ಬುದ್ಧಿವಂತ ಪಾರಿವಾಳ

ಪಾರಿವಾಳವೊಂದು ಬೇಟೆಗಾರನೊಬ್ಬ ಇಟ್ಟಿದ್ದ ಬಲೆಗೆ ಸಿಕ್ಕಿ ಬಿತ್ತು. ಬಿಡಿಸಿಕೊಳ್ಳಲು ನೋಡಿದರೆ ಆಗುತ್ತಿಲ್ಲ. ಏನಾದರೂ...
ಬುದ್ಧಿವಂತ ಪಾರಿವಾಳ
Updated on: 

ಪಾರಿವಾಳವೊಂದು ಬೇಟೆಗಾರನೊಬ್ಬ ಇಟ್ಟಿದ್ದ ಬಲೆಗೆ ಸಿಕ್ಕಿ ಬಿತ್ತು. ಬಿಡಿಸಿಕೊಳ್ಳಲು ನೋಡಿದರೆ ಆಗುತ್ತಿಲ್ಲ. ಏನಾದರೂ ಉಪಾಯ ಮಾಡಿ ಪಾರಾಗಬೇಕೆಂದು ಅದು ನಿಶ್ಚಯಿಸಿ ಬೇಟೆಗಾರ ಬರುವುದನ್ನೇ ಕಾಯತೊಡಗಿತು.
ಬೇಟೆಗಾರ ಬಂದವನು ಸಂತೋಷದಿಂದ ಪಾರಿವಾಳವನ್ನು ಹಿಡಿದುಕೊಳ್ಳಲು ಹೋದಾಗ ಅದು "ಅಯ್ಯಾ ಬೇಟೆಗಾರ, ನನ್ನಂಥ ಪುಟ್ಟ ಹಕ್ಕಿಯಿಂದ ನಿನ್ನ ಅರ್ಧ ಹೊಟ್ಟೆ ಕೂಡಾ ತುಂಬುವುದಿಲ್ಲ. ನೀನು ನನ್ನನ್ನು ಬಿಡುವುದಾದರೆ ಮೂರು ಮುತ್ತಿನಂಥ ವಾಕ್ಯಗಳನ್ನು ಹೇಳುತ್ತೇನೆ" ಎಂದಿತು.
"ಅದೇನು ಹೇಳು ನೋಡೋಣ" ಎಂದು ಬೇಟೆಗಾರ ಕೇಳಿದಾಗ "ಹೇಳುತ್ತೇನೆ, ಆದರೆ ಒಂದು ಷರತ್ತು. ಮೊದಲನೇ ವಾಕ್ಯವನ್ನು ನೀನು ನನ್ನನ್ನು ಬಲೆಯಿಂದ ಬಿಡಿಸಿದಾಗ ಹೇಳುತ್ತೇನೆ. ಎರಡನೆ ವಾಕ್ಯವನ್ನು ಆ ಮರದ ಮೇಲೆ ಕುಳಿತು ಹೇಳುತ್ತೇನೆ. ಇನ್ನು ಮೂರನೆಯದನ್ನು ಮರದ ಮೇಲಿಂದ ಹಾರಿ ಹೋಗುತ್ತಾ ಹೇಳುತ್ತೇನೆ" ಎಂದಿತು ಪಾರಿವಾಳ.
ಅದರ ಮಾತನ್ನು ನಂಬಿದ ಬೇಟೆಗಾರ ಅದನ್ನು ಬಲೆಯಿಂದ ಬಿಡಿಸಿದ, "ಯಾರು ಏನೇ ಹೇಳಿದರೂ ಅವರು ಹೇಳಿದ್ದನ್ನೆಲ್ಲಾ ನಿಜವೆಂದು ನಂಬಿ ಕೆಡಬೇಡ" ಎಂದು ಹೇಳಿದ ಪಾರಿವಾಳ ಅಲ್ಲಿಂದ ಹಾರಿ ಮರದ ಮೇಲೆ ಕುಳಿತು. "ಇನ್ನು ಎರಡನೇ ವಾಕ್ಯ ಕೇಳು, ಕೈಗೆ ಸಿಕ್ಕಿದ್ದು ವೃಥಾ ತಪ್ಪಿಸಿಕೊಂಡರೆ ವೃಥಾ ಗೋಳಾಡಬೇಡ" ಎಂದಿತು.
ಬೇಟೆಗಾರನಿಗೆ ಅರ್ಥವಾಗಿ ಅವನು ಪಿಳಿಪಿಳಿ ನೋಡುತ್ತಿರುವಾಗ "ನನ್ನ ಹೊಟ್ಟೆಯೊಳಗೆ ಒಂದು ಅಮೂಲ್ಯವಾದ ರತ್ನವಿದೆ. ಅದು ಹತ್ತು ಕೆ.ಜಿ.ಯಷ್ಟು ತೂಕವಿದೆ. ಅದೇನಾದರೂ ನಿನಗೆ ಸಿಕ್ಕಿದ್ದರೆ ನೀನು ಶ್ರೀಮಂತನಾಗುತ್ತಿದ್ದೆ. ಆದರೆ ಅದೃಷ್ಟವನ್ನು ನೀನು ಕೇಳಿಕೊಂಡು ಬಂದಿಲ್ಲ ಬಿಡು. ಕೈಗೆ ಬಂದರೂ ಬಾಯಿಗೆ ಬಾರದೇ ಹೋಯಿತು" ಎಂದಿತು ಪಾರಿವಾಳ.
"ಅಯ್ಯೋ ನಾನೆಂಥಾ ಮೂರ್ಖ ಕೈಗೆ ಸಿಕ್ಕಿದ ಹಕ್ಕಿಯನ್ನು ಬಿಟ್ಟೆನಲ್ಲಾ" ಎಂದು ಬೇಟೆಗಾರ ಕೈ ಕೈ ಹಿಸುಕಿಕೊಳ್ಳುತ್ತಾ ಹೊಟ್ಟೆ ನೋವು ಬಂದವನ ಹಾಗೆ ನರಳತೊಡಗಿದಾಗ, ಪಾರಿವಾಳ "ಯಾಕೆ ಹೀಗೆ ನರಳುತ್ತಿರುವೆ. ಕಳೆದು ಹೊದದ್ದಕ್ಕಾಗಿ ಮರುಗಬೇಡವೆಂದು ನಾನು ಹೇಳಲಿಲ್ಲವೇ" ಎಂದು ಅಣಕಿಸಿತು.
ಏನೂ ಹೇಳಲು ತೋಚದೆ ಬೇಟೆಗಾರ ಬೆಪ್ಪನಂತೆ ನಿಂತಾಗ ಮತ್ತೆ ಪಾರಿವಾಳ "ಯಾರು ಏನೇ ಹೇಳಿದರೂ ಅದನ್ನು ನಂಬಬೇಡ ಎಂದು ನಾನು ಹೇಳುತ್ತಾ ಇದ್ದರೂ ನನ್ನ ಮಾತನ್ನು ನೀನು ನಂಬಿದೆಯಲ್ಲಾ. ನಾನೇ ಸರಿಯಾಗಿ ಮೂರು ತೊಲ ತೂಕ ಇಲ್ಲ, ಹಾಗಿರುವಾಗ ನನ್ನ ಹೊಟ್ಟೆಯೊಳಗೆ ಹತ್ತು ಕೆ.ಜಿ ತೂಗುವ ರತ್ನ ಇದೆಯೆಂದರೆ, ಅದನ್ನು ಹೇಗೆ ನಂಬಿದೆ. ನಿನಗೆ ಇಷ್ಟಾದರೂ ಬುದ್ಧಿ ಬೇಡವೇ" ಎಂದು ಜರೆಯಿತು.
"ಇನ್ನು ಈ ಹಕ್ಕಿ ಕೈ ಬಿಟ್ಟು ಹೋದ ಹಾಗೆಯೇ ಸರಿ" ಎಂದುಕೊಂಡ ಬೇಟೆಗಾರ "ನೀನು ಹಾರಿ ಹೋಗುವ ಮುಂಚೆ ಆ ಕೊನೆಯ ವಾಕ್ಯವನ್ನಾದರೂ ಹೇಳಿ ಹೋಗು" ಎಂದು ಕೇಳಿದ.
ಆ ಪಾರಿವಾಳ ತನ್ನ ರೆಕ್ಕೆಗಳನ್ನು ಕುಣಿಸುತ್ತಾ "ಈಗ ಎರಡು ವಾಕ್ಯಗಳನ್ನು ಹೇಳಿ ಏನು ಪ್ರಯೋಜನವಾಯಿತು. ಇನ್ನು ಮೂರನೆಯದು ಯಾಕೆ ದಡ್ಡನಿಗೆ ದಂಡಕ್ಕೆ" ಎಂದು ಹೇಳಿ ಅಲ್ಲಿಂದ ಹಾರಿ ಹೋಯಿತು.

-ಶಿವರಾಮ ಭಟ್, ಹತ್ತೊಕ್ಕಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com