲ್ಲಿ ಟಿಕೇಟ್ ಕೊಡ್ತಿದ್ದಾನಂತೆ, ಸೂರಿಗೆ ಹುಚ್ಚು ಹಿಡ್ದೈತಂತೆ.. ಇತ್ಯಾದಿ ಪ್ರವರಗಳನ್ನು ಕೇಳಲಾರದೇ ಸುಂದ್ರಿಯನ್ನು ಊರಿಗೆ ಓಡಿಸಿದ್ದ. ಅಕ್ಕಳ ಕಣ್ಣೀರಿಗೆ ಸೂರಿಯ ರೋಷದ ಉರಿ ತಣಿಯುವ ಗ್ಯಾರಂಟಿ ಇತ್ತವನಿಗೆ. ಸೂರಿಯ ಆಗಮನದ ನಿರೀಕ್ಷೆಯಲ್ಲಿ ಗಡಿಯಾರದ ಸೆಕೆಂಡುಗಳ ಮೇಲಿದ್ದ ರುಕ್ಮನ ಕಣ್ಣುಗಳು ತನ್ನೊಳಗೂ ನೋಡಿಕೊಳ್ಳುತ್ತ ತಾನೆಂತಹ ನೀಚ ಎನ್ನುವ ಪಶ್ಚಾತ್ತಾಪ ಮೂಡಿಸಿದ್ದವು.  ಪೆಂಡಿಂಗ್ ಇದ್ದ ನೆಗೆಟಿವ್‌ಗಳನ್ನು ತೊಳೆಯುತ್ತ ತನ್ನ ಪಾಪದ ಕೆಲಸವನ್ನು ತಾನೇ ಪಾಸಿಟಿವ್ ಮಾಡಿಕೊಂಡು ನೋಡಿದ. ಸೂರಿಯ ಅಮಾಯಕ ಕಣ್ಣುಗಳಿಗೆ ಅಸಹ್ಯವಾದದ್ದು ಕಂಡಿದೆ ಎನ್ನುವುದ ಗ್ರಹಿಸಿದ. ಮುಗ್ಧ ಹೆಂಡತಿಗೆ ಮೋಸ ಮಾಡಲು ಹೊರಟಿದ್ದೆನಲ್ಲಾ ಎಂದು ತನ್ನ ತಾನೇ ಕಟಕಟೆಯಲ್ಲಿ ತೂಗಿಕೊಂಡ.
ದೂರದ ಸಂಬಂಧಿ ಸೂರಿ ಸಿಕ್ಕೇ ಸಿಗುತ್ತಾನೆಂದು ಹೋಗಿದ್ದ ಸುಂದ್ರಿಗೆ ಸಿಕ್ಕದ್ದು ಸೂರಿ ನಿಜಕ್ಕೂ ಬಿಟ್ಟು ಹೋದ ಹಳೆಯ ಟ್ರಂಕು. ಎಂದೋ ಸೂರಿಯವರ ಮನೆಯವರು ಊರುಬಿಟ್ಟು ಆ ಗುಡಿಸಲಲ್ಲಿ ಹಂದಿಗಳೂ ಓಡಾಡಲು ಶುರುಮಾಡಿದ್ದವು. ತಮ್ಮನ ಮನಕಲಕುವ ಕಥೆ ಸುಂದ್ರಿಯ ಅಲ್ಲಾಡಿಸಿತು.
ನಾನು ಇವನನ್ನೇ ಮದುವೆಯಾಗುತ್ತೇನೆಂದು ಯಾವನ ಜೊತೆಗೋ ಹೊರಟ ಸೂರಿಯ ಅಕ್ಕ ಪೇಟೆಯಲ್ಲಿ ರೂಮು ಮಾಡಿಕೊಂಡು ಟೈಲರಿಂಗ್ ಮಾಡಿಕೊಂಡು ನಾಲ್ಕೈದು ಕಾಸು ಸಂಪಾದನೆ ಮಾಡುವ ಹೊತ್ತಿಗೇ ಒಂದು ಕತ್ತಲ ರಾತ್ರಿ ಮದುವೆಯಾಗುವವನು ಅವಳ ಮಾರಿಬಿಟ್ಟಿದ್ದ. ಕತ್ತಲ ರಾತ್ರಿಯಿಡೀ ಚೀರಾಟ ಕೂಗಾಟದಲ್ಲಿ ಕಂಗೆಟ್ಟ ಸೂರಿಗೆ ಬೆಳಗ್ಗೆ ಅಕ್ಕನ ಶವ ಹುಚ್ಚು ಹಿಡಿಸಿತ್ತು. ಅಂದಿನಿಂದ ಓಡಲು ಪ್ರಾರಂಭಿಸಿದವನು ಸುಂದ್ರಿಯ ಕಾಣುವವರೆಗೂ ಅದೆಷ್ಟು ಊರು ಓಡಿದ್ದನೋ.. ಅಂತಿಮ ಸ್ಟಾಪ್ ಎನ್ನುವಂತೆ ಸುಂದ್ರಿ ಮಡಿಲಲ್ಲಿ ನಿಂತವನು, ಈಗ ಅಲ್ಲಿಂದಲೂ ಓಟ ಕಿತ್ತಿದ್ದ.

= ಇಂದ್ರಕುಮಾರ್ ಎಚ್.ಬಿ.
    9986465530


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.