ಸಾಪ್ತಾಹಿಕಪ್ರಭ

ಒಂದು ಬೆಂಕಿಕಡ್ಡಿ!

Published On :

ಧಗ ಧಗ ಉರಿಯುತ್ತಲೇ ಇತ್ತು. ಒಣಗಿದ ಸೋಗೆ ಮೇಲೆ ಬೆಂಕಿಯ ಅತ್ಯಾಚಾರ. ಛಿಟಿಲ್ ಛಿಟಿಲ್ ಎನ್ನುತ್ತ ಬೆಂಕಿಯ ಬಿಳಿಲು ಕಳಚಿಬೀಳುತ್ತಲೇ ಇತ್ತು.
ಎದುರಿಗಿನ ಮಣ್ಣಿನ ದಿಣ್ಣೆ ಮೇಲೆ, ಸುಡುತ್ತಿರುವ ಗುಡಿಸಿಲಿನ ಏಕೈಕ ವಾರಸುದಾರಳು ನಿರ್ಲಿಪ್ತಳಂತೆ ನಿರುಕಿಸುತ್ತಿದ್ದಳು.
ಅವಳ ಹಿಗ್ಗಲಿಸಿದ ಕಣ್ಣುಗಳಲ್ಲಿ ಉರಿವ ಜ್ವಾಲೆ ಪ್ರತಿಫಲಿಸುತ್ತಿತ್ತು. ಅವರಿವರು 'ಹ್ಹೆ... ಹ್ಹೊ..' ಎಂದೆನ್ನುತ್ತಾ ಮರಳು, ನೀರು ಉಗ್ಗುತ್ತಾ ಬೆಂಕಿ ನಂದಿಸಲು ವ್ಯರ್ಥ ಸಾಹಸ ಮಾಡುತ್ತಿದ್ದರು.
ನಂದುವ ಬೆಂಕಿಯಲ್ಲವದು.
ಗುಡಿಸಲಿನ ಹಿರಿಯಕ್ಕನಂತಿರುವ ಒಂದು ಸಣ್ಣ ಮನೆ ಉರಿದು ಬೂದಿಯಾಗುವುದಕ್ಕೆ ಕಾಲವೆಷ್ಟು? ಇಷ್ಟಕ್ಕೂ ಬೆಂಕಿ ನಂದಿಸಿ, ಉಳಿಸಬಹುದಾದ ಮೌಲ್ಯದ ವಸ್ತುಗಳಾದರೂ ಏನಿರಬಹುದು ಒಳಗೆ?
ಏನೂ ಉಳಿದಿರಲಿಲ್ಲ.
'ಪಾಪ! ಕೂಸಿಗೆ ಇದ್ದೊಂದ್ ಗೂಡೂ ಸುಟ್ಟೋತಾ...' ಎಲ್ಲರೂ 'ತ್ಚು..ತ್ಚು..' ಮರುಗುವವರೇ.
ಅವಳು ನಿರುಕಿಸುತ್ತಲೇ ಇದ್ದಳು.
ಬಾಗಿಲೆಂಬ ತಡಿಕೆ ಸುಟ್ಟು ಕುಸಿದ ಮೇಲೆ ಒಳಗೆ ಬೆಂಕಿ ಮೈ-ಚಾಚುವ ದೃಶ್ಯ ಕಾಣುತ್ತಿತ್ತು.
'ಯಾರು ಬೆಂಕಿ ಇಟ್ಟವರು' ಎಂಬ ಪ್ರಶ್ನೆ ಭೂತಾಕಾರವಾಗಿ ಎಲ್ಲರ ತಲೆ ತಿನ್ನುತ್ತಿತ್ತು. ಯಾರಿಗೂ ಕೇಡು ಬಗೆದದ್ದಲ್ಲ ಈ ಪಾಪದ ಪ್ರಾಣಿ. ಇದ್ದ ಒಬ್ಬ ತಾಯಿ ಜೀವ ಕೂಡಾ ಏಗಿ-ಏಗಿ ಸತ್ತುಹೋಗಿತ್ತು.
ತಾಯಿ ಸತ್ತಾಗಲೂ ಈ ಮನೆ ಇನ್ನೂ ಪೂರ್ಣಗೊಂಡಿರಲಿಲ್ಲ. ಟಾರ್ಪಲಿನ್ ತೂತಿನಿಂದ ತೂರಿದ ಬಿಸಿಲಿನ ಕೋಲೊಂದು ಹೆಣದ ಮುಖವನ್ನು ತಿವಿಯುತ್ತಿತ್ತು.
ಅರ್ಧ ನಿಂತ ಮನೆಯಲ್ಲಿ, ಸೋತ ಜೀವ, ಪೂರ್ಣ ಉಸಿರು ಚೆಲ್ಲಿತ್ತು.
ಸಾಯುವ ಮುಂಚೆ ಸದಾ ಒರಲುತ್ತಿದ್ದಳು; '.... ಮನೆ ಮೊದ್ಲ ಮುಗಿಸ್ಕೋ.... ಆ ಚೇರ್ಮನ್ನನ ನಂಬಬೇಡ...'
ಇವಳು ನಂಬಿರಲೂ ಇಲ್ಲ.
ಜನತಾ ಮನೆ. ಪಂಚಾಯಿತಿ ಆಫೀಸಲ್ಲಿ ಏನೇನೋ ಬಿಳಿ ಬಿಳಿ ಫಾರ್ಮುಗಳು; ಅಡ್ಡಡ್ಡ ಗೆರೆಗಳು... ಹೇಳಿದಲ್ಲೆಲ್ಲ ಇವಳು ಎಡಗೈ ಹೆಬ್ಬೆಟ್ಟು ಉರುಳಿಸಿದ್ದೇ ಉರುಳಿಸಿದ್ದು.
ತಾಟು ಹೊದೆಸಲು ಏನೆಲ್ಲ ಪರಿಪಾಟಲು. ಅದೇ ಚೇರ್ಮನ್ನನ ಹೊಸ ಅರಮನೆ ಹಾಲುಕ್ಕಿದಂತೆ ಉಬ್ಬರಿಸುತ್ತಿತ್ತು. ಚಿತ್ತಾರದ ಬಾಗಿಲು, ಕಿಟಕಿ, ಕಂಬ, ಚೌಕಟ್ಟು... ಇತ್ಯಾದಿಗಳು, ಎರಡು ಕಣ್ಣಿಗೂ ಸಾಲದ ಸಂಭ್ರಮ. ನಿನ್ನೆ-ಮೊನ್ನೆಯಷ್ಟೇ ಒಟ್ಟಿದ ಜೋಳದ ಮೇವು ಬಣಿವೆಯ ನೆರಳಲ್ಲಿ ಎಲ್ಲವನ್ನೂ ಜೋಡಿಸಿ ಪೇರಿಸಿದ್ದರು.
ಕೊನೆ ಕಂತಿನ ಹಣ. ಅದೇನೊ 'ಚಕ್ಕು' ಅಂತ ಕೊಡ್ತಾರೆ; ಅದನ್ನು ಬ್ಯಾಂಕಿಗೆ ಕೊಟ್ಟರೆ ಕೈಗೇ ಹಣ.
ಪಂಚಾಯ್ತಿ ಕಚೇರಿಗೆ ಎಡತಾಕಿ ಆಕೆಯ ಕಾಲಿನ ಎಕ್ಕಡಗಳೂ ಬ್ಯಾಂಕಿನ ಚಕ್ಕಿನಷ್ಟೇ ತೆಳುವಾಗಿದ್ದವು. ಮನೆ, ಮಾಡು ತೊಟ್ಟು ಪೂರ್ಣಗೊಂಡಿತ್ತು.
ಕೆಲ ದಿನಗಳಷ್ಟೇ. ಇದೀಗ ಬೆಂಕಿಗೆ ಭಸ್ಮ.
'ಯಾರು ಈ ಹೀನಕೃತ್ಯ ಎಸಗಿದವರು' ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಗೊಣ ಗೊಣ.. ಮಣ ಮಣ. ಆದರೆ ಇವಳಿಗೆ ಗೊತ್ತಿತ್ತು; ಇವಳಿಗೆ ಮಾತ್ರ ಗೊತ್ತಿತ್ತು.
ಚಿತ್ತಾರದ ಮನೆ ವಿಸ್ತಾರಗೊಳ್ಳುತ್ತಲೇ ಇತ್ತು. ಲಕ್ಷಾಂತರ ಬೆಲೆಯ ತೇಗ, ಬೀಟೆ... ಎರಡೂ ಬಣಿವೆಗಳ ಮಧ್ಯೆ ನೆರಳಲ್ಲಿ ವಿರಮಿಸಿತ್ತು.
ಗುಡಿಸಲ ಒಳಗೆ, ಅವಳ ಅವ್ವ ಕಡಿದು ತಂದ ಒಣಸೌದೆಗೆ ಇದೀಗ ಜ್ವಾಲೆ ಕೈ ಬಳಸಿತು. ಅದನ್ನು ಕೈಯಾರೆ ಪೇರಿಸಿದ ಅವ್ವ ಈಗ ಇಲ್ಲ. ಅವ್ವನ ಸೌದೆ ಸುಡುತ್ತಲೇ ಹೇಳಿದಂತಿತ್ತು: 'ಚೇರ್ಮನ್ನನ ನಂಬಬ್ಯಾಡ...'
ಮೂಲೆಯಲ್ಲಿದ್ದ ಒಂದು ಒರಟು ಹಲಗೆ. ತಾನೇ ರೂಪಿಸಿಕೊಂಡ, ತಮ್ಮನ ಕ್ರಿಕೆಟ್ ಬ್ಯಾಟ್. ಅದಕ್ಕೆ ಬೆಂಕಿ ತಾಗಿ ಉರಿಯುತ್ತಲೇ ತಮ್ಮನ ನೆನಪನ್ನು ಉಗ್ಗುತ್ತಲೇ ಇತ್ತು. ಯಾವುದೋ ಕಾರಣದಿಂದ ಓಡಿಹೋದ ತಮ್ಮ ಇನ್ನೂ ಪತ್ತೆಯಾಗಿರಲಿಲ್ಲ...
ಮೊನ್ನೆ ಏತಕ್ಕೋ ಹೋದಾಗ, ಚೇರ್ಮನ್ 'ನೋಡಿಲ್ಲಿ ಈ ಜೋಡಿ ಕಣಿಕಿ ಬಣವಿ ಹ್ಯಾಂಗ್ ಕಾಣತಾವು...' ಎನ್ನುತ್ತ ಇವಳ ಏರು ಎದೆಯ ಕಡೆಗೆ ದುರದುರನೆ ನೋಡಿದ್ದ.
ಮತ್ತೊಮ್ಮೆ ಈ ಚೆಕ್ಕಿನ ಬಗ್ಗೆ ಕೇಳಲು ಹೋದಾಗ, ಬಣವಿ ನೆರಳಲ್ಲಿ ಆನಿಸಿ ಇಟ್ಟಿದ್ದ ಹೊಸ ಬಾಗಿಲ ಮೇಲೆ ಕೆತ್ತಿದ ಅಪ್ಸರಬಾಲಿಕೆಯ ಎರಡೂ ತೊಡೆ ಸಂಧಿಸುವಲ್ಲಿ ಕೈ ಇರಿಸಿ, ಬೆರಳಾಡಿಸುತ್ತ ಏನೇನೋ ಕೇಳುತ್ತಿದ್ದ.
ಹೀಗೆ ನೂರೆಂಟು ಹೀನ ಚೇಷ್ಟೆಗಳಿಂದ 'ಕೇಳಿ'ಗೆ ಆಹ್ವಾನಿಸುವ ಚೇರ್ಮನ್ನನ ಮೇಲೆ, ಈಕೆಗೆ ಛಿಟಲ್-ಛಿಟಲ್ ಸಿಟ್ಟು.
ಮತ್ತೆ ಹೋಗಬೇಕಾಯ್ತು. ನಿನ್ನೆ ಯಾರೂ ಇರಲಿಲ್ಲ. ಬೆವರು ಒರೆಸಿಕೊಳ್ಳುತ್ತಿದ್ದ ಇವಳಿಗೆ ಅದಾವಳೋ ಗಂಡುಬೀರಿಯಂಥವಳೊಬ್ಬಳು, '... ಕುಂತಕೋ' ಎಂದ್ಹೇಳಿ, ಒಳಗ್ಹೋಗಿ ಸಿಲವರ ಲೋಟವೊಂದರಲ್ಲಿ ಮಾವಿನಕಾಯಿ, ಬೆಲ್ಲದ ಪಾನಕ ಕೊಟ್ಟು, ಗದ್ದದ ಅಡಿಯಲ್ಲಿ ವ್ಯಂಗ್ಯದ ಗೆರೆ ಮೂಡಿಸಿ, ಸೊಟ್ಟ-ನಗೆ ಬೀರಿ ಹೋದದ್ದು ಇವಳಿಗೇಕೋ ಅರ್ಥವೇ ಆಗಿರಲಿಲ್ಲ.
ಬಿಸಿಲಿರದಿದ್ದರೂ ಪಾನಕ ಹಿತವಾಗಿತ್ತು. ಒಂದೇ ಗುಟುಕಿಗೆ ಎತ್ತರಿಸಿ ಕುಡಿದು, ಹೊರಗಿನ ನೀರಲ್ಲಿ ಲೋಟ ಗಲಬರಿಸಿ, ಅಲ್ಲೇ ಮೂಲೆಯಲ್ಲಿ ಇಟ್ಟಿದ್ದಳು.
ತಲೆ ಧಿಮ್ಮೆಂದಿದ್ದು, ಮಾಡು, ಕಿಟಕಿ, ಬಾಗಿಲು ಎಲ್ಲ ಕಲೆಸಿ, ಗಿರಿ-ಗಿರಿ ಗಿರಿಗಿಟ್ಟಿದಂತಾಗಿದ್ದ ನೆನಪು.
ಎಚ್ಚರಾದಾಗ, ಚೇರ್ಮನ್ ಇನ್ನೂ ಮೈ ಸವರುತ್ತಿದ್ದ.
ಧಿಡಗ್ಗನೆ ಎದ್ದವಳಿಗೆ ಎಲ್ಲ ಅರ್ಥವಾಗಿತ್ತು. ಎಲ್ಲ ಅನರ್ಥವಾಗಿತ್ತು.
ಓಡಲಾಗದಂತಿದ್ದರೂ ಓಡಿಬಂದಿದ್ದಳು.
ಚೇರ್ಮನ್ ಬಿದ್ದು ಬಿದ್ದು ನಗುತ್ತಿದ್ದ.
ಕಳೆದ ವಾರವಷ್ಟೇ ಮನೆ, ತಾಟು ಹೊದ್ದು ಬೆಚ್ಚಗಾಗಿತ್ತು.
ಗುಡಿಸಲಂಥ ಮನೆ, ಪೂರಾ ಸುಟ್ಟು ಬೂದಿಯಾಗಿತ್ತು.
ಎಲ್ಲರೂ ಕರಗಿಹೋದಾಗ, ಇವಳೊಬ್ಬಳೇ ಮಣ್ಣ ದಿಣ್ಣೆ ಮೇಲೆ ಗಟ್ಟಿ ನಿರ್ಧಾರದ ಮುಷ್ಟಿಯನ್ನು ಈಗ ಸಡಿಲಿಸಿದಳು.
ಎಲ್ಲರೂ ಆಡಿಕೊಳ್ಳುತ್ತಾ ಹೋಗಿದ್ದರು; '... ಯಾ ಪಾಪಿ ಬೆಂಕಿ ಇಟ್ಟನೋ...' ಎಲ್ಲವೂ ನೆನಪಾಯ್ತು.
ಮುಷ್ಟಿ ಸಡಿಲಿಸಿದಳು. ಬೆಂಕಿಪೊಟ್ಟಣ ಕೈಬೆವರಿಗೆ ಅಂಟಿಕೊಳ್ಳುತ್ತಲಿತ್ತು. ಅಂಗೈಯಲ್ಲಿ ಪೊಟ್ಟಣ ಒತ್ತಿ ಗೆರೆ ಮೂಡಿಸಿತ್ತು. ಅವಳ ಅಂಗೈ ಗೆರೆಯನ್ನೂ ಅವು ಮೀರಿಸುತ್ತಿದ್ದವು!
ಮಬ್ಬುಗತ್ತಲಲ್ಲೇ ಬೆಂಕಿಪೊಟ್ಟಣದ ಒಳಗೆ ಇಣುಕಿದಳು. ಒಂದು ಬೆಂಕಿಕಡ್ಡಿ ಖರ್ಚಾಗಿತ್ತು, ಅದೂ ಈ ಗುಡಿಸಲಿಗಾಗಿ! ಅವಳೇ ಸ್ವತಃ ಬೆಂಕಿಯಿಟ್ಟಿದ್ದು; ಆ ಒಂದು ಬೆಂಕಿಕಡ್ಡಿಯಿಂದ.
ಈಗ ಇನ್ನೊಂದೇ ಬೆಂಕಿಕಡ್ಡಿ, ಪೊಟ್ಟಣದೊಳಗೆ.
ಸರಿ ರಾತ್ರಿ. ಅಲ್ಲಲ್ಲಿ ನಾಯಿ ಬೊಗಳಿನ, ಗೂಗಿ ಗುಕ್ಕಿನ ಶಬ್ದ. ಜೀರುಂಡೆ ಝಿರ್.. ಝಿರ್... ಇವಿಷ್ಟೇ.
ಕಣ್ಣಲ್ಲಿ ಪ್ರತಿಫಲಿಸೊ ಬೆಂಕಿ; ಕೈಯಲ್ಲಿ ಬೆಂಕಿಕಡ್ಡಿ.
ಧಿಗ್ಗನೆ ಎದ್ದ ಅವಳು ನೇರ, ಚೇರ್ಮನ್ನನ ಜೋಡು ಗಣಿಕೆ ಬಣಿವೆಯೆಡೆಗೆ ಬಿರಬಿರನೆ ನಡೆದು ಬಂದಳು.
ಒಂದೇ ಕಡ್ಡಿ. ನಂದಿಹೋದರೆ? ಒಂದೇ ಕಡ್ಡಿ ದೀಪವಲ್ಲವಂತೆ. ಆದರೆ ತಾನು ಹಚ್ಚುತ್ತಿದ್ದುದು ದೀಪವಲ್ಲ; ಕೊಳ್ಳಿ! ಒಂದೇ ಕಡ್ಡಿ ಬೇಕಾದಷ್ಟಾದೀತು.
ಒಮ್ಮೆ ನೋಡಿದಳು. ಎರಡೂ ಬಣಿವೆ ಮಧ್ಯ ಲಕ್ಷಾಂತರ ಮೌಲ್ಯದ ಹೊಸಮನೆಗಾಗಿ ಕೆತ್ತಿ ತಂದಿರಿಸಿದ ಚೌಕಟ್ಟು, ಬಾಗಿಲು ಕಿಟಕಿ.. 'ಹೋ.. ನೆಮ್ಮದಿಯ ಮನೆ!' ತಿರಸ್ಕಾರದ ನಗೆ ಮೂಡಿತವಳಿಗೆ.
ಬಣಿವೆಯ ರವದಿಯನ್ನು ಒಟ್ಟು ಮಾಡಿ, ಬೆಂಕಿಕಡ್ಡಿ ಗೀರಿದಳು....

-ರಾಮಚಂದ್ರ ಎಸ್.ಕುಲಕರ್ಣಿ
9243262391

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.