ಸಾಪ್ತಾಹಿಕಪ್ರಭ

ಸಂಪಾದನೆ ಸೊಗಸು

Published On :

ಕನ್ನಡದಲ್ಲಿ, ಹಿಂದಿಯಲ್ಲಿ, ಲೇಖಕರು ಬರೆದು ಪ್ರಕಾಶಕರಿಗೆ ಕೊಟ್ಟ ಮೇಲೆ ಮುಗಿಯಿತು, ಅದನ್ನು ಎಡಿಟ್ ಮಾಡುವವರಿಲ್ಲ. ಹೆಚ್ಚೆಂದರೆ ಅಚ್ಚಿನ ದೋಷಗಳನ್ನು ತಿದ್ದಲು ಒಂದೆರಡು ಬಾರಿ ಪ್ರೂಫ್ ರೀಡಿಂಗ್ ಮಾಡಬಹುದಷ್ಟೇ. ಆದರೆ ಇಂಗ್ಲಿಷ್ ಸಾಹಿತ್ಯ ಜಗತ್ತಿನಲ್ಲಿ ಹೀಗಲ್ಲ. ಅಲ್ಲಿ ಎಷ್ಟೇ ದೊಡ್ಡ ಬರಹಗಾರನಾದರೂ, ಸಂಪಾದಕನ ಕಣ್ಣುಗಳನ್ನು, ಕತ್ತರಿಯನ್ನು ಹಾದುಹೋಗಲೇಬೇಕು. ಈ ಕೃತಿಯನ್ನು ಪ್ರಕಟಿಸಿದರೆ ಮಾರಾಟವಾಗಬಹುದೆ, ಕೊಳ್ಳುವವರು ಯಾರು, ಅದು ಇನ್ನಷ್ಟು ಯಶಸ್ವಿಯಾಗಬೇಕಾದರೆ ಏನು ಮಾಡಬೇಕು, ಎಲ್ಲಿ ಅನಗತ್ಯ ಭಾಗವಿದೆ... ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ನಂತರವೇ ಪ್ರಕಟಿಸುವ ಮಾತು. ಈ ಸಂಪಾದಕರು ಸ್ವತಃ ಉತ್ತಮ ಲೇಖಕರೂ ಆಗಿರುತ್ತಾರೆ.   
ಇಂಥ ಒಬ್ಬ ಎಡಿಟರ್‌ನ ಹೆಸರು ಡೇವಿಡ್ ಎಬರ್‌ಶಾಫ್. ಈತ ಸಂಪಾದಿಸಿದ ಎರಡು ಕೃತಿಗಳು ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಪಡೆದಿವೆ. ಈತ ರ್ಯಾಂಡಮ್ ಹೌಸ್ ಪ್ರಕಾಶನದ ಎಡಿಟರ್. ಪುಸ್ತಕ ಎಡಿಟಿಂಗ್ ಬಗ್ಗೆ ಈತ ಹೇಳಿದ ಮಾತುಗಳು ಕುತೂಹಲಕರವಾಗಿವೆ:
'ನಾನು ಪ್ರತಿ ಲೇಖಕನಿಗೂ ಎರಡು ವಿಷಯ ಹೇಳುತ್ತೇನೆ: ಒಂದು, ನಿಮ್ಮ ದರ್ಶನವನ್ನು ನಾನು ಅರ್ಥಮಾಡಿಕೊಳ್ಳುವೆ ಮತ್ತು ಅದನ್ನು ಓದುಗನಿಗೆ ದಾಟಿಸುವ ಅತ್ಯುತ್ತಮ ಸಾಧ್ಯತೆಯನ್ನು ಶೋಧಿಸುವೆ. ಎರಡು, ನಾನಿಲ್ಲಿರುವುದು ಓದುಗನನ್ನು ಪ್ರತಿನಿಧಿಸುವುದಕ್ಕಾಗಿ. ಪುಸ್ತಕ ಅಚ್ಚಾಗಲು ಹೋಗುವ ಮುನ್ನ, ಓದುಗ ನಿಮಗೇನು ಹೇಳಬೇಕೆಂದಿದ್ದಾನೋ ಅದನ್ನು ನಾನು ನಿಮಗೆ ಹೇಳುವೆ. ಸಾಮಾನ್ಯವಾಗಿ ಎಲ್ಲ ಕೃತಿಕಾರರೂ ನನ್ನ ಮಾತನ್ನು ಒಪ್ಪುತ್ತಾರೆ. ಅತ್ಯುತ್ತಮ ಪುಸ್ತಕ ತರಬೇಕೆಂಬುದೇ ನಮ್ಮ ಗುರಿ. ಒಮ್ಮೆ ಮಾತ್ರ ನನಗೆ ಕಹಿ ಅನುಭವವಾಗಿದೆ. ಆದರೆ ಇಲ್ಲಿ ಲೇಖಕನೇ ಅಂತಿಮ. ಪುಸ್ತಕ ಅವನದೇ ಹೊರತು ನನ್ನದಲ್ಲವಲ್ಲ!'
'ಓದುಗರು ಬಯಸುವುದು ಸ್ಪಷ್ಟತೆ, ಮಾರ್ಗದರ್ಶನ ಮತ್ತು ಸಂಕ್ಷಿಪ್ತತೆ. ಇವುಗಳ ಜತೆ ನಾಟಕೀಯತೆ, ಪಾತ್ರಚಿತ್ರಣ, ಭಾವನೆಗಳೂ ಮುಖ್ಯ. ಅಸ್ಪಷ್ಟತೆ, ಪರೋಕ್ಷತೆ, ಸುದೀರ್ಘಗಳಿದ್ದಲ್ಲಿ ನಾನು ಲೇಖಕನಿಗೆ ತಿಳಿಸುತ್ತೇನೆ. ಇನ್ನಷ್ಟು ಬೇಕೆಂಬಲ್ಲಿ, ತೀವ್ರತೆ ಅಗತ್ಯವಿದ್ದಲ್ಲಿ, ವಿಶ್ಲೇಷಣೆ ಅನಗತ್ಯವಾದಲ್ಲಿ, ದೃಶ್ಯವು ಇನ್ನಷ್ಟು ಪರಿಷ್ಕೃತಗೊಳ್ಳಬೇಕಾದಲ್ಲಿ ಅದನ್ನೂ ಹೇಳುತ್ತೇನೆ. ಓದುಗರು ಶೈಲಿ, ವೈಶಿಷ್ಟ್ಯ, ಕಲಾತ್ಮಕ ಭಾಷೆಗಳನ್ನು ಗೌರವಿಸುತ್ತಾರೆ. ಅವುಗಳನ್ನು ಎತ್ತಿ ಹಿಡಿಯುತ್ತೇನೆ'
ಇತ್ತೀಚೆಗೆ, ಕನ್ನಡದಲ್ಲಿ, ವಸಂತ ಪ್ರಕಾಶನದ ಮುರಳಿ ಶ್ರೀನಿವಾಸನ್ ಇಂಥದೊಂದು ಎಡಿಟಿಂಗ್ ಪ್ರಯತ್ನ ಮಾಡುತ್ತಿದ್ದಾರೆ. ಅವರು ಪ್ರಕಟಿಸುವ ಕೃತಿಗಳಿಗೆ ಹಿರಿಯ ಲೇಖಕ ಎಸ್.ದಿವಾಕರ್ ಸಂಪಾದಕರಾಗಿದ್ದಾರೆ. ಎಲ್ಲರೂ ಇಂಥದೊಂದು ಹಾದಿ ಅನುಸರಿಸಿದರೆ, ಕನ್ನಡಿಗರು ಕಳಪೆ ಕೃತಿಗಳನ್ನು ಓದುವ ಸಂಕಟದಿಂದ ಪಾರಾಗಬಹುದು.
ಟಾಗೋರ್ ಬಿಚಿತ್ರ
ಗೀತಾಂಜಲಿಯ ಕರ್ತೃ, ನೊಬೆಲ್ ಪುರಸ್ಕೃತ, ರಾಷ್ಟ್ರಗೀತೆಯ ರಚಯಿತ ರವೀಂದ್ರನಾಥ ಟಾಗೋರರ ಸರ್ವಕೃತಿಗಳೂ ಇನ್ನು ಆನ್‌ಲೈನ್‌ನಲ್ಲಿ ಲಭ್ಯ. ಮೂಲ ಬಂಗಾಳಿ ಬರಹಗಳು ಹಾಗೂ ಇಂಗ್ಲಿಷ್ ಅನುವಾದಗಳೂ ದೊರೆಯುತ್ತವೆ. 'ಬಿಚಿತ್ರ' ಹೆಸರಿನ ಈ ವೆಬ್‌ಸೈಟ್ ಅನ್ನು ಮೊನ್ನೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶಕ್ಕೆ ಅರ್ಪಿಸಿದರು. 'ಬಿಚಿತ್ರ' ಅಂದರೆ ಬಂಗಾಳಿಯಲ್ಲಿ ವೈವಿಧ್ಯ.
ಇದು ಟಾಗೋರರೇ ಕಟ್ಟಿ ಬೆಳೆಸಿದ ವಿಶ್ವಭಾರತಿ ಮತ್ತು ಜಾಧವಪುರ ವಿಶ್ವವಿದ್ಯಾಲಯಗಳ ಕೆಲಸ. 35 ಬುದ್ಧಿಜೀವಿಗಳು ಇದಕ್ಕಾಗಿ 2 ವರ್ಷ ಹಗಲೂ ರಾತ್ರಿ ಕೆಲಸ ಮಾಡಿದ್ದಾರೆ. 91,637 ಮುದ್ರಿತ ಪುಟಗಳನ್ನೂ 47,520 ಹಸ್ತಪ್ರತಿ ಪುಟಗಳನ್ನೂ ಅಪ್‌ಲೋಡ್ ಮಾಡುವುದು ಸಣ್ಣ ಕೆಲಸವೆ? ಈ ಸುದ್ದಿಯಿಂದ ಖುಷಿಯಾಗಿ ತಾಣ ಎಲ್ಲಿದೆ ಎಂದು ಹುಡುಕಲು ಹೋದರೆ ನಿರಾಶೆ ಕಾದಿತ್ತು. ವೆಬ್‌ಸೈಟ್ ಇನ್ನೂ ನೋಡುಗರಿಗೆ ಲಭ್ಯವಾಗಿಲ್ಲ. ಇದೇ ಒಂದು 'ಬಿಚಿತ್ರ'!
ಕನ್ನಡದಲ್ಲೂ ಇಂಥ ಕೆಲಸ ಆಗಬೇಕು. ಮುಖ್ಯವಾಗಿ ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆ ಕೃತಿಗಳು. ಹಾಗಾದರೂ ನಮ್ಮ 'ಸಾಫ್ಟ್‌' ಹುಡುಗರು ಅದನ್ನು ಓದುವಂತಾಗಬಹುದು.


-ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.