ಕುಂಝುಂ ಜುಂಜುಂ!

ಈ ರುದ್ರಭೀಕರ ದಾರಿಯ ಪಾಲಿಗೆ ನಮ್ಮಂತೆಯೇ ಒಬ್ಬ ಪ್ರಯಾಣಿಕನಾಗಿದ್ದಿರಬಹುದಾದ ಆ ಸ್ಪಿಟಿವಾಸಿಗೆ, ಆತನ ವಾಹನಕ್ಕೆ ಒದಗಿದ ಗತಿಯನ್ನು ಕಂಡು ಮಾತೇ ಹೊರಡದಂತಾಗಿತ್ತು. ರಾಧಿಕಾ ಆ ಕಾರಿನ ಫೋಟೋ ತೆಗೆಯಲು ಬಗ್ಗಿದಳು. ಇದು ತನ್ನಿಂದಾಗುವ ಕೆಲಸವಲ್ಲ ಎಂದು ಸುಮ್ಮನಾದಳು.
ನಮ್ಮಲ್ಲಿ ಹಬ್ಬಿದ್ದ ಆತಂಕವನ್ನು ಕಳೆಯಲೆಂದು ತಶಿ ಮತ್ತು ತ್ಸೇರಿಂಗ್ ಮಾತನಾಡುತ್ತಿದ್ದರು. ಅವರು ಮಾತನಾಡುವ ಕೆಲ ಸಂಗತಿಗಳು ಉತ್ಪ್ರೇಕ್ಷೆಯೋ ನಿಜವೋ ಒಂದೂ ಗೊತ್ತಾಗುವಂತಿರಲಿಲ್ಲ. ಬಲಕ್ಕೆ ಹಬ್ಬಿದ್ದ ಬೆಟ್ಟ ಸಾಲನ್ನು ತೋರಿಸಿ ತ್ಸೇರಿಂಗ್ ಹೇಳಿದ: 'ಆ ಬೆಟ್ಟದ ಆಳದಲ್ಲಿ ಪ್ಲಾಟಿನಂ ನಿಕ್ಷೇಪ ಇದೆ. ಅದನ್ನು ಎತ್ತುವುದು ಅಸಾಧ್ಯ ಎಂದು ಸರ್ಕಾರಕ್ಕೆ ಗೊತ್ತಾಗಿರುವುದರಿಂದ ಸುಮ್ಮನಿದೆ'
'ಆ ಬೆಟ್ಟದ ಹೆಸರೇನು?'ಅದು ಆತನಿಗೆ ಗೊತ್ತಿರಲಿಲ್ಲ. ಸಾವಿರಾರು ಬೆಟ್ಟಗಳಿದ್ದವು ಅಲ್ಲಿ, ಯಾವುದಕ್ಕಂತ ಹೆಸರಿಡುತ್ತೀರಿ?
ಚಂದ್ರತಾಲ್ ಸರೋವರದ ಬಗ್ಗೆ ತಶಿ ಹೇಳಿದ್ದು ಇನ್ನಷ್ಟು ವಿಚಿತ್ರವಾಗಿತ್ತು, ಕುತೂಹಲಕರವಾಗಿತ್ತು. ಉದಾಹರಣೆಗೆ ಇದು:
'ಚಂದ್ರತಾಲ್ ದಿನವಿಡೀ ಬಣ್ಣ ಬದಲಾಯಿಸುತ್ತಿರುತ್ತದೆ. ಈಗ ನೋಡಿದ ಕಲರ್ ಇನ್ನರ್ಧ ಗಂಟೆಗೆ ಇರಲ್ಲ'
ನಮಗೆ ನಗು. ಸುಳ್ಳಿರಬೇಕೆಂಬ ಅನುಮಾನ. 'ಅದೇನು ಊಸರವಳ್ಳಿಯಾ? ಅದು ಹೇಗೆ ಸಾಧ್ಯ ತಶಿ?'
ಆದರೆ ಅದು ನಗುವಂಥ ವಿಷಯ ಆಗಿರಲೇ ಇಲ್ಲ ಎಂಬುದು ಅಲ್ಲಿ ಹೋದ ಮೇಲೇ ಗೊತ್ತಾದದ್ದು.
ಪ್ರಯಾಣದ ಆಯಾಸ ಕಳೆಯಲು ಬಂದ ಗ್ರಾಮವೇ ಲೋಸಾರ್. ಇದು ಮನಾಲಿ ಕಡೆಯಿಂದ ಬರುವವರಿಗೆ ಸಿಗುವ ಸ್ಪಿಟಿ ಕಣಿವೆಯ ಮೊದಲ ಊರು. ಇಲ್ಲಿ ವಿದೇಶೀಯರ ದಾಖಲೆಗಳನ್ನು ಚೆಕ್ ಮಾಡಿ ಬಿಡುತ್ತಾರೆ. ಒಂದು ಹೋಟೆಲ್, ಒಂದೆರಡು ಅಂಗಡಿಗಳುಳ್ಳ ಈ ಊರು 13,480 ಅಡಿ ಎತ್ತರದಲ್ಲಿದೆ. ಸುತ್ತ ಹೊಲಗದ್ದೆಗಳನ್ನು ಹೊಂದಿ, ಕಾಝಾಕ್ಕಿಂತ ತಂಪುತಂಪಾಗಿತ್ತು. ಅಲ್ಲಿದ್ದ ಏಕೈಕ ಹೋಟೆಲ್ನಲ್ಲಿ ಕಾಲು ಚಾಚಿ, ಟೀ ಕುಡಿದು ಮುಂದುವರಿದೆವು.
ಸೂರ್ಯ ನೆತ್ತಿಯ ಮೇಲೆ ಉರಿಯತೊಡಗಿದಾಗ ನಾವು ಕುಂಝಂ ಪಾಸ್ ತಲುಪಿದ್ದೆವು. ಮನಾಲಿಯಿಂದ ಕಾಝಾಕ್ಕೆ ಬರುತ್ತಾ ಇಲ್ಲಿ ಉಸಿರಾಟದ ತೊಂದರೆ ಅನುಭವಿಸಿದ್ದು ನೆನಪಾಯಿತು. ಈಗ ಗಾಳಿ ಪ್ರಶಾಂತವಾಗಿದೆ ಎಂಬಂತೆ ತೋರುತ್ತಿತ್ತು. ಹಿಂದೂಗಳು ದುರ್ಗಾ ಎಂದು ಬೌದ್ಧರು ಕುಂಝುಂ ಎಂದು ಕರೆಯುವ ದೇವಿಯ ಮಂದಿರ ಬಿಸಿಲಿನಲ್ಲಿ ಥಳಥಳ ಹೊಳೆಯುತ್ತಿತ್ತು. ನಾವು ಗಾಡಿ ನಿಲ್ಲಿಸಿ ಇಳಿದು ದೇವಿಯ ಗುಡಿಯ ಕಲ್ಲಿಗೆ ನಾಣ್ಯ ಅಂಟಿಸಿದೆವು. ಅದೊಂದು ಪದ್ಧತಿ. ಇಲ್ಲಿರುವ ಕಲ್ಲಿಗೆ ನಾಣ್ಯ ಅಂಟಿಸಿ ನಿಮ್ಮ ಪ್ರಾರ್ಥನೆ ಸಲ್ಲಿಸಬಹುದು. ಪ್ರಾರ್ಥನೆ ನ್ಯಾಯಯುತವಾಗಿದ್ದರೆ ನಾಣ್ಯ ಅಂಟಿಕೊಂಡೇ ಇರುತ್ತದಂತೆ. ನಾನು ಅಂಟಿಸಿದ ನಾಣ್ಯ ಜಪ್ಪೆಂದರೂ ಅಂಟಲು ನಿರಾಕರಿಸಿತು. ಈ ಬೆಂಗಳೂರಿನ ವ್ಯಕ್ತಿಯನ್ನು ಕಂಡು ಕುಂಝುಂ ದೇವಿಗೂ ಜಿಗುಪ್ಸೆಯಾಗಿರಬೇಕು.
ನಾವು ನೋಡನೋಡುತ್ತಿರುವಂತೆಯೇ ಬೌದ್ಧ ಭಿಕ್ಷುಗಳನ್ನು ಹೊತ್ತ ಗಾಡಿಯೊಂದು ಬಂತು. ಅದರಿಂದ ಇಳಿದ ಒಂದಷ್ಟು ಲಾಮಾಗಳು ದೇವಿಗೆ ನಮಸ್ಕರಿಸಿದರು. ವೃದ್ಧ ಯತಿಯೊಬ್ಬ ಮೆಲ್ಲಗೆ ಬಂದು ದೇವಿಗೆ ವಂದಿಸಿ, ಸೂರ್ಯದೇವನತ್ತ ನೋಡಿ ಕೈಮುಗಿದು, ಗಂಟೆಗಳ ಶಬ್ದಮಾಡಿ, ಗಾಡಿ ಹತ್ತಿ ಹೊರಟುಹೋದ.
ಪಕ್ಕದಲ್ಲೇ ಎರಡು ಪರ್ವತಗಳು ರಾಜರಾಣಿಯರಂತೆ ಅಂಟಿಕೊಂಡಿದ್ದವು. ಅದರ ಸುತ್ತಮುತ್ತ ಒಂದಿಷ್ಟು ಭಟರ ಸಮೂಹ. ಮಧ್ಯದಲ್ಲಿ ರಾಶಿಬಿದ್ದ ಹಿಮ. ಅದರ ತಳದಲ್ಲೆಲ್ಲೋ ಕರಗಿ ಹರಿಯುತ್ತಿರುವ ಸಣ್ಣದೊಂದು ಸೆಲೆ.
'ಅದು ಯಾವ ಪರ್ವತ, ತಶಿ?'
'ಅದು ಬಾರಹ ಶಿಗ್ರಿ ಗ್ಲೇಶಿಯರ್. ಹನ್ನೆರಡು ಶಿಖರಗಳ ನಡುವೆ ಒಂದು ಗ್ಲೇಶಿಯರ್. ಇದು ಜಗತ್ತಿನ ಎರಡನೇ ದೊಡ್ಡ ಗ್ಲೇಶಿಯರ್. 20 ವರ್ಷ ಹಿಂದೆ ಒಂದು ಮಿಲಿಟರಿ ಹೆಲಿಕಾಪ್ಟರ್ ಇಲ್ಲಿ ಬೆಟ್ಟಕ್ಕೆ ಅಪ್ಪಳಿಸಿ ಬಿದ್ದಿತ್ತು. ಅವರ ಶವಗಳು ಐದು ವರ್ಷ ಹಿಂದೆ ಸಿಕ್ಕಿದವು...' ಒಂದೇ ಉಸಿರಿನಲ್ಲಿ ಒಪ್ಪಿಸಿದ.
ಇದ್ದಕ್ಕಿದ್ದಂತೆ ಗಾಳಿ ವೇಗ ಪಡೆದುಕೊಂಡು ರುಮುರುಮುನೆ ಬೀಸತೊಡಗಿತು. ಮಂದಿರದ ಬಾವುಟಗಳು ಕಿತ್ತುಹೊಗುವಷ್ಟು ವೇಗವಾಗಿ ಹೊಡೆದುಕೊಳ್ಳತೊಡಗಿದವು. ಮಂದಿರದಿಂದ ಆಚೆಗೆ ಕಾಲಾಡಿಸುತ್ತ ಹೋಗಿದ್ದ ನಮಗೆಲ್ಲ ಇದ್ದಕ್ಕಿದ್ದಂತೆ ಉಸಿರುಕಟ್ಟುವ ಅನುಭವವಾಗತೊಡಗಿತು. ಸುಮೋದಿಂದ ಯಾರೋ ಬೇಗನೆ ಬರುವಂತೆ ಕೈಬೀಸಿ ಕರೆಯತೊಡಗಿದರು.
(ಮುಂದಿನ ವಾರ- ಚಂದ್ರಾ ತೀರದ ಚಂದ್ರ)
-ಹರೀಶ್ ಕೇರ
harishkhera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


