ಒಕೊಂಕ್ವೋ ಎಂಬ ಧೀರ
'ಒಕೊಂಕ್ವೋ ಈಗ ಎಲ್ಲರಿಗೂ ಗೊತ್ತಾಗಿದ್ದ: ಒಂಬತ್ತು ಗ್ರಾಮಗಳಲ್ಲಿ ಮತ್ತು ಅದರಾಚೆಗೂ. ಈ ಕೀರ್ತಿ ಬಂದದ್ದು ಅವನ ಸಾಧನೆಯಿಂದಲೇ. ಹದಿನೆಂಟು ವರ್ಷದ ಹುಡುಗನಾಗಿದ್ದಾಗಲೇ, 'ಬೆಕ್ಕು' ಎಂದು ಹೆಸರು ಮಾಡಿದ್ದ ಅಮಲಿಂಜೆಯನ್ನು ನೆಲಕ್ಕೆ ಕೆಡವಿ ತನ್ನೂರಿಗೆ ಕೀರ್ತಿ ತಂದಿದ್ದ. ಅಮಲಿಂಜೆ ದೊಡ್ಡ ಕುಸ್ತಿ ಮಲ್ಲ. ಉಮೋಫಿಯಾದಿಂದ ಬೈನೋವರೆಗೆ ಏಳು ವರ್ಷ ಏಕಾಂಗಿವೀರನಾಗಿ ಮೆರೆದವನು. ಬೆಕ್ಕು ಎಂಬ ಹೆಸರು ಬಂದದ್ದು, ಅವನ ಬೆನ್ನು ಯಾವತ್ತೂ ನೆಲಕ್ಕೆ ತಾಕಿರಲಿಲ್ಲ ಎಂಬ ಕಾರಣಕ್ಕೆ. ಮುದಿಜೀವಗಳು ಹೇಳುವಂತೆ, ಆ ಪಟ್ಟಣದ ಸ್ಥಾಪಕನಾಗಿದ್ದ ಅವರ ಹಿರಿಯನೊಬ್ಬ ಕ್ಷುದ್ರಶಕ್ತಿಯೊಂದನ್ನು ಏಳು ಹಗಲು ಏಳು ಇರುಳು ಹೋರಾಡಿ ಮಣಿಸಿದ ಹೋರಾಟಕ್ಕೆ ಈ ಅಮಲಿಂಜೆ- ಒಕೊಂಕ್ವೋ ಹೋರಾಟ ಸಮನಾಗಿತ್ತು.
ಡೋಲುಗಳು ಬಾರಿಸಿದವು, ಕೊಳಲುಗಳು ಉಲಿದವು, ನೋಡುಗರ ಉಸಿರು ಸಿಕ್ಕಿಕೊಂಡಂತಿತ್ತು. ಅಮಲಿಂಜೆ ಪಕ್ಕಾ ಕೌಶಲ್ಯವಂತ. ಆದರೆ ಒಕೊಂಕ್ವೋ ನೀರಿನಲ್ಲಿರುವ ಮೀನಿನಷ್ಟೇ ಜಾರುನಡೆಯವನಾಗಿದ್ದ. ಅವರ ತೋಳು, ತೊಡೆ, ಬೆನ್ನುಗಳ ಪ್ರತಿ ನರ, ಪ್ರತಿ ಸ್ನಾಯುವೂ ಉಬ್ಬಿಕೊಂಡು ಹರಿದುಹೋಗುವವರೆಗೂ ಎಳೆಯಲ್ಪಡುತ್ತಿರುವ ಶಬ್ದವನ್ನು ಕೇಳಬಹುದಾಗಿತ್ತು. ಕೊನೆಗೆ ಒಕೊಂಕ್ವೋ, ಅಮಲಿಂಜೆಯನ್ನು ಎತ್ತಿ ಒಗೆದ.
ಅದೆಲ್ಲ ಬಹಳ ವರ್ಷ ಹಿಂದೆ, ಬಹುಶಃ ಇಪ್ಪತ್ತು ವರ್ಷ ಅಥವಾ ಅದಕ್ಕೂ ಹೆಚ್ಚು. ಈ ಅವಧಿಯಲ್ಲಿ ಒಕೊಂಕ್ವೋ ಕೀರ್ತಿ, ಬೀಸುಗಾಳಿಯ ಕಾಲದಲ್ಲಿ ಕಾಳ್ಗಿಚ್ಚು ವಿಸ್ತರಿಸುವಂತೆ ಹಬ್ಬಿತ್ತು. ಅವನ ಎತ್ತರ, ಬೃಹತ್ ಗಾತ್ರ, ಪೊದೆಯಾದ ಹುಬ್ಬುಗಳು, ಅಗಲ ಮೂಗು ಅವನಿಗೊಂದು ಗಂಭೀರ ಹೊರನೋಟವನ್ನು ಕಲ್ಪಿಸಿದ್ದವು. ಅವನ ಉಸಿರು ಎಷ್ಟು ಭಾರವಾಗಿತ್ತೆಂದರೆ, ಅವನು ನಿದ್ರಿಸುತ್ತಿದ್ದಾಗ ಮನೆಯ ಹೊರಗಡೆಯಿದ್ದವರೆಲ್ಲ ಅವನ ಉಸಿರನ್ನು ಕೇಳಿಸಿಕೊಳ್ಳುತ್ತಿದ್ದರು. ಅವನು ನಡೆಯುವಾಗ ಹಿಮ್ಮಡಿಗಳು ನೆಲ ಮುಟ್ಟುತ್ತಲೇ ಇರಲಿಲ್ಲ. ಯಾರ ಮೇಲೋ ಜಿಗಿಯಲು ಹೊರಟವನಂತೆ ನಡೆಯುತ್ತಿದ್ದ. ಹಾಗೆ ಆಗಾಗ ಆತ ಇತರರ ಮೇಲೆ ಜಿಗಿಯುತ್ತಿದ್ದುದೂ ಇತ್ತು. ಅವನಿಗೆ ಸ್ವಲ್ಪ ತೊದಲಿತ್ತು. ಕೋಪಗೊಂಡಾಗ, ಪದಗಳು ಸಿಕ್ಕದೆ ಹೋದಾಗ ಆತ ಮಾತುಗಳ ಬದಲಿಗೆ ಮುಷ್ಟಿಗಳನ್ನು ಉಪಯೋಗಿಸುತ್ತಿದ್ದ. ಸೋತ ವ್ಯಕ್ತಿಗಳ ಬಗ್ಗೆ ಅವನಿಗೆ ಸಹನೆಯಿರಲಿಲ್ಲ. ತನ್ನ ತಂದೆಯ ಮೇಲೂ ಸಹನೆಯಿರಲಿಲ್ಲ.'
ಮೊನ್ನೆ ಮೊನ್ನೆ ತೀರಿಕೊಂಡ ನೈಜೀರಿಯಾದ ಲೇಖಕ ಚಿನುವ ಅಚಿಬೆ, ಆಫ್ರಿಕದ ಮಾತ್ರವಲ್ಲ ಕನ್ನಡನಾಡಿನ ಸಾಹಿತ್ಯವನ್ನೂ ಅನೇಕ ರೀತಿಯಲ್ಲಿ ಪ್ರಭಾವಿಸಿದ್ದಾರೆ. ಅವರಿಗೆ ಖ್ಯಾತಿ ತಂದುಕೊಟ್ಟ ಮೊದಲ ಕಾದಂಬರಿ 'ಥಿಂಗ್ಸ್ ಫಾಲ್ ಅಪಾರ್ಟ್'ನ ಮೊದಲ ಕೆಲವು ಸಾಲುಗಳಿವು.
-ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

