ಸಾಪ್ತಾಹಿಕಪ್ರಭ

ಸೋಲಿಗಾನ

ಸೋಲಿಗಾನ
Published On :

ಮಂಜ ಜಡಿಯನ ಮಗ. ಮನೆ ಮುಂದೆ ನಿಂತಿದ್ದ. 'ಏನು ಓದುತ್ತಾ ಇದ್ದೀಯಪ್ಪ?' ಅಂತ ಕೇಳಿದ್ರೆ 'ಆರ್ನೇ ಕ್ಲಾಸು' ಅಂದ. ಅಪ್ಪ ಕೂಡಲೇ ಹೇಳಿದ, ಸ್ವಾಮಿ ಸ್ಕೂಲಿಗೆ ಹೋಗಲ್ಲ. ಬಿಟ್ಟು ಬಿಟ್ಟವ್ನೆ. ಹೋಗು ಅಂದ್ರೆ ಓಗಲ್ಲ. ಮನೇಲೆ ಅವ್ನೆ'. 'ಯಾಕಪ್ಪ ಮಂಜ? ಪಕ್ಕದಲ್ಲೇ ಇದೆಯಲ್ಲ ವಿವೇಕಾನಂದ ಗಿರಿಜನ ಶಾಲೆ. ಹೋಗು ಅಲ್ಲಿ ಎಲ್ಲ ಸೌಕರ್ಯ ಇದೆ. ನಿನ್ನ ಹಾಗೆ ಎಲ್ಲರೂ ಓದುತ್ತಿದ್ದಾರೆ. ಊಟ ಬಟ್ಟೆ, ಪುಸ್ತಕ ಎಲ್ಲ ಸಿಕ್ಕುತ್ತೆ, ತಪ್ಪದೇ ಹೋಗು. ಓದಿದ್ರೆ ನೀನು ದೊಡ್ಡ ಮನುಷ್ಯ ಆಗಬಹುದು. ಒಳ್ಳೆ ಕೆಲಸಕ್ಕೆ ಸೇರ್ಕೋಬಹುದು. ದೊಡ್‌ಡ ಆಫೀಸರ್ ಆಗುತ್ತೀಯ' ಅಂತ ಹುರಿದುಂಬಿಸಿ ಹೇಳಿದಾಗ. 'ಓಯ್ತೀನಿ' ಅಂತ ಹೇಳಿದ.
ಮಾರನೇ ದಿನದಿಂದ ಶಾಲೆಗೆ ಹೋಗಲು ಶುರುಮಾಡಿದ್ದಾನೆ ಅಂತ ಅಪ್ಪನಿಂದ ನ್ಯೂಸ್ ಗೊತ್ತಾಯ್ತು. ಈ ವಿಷಯ ಅಷ್ಟಕ್ಕೆ ಬಿಡದೆ, ಯಾಕೆ ಹೀಗೆ ಓದು ಬಿಟ್ಟು ಬಿಡುತ್ತಾರೆ. ಈ ಸೋಲಿಗರಿಗಾಗಿಯೇ ಹುಟ್ಟಿ ಶ್ರಮಿಸುತ್ತಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪ್ರಯೋಜನ ಎಲ್ಲ ಮಕ್ಕಳೂ ಪಡೆದು ಮುಂದುವರಿಯಬಹುದಲ್ಲ. ಆ ಸ್ಕೂಲು 30 ವರ್ಷದಿಂದ ನಡೆಯುತ್ತಿದೆ. ಈವರೆಗೆ ಇಲ್ಲಿಂದ ಆಚೆ ಉನ್ನತ ವ್ಯಾಸಂಗಕ್ಕೆ ಹೋದವರಿದ್ದಾರಾ? ಹುಡುಗ ಹುಡುಗಿಯರೆಷ್ಟು? ಹಾಗಾದ್ರೆ ಎಷ್ಟು ಜನ ಎಲ್ಲಿ ಹೋಗಿದ್ದಾರೆ? ಓದಿಯಾದ್ಮೇಲೆ ಏನು ಮಾಡುತ್ತಿದ್ದಾರೆ? ಅವರ ಕುಟುಂಬದಲ್ಲಿ ಏನು ಬದಲಾವಣೆ ಆಗಿದೆ? ಏನಾದರೂ ತೊಂದರೆ ಇದೆಯಾ? ಹೀಗೆ ಹಲವು ಪ್ರಶ್ನೆಗಳು ಎದ್ದವು. ಇವುಗಳ ಉತ್ತರ ಏನೆಂಬುದನ್ನು ತಿಳಿಯುವ ಕುತೂಹಲ ಕೆರಳಿ ಕೆಲವು ಪೋಡುಗಳನ್ನು ಹೊಕ್ಕಿ ನೋಡಿದೆ. ಅಲ್ಲಿ ಕೆಲವು ದೃಶ್ಯಗಳು ಕಾಣಿಸಿದವು....
ಕೆ. ದೇವರಹಳ್ಳಿ ಸೋಲಿಗ ಕೇತಮ್ಮ ಇರೋದು ಬಿಳಿಗಿರಿರಂಗನಬೆಟ್ಟದ ಕಾಡಿನ ತುದಿಯ ಕುಗ್ರಾಮ. ಗಂಡ ಸತ್ತು ಐದು ವರ್ಷ. 'ಸಾರ್ ಪಕ್ಕದೂರಿನ ನಂಜಪ್ಪನಿಗೆ ಎರಡು ಸಾವಿರ ರು. ಬಡ್ಡಿ ಸಾಲ ಮಾಡಿ ಕೊಟ್ಟೆ. ನಾನ್ನೂರು ರುಪಾಯಿ ಮುಂಡೇರ ದುಡ್ಡು ಬರುವಂಗೆ ಮಾಡ್ಕೊಟ್ಟ. ಬರೋ ದುಡ್ಡಲ್ಲಿ ಸಾಲ ತೀರಿಸ್ತೀನಿ. ಮಗ ನೋಡಿ ಸಾ, ಕೂಲಿ ಮಾಡಕೋಯ್ತನೆ'. ಯಾಕೆ ಓದಿಸ್ಲಿಲ್ವಾ? ಅಂದ್ರೆ, 'ಇಲ್ಲಾ' ಅಂತ ಸರಳ ಉತ್ತರ ಕೊಟ್ಟಳು. ನನಗನ್ನಿಸಿತು, ಹತ್ತು ವರ್ಷ ಡಾ. ಸುದರ್ಶನ್ ನೇತೃತ್ವದ ವಿಜಿಕೆಕೆಯಂಥ ಒಂದು ಒಳ್ಳೆಯ ಶಾಲೆಯಲ್ಲಿ ವಸತಿ, ಊಟ, ಬಟ್ಟೆ ಪುಸ್ತಕ ಕೊಟ್ಟು ಓದಿದ ಮೇಲೆ ಮುಂದೆ ಅವನು ಏನೂ ಮಾಡದೆ ಕೂಲಿಗಿಳಿದಿರುವ ಪರಿಸ್ಥಿತಿ ಕೇಳಿ ನನ್ನ ಕುತೂಹಲ ಹೆಚ್ಚಾಯ್ತು. ಆಕೆಗೆ ಸರ್ಕಾರ ಕೊಟ್ಟಿರುವ ಒಂದಂಕಣ ಹೆಂಚಿನ ಮನೆ ಬಿಟ್ಟರೆ ಇನ್ನೇನೂ ಇಲ್ಲ. ಆಕೆಯೂ ಪಕ್ಕದೂರಿಗೆ ಹೋಗಿ ಜಮೀನುದಾರರಲ್ಲಿ ಕೆಲಸ ಮಾಡಿ ಜೀವನ ಹೊರೆಯಬೇಕು. ಇವರಿರುವ ಪರಿಸರದಲ್ಲಿ ಬೇರೇನೂ ಉದ್ಯೋಗವಕಾಶವಿಲ್ಲ. ಜಮೀನಸ್ತರ ಭೂಮಿಯಲ್ಲಿ ಗೇಯ್ದು ಜೀವನ ಮಾಡಬೇಕಾದ ಅನಿವಾರ್ಯತೆ. ಇಷ್ಟರೊಳಗೆ ಬದುಕನ್ನು ಕಳೆಯಬೇಕಾದದ್ದು ಅನಿವಾರ್ಯವೆಂಬುದು ವೇದ್ಯವಾಯ್ತು. ಹತ್ತನೇ ಕ್ಲಾಸು ಮುಗಿಸಿದ ಮಗನ ಮುಂದಿನ ವಿದ್ಯಾಭ್ಯಾಸದ ಗೋಜಿಗೆ ಹೋಗಿಲ್ಲದ ಕಾರಣವೇನೆಂದರೆ, 'ನಮ್‌ಕೈಲಿ ದುಡ್ಡಿಲ್ಲ. ಅದಕ್ಕೆ ಸುಮ್ಮನಾದೆ ಸಾ' ಅಂತ ಅಸಹಾಯಕ ಉತ್ತರ ನೀಡಿದಳು ತಾಯಿ.
      
ಸಿದ್ದರಾಜು, ಕೇಂದ್ರದಲ್ಲೇ ಓದಿದವ. 'ಶಾಲೆ ಬಿಟ್ಟು ಬಿಟ್ಟೆ. ತಲೆಗೆ ಹತ್ಲಿಲ್ಲ' ಎಂದು ಹೇಳಿ 'ಸುಮ್ಮನೆ ಯಳಂದೂರಿಗೆ ಹೋಗಿ ಬರುತ್ತೇನೆ' ಎಂದು ಹೇಳುತ್ತಾ ಬಸ್ಸೇರಿ ಹೊರಟೇ ಹೋದ. ಅಲ್ಲೇ ಇದ್ದ ಇಂಚರಳನ್ನು ಕೇಳಿದೆ, 'ನೀನು ಓದಿ ಏನು ಆಗಬೇಕೆಂದುಕೊಂಡಿದ್ದೀಯ' ಎಂದ ಕೂಡಲೇ 'ಟೀಚರ್‌' ಅಂದಳು. 'ನಾನು ಪೊಲೀಸ್ ಆಗಬೇಕು. ಸಿಟಿಯಲ್ಲಿ ಕಳ್ಳರಿದ್ದಾರೆ, ಅವರನ್ನು ಹಿಡಿಯಬೇಕು. ನನಗೆ ಆದರ್ಶ ಡಾ. ಅಬ್ದುಲ್ ಕಲಾಂ' ಎಂದು ಹೇಳುವ ಹುರುಪು ಏಳನೇ ಕ್ಲಾಸಿನಲ್ಲಿರುವ ರಾಘವೇಂದ್ರನಲ್ಲಿ ಹುಟ್ಟುಕೊಂಡಿದೆ. ಕೆಲವು ವರ್ಷಗಳ ಹಿಂದೆ ಭೇಟಿ ನೀಡಿದ ಕಲಾಂ ಮತ್ತು ರಾಹುಲ್‌ಗಾಂಧಿ ಆಡಿದ  ಮಾತುಗಳನ್ನು ಮರೆತಿರಲಿಲ್ಲ ಆ ಹುಡುಗ. 'ನನ್ನಕ್ಕ ತಾರಾ ಡಿಗ್ರಿ ಮಾಡ್ತಿದ್ದಾಳೆ. ಇಲ್ಲಿಂದಲೇ ಓದುತ್ತಾಳೆ (Correspondence). ಪರೀಕ್ಷೆ ಬರೆಯಲು ಮೈಸೂರಿಗೆ ಹೋಗುತ್ತಾಳೆ. ಗೋರುಕಾನ ರಿಸಾರ್ಟ್‌ನಲ್ಲಿ ದುಡ್ಡು ಈಸ್ಕೋಳೊ ಕೆಲಸ ಮಾಡ್ತಾಳೆ. ಮೂರ್ ಸಾವ್ರ ರು. ಸಂಬಳ ಬರುತ್ತೆ' ಅಂತ ಸಿದ್ದರಾಜ ಹೇಳ್ತಾನೆ. ಕೊಳ್ಳೆಗಾಲದ ವಡೆಯರಪಾಳ್ಯದ ಸೋಲಿಗರ ಹುಡುಗ ಗಿರಿ ಈಗ 10ನೇ ತರಗತಿ. 'ನನಗೆ ಬೆಟ್ಟದಲ್ಲೇ ಓದಲು ಇಷ್ಟ. ಈ ವಾತಾವರಣ ಚೆನ್ನಾಗಿದೆ. ನನ್ಗೆ  ಸಿಟಿ ಒಗ್ಗೋದಿಲ್ಲ. ಒಂದೆರಡು ದಿನ ಹೋಗಿದ್ದೆ. ಇರೋಕಾಗ್ಲಿಲ್ಲ. ಅಲ್ಲಿ ವಾಸನೆ, ಸೌಂಡು, ಎಲ್ಲೆಲ್ಲೂ ಜನ. ಒಳ್ಳೆ ಗಾಳಿ ಇಲ್ಲ. ಅದಕ್ಕೆ ಇಲ್ಲಿಗೆ ಓಡಿ ಬಂದ್ಬಿಟ್ಟೆ. ಇಲ್ಲಿ ನಮಗೆ ಏನು ಬೇಕು ಅದು ಸಿಗುತ್ತೆ. ನನ್ಗೆ ಇಲ್ಲೇ ಸರಿ' ಅಂದ.
      
ಮುದುಕಿ ಮಾರ್ಸಮ್ಮನಿಗೆ ಇಬ್ಬರು ಮಕ್ಕಳು. 'ಸ್ವಾಮಿ ಮಕ್ಕಳು ಸ್ಕೂಲಿಗೆ ಹೋಗಿದ್ದರು. ಆಮೇಲೆ ಬಿಟ್ಟಬಿಟ್ಟರು. ದೊಡ್ಡವ ಕುನ್ನಯ್ಯನಿಗೆ ಕಾಯಿಲೆ. ಕುಂಟನಾಗಿ ಕೂತವ್ನೆ. ಏನೂ ಮಾಡಾಕಾಗಲ್ಲ. ಇನ್ನೊಬ್ಬ ಜಡಿಯ ಚಿಕ್ಕವ ಕೂಲಿ ಮಾಡಕೋಯ್ತನೆ. ನನಗೆ ತಿಂಗಳಿಗೆ 250 ರು. ಬರುತ್ತೆ'. 'ತಿಂಗಳಿಗೆ ನಾನೂರು ರು. ಬರಬೇಕು. ಯಾಕೆ ಇಷ್ಟು ಕಡಿಮೆ ಕೊಡ್ತಾರೆ?' ಅಂದ್ರೆ 'ಆ ಬ್ಯಾಂಕ್ನವನು ಕೊಡೋದೆ ಇಷ್ಟು ಅಂತಾನೆ. ನಾನೇನ್ಮಾಡ್ಲಿ ಸ್ವಾಮಿ? ಅವನು ಕೊಟ್ಟಷ್ಟು ಈಸ್ಕೋತಿನಿ. ಅದ್ರಲ್ಲೇ ನನ್ನ ಮಕ್ಕಳನ್ನು ನಾನೇ ನೋಡ್ಕೋಬೇಕು. ಏನು ಮಾಡೋದು ನನ್ನ ಗಂಡ ಯಾವುದೋ ಕಾಯಿಲೆ ಬಂದು ಸತ್ತೋದರು. ಸತ್ತು 30-40 ವರ್ಷನೇ ಆಯ್ತು. ಎನ್ಮಾಡ್ಲಿ ನನ್ನಪ್ನೆ?'.
      
ದೈಹಿಕ ಶಿಕ್ಷಕ ಶಿವರಾಜ್ ಹಿತ್ತಲಮನಿ ಹೇಳಿದಂತೆ, 'ಇಲ್ಲಿಯ ಗಿರಿಜನ ಮಕ್ಕಳು ದೈಹಿಕವಾಗಿ ಯಾವುದೇ ಆಟವನ್ನೂ ಚೆನ್ನಾಗಿ ಆಡಬಲ್ಲರು. ಅವರಲ್ಲಿ ಜಿಲ್ಲಾ, ರಾಜ್ಯ ಮಟ್ಟದ ವರೆಗೂ ಹೋದವರಿದ್ದಾರೆ. ರಾಜಣ್ಣ ಎಂಬಾತ ರಾಷ್ಟ್ರಮಟ್ಟದಲ್ಲೂ ಭಾಗವಹಿಸಿದ್ದ. ಓಡುವುದರಲ್ಲಿ ಎತ್ತಿದಕೈ. ಆತ ಎಸ್ಸೆಸ್ಸೆಲ್ಸಿ ಮಾಡಿ ಸೈನಿಕನಾಗಿದ್ದ. ಅದನ್ನು ಬಿಟ್ಟು ಈಗ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ತರಬೇತಿಯಲ್ಲಿದ್ದಾನೆ. ಪೇಟೆ ಮಕ್ಕಳಿಗಿಂತ ಏನೂ ಕಡಿಮೆ ಇಲ್ಲ. ಆದ್ರೆ ಇವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಿ ಮುಂದಕ್ಕೆ ಓದಿದರೆ ಒಳ್ಳೆ  ಕ್ರೀಡಾಪಟುಗಳಾಗಬಲ್ಲರು. ಇಲ್ಲಿನ ಹಲವು ಮಕಳಿಗೆ ಸೈನ್ಯಕ್ಕೆ ಸೇರ್ಬೇಕೆಂಬ ಆಸೆಯಿದೆ. 'ಯಾಕೆ' ಅಂತ ಕೇಳಿದ್ರೆ, 'ದೇಶ ರಕ್ಷಿಸಬೇಕು' ಎಂದು ಹೇಳಿದ್ದು ನನ್ನ ಮನಕ್ಕೆ ಬಹುವಾಗಿ ನಾಟಿತು.
      
ಪಂದೇಗೌಡರು ಹೀಗೆ ಹೇಳಿದರು, ಎಸ್ಸೆಸ್ಸೆಲ್ಸಿ ಆದಮೇಲೆ ಕೂಲಿ ಕೆಲಸಕ್ಕೆ ಹೋಗೋದು ಸರ್ವೇಸಾಮಾನ್ಯ. ಮನೆಯಲ್ಲಿ ಊಟ ಬಟ್ಟೆ ಕೈಗೆ ಕಾಸು ಸರಿಯಾಗಿ ಸಿಗದ ಕಾರಣ ಹೀಗೆ ಮಾಡ್ತಾರೆ. ಬಡತನ ಆ ಮಟ್ಟಿಗಿದೆ. ಹಿಂದೆ ನಮ್ಮ ಜನ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಪಾಚಿ, ಜೇನು, ಗೊಂದು, ನೆಲ್ಲಿಕಾಯಿ ಗಿಡಮೂಲಿಕೆ ತಂದು ಮಾರಿ ಜೀವನ ಮಾಡ್ತಿದ್ರು. ಅದಕ್ಕೂ ಕಲ್ಲಾಕುದ್ರು ಪಾರೆಸ್ಟ್‌ನೋರು. ಇನ್ನೇನು ಮಾಡ್ತಾರೆ? ಮಕ್ಕಳನ್ನ ಓದುಸೋಕೆ ಎಲ್ಲಾಯ್ತದೆ? ನೀವೇ ಹೇಳಿ...'.
'ನೋಡಿ ಸಾರ್ ಒಂದ್ಸಾರಿ ಹಂಸಲೇಖ ಅವರು ಬಂದು 25 ಮಕ್ಕಳನ್ನು ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆಂದು ಕರೆದ್ಕೊಂಡ್ ಹೋದ್ರು. ಊಟ ಬಟ್ಟೆ ಕೊಟ್ರು. ಒಂದು ವಾರ ಮುಗಿಯೋದ್ರೊಳಗೆ ಒಬ್ಬ ನಾಗೇಂದ್ರಕುಮಾರ್ ವಾಪಸ್ ಬಿ.ಆರ್. ಹಿಲ್ಸ್‌ಗೆ! ಹಾಗೆ ಒಬ್ರಾದ್ಮೇಲೊಬ್ರು ಎಲ್ಲಾ ಬಂದು ಬಿಟ್ರು. ಸಿಟಿ ಒಗ್ಗಲಿಲ್ಲ ಅಂತಾರೆ ಹುಡುಗ್ರು. ಒಬ್ಬನೇ ಒಬ್ಬ ಧನರಾಜ್ ಹೀಗೂ ಹಾಗೂ ಒಂದು ವರ್ಷ ತುಂಬಿಸಿ ಕೊನೆಗೆ ಅವನೂ ಬಂದೇ ಬಿಟ್ಟ'.
ಹ್ಞಾಂ ಧನರಾಜ್ ತಾನು ಡಾಕ್ಟರ್ ಆಗಬೇಕೆಂದು ಹಂಬಲಿಸುತ್ತಿದ್ದಾನೆ.
'ಹಾಗಾದ್ರೆ ನಿಮ್ಮಲ್ಲಿ ಯಾರೂ ಆರ್ಥಿಕವಾಗಿ ಬೆಳೆದಿಲ್ವ?' ಎಂದೆ. 'ನಮ್ಮಲ್ಲಿ ಒಬ್ಬರು ಚೆನ್ನಾಗಿ ಓದಿ ಪ್ರೊಫೆಸರ್ ಆಗವ್ರೆ ಜಡೇಗೌಡ್ರು. ನೋಡಿ ಅವರು ಕಾರು ತಕ್ಕೊಂಡವ್ರೆ. ಕ್ಯಾತೆದೇವರ ಗುಡಿಯಲ್ಲಿ ಹತ್ತು ಮೋಟರ್ ಸೈಕಲ್ ಅವೆ, ಮುತ್ತಗದ ಗದ್ದೇಲಿ ಎರಡು ಬೈಕ್ ಮಡ್ಗವ್ರೆ. ಸೀಗೆಬೆಟ್ಟದ ಬಿ. ಜಡೇಗೌಡ್ರು ಒಂದು ಟ್ರಾಕ್ಟರ್ ಇಟ್ಟವ್ರೆ. ನಮ್ಮಲ್ಲಿ ಜಾಸ್ತಿ ಜಮೀನು ಅಬ್ಬಬ್ಬಾ ಅಂದ್ರೆ ಮೂರು ಎಕ್ರೆ. ಅಂಥವರು ಒಂದಿಪ್ಪತ್ತು ಮೂವತ್ತು ಜನ ಅವ್ರೆ. ಬೆಟ್ಟದ ಮೇಲಿರೋವ್ರು ಅಲ್ಪ ಸ್ವಲ್ಪ ಕಾಫಿ ಹಾಕವ್ರೆ. ಮಳೆ ಸರಿಯಾಗಿ ನಡೆದರೆ ಪರ್ವಾಗಿಲ್ಲ ಇಲ್ಲಾಂದ್ರೆ ಅದೂ ಇಲ್ಲ. ಈ ಸಾರಿ ನೋಡಿ ಬೆಲೆ ಇನ್ನೂರರಿಂದ ನೂರಮೂವತ್ತು ರುಪಾಯಿಗೆ ಇಳಿದು ಬಿಟ್ಟಯ್ತೆ. ನಮ್ಮೋರಿಗೆ ಪಟ್ಟೆ ಜಮೀನಿಲ್ಲ. ಎಲ್ಲಾ ಫಾರೆಸ್ಟ್ ಫಾರೆಸ್ಟ್ ಅಂತ ನಮಗೆ ಏನೂ ಕೊಟ್ಟಿಲ್ಲ. ಸುಮ್ನೆ ಕೆರ್ಕೊಂಡು ಅಲ್ಪಸ್ವಲ್ಪ ಫಸಲು ಮಾಡ್ಕೊಂಡವ್ರೆ. ನಮ್ಮ ಸ್ಥಿತಿ ಹೀಗಿದೆ. ಸಾಯ್ದೆ ಬದಿಕಿದ್ದೀವಿ ಅನ್ಬೋದು ಅಷ್ಟೇ ಸಾರ್. ಈ ಪರಿಸ್ಥಿತಿಯಲ್ಲಿ ಯಾವ ಮಕ್ಕಳನ್ನು ಓದಿಸೋದು ಬಿಡೋದು ಗೊತ್ತಾಗೋದಿಲ್ಲ. ನಮ್ಮ ಕೆಲಸಕ್ಕೆ ಕೂಲಿ ಆಳುಗಳು ಸಿಕ್ಕಲ್ಲ. ಎಲ್ಲಾ ಮನೆಮಂದಿನೆ ನಾವೇ ಮಾಡ್ಕೋಬೇಕು.
ಅದೇ ನೋಡಿ ಈ ಊರಿನ ನಾಯಕ ಜನಾಂಗದವರು ಬಹುಪಾಲು ಸ್ಥಿತಿವಂತರು. ಸಖತ್ ಜಮೀನಿದೆ. ಅವರಲ್ಲಿ ಎಂಜಿನಿಯರ್, ಡಾಕ್ಟರ್ ಮತ್ತು ಇನ್ನೂ ಯಾವ್ಯಾವ್ದೋ ದೊಡ್ಡ ಸರ್ಕಾರಿ ಕೆಲಸದಲ್ಲಿದ್ದಾರೆ.

ಬಿಳಿಗಿರಿರಂಗನ ಬೆಟ್ಟದ ವ್ಯಾಪಾರವೆಲ್ಲಾ ಅವರ ಕೈಲಿದೆ. ಆರ್ಥಿಕವಾಗಿ ಅವ್ರು ನಮಗಿಂತ ಬಹಳ ಚೆನ್ನಾಗಿದ್ದಾರೆ. ಅವ್ರತ್ರ ದುಡ್ಡು ಕಾಸು ಚೆನ್ನಾಗಿ ನಡೀತದೆ. ಅವ್ರ ಮುಂದೆ ನಾವ್ಯಾಕೂ ಬ್ಯಾಡ. ನೋಡಿ ಸ್ವಾಮಿ. ದೇವರ ತೇರಿಗೆ ಕಟ್ಟೋದು ಸೇರ್ಕೊಂಡು ಸಿದ್ಧತೆ ಮಾಡೋರು ನಾವು, ಉಸ್ತುವಾರಿ ಮಾತ್ರ ನಾಯಕರದ್ದು. ನಮ್ಮಲ್ಲಿ ನಾಯಕತ್ವ ಇಲ್ಲ. ಎಲ್ಲಾ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಹತ್ತು ಸೌಲಭ್ಯದಲ್ಲಿ, ಒಂದು ಸೌಲಭ್ಯ ನಮ್ಮ ಪಾಲಿಗೆ ಸಿಕ್ಕಿದರೆ ಸಾಕಾಗಿದೆ. ಎಲ್ಲಾ ಪರಿವಾರ ನಾಯಕರು ಹೊಡ್ಕೋತಾರೆ'.
'ಶಿಕ್ಷಣಕ್ಕೆ ಬಂಡವಾಳ ಇಲ್ಲ. ಹೀಗಾಗಿ ಹೆಚ್ಚಿನ ವಿದ್ಯಾಭ್ಯಾಸ ಆಗ್ತಿಲ್ಲ. ಮಕ್ಕಳು ಓದೋಕೆ ಹಣಕಾಸು ಬೇಕಾಗುತ್ತೆ. ಸರ್ಕಾರದಿಂದ ಊಟ ಬಟ್ಟೆ ಕೊಡುತ್ತಾರೆ ನಿಜ. ನಮ್ಮ ಹತ್ತಿರ ಐವತ್ತು ರುಪಾಯಿಯೂ ಇಲ್ಲ. ಹೊರಗಡೆ ಮಕ್ಕಳನ್ನು ನರ್ಸಿಂಗ್ ಕೋರ್ಸ್‌ಗೆ ಕಳಿಸ್ಬೇಕು ಅಂದ್ರೆ ಹತ್ತುಸಾವಿರ ಕೊಡ್ಬೇಕು. ಎಲ್ಲಿಂದ ತರೋದು? ಸರ್ಕಾರ ಸೌಲಭ್ಯ ಕೊಡೋವರೆಗೆ ಮೂರ್ನಾಲ್ಕು ತಿಂಗಳಾಗತ್ತೆ. ಅಲ್ಲಿವರೆಗೆ ನಾವು ತಡ್ಕೊಳ್ಳೋದು ಹೇಗೆ? ಊಟ, ತಿಂಡಿ, ಹೋಗೋದು ಬರೋದಕ್ಕೆ ಒಂದು ಕಾಸಿರಲ್ಲ. ಹೊರಗೆ ಹೋಟೆಲ್ ಊಟಕ್ಕೆ ದುಡ್ಡು ಕೊಡಲಾಗದೆ ಬಿಟ್ಟು ಬಂದುಬಿಡುತ್ತಾರೆ. ಆಮೇಲೆ ಹಿಂದಕ್ಕೆ ಹೋಗೋದೇ ಇಲ್ಲ. ನಮಗೆ ದಾರಿ ತೋರಿಸುವವರು ಬೇಕು. ಎಲ್ಲೋದ್ರು ಒಳಗಡೆ ದುಡ್ಡು ನಡೆಯುತ್ತೆ. ನಮ್ಮತ್ರ ಬಂಡವಾಳ ಇಲ್ಲ. ಮಿನಿಸ್ಟರ್ಸ್ ಸಪೋರ್ಟ್ ಇಲ್ಲ'.

'ಕೆಲಸ ಕೊಡಿಸುತ್ತೇವೆ ಅಂತ ಚಾಮರಜನಗರದಲ್ಲಿ ಕಂಪ್ಯೂಟರ್ ಟ್ರೈನಿಂಗ್ ಕೊಟ್ಟರು. ಟ್ರೈಬಲ್ಸ್‌ಗೆ ಮಾತ್ರ. ಇದಕ್ಕಾಗಿ ವರ್ಷಕ್ಕೆ ಮೂವತ್ತು ಸಾವಿರ ರು. ಸರ್ಕಾರ ಕೊಟ್ಟಿತ್ತು. ಟ್ರೈನಿಂಗ್ ಆದ್ಮೇಲೆ ಕೆಲಸ ಕೊಟ್ಟಿಲ್ಲ. ಎಲ್ಲಾ ಸೇರಿ ಕೋರ್ಟಿಗೆ ಕೇಸು ಹಾಕಿದ್ವಿ. ಇನ್ನೂ ಏನೂ ಆಗ್ಲಿಲ್ಲ. ಇದೇ ಮೊದಲು ಇದೇ ಲಾಸ್ಟ್. ಅದಕ್ಕೆ ಯಾರೂ ಹೋಗ್ಲಿಲ್ಲ ಆ ಮೇಲೆ. ಹಿಂಗ್ಮಾಡಿದ್ರೆ ಯಾರೋಗ್ತರೆ ಹೇಳಿ ಸಾರ್‌' ಅಂತಾನೆ ಯುವಕ ಮಹದೇವ.
ನಮ್ಮ ಮಕ್ಕಳಿಗೆ ಈ ಬೆಟ್ಟ ಬಿಟ್ರೆ ಹೊರಗಿನ ಸ್ಥಳ ಗೊತ್ತಿಲ್ಲ. ಭಯಪಡ್ತಾರೆ. ಹೋದ್ರೂನು 2-3 ತಿಂಗಳು ಇರ್ತಾರೆ ಅಷ್ಟೆ. ಅವರಿಗೆ ಅಲ್ಲಿ ವಾತಾವರಣ ಸರಿ ಇಲ್ಲ. ವಿಜಿಕೆಕೆ ಬಂದ ಮೇಲೆ ಒಂದು ನೆಲೆಸಿಕ್ಕಿದೆ. ಕಾಡಿನ ಒಳಗೆ ಇದ್ದವರನ್ನು ತಂದು ಇಲ್ಲಿ ಮನೆ ಮಾಡಿಸಿ ಕೊಟ್ಟವ್ರೆ'.
'ಮುಂದಕ್ಕೆ ಮಕ್ಕಳು ಓದುವ ಹಾಗೆ ಮಾಡಬೇಕಾದ್ರೆ ಏನು ಮಾಡಿದರೆ ಒಳ್ಳೆದು' ಎಂದೆ. 'ಇಲ್ಲಿಂದ ಹೋಗಿ ಪೇಟೆಯಲ್ಲಿ ಓದುವ ಐದಾರು ಮಕ್ಕಳಿಗೆ ಎಲ್ಲಾ ಸಪೋರ್ಟ್ ಕೊಟ್ಟು ಅವರಿಗೆ ಓದುವ ವ್ಯವಸ್ಥೆ ಮಾಡಬೇಕು. ನನ್ನಂಥ ಗಿರಿಜನರಿಗೆ ಪ್ರತ್ಯೆಕ ಹಾಸ್ಟೆಲ್ ಮಾಡಬೇಕು. ಯಾವುದೇ ಕೊರತೆಯಿಲ್ಲವೆಂದು ಆ ಮಕ್ಕಳು ಊರಿಗೆ ಬಂದು ಹೇಳಿಕೊಳ್ಳಬೇಕು. ಅವ್ರು ಅಲ್ಲಿ ಚೆನ್ನಾಗಿದ್ದಾರೆ ಅಂತ ನಮ್ಮ ಜನಕ್ಕೆ ಗೊತ್ತಾಗಬೇಕು. ಅವರ ಒಳ್ಳೆ ಅನುಭವ ಮತ್ತು ಅಭಿವೃದ್ಧಿ ಬಗೆಗೆ ಇನ್ನುಳಿದವರಿಗೆ ಹೇಳಿದಾಗ ಇಲ್ಲಿರುವ ಚಿಕ್ಕ ಮಕ್ಕಳು ಧೈರ್ಯವಾಗಿ ಮುಂದೆ ಓದಲು ಮುಂದಾಗುತ್ತಾರೆ. ಇಲ್ದಿದ್ರೆ ಯಾರೂ ಹೋಗಲ್ಲ. ಎಸ್ಸೆಸ್ಸೆಲ್ಸಿ ಓದಿ ಎಲ್ಲಾ ವೇಸ್ಟಾಗಿ ಇಲ್ಲೇ ಉಳ್ಕೋತ್ತಾರೆ ಯಾಕೆ ಗೊತ್ತಾ? ನನಗೆ ಆದ ತೊಂದರೆ ಹೇಳ್ತೀನಿ ಕೇಳಿ. ಕೊಳ್ಳೆಗಾಲಕ್ಕೆ ಹೋಗಿ ಹಾಸ್ಟೆಲ್ಗಾಗಿ ಅಲೆದಾಡಿದೆವು. ಅಮೇಲೆ ಡಿಪಾರ್ಟ್‌ಮೆಂಟಿನವರು ಒಂದು ಕಡೆ ನಮ್ಮನ್ನು ಹಾಕಿದರು. ಅಲ್ಲಿ 36 ಜನಕ್ಕೆ ಒಂದು ಟಾಯ್ಲೆಟ್ ರೂಮ್, ಒಂದು ಸ್ನಾನದ ರೂಮ್. ಭಾನುವಾರ ಹಾಸ್ಟೆಲ್‌ನಲ್ಲಿ ಯಾರೂ ಇರುವಹಾಗಿರಲಿಲ್ಲ. ಯಾಕಂದ್ರೆ ಊಟ ಕೊಡ್ತಿರ್ಲಿಲ್ಲ. ಹೋಟೆಲ್‌ಗೆ ಹೋಗಲು ದುಡ್ಡಿಲ್ಲ. ಇನ್ನೇನು ಮಾಡೋದು ಅಂತ ಮನೆಗೆ ಹೊರಟು ಬರುತ್ತಿದ್ದೆವು. ಇನ್ನೂ ಏನೇನೋ ತೊಂದರೆಗಳು ಸಾರ್. ನಾನು ನಾಲ್ಕು ಜಾಗ ಬದಲಾಯಿಸ್ಬೇಕಾಯ್ತು. ಕೊನೆಗೆ ಒಂದು ಲಾಡ್ಜ್‌ಗೆ ತಂದುಬಿಟ್ಟರು. ಅಲ್ಲೂ ಬೇಸತ್ತು ಹೊರಬಂದೆವು. ಇನ್ನು ಮುಂದೆ ಇನ್ನೇನೇನು ತೊಂದರೆ ಬರುತ್ತೋ ಎಂದು ಹೆದರಿ ಬೆಟ್ಟಕ್ಕೆ ಬಂದುಬಿಟ್ಟೆವು'.
ಬೊಮ್ಮಯ್ಯ ಮಾಸ್ಟರ್ ಹೇಳುವ ಮಾತು, 'ನಮ್ಮಲ್ಲಿ 10-15 ಸಾವಿರ ಇಟ್ಟಿರೋನೆ ದೊಡ್‌ಡ ಶ್ರೀಮಂತ. ನಾವು ಹಣ ಇಡುವುದಿಲ್ಲ. ದುಡಿದ ಹಣ ತಿಂದು ತೀರಿ ಹೋದ್ಮೇಲೆ ಕೆಲಸಕ್ಕೆ ಹೋಗೋದು. ಸ್ವಂತ ದುಡೀಬೇಕು, ತರಬೇಕು, ತಿನ್ಬೇಕು. ಅಂಗೆ ಸಾರ್ ನಮ್ಮ ಜನ. ಕೂಡಿಟ್ಕೊಂಡು ಕೂತ್ಕೊಂಡು ತಿನ್ನೋರಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಜೀವನಕ್ಕೆ ದುಡೀಲೆಬೇಕು. ಅದಾಕ್ಕಾಗಿಯೇ ನಮ್ಮ ಎಲ್ಲಾ ಮಕ್ಕಳು ಶಾಲೆ ಸೇರೋದು. ಸೇರಿದ್ರು ಎಸ್ಸೆಸ್ಸೆಲ್ಸಿ ಆದ್ಮೇಲೆ ಶೇ.10 ಮಕ್ಕಳೂ ಮುಂದಕ್ಕೆ ಹೋಗಲ್ಲ. ನಮ್ಮಲ್ಲಿ ಎರಕನಗದ್ದೆ ರಾಮಚಂದ್ರ ಅಂತ ಬಹಳ ಬುದ್ಧಿವಂತರು ಇದ್ರು. ಅವ್ರು 2004ರಲ್ಲಿ ಸತ್ತೋದ್ರು. ಈಗ ನೋಡಿ ಒಬ್ಬಳು ಶಾರದ ಅಂತ ಎಂ.ಎಸ್ಸಿ ಮಾಡ್ತಾವ್ಳೆ ರಾಯಚೂರು ಹಾರ್ಟಿಕಲ್ಚರ್ ಯುನಿವರ್ಸಿಟಿಯಲ್ಲಿ. ಬೆರಳೆಣಿಕೆಯಷ್ಟೂ ಜನ ಇಲ್ಲವಲ್ಲಾ ಸಾರ್.  ನಮಗೆ ಬೇಸಿಕ್ ಎಜುಕೇಷನ್ನೇ ಸರಿ ಇಲ್ಲ. ಉನ್ನತ ಶಿಕ್ಷಣ ಮಾಡಬೇಕಂದ್ರೆ ಹತ್ತನೇ ತರಗತಿಯಲ್ಲಿ ಫೇಲಾದ್ರೆ ಕೋಚಿಂಗ್ ಕೊಡಿಸಬೇಕು. ಪಿಯುಸಿ ಕಡ್ಡಾಯ ಓದಬೇಕು. ಆಗ ಮಾತ್ರ ಮುಂದಕ್ಕೆ ಓದುವವರು ಹೆಚ್ಚಾಗುತ್ತಾರೆ. ವಿದ್ಯಾಭ್ಯಾಸ ಮುಂದುವರಿಸದಿದ್ರೆ ಬೇರೆ ಸವಲತ್ತುಗಳನ್ನು ರದ್ದುಮಾಡುವ ಭಯ ಹುಟ್ಟಿಸಬೇಕು. ಇದೆಲ್ಲ ಆಗಬೇಕಾದರೆ ಎನ್‌ಜಿಒ ಅಥವಾ ಸರ್ಕಾರದ ವತಿಯಿಂದ ಸಕ್ರಿಯವಾದ ಗೈಡೆನ್ಸ್ ಕೊಡಬೇಕು'.
'ಇನ್ನೊಂದು ವಿಷಯ, ನಮ್ಮ ಜನಾಂಗಕ್ಕೆ ಒಂದು ದೊಡ್ಡ ಹೊಡೆತ ಅಂದ್ರೆ ಮೀಸಲಾತಿಯಲ್ಲಿ. ಎಲ್ಲಾ ನಾಯಕ ಜನಾಂಗದವರೇ ಹೊಡ್ಕೋತಾರೆ. ಅವ್ರು ಚೆನ್ನಾಗವ್ರೆ. ನಮಗೆ ಏನೂ ಸಿಕ್ಕೋದೆ ಇಲ್ಲ. ಸೋಲಿಗರು, ಕಾಡು ಕುರುಬರು, ಜೇನುಕುರುಬರಿಗೆ ಕೊನೆಪಕ್ಷ ಶೇ.1 ಕೊಟ್ರು ಸಾಕು ಉದ್ಧಾರ ಆಗಬಹುದು, ಈಗ ಸೊನ್ನೆ. ನಮಗೆ ಸರಿಯಾದ ರಾಜಕೀಯ ನಾಯಕರು ಬೇಕು. ಒರಿಸ್ಸಾ, ಬಿಹಾರದಲ್ಲಿನ ಬುಡಕಟ್ಟು ಜನಾಂಗಕ್ಕೆ ಇರುವ ಪ್ರಭಾವಿ ನಾಯಕರು ನಮ್ಮಲ್ಲಿಲ್ಲ. ಆದ್ದರಿಂದಲೇ ನಮಗೆ ಈ ದುಃಸ್ಥಿತಿ. ಮುನ್ನುಗ್ಗುವ ಕೇಳುವ ನಾಯಕರು ಹುಟ್ಟಬೇಕು. ಆಗ ಮಾತ್ರ ನ್ಯಾಯ ಸಿಕ್ಕುತ್ತೆ'.
'ವಿದ್ಯಾಭ್ಯಾಸಕ್ಕೆ ಇನ್ನೊಂದು ದೊಡ್ಡ ಅಡ್ಡಿ ಎಂದರೆ ನಮ್ಮ ಜನ ಹನ್ನೆರಡು ಹದಿಮೂರನೇ ವಯಸ್ಸಿನಿಂದಲೇ ಮದುವೆ ಮಾಡಿಕೊಳ್ಳುತ್ತಾರೆ. ಹುಡ್ಗ ಹುಡ್ಗಿನ ಇಷ್ಟಪಟ್ಟು ಕರ್ಕೊಂಡು ಹೋದ ಅಂದ್ರೆ ಸಾಕು ಮದ್ವೆ ಮಾಡ್ಬುಡ್ತೀವಿ. ಇದನ್ನು ಕೂಡಲೇ ತಪ್ಪಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಒಳ್ಳೆಯ ಪದ್ಧತಿಯೂ ಇದೆ. ವರದಕ್ಷಿಣೆ ಪರದಕ್ಷಿಣೆ ಇಲ್ಲವೇ ಇಲ್ಲ. ನಮ್ಮ ಮನೆಯಲ್ಲಿ ಒಲೆ ಹಚ್ಚಿಲ್ಲ ಅಡುಗೆ ಮಾಡಿಲ್ಲಾಂದ್ರೆ ಪಕ್ಕದ ಮನೆಯವರು ಅವರು ಮಾಡಿರುವ ಊಟ ಹಾಕ್ತಾರೆ. ಹಂಚಿಕೂಂಡು ಊಟ ತಂದು ಮಾಡುವ ಪದ್ಧತಿ ಈಗಲೂ ಇದೆ. ಇದು ಅನುವಂಶೀಯವಾಗಿ ನಮ್ಮ ಜೀನ್ಸಲ್ಲೇ ಬಂದು ಬಿಟ್ಟಿದೆ. ರಾಗಿ ಬೆಳೆದು ಎಲ್ಲರೂ ಒಟ್ಟಿಗೆ ಸೇರಿಸಿ ಹಂಚಿಕೊಳ್ಳುವ ಪದ್ಧತಿ ಇದೆ. ಆ ಹಂಚಿಕೆಯಾದ ನಂತರ ಹೀಗೆ ಹೇಳುತ್ತೇವೆ...
ಕಾತು ಕಾಪಾಡಿ ಮಡುಗನಯ್ಯ
ಕೊಂಬು ಕೊಡಲು ಮೊಗರು ಕಾಪಾಡುನಯ್ಯ
ಬಾಗಿಲು ಹಾಕದೇ ಮಳಗುನಯ್ಯ
ಎಂದರೆ, ಇನ್ನಿಂಥ ವರ್ಷಕ್ಕೆ ಬರುತ್ತೇವೆ ಅಲ್ಲಿಯವರೆಗೂ ನಮ್ಮನ್ನು ಕಾಪಾಡು ಅಂಥ ದೇವರಲ್ಲಿ ಪ್ರಾರ್ಥಿಸುವುದು'.
'ಹಾಗೆಯೆ ನಮ್ಮ ಬದುಕು ಅರಣ್ಯದ ಸಂಸ್ಕೃತಿಯಿಂದ ನಮ್ಮನ್ನು ಬೇರ್ಪಡಿಸಿದಷ್ಟೂ ನಾವು ಬಲಹೀನರಾಗಿ ಕ್ಷೀಣವಾಗುತ್ತೇವೆ. ನಮ್ಮನ್ನು ಮುಖ್ಯವಾಹಿನಿಗೆ ತರಬೇಕೆಂದಿದ್ದರೆ, ಮೊದಲು ನಮ್ಮವರ ಜೀವನ ಕ್ರಮ ನಂಬಿಕೆ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ನಮಗೆ ಏನು ಕೊಡಬೇಕೆನ್ನುತ್ತೀರೋ ಅದು ನಮಗೆ ಒಗ್ಗುವಂಥದ್ದಿರಬೇಕು ಇಲ್ಲದಿದ್ದರೆ ನಮಗೆ ಹಿಂಸೆ ಆಗುತ್ತೆ. ಈಗ ನಾವು ಎಡಬಿಡಂಗಿ ಆಗ್ಬಿಟ್ಟಿದ್ದೀವಿ. ಇಲ್ಲಿ ನಮ್ಮ ಕಾಡಿನ ಜೀವನ ಮಾಡಲು ಬಿಡಲ್ಲ ಅತ್ತ ನಾಡಿನ ಜೀವನ ನಮಗೆ ಆಗಲ್ಲ. ಹೀಗೆ ಕವಲು ದಾರಿಯಲ್ಲಿ ಒದ್ದಾಡುವಹಂಗಾಗಿದೆ' ಎನ್ನುವ ಮಾತಿನಲ್ಲಿ ಅಡಗಿರುವ ನೋವು ಮತ್ತು ಅಸಹಾಯಕತೆಯನ್ನು ಅಭಿವೃದ್ಧಿಚಿಂತಕರು ಅರ್ಥಮಾಡಿಕೊಳ್ಳಬೇಕು.

ಪುರಾಣಿ ಪೋಡಿನ ಸಿದ್ದೇಗೌಡ ಆನೆ ದಾಳಿಯಿಂದ ತಪ್ಪಿಸಿಕೊಂಡು ಬದುಕುಳಿದಿದ್ದಾನೆ. ಬಲಗೈ ಮುರಿದುಹೋಗಿದೆ. ಮೂರು ತಿಂಗಳಾಯ್ತು ತಮಿಳುನಾಡಿನ ತಾಳವಾಡಿಗೆ ಹೋಗಿ ಪಟ್ಟುಹಾಕಿಸಿಕೊಂಡು ಬಂದು ಇನ್ನೂ ಗುಣಮುಖವಾಗಿಲ್ಲ. ಆತ ಹೇಳುವುದೇನೆಂದರೆ, 'ಸ್ಕೂಲು ಬಿಟ್ಟು ಮಕ್ಕಳು ಕೂಲಿಗೆ ಹೋಗ್ತಾರೆ ದುಡ್ಡಿನ ಆಸೆಗೋಸ್ಕರ. ತಂದೆ ತಾಯಿ ಮಾತು ಕೇಳಲ್ಲ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಕಳಿಸಲು ಯಾರಿಗೂ ಧೈರ್ಯವಿಲ್ಲ. ಒಂದು ವೇಳೆ ಕಳಿಸಿದರೂ ಸಣ್ಣ ಮಕ್ಕಳನ್ನು ಈ ಪೋಡಿನ ಸ್ಕೂಲಿಗೆ ಕಳಿಸ್ತಾರೆ. ಆಮೇಲೆ ಎಂಟು ಕಿ.ಮೀ. ಫಾರೆಸ್ಟ್ ಮೂಲಕ ಬೆಟ್ಟಕ್ಕೆ ಹೋಗಲು ಬಿಡುವುದಿಲ್ಲ. ಯಾಕೆಂದರೆ ಕಾಡುಪ್ರಾಣಿಗಳ ಕಾಟ. ಕೆಲವರು ಬೆಟ್ಟದ ಹಾಸ್ಟೆಲ್ಗೆ ಸೇರಿದವರು ಮಾತ್ರ ಸುರಕ್ಷಿತ. ಇನ್ನುಳಿದವರು ಐದನೇ ಕ್ಲಾಸಿಗೆ ಬಿಟ್ಟು ಬಿಡುತ್ತಾರೆ. ಈ ಪೋಡಿನಲ್ಲೇ ಸುಮಾರು ಅಂಥ 40 ಜನ ಸ್ಕೂಲು ಬಿಟ್ಟವರಿದ್ದಾರೆ'.
'ಪುರಾಣಿ ಪೋಡಿನ ಒಂದು ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ರಸ್ತೆ ಕೆಲಸ ನಡೆಯುವ ಜಾಗಕ್ಕೆ ಭೇಟಿ ಮಾಡಿದಾಗ ಕಂಡುಬಂದದ್ದೇನೆಂದ್ರೆ ನಲವತ್ತು ಮಂದಿಯಲ್ಲಿ 10 ಹುಡುಗರು ಹಾರೆ ಪಿಕಾಸಿ ಹಿಡ್ಕೊಂಡು ಕೆಲಸ ಮಾಡುತ್ತಿರುವುದು. ಯಾಕಪ್ಪ ಸ್ಕೂಲಿಗೆ ಹೋಗದೆ ಇಲ್ಲ ಕೆಲಸ ಮಾಡ್ತಿದ್ದೀಯ ಅಂತ ಕೇಳಿದರೆ 'ಐದನೇ ಕ್ಲಾಸ್ ಓದಿ ಬಿಟ್ಟು ಬಿಟ್ಟೆ, ಮೇಷ್ಟ್ರು ಸರಿಯಾಗಿ ಬರ್ತಿರ್ಲಿಲ್ಲ' ಅಂತಾನೆ 18 ವರ್ಷದ ಜಡಿಯ.

ರಾಜ್ಯದ 8 ಜಿಲ್ಲೆಗಳಂತೆ ಚಾಮರಾಜನಗರ ನಗರದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿಯೇ ಪ್ರತ್ಯೇಕ ಅಧಿಕಾರಸ್ಥ ವ್ಯವಸ್ಥೆ ಇದೆ. ಹಲವು ಎನ್‌ಜಿಒಗಳು ಅದರ ಜೊತೆ ಕೈಜೋಡಿಸಿ ಪ್ರಾಥಮಿಕ ಪ್ರೌಢ ಶಿಕ್ಷಣ ನೀಡುತ್ತಿವೆಯಾದರೂ ಉನ್ನತ ಶಿಕ್ಷಣ ನೀಡುವಲ್ಲಿ ಮತ್ತು ಉದ್ಯೋಗಸ್ಥರನ್ನಾಗಿ ಮಾಡುವ ಗುರಿ ಮುಟ್ಟುವಲ್ಲಿ ಈ ಜನಾಂಗದ ಮಟ್ಟಿಗೆ ವಿಫಲವೆನ್ನಬಹುದು. ಪರಿಶಿಷ್ಟ ಪಂಗಡದವರ 2001ರ ಸಾಕ್ಷರತೆಯು ಶೇ.82.8 ಹೆಂಗಸರು ಮತ್ತು ಶೇ.50.2 ಗಂಡಸರನ್ನು ತೋರಿಸಿತ್ತು. ಈ ಅಂಕಿ ಅಂಶ ಪ್ರಬಲ ಪರಿಶಿಷ್ಟ ವರ್ಗದವರನ್ನು ಒಳಗೊಂಡಿರುವುದನ್ನು ಮರೆಯಬಾರದು. ಕೇವಲ ಸೋಲಿಗರನ್ನೇ ಪರಿಗಣಿಸಿದಲ್ಲಿ ಅವರ ಸಾಕ್ಷರತೆ ಇನ್ನೂ ಕಡಿಮೆ ಎಂದು ಹೇಳಬಹುದು. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಶಿಕ್ಷಣದ ಮಟ್ಟಿಗೆ ಗಮನಾರ್ಹ ನೋಂದಣಿ ಕಂಡಿರುವುದು ಒಳ್ಳೆಯ ಬೆಳವಣಿಗೆ. ಚಿಕ್ಕ ಮಕ್ಕಳಿಗೆ ಊಟ ಬಟ್ಟೆ ಪುಸ್ತಕದ ಆಸೆಗೆ ಸೇರಿಸಿರುವುದನ್ನು ಕಾಣಬಹುದು. ಇದರಿಂದ ತಂದೆ ತಾಯಿ ದುಡಿಮೆಗೆ ಹೋಗಲು ಅನುಕೂಲವೂ ಆಗಿದೆ. ಡಾ. ಸುದರ್ಶನ್‌ರವರ ವಿಜಿಕೆಕೆಯಂಥ ಆರೋಗ್ಯ ಮತ್ತು ವಿದ್ಯಾಕೇಂದ್ರ ಗುಡ್ಡಗಾಡಿನ ಮಕ್ಕಳಿಗೆ ವರದಾನವಾಗಿ ಪರಿಣಮಿಸಿದೆ. ಪ್ರಶ್ನೆ ಎಂದರೆ ಪ್ರೌಢಶಿಕ್ಷಣವಾದ ನಂತರ ಪಿಯುಸಿ, ಪದವಿ ಶಿಕ್ಷಣ, ಉನ್ನತ ಶಿಕ್ಷಣದ ಹಾದಿಗೆ ಕರೆದೊಯ್ಯುವ ಕ್ರಿಯಾತ್ಮಕ ವ್ಯವಸ್ಥೆಯ ಕೊರತೆ ಇದೆ. ಇದಕ್ಕೂ ಮುನ್ನ ಶಾಲೆಯಿಂದ ಬಿಟ್ಟು ಬಿಡುವುದನ್ನು ತಡೆಗಟ್ಟುವ ಕೆಲಸ ಬಹಳ ಮುಖ್ಯವಾದ ಸವಾಲು. ಶಾಲೆ ಬಿಟ್ಟ ಮಕ್ಕಳು ಕೂಲಿ ಕೆಲಸಕ್ಕೆ ಹೋದರೆ ಪುಣ್ಯ. ಎಷೋ ಯುವಕರು ದುಶ್ಚಟಗಳಿಗೆ ಬಲಿಯಾಗಿರುವುದನ್ನು ನೋಡಿದರೆ ಆತಂಕವಾಗುತ್ತದೆ.
ಒಟ್ಟಾರೆ ಇಲ್ಲಿ ಹೇಳಬಯಸುವ ಪ್ರಮುಖ ಕ್ರಿಯಾತ್ಮಕ ಅಂಶಗಳೇನೆಂದರೆ... ಕಾಡಿನ ಬುಡಕಟ್ಟು ಜನಾಂಗವು ಮೃದುವಾದ ಹಾಗೂ ಮುಗ್ಧರನ್ನು ಒಳಗೊಂಡಿರುವುದನ್ನು ಮೊದಲು ಮನಗಾಣಬೇಕು. ಅವರ ಹಿತಮಿತಗಳನ್ನು ಅರಿತುಕೊಳ್ಳಬೇಕು. ಏನೇ ಜಾಗತಿಕ ಅಭಿವೃದ್ಧಿ ಮಾಡುವಾಗ ಅವರಿಗೆ ಕಲ್ಚರ್ ಶಾಕ್ ಆಗುವಂತಿರಕೂಡದು. ಆರ್ಥಿಕ ಅಭಿವೃದ್ಧಿ ಮತ್ತು ವಿಕಾಸ ಯೋಜನೆಗಳು ಅವರ ಸಂಸ್ಕೃತಿ ನಡವಳಿಕೆಗಳಿಗನುಗುಣವಾಗಿ ಒಗ್ಗುವಂಥವಾಗಿರಬೇಕು. ಅವರ ಇಚ್ಛಾಶಕ್ತಿ, ಕೌಶಲ್ಯಗಳಂತೆಯೇ ಕ್ರಿಯಾಯೋಜನೆಗಳು ರೂಪಿತವಾಗಬೇಕು. ಹೊರ ಜಗತ್ತಿನ ಇತರೆ ಪರಿಶಿಷ್ಟ ಪಂಗಡದವರೊಡನೆ ಆಗಲಿ, ಇನ್ನಿತರೆ ವರ್ಗದವರೊಡನೆ ಸ್ಪರ್ಧಿಸಿ ಬದುಕಲಾರರು. ಆದ್ದರಿಂದ ಅವರಿಗಷ್ಟೇ ಪ್ರತ್ಯೇಕವಾಗಿ ಮೀಸಲಾತಿಗಳನ್ನು, ಸೌಲಭ್ಯಗಳನ್ನು ಒದಗಿಸುವುದು ಸೂಕ್ತ.
ಸೋಲಿಗರು ಅವರವರ ಕುಲದವರೊಡನೆ ಏಕ ಸಂಸ್ಕೃತಿಯಲ್ಲಿ ಸಹಜವಾಗಿ ಜೀವಿಸುವವರಾದ್ದರಿಂದ ಉಳಿದ ಜನಾಂಗದೊಡನೆ ಸ್ಪರ್ಧೆ ಇರದ ವಾತವರಣ ನಿರ್ಮಿಸಬೇಕು. ಆದಷ್ಟು ಔಪಚಾರಿಕ ವಿದ್ಯಾಭ್ಯಾಸ ಕಡಿಮೆ ಮಾಡಿ ಅವರಿಗಾಗಿಯೇ ವಿಶೇಷ ಕೌಶಲ್ಯಯಕ್ತ ಔದ್ಯೋಗಿಕ ಶಿಕ್ಷಣ ರೂಪಿಸಬೇಕು. ಸತತವಾಗಿ ಅವರಿಗೆ ಉನ್ನತ ಶಿಕ್ಷಣ ಮತ್ತು ಔದ್ಯೋಗಿಕ ತಿಳಿವಳಿಕೆಯನ್ನು ಮಕ್ಕಳಿಗೆ ಮತ್ತು ತಂದೆತಾಯಿಯವರಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳು ಅವರಿರುವಲ್ಲಿಯೇ ಏರ್ಪಾಡಾಗಬೇಕು. ಬಾಲ್ಯವಿವಾಹ ನಿಲ್ಲಿಸಬೇಕು.
ಎಲ್ಲಕ್ಕೂ ಮಿಗಿಲಾಗಿ ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಜೊತೆ ಜೊತೆಗೆ ಯುವಕರನ್ನು ಕಾಡುತ್ತಿರುವ ಅನಾರೋಗ್ಯ ವಿಶೇಷವಾಗಿ ಕುಡಿತ, ಭಂಗಿ ಸೇದುವುದರಿಂದ ಮುಕ್ತಗೊಳಿಸಿ ಸನ್ಮಾರ್ಗಕ್ಕೆ ತರುವಂತಾಗಬೇಕು. ಈಗಿನ ವ್ಯವಸ್ಥೆಯಲ್ಲಿ ಕಾಡನ್ನು ಬಿಟ್ಟರೆ ಅವರು ಎಲ್ಲೂ ಸಲ್ಲದವರಾಗಿದ್ದಾರೆ.
ಇನ್ನೊಂದು ಎಚ್ಚರವಹಿಸಬೇಕಾದ ಸಂಗತಿಯೆಂದರೆ ಅವರ ಸಂಸ್ಕೃತಿ ಮತ್ತು ಜೀವನಶೈಲಿ. ಅದಕ್ಕಾಗಿಯೇ ಅವರ ಸಾಂಸ್ಕೃತಿಕ ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟುಗಳನ್ನು ಭದ್ರಗೊಳಿಸಬೇಕೇ ಹೊರತು ಅವರನ್ನು ಕಾಡಿನಿಂದ ಹೊರಹಾಕುವ ಪ್ರಯತ್ನ ಅವರಿಗೆ ಮಾರಕವೆನ್ನುವುದನ್ನು ಮರೆಯಬಾರದು. ಅಂಥ ಬುಡಕಟ್ಟು ಸಮುದಾಯಗಳ ಸಂಖ್ಯೆ ಅತಿ ಕಡಿಮೆ ಇರುವುದರಿಂದ ಅವರಿಗಾಗಿಯೇ ವಿಶಿಷ್ಟ ಹಾಗೂ ಅವರ ಪರಿಸರಕ್ಕೆ ಒಗ್ಗುವಂಥ ಕ್ರಿಯಾಸೌಲಭ್ಯಗಳನ್ನು ಒದಗಿಸಿದಲ್ಲಿ ಮಾತ್ರ ಜಾಗತಿಕದೃಷ್ಟಿ ಸಾರ್ಥಕ.

-ಡಾ.ಬಿ.ಎಸ್. ಕೃಷ್ಣಪ್ರಸಾದ್
krishnaprasadz@yahoo .co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.