ಸ್ಥಳೀಯ ರೊಮ್ಯಾನ್ಸ್
ಒಬ್ಬ ಹುಡುಗ. ಒಬ್ಬಳು ಹುಡುಗಿ. ಹೇಗೋ ಪ್ರೇಮ. ಇನ್ಯಾವುದೋ ಅಡ್ಡಿ ಆತಂಕ. ಕೊನೆಗೆ? ಇಬ್ಬರೂ ಒಂದಾಗಲೇಬೇಕು. ಅವರಿಬ್ಬರ ದೈಹಿಕ ಸಾಂಗತ್ಯದ ಹಸಿಹಸಿಯಾದ ವಿವರಗಳು ಇದ್ದರೆ ಇನ್ನೂ ಚೆನ್ನ. ಜನಪ್ರಿಯ ಸಿನೆಮಾ ಕತೆ ಎಂದುಕೊಳ್ಳಬೇಡಿ. ಇಂಗ್ಲಿಷ್ನ 'ಮಿಲ್ಸ್ ಆಂಡ್ ಬೂನ್' ಕಾದಂಬರಿಗಳು ಇರುವುದೇ ಹೀಗೆ.
ಸೀರಿಯಸ್ ಓದುಗರು ಟೈಂಪಾಸ್ಗೂ, ಟೈಂಪಾಸ್ ಓದುಗರು ಸೀರಿಯಸ್ಸಾಗಿಯೂ ಓದುವ ಈ ಕೃತಿಗಳೀಗ ಭಾರತೀಯ ಭಾಷೆಗಳಲ್ಲೂ ಬರುತ್ತವೆಯಂತೆ. ಮಿಲ್ಸ್ ಬೂನ್ ಕೃತಿಗಳನ್ನು ಪ್ರಕಟಿಸುವ ಹರ್ಲೆಕ್ವಿನ್ ಪ್ರಕಾಶನ ಈಗ ಹಿಂದಿ, ಮಲಯಾಳ, ತಮಿಳು, ಮರಾಠಿಗಳಲ್ಲೂ ಅವುಗಳನ್ನು ರೂಪಾಂತರಿಸಿ ತರಲಿದೆ. 'ಇದು ಸಾಹಿತ್ಯವಲ್ಲ. ಇದೊಂದು ಜನಪ್ರಿಯ ಉತ್ಪನ್ನ ಅಷ್ಟೇ. ಲಘು ಓದಿನ ಈ ಸರಕನ್ನು ಮೆಕ್ಡೊನಾಲ್ಡ್ ಉತ್ಪನ್ನಗಳಂತೆಯೇ ಪರಿಭಾವಿಸಬೇಕು' ಎಂದು ಈ ಯೋಜನೆಯ ಸಿಇಓ ಪ್ರಸೂನ್ ಜೋಶಿ ಸತ್ಯವನ್ನೇ ಹೇಳಿದ್ದಾನೆ. ರೈಲ್ವೆ, ಬಸ್ ನಿಲ್ದಾಣಗಳು ಅವರ ಪ್ರಮುಖ ಗುರಿ. ಒಂದು ಪ್ರಯಾಣದ ಓದಿಗೆ ಮುಗಿಯುವಂಥ ಪುಸ್ತಕಗಳು. ಇಂಥ ಸ್ಥಳೀಯ ಕತೆಯುಳ್ಳ ಕಾದಂಬರಿಗಳನ್ನು ಬರೆಯುವಂಥ ಲೇಖಕರೂ ಅವರಿಗೆ ಬೇಕಂತೆ.
ಮಿಲ್ಸ್ ಬೂನ್ ಕಾದಂಬರಿಗಳು ಚೆನ್ನಾಗಿಯೇ ಮಾರಾಟವಾಗಬಹುದು. ಸೂಕ್ತ ಮಾರುಕಟ್ಟೆ ತಂತ್ರ ಇದ್ದರೆ ಸಗಣಿಯನ್ನೂ ಒಳ್ಳೆಯ ದರಕ್ಕೆ ಸೇಲ್ ಮಾಡಬಹುದು.
ಸ್ಟೀಫನ್ ಕತೆ
ಕತೆ, ಕಾದಂಬರಿಗಳನ್ನು ಬರೆಯುವವರಲ್ಲಿ ಎರಡು ತರಹದವರಿದ್ದಾರೆ. ಒಂದು: ಬರೆಯಲಿರುವ ಕತೆಯ ಸ್ಕೆಚ್ ಅನ್ನು ಮೊದಲೇ ನೋಟ್ ಮಾಡಿಟ್ಟುಕೊಂಡಿರುವವರು. ಪತ್ತೇದಾರಿ ಸಾಹಿತಿಗಳು ಇಂಥವರು. ಇಲ್ಲಿ ಪ್ರತಿ ಹಂತವನ್ನೂ ಲೆಕ್ಕ ಹಾಕಿಯೇ ಬರೆಯಲು ಆರಂಭಿಸಬೇಕಾಗುತ್ತದೆ. ಇನ್ನೊಂದು: ಕತೆ ಬರೆಯಲು ಶುರು ಮಾಡಿದ ಬಳಿಕವೇ ಅದರ ಬಗ್ಗೆ ಯೋಚಿಸುವವರು. ನಮ್ಮಲ್ಲೂ ತುಂಬ ಮಂದಿ ಸಾಹಿತಿಗಳು ಹೀಗಿದ್ದಾರೆ. ಅಮೆರಿಕದ ಹಾರರ್ ಲೇಖಕ ಸ್ಟೀಫನ್ ಕಿಂಗ್ ಎರಡನೆಯ ತರಹದವನು. ಆದರೆ ಅವನು ಬರೆಯುವುದು ಥ್ರಿಲ್ಲರ್ಗಳನ್ನು.
ಆದರೆ, ಮೊನ್ನೆ ಒಂದು ಸಂದರ್ಶನದಲ್ಲಿ ಸ್ಟೀಫನ್ ಕಿಂಗ್ ಹೇಳಿದ ಮಾತು ಮಾತ್ರ ನಾವು ಊಹಿಸಲಾಗದಂಥದು. ಆತ ಇತ್ತೀಚೆಗೆ 'ಜಾಯ್ಲ್ಯಾಂಡ್' ಎಂಬ ಹಾರರ್ ಕಾದಂಬರಿಯೊಂದನ್ನು ಬರೆದಿದ್ದಾನೆ. ಆತ ಹೇಳುವುದು: 'ಈ ಕಾದಂಬರಿಯಲ್ಲಿ ಕೊಲೆಗಾರ ಯಾರೆಂದು ಮೋದಲೇ ನೂವು ಊಹಿಸಿದರೆ ನನಗಿಂತ ನೀವೇ ಜಾಣರು. ಯಾಕೆಂದರೆ, ಕಾದಂಬರಿಯ ಮುಕ್ತಾಯಕ್ಕೆ ಬರುವವರೆಗೂ ಕೊಲೆಗಾರ ಯಾರೆಂದು ನನಗೇ ಗೊತ್ತಿರಲಿಲ್ಲ!'
ಏಟು ಝಡ್
ಕನ್ನಡದಲ್ಲಿ ಹೊಸದೊಂದು ಬಗೆಯ ವಾಗ್ವೈಖರಿ ಇತ್ತೀಚಿನ ಕೆಲ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಇದನ್ನು 'ಟಿವಿ ರಿಪೋರ್ಟರ್' ಮಾತಿನ ವೈಖರಿ ಎನ್ನಬಹುದು. ಅಪಾರ ಭಾಷಾಸಂಕೀರ್ಣತೆಯನ್ನೂ ಅರ್ಥಸಾಧ್ಯತೆಯನ್ನೂ ಹೊದಿರುವ ಈ ಭಾಷಾಶೈಲಿಯ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಇದೇನು ಅಂತ ಗೊತ್ತಿಲ್ಲದವರಿಗೆ ಇಲ್ಲಿದೆ ಸ್ಯಾಂಪಲ್:
'ಇವತ್ತು ಇಲ್ಲಿ ಏನೊಂದು ಅನಾಹುತ ನಡೆದಿದೆ ಅದು ಇವತ್ತು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದು ಬಸ್ಸು ಹಾಗೂ ಒಂದು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಈ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸತ್ತು ಹತ್ತು ಮಂದಿಗೆ ಗಾಯಗಳಾಗಿವೆ ಎಂದು ಈ ಘಟನೆಯ ಬಗ್ಗೆ ವಿವರಗಳನ್ನು ನೀಡಿರುವ ಸ್ಥಳೀಯ ಪೊಲೀಸರು ತಿಳಿಸಿದ್ದು ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಮೃತರ ಶವಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಹಾಗೂ ಈ ಏನೊಂದು ಅಪಘಾತದ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಬಸ್ಸಿನ ಚಾಲಕ ನಿದ್ರೆಗಣ್ಣಿನಲ್ಲಿದ್ದ ಹಾಗೂ ಲಾರಿ ಚಾಲಕ ಪಾನಮತ್ತನಾಗಿದ್ದ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು ಈ ಏನೊಂದು ದೂರ ಪ್ರಯಾಣದ ಬಸ್ಸುಗಳಲ್ಲಿ ಇಬ್ಬರು ಚಾಲಕರನ್ನು ಒದಗಿಸದಿರುವ ಸಾರಿಗೆ ಸಂಸ್ಥೆಯ ಬೇಜವಾಬ್ದಾರಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ಹಾಗೂ ಅಪಘಾತದಲ್ಲಿ ಮೃತರಾದವರ ಸಂಬಂಧಿಕರ ರೋದನ ಮುಗಿಲುಮುಟ್ಟಿದೆ ಮತ್ತು ಈ ಏನೊಂದು...'
-ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

