ಬಟ್ಟೆಗಂಟಿನ ರಹಸ್ಯ
ಊರಿನ ಯಜಮಾನರ ಬಳಿ ಒಬ್ಬಳು ಮುದುಕಿ ಬಂದು ಅಳುತ್ತ 'ಯಜಮಾನರೆ, ನನ್ನ ಮಗ ಮತ್ತು ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಹೊತ್ತು ಹೊತ್ತಿಗೆ ಊಟ ಕೊಡುವುದಿಲ್ಲ. ಸೊಸೆ ನನ್ನನ್ನು ಅಸಹ್ಯವಾಗಿ ಕಾಣುತ್ತಾಳೆ. ಅವರಿಗೆ ಬುದ್ಧಿ ಹೇಳಿ' ಎಂದು ಬೇಡಿಕೊಂಡಳು. ಊರಿನ ಯಜಮಾನರು ಯೋಚಿಸಿ 'ನೋಡಮ್ಮ, ನಿನಗೆ ಒಂದು ಬಟ್ಟೆಯ ಗಂಟನ್ನು ಕೊಡುತ್ತೇನೆ. ಆ ಗಂಟನ್ನು ಯಾರಿಗೂ ಕೊಡಬೇಡ ಯಾರಿಗೂ ಬಿಚ್ಚಲು ಬಿಡಬೇಡ ಮತ್ತು ಯಾರ ಎದುರಲ್ಲೂ ಬಿಚ್ಚಬೇಡ. ಒಂದು ಹಳೆಯ ಪೆಟ್ಟಿಗೆಯಲ್ಲಿ ಇಟ್ಟು ಬೀಗವನ್ನು ನಿನ್ನ ಬಳಿಯೇ ಇಟ್ಟುಕೊ' ಎಂದು ಹೇಳಿದರು.
ಊರಿನ ಯಜಮಾನರು ಹೇಳಿದಂತೆ ಮುದುಕಿ ಬಟ್ಟೆಯ ಗಂಟನ್ನು ಒಂದು ಹಳೆಯ ಪೆಟ್ಟಿಗೆಯಲಿಟ್ಟು ಬೀಗವನ್ನು ತನ್ನ ಬಳಿಯೇ ಇಟ್ಟುಕೊಂಡಳು. ಮುದುಕಿ ಅಲ್ಲಿಗೆ ಹೋಗಿದ್ದನ್ನು ಮಗ ನೋಡಿದ್ದ. 'ಊರಿನ ಯಜಮಾನರಲ್ಲಿ ಏನೇನು ಚಾಡಿ ಹೇಳಿದಳೋ, ಯಜಮಾನರು ಕರೆದು ಬಯ್ಯುವರೇನೋ' ಎಂದುಕೊಂಡು ಮುದುಕಿಯನ್ನು ಏನೂ ಕೇಳಲಿಲ್ಲ. ಆದರೆ ಮುದುಕಿಯ ಬಳಿ ಇರುವ ಗಂಟನ್ನು ನೋಡಿದ. ಗಂಡ-ಹೆಂಡತಿಯರಿಬ್ಬರೂ ಆ ಬಟ್ಟೆ ಗಂಟಿನ ವಿಷಯವಾಗಿ ಮಾತನಾಡಿಕೊಂಡರು. ಎಷ್ಟೇ ಯೋಚಿಸಿದರೂ ಆ ಗಂಟಿನಲ್ಲಿರುವುದೇನೆಂಬುದನ್ನು ಅರಿಯಲಾಗಲಿಲ್ಲ.
ಒಂದು ದಿನ ಊರಿನ ಯಜಮಾನರು ತಮ್ಮ ತೋಟಕ್ಕೆ ಹೋಗುತ್ತಿರುವಾಗ ದಾರ್ನಿಯಲ್ಲಿ, ಮುದುಕಿಯ ಮಗ ಸಿಕ್ಕಿದ. ಯಜಮಾನರು 'ಏನಪ್ಪ, ನಿನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆಯಾ? ನೋಡು ನಾನೊಂದು ವಿಷಯವನ್ನು ನಿನಗೆ ಹೇಳುವುದ ಮರೆತಿದ್ದೆ. ನಿಮ್ಮ ತಾಯಿ ನನಗೆ ಸುಮಾರು ವರ್ಷಗಳ ಹಿಂದೆ ಸ್ವಲ್ಪ ಹಣ ಮತ್ತು ಒಡವೆಗಳನ್ನು ಕೊಟ್ಟಿದ್ದಳು. ಅದನ್ನು ಬಟ್ಟೆಯ ಗಂಟಿನಲ್ಲಿ ಕಟ್ಟಿ ಅವಳಿಗೆ ಹಿಂದಿರುಗಿಸಿದ್ದೇನೆ' ಎಂದು ಹೇಳಿ ತಮ್ಮ ತೋಟದ ದಾರಿ ಹಿಡಿದರು.
ಮುದುಕಿಯ ಮಗನಿಗೆ ತುಂಬಾ ಸಂತೋಷವಾಯಿತು. ಬಟ್ಟೆ ಗಂಟಿನ ರಹಸ್ಯ ಗೊತ್ತಾಯಿತಲ್ಲ ಎಂದು ಹಿರಿಹಿರಿ ಹಿಗ್ಗಿದ. ಹಣ ಮತ್ತು ಒಡವೆಯನ್ನು ತಾಯಿಯಿಂದ ಹೇಗೆ ಪಡೆಯುವುದೆಂದು ಯೋಚಿಸುತ್ತ ಮನೆಗೆ ಬಂದು, ಎಲ್ಲ ವಿಷಯವನ್ನೂ ತನ್ನ ಹೆಂಡತಿಗೆ ಹೇಳಿದ. ಹೇಗಾದರೂ ಮಾಡಿ ಆ ಗಂಟನ್ನು ಮುದುಕಿಯಿಂದ ಪಡೆಯಬೇಕೆಂದು ನಿರ್ಧರಿಸಿದರು. ಅಂದಿನಿಂದ ಅವಳನ್ನು ಚೆನ್ನಾಗಿ ನೋಡಿಕೊಳ್ಳಲು ತೀರ್ಮಾನಿಸಿದರು. ಅವಳಿಗೆ ಸಮಯಕ್ಕೆ ಸರಿಯಾಗಿ ಊಟ ನೀಡುವುದು, ಸ್ನಾನ ಮಾಡಿಸುವುದು ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡರು. ಒಂದು ದಿನ ಸೊಸೆ 'ಅತ್ತೆ, ಆ ಗಂಟಿನಲ್ಲಿರುವುದೇನು?' ಎಂದು ಪ್ರೀತಿಯಿಂದ ಕೇಳಿದಳು. ಆದರೆ ಮುದುಕಿ ಏನೂ ಹೇಳದೆ, ಪೆಟ್ಟಿಗೆಯನ್ನು ಮುಟ್ಟಲೂ ಸಹ ಅವಕಾಶ ನೀಡಲಿಲ್ಲ. ಸೊಸೆಗೆ ಕೇಳಿ ಕೇಳಿ ಸಾಕಾಯಿತು. ಕೊನೆಗೆ 'ಅಯ್ಯೋ ಬಿಡು, ಮುದುಕಿ ಸತ್ತಮೇಲಾದರೂ ನಮಗೆ ತಾನೇ ಸಿಗುವುದು' ಎಂದು ಸಮಾಧಾನಗೊಂಡಳು.
ಮುದುಕಿ ಹತ್ತಾರು ವರ್ಷಗಳು ಚೆನ್ನಾಗಿದ್ದಳು. ಒಂದು ದಿನ ರಾತ್ರಿ ಉಟ ಮಾಡಿ ಮಲಗಿದವಳು ಬೆಳಗಾದರೂ ಏಳದಿದ್ದಾಗ ಅನುಮಾನಗೊಂಡ ಮಗ ಎಬ್ಬಿಸಲು ಹೋದ. ಆದರೆ ಆಗಲೇ ಮುದುಕಿ ತೀರಿಹೋಗಿದ್ದಳು. ಅವಳ ಅಂತ್ಯಸಂಸ್ಕಾರ ಮಾಡಲು ಊರಿನ ಜನರೆಲ್ಲ ಸೇರಿದರು. ಊರಿನ ಯಜಮಾನರೂ ಬಂದರು. ಅವರು ಅಜ್ಜಿಯ ಶವಕ್ಕೆ ನಮಸ್ಕರಿಸಿ- ಮಗನಿಗೆ, ಆ ಗಂಟನ್ನು ಬಿಚ್ಚಲು ಹೇಳಿದರು. ಊರಿನ ಜನರೆಲ್ಲ ಕುತೂಹಲದಿಂದ ನೋಡತೊಡಗಿದರು. ಆತ ಬಟ್ಟೆಯ ಗಂಟನ್ನು ಬಿಚ್ಚಿದ. ಅದರೊಳಗೆ ಹಳೆ ಮಡಕೆಯ ಚೂರುಗಳನ್ನು ನೋಡಿ ಆಶ್ಚರ್ಯಗೊಂಡ. ಯಜಮಾನರು ಅವನ ಬೆನ್ನು ಸವರುತ್ತ 'ನೋಡಪ್ಪ, ತಂದೆ ತಾಯಿಗಳಿಗೆ ವಯಸ್ಸಾದ ಮೇಲೆ ಮಕ್ಕಳು ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅವರ ಬೇಕುಬೇಡಗಳನ್ನು ಪೂರೈಸಬೇಕು. ಅವರಿಗೆ ರೋಗ ರುಜಿನಗಳು ಬಂದಾಗ ಅಸಹ್ಯಪಡದೆ ಅವರ ಸೇವೆ ಮಾಡಬೇಕು. ಆದರೆ ನೀನು ಮತ್ತು ನಿನ್ನ ಹೆಂಡತಿ ಅಜ್ಜಿಯನ್ನು ಕಡೆಗಾಣಿಸಿದಿರಿ. ಈ ವಿಷಯವನ್ನು ಅಜ್ಜಿ ನನಗೆ ಹೇಳಿದಳು. ನಿನಗೆ ಹಣದ ಮೇಲೆ ದುರಾಸೆ ಇರುವುದು ನನಗೆ ಗೊತ್ತಿತ್ತು. ಆದ್ದರಿಂದ ಈ ಉಪಾಯ ಮಾಡಿದೆ' ಎಂದು ಹೇಳಿದರು. ಮಗ ನಾಚಿಕೆಯಿಂದ ತಲೆತಗ್ಗಿಸಿದ. ತಪ್ಪಿನ ಅರಿವಾಯಿತು. 'ತಪ್ಪಾಯಿತು' ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಕ್ಷಮೆ ಕೇಳಿದ.
ಗ್ರಾಮದಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳದವರಿಗೆ ಇದೊಂದು ಪಾಠವಾಯಿತು. ಗ್ರಾಮಸ್ಥರೆಲ್ಲ ಯಜಮಾನರ ಉಪಾಯವನ್ನು ಕೊಂಡಾಡುತ್ತ, ಅಜ್ಜಿಯ ಅಂತ್ಯಸಂಸ್ಕಾರ ಮಾಡಿದರು.
-ಅರಳಕುಪ್ಪೆ ಶ್ರೀನಿವಾಸ್, ಪಾಂಡವಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

