

ಮಂತ್ರಕ್ಕೆ ಮಾವಿನಕಾಯಿ ಉದುರೋಲ್ಲ ಅಂತಾರೆ. ಆದರೆ ಇಂದಿನ ಜಗತ್ತಿನಲ್ಲಿ ಫ್ಯಾಷನ್ ಎಂಬ ಮೂಲಮಂತ್ರವಿಟ್ಟುಕೊಂಡರೆ ಸುಲಭವಾಗಿ ಹಣವಂತೂ ಉದುರುತ್ತದೆ. ಅಂದವಾಗಿ ಕಾಣುವುದಕ್ಕಿಂತಾ ಎದ್ದು ಕಾಣುವುದು ಇಂದಿನ ದಿನದ ಫ್ಯಾಷನ್ ಸ್ಟೇಟ್‌ಮೆಂಟ್. ಇಂಥ ಸಂದರ್ಭದಲ್ಲಿ ಬೇಡದ ಕೂದಲಿಂದ ಹಿಡಿದು ಉಗುರುಗಳ ತನಕವೂ ದುಡ್ಡನ್ನು ಚೆನ್ನಾಗಿ ಪೀಕಿಸುವ ಅನೇಕ ಪಾರ್ಲರ್‌ಗಳು ನಾಯಿಕೊಡೆಗಳಂತೆ ಎದ್ದಿವೆ.
ಇವೆಲ್ಲದರ ನಡುವೆ ನೇಲ್ ಸಲೂನ್‌ಗಳು ಹೊಸದಾಗಿ ಹೆಸರು ಮಾಡುತ್ತಿವೆ. ಸಲೂನ್ ಎಂದರೆ ಕೂದಲು ಕತ್ತರಿಸುತ್ತಾರೆಂದುಕೊಂಡಿದ್ದೆವು. ಏನಪ್ಪಾ ಇದು ನೇಲ್ ಸಲೂನ್? ಉಗುರು ಕತ್ತರಿಸಲೂ ಒಂದು ಸಲೂನಾ?! ಎಂದು ಆಶ್ಚರ್ಯದಿಂದ ಬಾಯ್ಬಿಟ್ಟಿದ್ದರೆ ಮುಂದೆ ಓದುವ ಮೊದಲು ನೀವು ಮಾಡಬೇಕಾದ ಕೆಲಸ ಬಾಯ್ಮುಚ್ಚುವುದು! (ಸುಮ್ಕೆ, ತಮಾಷೆಗೆ)
ಹೌದು, ಉಗುರು ಕತ್ತರಿಸುವುದು, ಮೆನಿಕ್ಯೂರ್, ಪೆಡಿಕ್ಯೂರ್, ಉಗುರು ಉದ್ದಗೆ ಬೆಳೆಯುವಂತೆ ಚಿಕಿತ್ಸೆ, ಉಗುರಿಗೊಂದು ಆಕಾರ, ಆರ್ಟಿಫಿಶಿಯಲ್ ಉಗುರುಗಳನ್ನು ಜೋಡಿಸುವುದು, ಉಗುರಿಗೆ ಬಣ್ಣ ತುಂಬುವುದು, ಬಣ್ಣದ ಮೇಲೆ ಮತ್ತೊಂದಿಷ್ಟು ಚಿತ್ರ ಬಿಡಿಸುವುದು- ಒಟ್ಟಿನಲ್ಲಿ ನಿಮ್ಮ ಉಗುರು ನಿಮ್ಮ ಸೌಂದರ್ಯದ ಹಾಗೂ ಸೌಂದರ್ಯಪ್ರಜ್ಞೆಯ ಸಂಕೇತವಾಗಿರುವಂತೆ ಅಂದಗೊಳಿಸಿಕೊಡುವುದೇ ಈ ಸಲೂನ್‌ಗಳ ಫುಲ್‌ಟೈಂ ಕೆಲಸ.
ಬರೀ ನೇಲ್ ಸಲೂನ್‌ಗಳಲ್ಲ, ನೈಲ್ ಸಲೂನ್ ಅಂಡ್ ಸ್ಪಾ, ನೇಲ್ ಬಾರ್ ಮುಂತಾದ ಸ್ಟೈಲಿಶ್ ಹೆಸರುಗಳಲ್ಲಿ ಇವು ಕಾರ್ಯನಿರ್ವಹಿಸುತ್ತವೆ. ಇಲ್ಲಿ ಕೆಲಸ ಮಾಡುವವರನ್ನು ನೇಲ್ ಟೆಕ್ನಿಶಿಯನ್ಸ್ ಎಂದು ಕರೆಯುತ್ತಾರೆ! ಯಾವುದೋ ಪರದೇಶದ ಬಗ್ಗೆ ಮಾತನಾಡುತ್ತಿದ್ದೀನೆಂದು ಭಾವಿಸಬೇಡಿ, ಮುಂಬೈ, ದೆಹಲಿ, ಪಂಜಾಬ್ ಅಷ್ಟೇ ಏಕೆ, ನಮ್ಮ ಬೆಂಗಳೂರಿನಲ್ಲೂ ಹತ್ತಾರು ನೇಲ್ ಸಲೂನ್ ಆ್ಯಂಡ್ ಸ್ಪಾಗಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಬೆರಳ ತುದಿಯೇ ಜಗತ್ತು ಕಾಣುವ ಇಂದಿನ ಜಮಾನದಲ್ಲಿ ಬೆರಳ ತುದಿಯೂ ಜಗತ್ತಿಗೆ ಕಾಣಬೇಡವೇ?
- ರೇಶ್ಮಾ