ದಿಲ್ ಎಕ್ಸ್ಪ್ರೆಸ್

ಕಾರ್ಡಿಯೋ ವಾಸ್ಕುಲರ್ ಡಿಸೀಸ್(ಸಿಡಿ), ಹೃದಯದ ರಕ್ತನಳಿಕೆಯಲ್ಲಿ ಕಾಣಿಸಿಕೊಳ್ಳುವಂಥ ಸಮಸ್ಯೆ. ಇಂದು ವಿಶ್ವಾದ್ಯಂತ ಅತಿಹೆಚ್ಚು ಸಾವಿಗೆ ಕಾರಣವಾಗುತ್ತಿರುವ ಕಾಯಿಲೆಯಾಗಿದೆ. ಹೀಗಾಗಿ ಇದರ ಕುರಿತು ಮುಂಜಾಗ್ರತೆ ಅನುಸರಿಸುವುದು ಅತ್ಯಗತ್ಯ.
ಮನೆ ಪರಿಸರ
ಮೊದಲಿಗೆ ನಿಮ್ಮ ಮನೆಯಿಂದಲೇ ಆರೋಗ್ಯಕರ ಪರಿಸರ ನಿರ್ಮಾಣದ ಕಡೆ ಗಮನ ನೀಡಿ. ಹೃದಯದ ಆರೋಗ್ಯಕ್ಕೆ ಪೂರಕ ಪರಿಸರ ನಿರ್ಮಿಸಲು ಕೆಲವು ಬದಲಾವಣೆ ಮಾಡಬೇಕಾಗುತ್ತದೆ.
ಹೆಚ್ಚು ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಂಶ ಇರುವಂಥ ಆಹಾರ ಪದಾರ್ಥಗಳನ್ನು ಹೊರಗಿನಿಂದ ತಂದು ಮನೆಯಲ್ಲಿ ಶೇಖರಿಸಿ ತಿನ್ನುವುದನ್ನು ಕಡಿಮೆ ಮಾಡಿ. ಬದಲಿಗೆ ತಾಜಾ ಹಣ್ಣುಗಳು, ತರಕಾರಿಗಳನ್ನು ನಿತ್ಯದ ಆಹಾರ ಕ್ರಮಗಳಲ್ಲಿ ರೂಢಿಸಿಕೊಳ್ಳಿ. ಮನೆಯಲ್ಲೇ ಉತ್ತಮ ಆಹಾರವನ್ನು ಸಿದ್ಧಪಡಿಸಿ ಸೇವಿಸಿ. ಕಚೇರಿ ಹಾಗೂ ಶಾಲೆಗೆ ಮನೆಯಿಂದ ಕೊಂಡೊಯ್ದ ಆಹಾರ ಸೇವಿಸಿದರೆ ಒಳಿತು.
ಮನೆಯಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸಿ. ಇದು ಕೇವಲ ನಿಮ್ಮ ಆರೋಗ್ಯವನ್ನು ಮಾತ್ರ ಹಾಳು ಮಾಡುವುದಿಲ್ಲ, ನಿಮ್ಮ ಮಕ್ಕಳ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಧೂಮಪಾನ ಬಿಟ್ಟಲ್ಲಿ ನಿಮ್ಮ ಮಕ್ಕಳಿಗೂ ಉತ್ತಮ ಸಂದೇಶ ನೀಡಿದಂತಾಗುತ್ತದೆ.
ಹೆಚ್ಚುಕಾಲ ಕುಳಿತು ಟಿವಿ ನೋಡುವುದನ್ನು ಕಡಿಮೆ ಮಾಡಿ. ಬದಲಾಗಿ ಆರೋಗ್ಯಕರ ಚಟುವಟಿಕೆಗಳಾದ ಸೈಕ್ಲಿಂಗ್, ವಾಕಿಂಗ್ ಮತ್ತು ಗಾರ್ಡನ್ನಲ್ಲಿ ಆಟವಾಡುವುದನ್ನು ರೂಢಿಸಿಕೊಳ್ಳಿ.
ಆಗಾಗ್ಗೆ ವೈದ್ಯರಲ್ಲಿ ಭೇಟಿ ನೀಡಿ ರಕ್ತದೊತ್ತಡ, ಕೊಲೆಸ್ಟ್ರಾಲ್ ಹಾಗೂ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಜತೆಗೆ ತೂಕ ಮತ್ತು ಬಾಡಿ ಮಾಸ್ ಇಂಡೆಕ್ಸ್ ಕುರಿತಾಗಿಯೂ ಗಮನವಿರಲಿ. ಈ ಮೂಲಕ ಸಮಸ್ಯೆಗೆ ತುತ್ತಾಗುವ ಕುರಿತಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ. ಒಮ್ಮೆ ನಿಮ್ಮಲ್ಲಿನ ಸಿಡಿ ಸಮಸ್ಯೆಗೆ ತುತ್ತಾಗುವ ಸಂಭಾವ್ಯತೆಯ ಅರಿವು ಮೂಡಿದಲ್ಲಿ, ಕೆಲ ಅಗತ್ಯ ಕ್ರಮ ಹಾಗೂ ಹೊಂದಾಣಿಕೆಗಳನ್ನು ತಂದುಕೊಳ್ಳುವ ಮೂಲಕ ಅಪಾಯದಿಂದ ಪಾರಾಗಬಹುದು.
ಸಮುದಾಯ
ಪ್ರತಿಯೊಬ್ಬರೂ ಉತ್ತಮ ಪರಿಸರ ಕಾಪಾಡಿಕೊಳ್ಳುವ ಮೂಲಕ ತಮ್ಮ ಜತೆಗೆ, ಅಕ್ಕಪಕ್ಕದವರ ಹೃದಯದ ಆರೋಗ್ಯದ ಕುರಿತೂ ಕಾಳಜಿ ವಹಿಸಬೇಕಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳುವುದು. ಬೀದಿ ದೀಪಗಳು, ಉತ್ತಮ ಫುಟ್ಪಾತ್ ಹಾಗೂ ಆಟದ ಮೈದಾನಗಳನ್ನು ನಿರ್ಮಿಸಿದಲ್ಲಿ ನಾವು ವಾಸಿಸುವಂಥ ಸ್ಥಳದಲ್ಲಿ ಉತ್ತಮ ಆರೋಗ್ಯಕರ ಪರಸರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಶಾಲೆ, ಕೆಲಸ, ಆಸ್ಪತ್ರೆ ಹಾಗೂ ವೈದ್ಯಕೀಯ ನೆರವು ಲಭ್ಯವಾಗುವಂಥ ಪರಿಸರ ನಿರ್ಮಾಣ ಹಾಗೂ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯಕರ ಆಹಾರ ಪದಾರ್ಥಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು. ಈ ಸಲುವಾಗಿ ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು.
ನೀವು ಕೆಲಸ ಮಾಡುವ ಸ್ಥಳಕ್ಕೆ ಅಥವಾ ಶಾಲೆಗಳಿಗೆ ಸೈಕಲ್ ಅಥವಾ ನಡಿಗೆಯ ಮೂಲಕ ತೆರಳುವುದು ಉತ್ತಮ.
ಲಿಫ್ಟ್ಗಳ ಬದಲಾಗಿ ಮೆಟ್ಟಿಲನ್ನು ಹತ್ತಿಳಿಯುವುದು.
ದೇಶದ ಹೊಣೆ
ಸರ್ಕಾರವೂ ಜನರ ಆರೋಗ್ಯ ಕಾಪಾಡುವಲ್ಲಿ ಜವಾಬ್ದಾರಿ ಮೆರೆಯಬೇಕಿದೆ.
ಫಾಸ್ಟ್ಫುಡ್ ಕುರಿತಾದ ಟೆಲಿವಿಷನ್ ಮತ್ತು ರೇಡಿಯೊ ಜಾಹೀರಾತುಗಳನ್ನು ನಿಯಂತ್ರಿಸುವುದು.
ಅನಾರೋಗ್ಯಕರ ಆಹಾರಗಳ ಮೇಲೆ ತೆರಿಗೆ ಹೆಚ್ಚಿಸಿ ಸ್ಥಳೀಯ ಹಣ್ಣು, ತರಕಾರಿ ಬೆಳೆಯುವವರಿಗೆ ನೆರವಾಗುವುದು.
ತಂಬಾಕು ಸೇವನೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು ಪ್ರಮುಖವಾಗಿ ತಂಬಾಕು ಮಾರಾಟ ಮತ್ತು ಜಾಹೀರಾತನ್ನು ಸಂಪೂರ್ಣ ನಿಷೇಧಿಸುವುದು.
-ಡಾ. ದೀಪಕ್ ಕೃಷ್ಣಸ್ವಾಮಿ,
ಸಕ್ರಾವರ್ಲ್ಡ್ ಹಾಸ್ಪಿಟಲ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


