ಸಾಪ್ತಾಹಿಕಪ್ರಭ

ರಾಮ ಮೋಹನ ಹರ ಲೋಹಿಯಾ

ರಾಮ ಮೋಹನ ಹರ ಲೋಹಿಯಾ
Published On :

ಲೋಹಿಯಾ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಹೇಳಿದ ವಿಚಾರಗಳು ಮತ್ತು ಜಾಗತೀಕರಣದ ಬಗ್ಗೆ ಅವರು ಹೇಳಿದ ಭವಿಷ್ಯವಾಣಿಗಳು ಇಂದು ನಿಜವಾಗಿವೆ. ಅನೇಕರು ಭೂಹೀನರಾಗಿದ್ದರೆ ಭೂಮಿಯನ್ನು ತೆರೆದ ತಟ್ಟೆಯಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ರೈತರಿಂದ, ಬಡವರಿಂದ ಕಸಿದುಕೊಂಡು, ಬಂಡವಾಳಿಗರ ಪದತಲಕ್ಕೆ ಅರ್ಪಿಸಲಾಗುತ್ತದೆ. ಇಂದು ಕೃಷಿಯೆಂಬ ಕೃಷಿಯೇ ಯಕ್ಕುಟ್ಟು ಹೋಗಿದೆ. ಹೊರನೋಟಕ್ಕೆ ಪ್ರಸ್ತುತದಲ್ಲಿ ಕೃಷಿ ಉತ್ಪನ್ನಕ್ಕೆ ಒಳ್ಳೆಯ ಬೆಲೆ ಎಂಬ ಬಿಸಲ್ಗುದುರೆ ಕಣ್ಣೆದುರಿಗೆ ಇದ್ದರೂ ಕೃಷಿಕ ಮೋಸದಾಟಕ್ಕೆ ಬಲಿಯಾಗುತ್ತಿದ್ದಾನೆ. ಮದ್ಯಮವರ್ಗ ಬಡತನದ ತೆಕ್ಕೆಗೆ ಜಾರಿ ಬಡವರಾಗುತ್ತಿದ್ದಾರೆ. ಶ್ರೀಮಂತರು ಇನ್ನೂ ಸಿರಿವಂತರಾಗುವ ಈ ಕಾಲದಲ್ಲಿ ಸಮಾಜವಾದ ಮತ್ತು ಲೋಹಿಯಾ ಪದೇಪದೇ ನೆನಪಾಗುತ್ತಾರೆ.
ಲೋಹಿಯಾ ಯಾವುದರ ಬಗ್ಗೆ ಮಾತಾಡಿಲ್ಲ? ಅವರು ಎಲ್ಲ ವಿಷಯಗಳ ಬಗ್ಗೆಯೂ ವಿಚಾರ ಮಂಡನೆ ಮಾಡಿದ್ದಾರೆ. ಹಿಂದುಳಿದವರು, ಬಡವರು, ಸಿರಿವಂತರು, ರೈತರು, ಆಯಾಗಾರರ ಬಗ್ಗೆ ಬಹುಶಃ ಲೋಹಿಯಾ ಮಾತಾಡಿದಷ್ಟು ಯಾರೂ ಮಾತನಾಡಿಲ್ಲ ಅನಿಸುತ್ತದೆ. ಆದರೆ, ಒಂದು ಲೋಹಿಯಾ ಅವರ ಟಾಕು ಎಲ್ಲ ಕಾಲಕ್ಕು ಜನಪ್ರಿಯವಾಗಿದ್ದು ಭಾರತೀಯ ಅಧ್ಯಾತ್ಮ ಮೀಮಾಂಸೆಯ ಬಹುಚರ್ಚಿತ ಮತ್ತು ಅನೇಕರು ಅನುಕರಣೀಯವಾಗಿಸುವ ಹೆಸರುಗಳಾದ ರಾಮ, ಕೃಷ್ಣ, ಶಿವರನ್ನು ಅವರು ಬಹು ಹೃದಯಂಗಮವಾಗಿ ಒಬ್ಬ ಸಾಮನ್ಯ ಮನುಷ್ಯನ ನೆಲೆಯಲ್ಲಿ ನಿಂತು ಅಳತೆಯನ್ನು ಮೀರದಂತೆ ಎಚ್ಚರ ವಹಿಸುತ್ತ ಚರ್ಚಿಸುತ್ತಾರೆ. ಇದು ಲೋಹಿಯಾರವರ ಜನಪ್ರಿಯ ಲೇಖನಗಳಲ್ಲಿ ಒಂದು. ಅತ್ತ ಸಂಪೂರ್ಣ ಎಡಪಂಥೀಯ ಮಾದರಿಯ ಕಪ್ಪು ಬಿಳುಪಿನೋಪಾದಿಯಲ್ಲಿ ಭಾರತೀಯ ಮೀಮಾಂಸೆಯ ಈ ಮೂವರು ನಾಯಕರನ್ನು ಧಿಕ್ಕರಿಸದೆ ಹಾಗೂ ಧಾರ್ಮಿಕ ಪಿಂಡದಿಂದ ಉದಯಿಸಿದ ಅರ್ಪಿತ ಮನೋಭಾವಕ್ಕೂ ಅವಕಾಶವಿಲ್ಲದಂತೆ ಬೇರೆಯದೆ ತೆರನಾಗಿ ಈ ಮೂರು ಭಾರತದ ಮಹಾನ್ ಪುರುಷರನ್ನು ಚಿತ್ರಿಸಿದ ಲೋಹಿಯಾ, ಇವರಿಗೆ 'ಮಹಾಸ್ವಪ್ನ'ಗಳೆಂಬ ಅಭಿದಾನ ಕೊಡುತ್ತಾರೆ. ಅಂದರೆ ನಾವು ಯಾವುದೆ ವಿಚಾರದ ಬೆನ್ನ ಹಿಂದೆ ಹೋದರೂ ಈ ಮೂವರನ್ನು ನಮ್ಮ ನೆಲೆಯಲ್ಲಿ ಯೋಚಿಸುವ ಅನಿವಾರ್ಯತೆಯ ಬಗ್ಗೆ ಸಾರುತ್ತಾರೆ. ಸಾಂಸ್ಕೃತಿಕ ಚಳುವಳಿಯನ್ನು ದೇಶೀಯ ಪರಂಪರೆಯ ಹಿನ್ನೆಲೆಯಲ್ಲಿ ಗ್ರಹಿಸುವ ಲೋಹಿಯ ಅವರ ವ್ಯಕ್ತಿತ್ವ, ಗುಣಗಳ ಅದ್ಭುತ ವ್ಯಾಖ್ಯಾನವನ್ನೇ ಬರೆಯುತ್ತಾರೆ. ಲೋಹಿಯ ಹೇಳಿದ ರಾಮ- ಕೃಷ್ಣ- ಶಿವ ಇಂದು ಅನೇಕ ಘಟ್ಟಗಳನ್ನು ತಲುಪಿ  ಜಾಗತೀಕರಣದ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಅದು ಹೇಗೆ ಎಂಬುದೇ ಕುತೂಹಲ.
ರಾಮ, ಕೃಷ್ಣ ಮತ್ತು ಶಿವ 'ಮಹಾಸ್ವಪ್ನ' ಅಲ್ಲದೆ, ಇವರು ಭಾರತೀಯ ಜೀವ ಜಗತ್ತಿನ ಹೃದಯದಲ್ಲಿ ಯಾವಾಗಲೂ ಕೆತ್ತಲ್ಪಟ್ಟ ಶಿಲ್ಪಗಳು ಎಂಬುದು ಲೋಹಿಯಾ ವಾದ. ಶಿವ, ರಾಮ, ಕೃಷ್ಣರನ್ನು ಎಂದೂ ದೂರತಳ್ಳದ ಲೋಹಿಯಾ ಅವರ ಗುಣಗಳೊಂದಿಗೆ ಸಮಾಜವನ್ನು ಸಮೀಕರಿಸುತ್ತಾರೆ. ಪ್ರತಿ ಹತ್ತು ಜನರಲ್ಲೂ ಸುಮಾರು 8 ಜನರಿಗೆ ರಾಮ, ಕೃಷ್ಣ, ಶಿವ ಗೊತ್ತಿರುವುದನ್ನು ಲೋಹಿಯಾ ಹೇಳುತ್ತಾ... ಅವರನ್ನು ದೈವತ್ವದ ಹಿನ್ನೆಲೆಯಲ್ಲಿ ಹುಸಿ ಶಿಷ್ಟಾಚಾರಗಳ ಗದ್ದುಗೆಯ ಮೇಲೆ ಕೂರಿಸಿ ನಮ್ಮಿಂದ ದೂರ ಮಾಡುವುದನ್ನು ಲೋಹಿಯಾ ಒಪ್ಪುವುದೇ ಇಲ್ಲ ಮತ್ತು ಅದೇ ಸಂದರ್ಭದಲ್ಲಿ ಇವರನ್ನು ದೇವರೆಂದು ಮೂಗುಮುರಿಯುವ ಹಾಗೂ ಸಾರಾಸಗ ತಿರಸ್ಕಾರವನ್ನೂ ಅವರು ತಳ್ಳಿಹಾಕುತ್ತಾರೆ. ಅದಕ್ಕಾಗಿ ರಾಮ, ಶಿವ ಕೃಷ್ಣರನ್ನು ನಾವು ದಿನಾಲು ಸಮಾಜದಲ್ಲೇ ಕಾಣಬಹುದಾಗಿದೆ.
ಹೀಗಾಗಿ ರಾಮ, ಕೃಷ್ಣ, ಶಿವ- ಇಂದು ಜಾಗತೀಕರಣದ ಕಾಲದಲ್ಲಿ ಮೂರು ವರ್ಗಗಳ ಪ್ರತಿನಿಧಿಗಳಾಗಿ ನಮ್ಮ ಮುಂದೆ ನಿಲ್ಲುತ್ತಾರೆ.
ರಾಮ
ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ. ರಾಮ ವಿಷ್ಣುವಿನ ಪೂರ್ಣ ಅವತಾರಿಯಲ್ಲ. ಆತ ವಿಷ್ಣುವಿನ ಅಂಶ ಮಾತ್ರ. ಆತ ಭೂಲೋಕಕ್ಕೆ ಬಂದಾಗ ವಿಷ್ಣು ಇನ್ನೂ ವೈಕುಂಠದಲ್ಲಿ ಇದ್ದನೆಂದು ಪುರಾಣ ಹೇಳುತ್ತದೆ. 
ರಾಮ ಮತ್ತು ವಿಷ್ಣು ಒಮ್ಮೆಲೆ ವೈಕುಂಠ ಮತ್ತು ಭೂಲೋಕದಲ್ಲಿ ಇದ್ದುದರಿಂದ ರಾಮನನ್ನು ವಿಷ್ಣುವಿನ ಶಕೆ ಎಂದು ಗುರುತಿಸಲಾಗಿದೆಯೇ ಹೊರತು ಆತ ವಿಷ್ಣುವಿನ ಅವತಾರ ಅಲ್ಲ ಎಂದು ಲೋಹಿಯಾ ಗುರುತಿಸುತ್ತಾರೆ.
ರಾಮನ ಕೇಳುವ ಗುಣ, ನೊಂದುಕೊಳ್ಳುವ ಗುಣ, ಗೌರವಿಸುವ ಗುಣ, ದೃಢತೆ ತುಂಬುವ ಗುಣಗಳಿಂದ ಆತನ ಮನುಷ್ಯ ಸಹಜ ದೌರ್ಬಲ್ಯವನ್ನು ಗುರುತಿಸುವ ಲೋಹಿಯಾ, ವಾಲಿಯನ್ನು ಕೊಲ್ಲುವಾಗಿನ ರಾಮನ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ವಾಲಿಯ ಸಾವಿನಲ್ಲಿ ಪಾಪ ಪುಣ್ಯದ ಅನಿವಾರ್ಯತೆಗಿಂತ ತನ್ನ ಅಸ್ತಿತ್ವದ ಪ್ರಶ್ನೆಗಳನ್ನು ಎತ್ತುತ್ತಾರೆ. ರಾಮನದು ಪೂರ್ಣತೆಯಲ್ಲಿಯೂ ಸೀಮಿತ ವ್ಯಕ್ತಿತ್ವ ಎನ್ನುತ್ತಾರೆ.
ಜಾಗತೀಕರಣದ ಹಿನ್ನೆಲೆಯಲ್ಲಿ ನಾವು ಲೋಹಿಯಾ ಹೇಳುವ ರಾಮನ ಕಥೆಯನ್ನು ಇಂದು ಇಂಡಿಯಾದ ಮಧ್ಯಮವರ್ಗದೊಂದಿಗೆ ತಳಕು ಹಾಕುವುದು ಒಳ್ಳೆಯದು. ಏಕೆಂದರೆ ರಾಮನ ಸೀಮಿತ ವ್ಯಕ್ತಿತ್ವಕ್ಕೂ ಮಧ್ಯಮ ವರ್ಗ ಸಾಧಿಸುವ ಗುರಿಗಳಿಗೂ ಬಹಳ ಸಾಮ್ಯಗಳಿವೆ. ಇಲ್ಲಿಯ ಮಧ್ಯಮವರ್ಗದ ತಳಮಳಗಳು ಅಂದು ರಾಮನ ತಳಮಳಗಳೇ ಆಗಿದ್ದವು. ಒಂದುಕಡೆ ಪಿತೃವಾಕ್ಯಪಾಲನೆಯೆಂಬ ಅತಾರ್ಕಿಕ ವಾದದ ಬೆನ್ನುಹತ್ತಿ ಹೋಗುವ ರಾಮ, ಶೂದ್ರ ಶಂಭೂಕನ ಕೊಲೆಯ ಮೂಲಕ ಅನೈತಿಕತೆಯನ್ನು ನೈತಿಕವಾಗಿ, ವಾಲಿಯ ವಿಷಯದಲ್ಲಿ ಸಮಯಸಾಧಕತನವನ್ನು ಧರ್ಮವಾಗಿ ಪರಿವರ್ತಿಸುವ ಅನುಕೂಲ ಸಿಂಧುತನ ಮಧ್ಯಮವರ್ಗದಂತೆಯೇ ಗೋಚರಿಸುತ್ತದೆ!
ಸಂದರ್ಭಕ್ಕನುಗುಣ ವರ್ತನೆ, ಆ ಕ್ಷಣದ ಪಾಪವೋ ಪುಣ್ಯವೋ ಅದರಾಚೆ ಮಧ್ಯಮವರ್ಗದ ಬದುಕು ರೂಪುಗೊಳ್ಳುತ್ತದೆ. ಮಧ್ಯಮವರ್ಗದ ಸೀಮಿತ ಗುರಿಯಲ್ಲಿ ಬದುಕು ರೂಪುಗೊಳ್ಳುವುದರಿಂದ ಆ ಜಾಗತಿಕ ಹಳ್ಳಿಗಳಲ್ಲಿ ಎಷ್ಟು ಮಧ್ಯಮವರ್ಗಗಳು ವಾಲಿಯನ್ನು ಕೊಲ್ಲುತ್ತಿವೆಯೋ, ಎಷ್ಟು ಮಧ್ಯಮವರ್ಗಗಳು ಪಾಖಂಡಿ ವಿಭೀಷಣನನ್ನು ಬಗಲಲ್ಲಿಟ್ಟುಕೊಳ್ಳುತ್ತವೆಯೋ, ಎಷ್ಟು ಮಧ್ಯಮ ವರ್ಗಗಳು ಸೀತೆಯನ್ನು ಕಾಡಿಗೆ ತಳ್ಳುತ್ತವೆಯೋ, ಶಂಭೂಕನ ಕೊಲೆಯನ್ನು ಧರ್ಮವಾಗಿಸುತ್ತವೆಯೋ, ಎಷ್ಟು ಕುಟುಂಬಗಳು ಪಾಪಪ್ರಜ್ಞೆಗಳಲ್ಲೂ ಬೇಯುತ್ತ ದ್ರೋಹದ ದೀವಟಿಗೆ ಹಚ್ಚಲು ಸಜ್ಜಾಗುತ್ತವೆಯೋ...?
ಕೃಷ್ಣ
ಲೋಹಿಯಾ ಚಿತ್ರಿಸಿದ ಕೃಷ್ಣ ಜಾಗತಿಕ ಹಳ್ಳಿಯಲ್ಲಿ ಮೆಟ್ರೋಪಾಲಿಟಿಯನ್ ಮಂದಿಯನ್ನು ಹೋಲುತ್ತಾನೆ. ಈತನಿಗೆ ಪಾಪ ಪ್ರಜ್ಞೆಗಳಿಲ್ಲ, ಧರ್ಮದ ಕಟ್ಟಳೆಗಳಿಲ್ಲ, ಕರ್ಣನನ್ನು ಮೋಸದಿಂದ ತುಳಿದೆ ಎನ್ನುವ ಧಾವಂತ ಇಲ್ಲ. ವ್ಯಭಿಚಾರ ಮತ್ತು ಪ್ರೀತಿಯ ಸಣ್ಣ ಎಳೆಯ ಅಂತರದಿಂದ ನುಡಿಯುವ ಈತನ ಕೊಳಲು ಎಂದೂ ಮೈಲಿಗೆಯಲ್ಲ, ರಾಧೆಯನ್ನು ಆರಿಸಿಕೊಂಡು ಬಂದು ಆತನ ಗಂಡನಿಗೆ ಮೋಸ ಮಾಡಿದೆ ಎನ್ನುವ ಧಾವಂತ ಇಲ್ಲ. ಅದು ಯಾವುದೇ ಸಿದ್ಧ ಮಾದರಿಯಲ್ಲಿ ಇರಬಹುದಾದ ರೂಪುಗೊಂಡ ಸ್ಥಿತಿಯಲ್ಲ. ಇದು ನಿರ್ಮಲ ಪ್ರೀತಿ ಮತ್ತು ಮನಸ್ಸುಗಳೊಂದಿಗೆ ಅನುಸಂಧಾನ ಮಾತ್ರ. ತನ್ನ ತಂಗಿಯನ್ನು ಗೆಳೆಯ ಅರ್ಜುನನ ಜೊತೆ ಪಲಾಯನ ಮಾಡಿಸುವಾಗಿನ ಸಂದರ್ಭದಲ್ಲಿ ಯಾವ ಮರ್ಯಾದೆಗಳ ಕವಚಗಳ ರಕ್ಷಣೆಗಳೂ ಈತನಿಗೆ ಬೇಕಿಲ್ಲ. ಶಿಖಂಡಿಯನ್ನು ಭೀಷ್ಮನೆಡೆಗೆ ತಂದಾಗ ಮೋಸ ಅನ್ನಿಸುವುದೇ ಇಲ್ಲ. ಎಂದೂ ಸುಳ್ಳು ಹೇಳದ ಧರ್ಮಾತ್ಮನಿಗೆ ಸುಳ್ಳು ಹೇಳುವಂತೆ ಮಾಡುವಾಗಿನ ಸಂದರ್ಭಗಳಲ್ಲೂ ಕಿಂಚಿತ್ತೂ ಅಳುಕಿಲ್ಲ. ಏಕೆಂದರೆ, ಈತನದು ಸಮೃದ್ಧ ವ್ಯಕ್ತಿತ್ವ. ಸಮೃದ್ಧ ವ್ಯಕ್ತಿತ್ವದ ಕೃಷ್ಣ ಮಾತ್ರ ಜಾಗತೀಕರಣ ಮೆಟ್ಟಿ ನಿಲ್ಲಬಹುದು. ಇಡೀ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ ಸಂಧರ್ಭದ ಉದ್ದೇಶ ಯುದ್ಧಭೂಮಿಯಿಂದ ಆತನನ್ನು ಪಲಾಯನ ಮಾಡದಂತೆ ಮಾಡಿತ್ತು. ಅಂದರೆ ಅಭಿಪ್ರೇರಿಸುವ, ಗುರಿಮುಟ್ಟಿಸುವ ಕನಸು ಸಾಕಾರಗೊಳಿಸುವ, ನೇರವಾಗಿ ಸ್ವೀಕರಿಸುವ ತಂತ್ರ ಕೃಷ್ಣನಲ್ಲಿ ಕಾಣುತ್ತೇವೆ. ಮೆಟ್ರೋಪಾಲಿಟಿಯನ್ ಸಂಸ್ಕೃತಿಯ ಭಾಗವಾದ ಇದ್ದುದ್ದನ್ನು ಇದ್ದ ಹಾಗೆ ಸ್ವೀಕರಿಸುವ ಸಂದರ್ಭಗಳು ಕೃಷ್ಣನಿಗೆ ಅನ್ವಯಿಸುತ್ತವೆ. ಅಂತೆಯೇ ಈ ಯುಗಪುರುಷನ ಸಾವು ಕೂಡ ನಮ್ಮನ್ನು ದಿಗ್ಮೂಢರನ್ನಾಗಿ ಮಾಡುತ್ತದೆ. ಆತನ ಕೊನೆಯ ಕ್ಷಣಗಳಲ್ಲಿಯೂ ಆತ ಒಬ್ಬ ಸಾಮಾನ್ಯನಂತೆಯೇ ಮರಣ ಹೊಂದುತ್ತಾನೆ. ಆತನ ಶವವನ್ನು ತಿನ್ನಲು ನಾಯಿ ನರಿಗಳು ಪೈಪೋಟಿಗಿಳಿಯತ್ತವೆ. ಅಂದರೆ ಮಹಾತ್ಮನೆಂದೇ ಹೆಸರು ಪಡೆದಿದ್ದ ಕೃಷ್ಣನ ಸಾವು ನಾವೆಲ್ಲರೂ ನಿರೀಕ್ಷಿಸಿದಂತೆ ರಾಘವೇಂದ್ರ ಸ್ವಾಮಿಗಳಂತೆ, ಯಡಿಯೂರ ಸಿದ್ದಲಿಂಗ ಯತಿಗಳಂತೆ ಆಗಲಿಲ್ಲ. ಸಾವಿನಲ್ಲಿಯೂ ನಾನೊಬ್ಬನೆ ಮಾತ್ರ. ನಾನು ಬೇರೆ ನೀನು ಬೇರೆ ಎನ್ನುವ ಮೆಟ್ರೋಪಾಲಿಟಿಯನ್‌ನ ಸಂಸ್ಕೃತಿ ಆತನ ಸಾವಿನಲ್ಲಿ ಪ್ರತಿಫಲಿಸಿದ್ದನ್ನು ನೋಡಬಹುದು.  
ಶಿವ
ಲೋಹಿಯಾ ಅವರು ಶಿವನಲ್ಲಿ ಪ್ರಾಮಾಣಿಕತೆ, ಬೋಳೆತನ, ನಿಷ್ಕಲ್ಮಶ ಮನಸ್ಸನ್ನು ಗುರುತಿಸುತ್ತಾರೆ. ಜಾಗತಿಕ ಹಳ್ಳಿಯಲ್ಲಿ ಆತ ರೈತ, ದಲಿತ, ಬಡವನ ಸಂಕೇತ. ಲೋಹಿಯಾ ವರ್ಣಿಸಿದಂತೆ ಪ್ರಮಾಣತೀತನೂ, ಜಗದಗಲನಾದಂತ ಶಿವ ಗಂಗಾ ನದಿಗೆ ಕಾಲುವೆ ತೋಡಿದ ಅಭಿಯಂತರನಿರಬಹುದು. ಆತನ ಮನುಷ್ಯಸಹಜ ಗುಣಗಳನ್ನು ಲೋಹಿಯಾ ಮೆಲುಕು ಹಾಕುತ್ತಾರೆ. ಶಿವನು ತನ್ನ ಹೆಂಡತಿ ಸತ್ತಾಗ ಕಣ್ಣಲ್ಲಿ ನೀರು ಸುರಿಸುತ್ತಾ ಅವಳ ಶವವನ್ನು ಹೆಗಲ ಮೇಲೆ ಹಾಕಿಕೊಂಡು ಭೂಮಂಡಲ ಪ್ರದಕ್ಷಿಣೆ ಹಾಕಿದ. ಶ್ರೀಸಾಮಾನ್ಯನಂತೆ ಭೋ ಎಂದು ಅತ್ತ. ಜಗದ ಒಡೆಯನಾದರೂ ಸುಡುಗಾಡನ್ನೇ ವಸತಿ ಮಾಡಿಕೊಂಡ. ಸಮುದ್ರ ಮಂಥನದಲ್ಲಿ ಉತ್ಪನ್ನವಾದ ವಿಷವನ್ನು ಯಾರೂ ಕುಡಿಯಲು ಮುಂದೆ ಬಾರದಾದಾಗ ತಾನೇ ಕುಡಿದು ಜಗತ್ತನ್ನು ರಕ್ಷಿಸಿದ. ದಕ್ಷಬ್ರಹ್ಮನ ಯಜ್ಞಕ್ಕೆ ತನ್ನ ಜಾತಿಯ ಕಾರಣಗಳಿಂದ ತಿರಸ್ಕರಿಸಲ್ಪಟ್ಟಾಗ ಸಹಜವಾದ ಕೋಪಾಗ್ನಿಯಿಂದ ಯಜ್ಞ ಯಾಗ ನಾಶಮಾಡಲು ಕಾರಣನಾದ.   ಆ ಶಿವನ ದುಃಖವೇ ಇಂದು ರೈತ ಮತ್ತು ದಲಿತನ ದಃಖವಾಗಿದೆ. ಎಲ್ಲಾ ಇದ್ದರೂ ಇಲ್ಲವಾಗುವ ಹೋಲಿಕೆ ಬಹುಶಃ ಶಿವ, ರೈತ ಮತ್ತು ಆ ನಾಡಿನ ದಲಿತನದಾಗಿದೆ. ಅದಕ್ಕಾಗಿಯೇ ಆತನಿಗೆ ಚೋಳದೊರೆಯ ಮೃಷ್ಟಾನ್ನಕ್ಕಿಂತ ಚನ್ನನ ಮನೆಯ ಅಂಬಲಿಯೇ ಇಷ್ಟ. ಆದರೆ ಶಿವನ ಮಾದಾರ ಚೆನ್ನ ಜಾಗತಿಕ ಹಳ್ಳಿಯಲ್ಲಿ ಉಳಿಯುವನೇ? ಅದೇ ಪ್ರಶ್ನೆ ಚನ್ನನ ಆಸ್ತಿತ್ವದಲ್ಲೇ ಶಿವನ ಜೀವ ಅಡಗಿದೆ ಎಂಬುದೂ ಸತ್ಯ.


- ಮಹಾಂತೇಶ ನವಲಕಲ್
mahantnavalkal@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.