ಪ್ರಧಾನ ಸುದ್ದಿ

"ಸುಪ್ರೀಂ" ಆದೇಶದ ಮೇರೆ ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿದ ತಜ್ಞರ ತಂಡ!

ಕಾವೇರಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರ ತಾಂತ್ರಿಕ ಸಮಿತಿ ತಂಡದ ಸದಸ್ಯರು ನಿನ್ನೆ ಕರ್ನಾಟಕದ ಕಾವೇರಿಕೊಳ್ಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

"ಸುಪ್ರೀಂ" ಆದೇಶದ ಮೇರೆ ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿದ ತಜ್ಞರ ತಂಡ!
ಕಾವೇರಿ ಜಲಾನಯನ ಪ್ರದೇಶ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಕಾವೇರಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರ ತಾಂತ್ರಿಕ ಸಮಿತಿ ತಂಡದ ಸದಸ್ಯರು ನಿನ್ನೆ ಕರ್ನಾಟಕದ  ಕಾವೇರಿಕೊಳ್ಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಸಂಗ್ರಹ ಹಾಗೂ ರೈತರ ಬೆಳೆ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌.ಝಾ ನೇತೃತ್ವದ ತಂಡ ಗುರುವಾರ  ರಾತ್ರಿ ನಗರಕ್ಕೆ ಆಗಮಿಸಿದ್ದು, ಅಕ್ಟೋಬರ್ 7 ಶುಕ್ರವಾರ ಮತ್ತು ಅಕ್ಟೋಬರ್ 8 ಶನಿವಾರ ರಾಜ್ಯದ ವಿವಿಧ ಜಲಾಶಯಗಳ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ತಜ್ಞರ ಸಮಿತಿ ಸದಸ್ಯರಾದ ಜಲ  ಆಯೋಗದ ಸದಸ್ಯ ಸೈಯದ್‌ ಮಸೂದ್‌ ಹುಸೇನ್‌, ಗೋದಾವರಿ ಮತ್ತು ಕೃಷ್ಣಾ ಕಣಿವೆಯ ಮುಖ್ಯ ಎಂಜಿನಿಯರ್‌ ಆರ್‌.ಕೆ. ಗುಪ್ತ ಅವರು ಆಗಮಿಸಿದ್ದಾರೆ.

ಇಂದಿನಿಂದ ಕಾವೇರಿ ಕೊಳ್ಳದ ಭಾಗದಲ್ಲಿ ಪ್ರವಾಸ ನಡೆಸಲಿರುವ ಸದಸ್ಯರಿಗೆ ಕಾವೇರಿ ಕೊಳ್ಳದ ನಾಲ್ಕೂ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್‌ಗಳು ಸಾಥ್  ನೀಡಲಿದ್ದಾರೆ. ಈ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸಲು ರಾಜ್ಯ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ  ಚಿಕ್ಕರಾಯಪ್ಪ, ಕೆಆರ್‌ಎಸ್‌ ಅಣೆಕಟ್ಟಿನ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಅವರನ್ನು ನೇಮಿಸಲಾಗಿದ್ದು, ಇಂದಿನಿಂದ ಪ್ರವಾಸ ಆರಂಭಿಸಲಿದ್ದಾರೆ.

ತಜ್ಞರ ತಂಡದ ಪ್ರವಾಸಕ್ಕಾಗಿ ಸರ್ಕಾರ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಿದ್ದು, ಬೆಂಗಳೂರಿನಿಂದ ಮಂಡ್ಯದವರೆಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ನಂತರ ರಸ್ತೆ ಮೂಲಕ ಜಲಾಶಯಗಳ ವೀಕ್ಷಣೆ  ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕಬಿನಿ, ಕೆಆರ್‌ಎಸ್‌, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಗೆ ಈ ತಂಡ ಖುದ್ದು  ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಿದೆ. ಬಳಿಕ ಶನಿವಾರ ಸಂಜೆ ಈ ತಂಡವು ತಮಿಳುನಾಡಿನ ಮೆಟ್ಟೂರಿಗೆ ತೆರಳಿ ಅಲ್ಲಿನ ಜಲಾಶಯದಲ್ಲಿನ ನೀರಿನ ಸಂಗ್ರಹಣೆ ಹಾಗೂ   ಬೆಳೆಗಳ ಸ್ಥಿತಿಗತಿ ಕುರಿತು ಪರಿಶೀಲಿಸಲಿದೆ. ಬಳಿಕ ಇದೇ 17ರಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.

ರಾಜ್ಯ ಸರ್ಕಾರದಿಂದ ಗ್ರಾಮಗಳ ಸ್ಥಿತಿಗತಿ ವಿಡಿಯೋ ವರದಿ
ಇದೇ ವೇಳೆ ಶುಕ್ರವಾರ ತಜ್ಞರ ತಂಡ ಪ್ರವಾಸ ಆರಂಭಿಸುವುದಕ್ಕೂ ಮುನ್ನ ರಾಜ್ಯಸರ್ಕಾರ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿಗತಿ ಕುರಿತು ವಿಡಿಯೊ ದೃಶ್ಯಗಳ ಮೂಲಕ ತಂಡಕ್ಕೆ  ಮನವರಿಕೆ ಮಾಡಿಕೊಡಲಿದೆ. ಇಂದು ಬೆಳಿಗ್ಗೆ 9.30ಕ್ಕೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮತ್ತು ಅಧಿಕಾರಿಗಳ ತಂಡ ತಜ್ಞರಿಗೆ ರಾಜ್ಯದ ಸ್ಥಿತಿಗತಿ  ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.