

ಜಿನೀವಾ:ನೇಪಾಳ ರಾಜಕೀಯ ಪ್ರಗತಿ ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಭಾರತ
ನೂತನ ಸಂವಿಧಾನ ಜಾರಿಯಿಂದಾಗಿ ನಡೆಯುತ್ತಿರುವ ಪ್ರತಿಭಟನೆ ಪರಿಣಾಮ ನೇಪಾಳದಲ್ಲಿ ಉಂಟಾಗಿರುವ ರಾಜಕೀಯ ಪ್ರಗತಿಯ ಕೊರತೆಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.
ರಾಜಕೀಯ ಪ್ರಗತಿ ಕೊರತೆ ಎದುರಾಗಿದೆಯಾದರೂ, ಅಲ್ಲಿನ ಶಾಂತಿ, ಸುಸ್ಥಿರತೆ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭಾರತ ಭರವಸೆ ನೀಡಿದೆ. ವಿಶ್ವ ಸಂಸ್ಥೆಯ ಹೈಕಮಿಷನರ್ ಕಚೇರಿಯಲ್ಲಿ ನಡೆದ ಸಾರ್ವತ್ರಿಕ ನಿಯತಕಾಲಿಕ ವಿಮರ್ಶೆಯ (ಯುಪಿಆರ್) ನ 23 ನೇ ಅಧಿವೇಶನದಲ್ಲಿ ಭಾರತ ಈ ಹೇಳಿಕೆ ನೀಡಿದೆ.
ನೇಪಾಳದ ಉಪಪ್ರಧಾನಿ ನೇತೃತ್ವದ ನಿಯೋಗ ಭಾರತಕ್ಕೆ ಭೇಟಿ ನೀಡಿ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವ ಕ್ರಮವನ್ನು ಸ್ವಾಗತಿಸಿರುವ ಭಾರತ, ರಾಜಕೀಯ ಸ್ಥಿತ್ಯಂತರದ ಪರಿಣಾಮ ಭೂಕಂಪದ ನಂತರ ನೇಪಾಳಕ್ಕೆ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ.
ನೇಪಾಳದಲ್ಲಿ ಹೊಸ ಸಂವಿಧಾನ ಜಾರಿಯಾದ ಮೇಲೆ ಅತಿ ಹೆಚ್ಚು ಪ್ರತಿಭಟನೆಗಳು ನಡೆದಿದ್ದು 45 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ನೇಪಾಳ ಎದುರಿಸುತ್ತಿರುವ ರಾಜಕೀಯ ಪ್ರಗತಿ ಕೊರತೆಯ ಬಗ್ಗೆ ಭಾರತ ಆತಂಕಗೊಂಡಿದೆ ಎಂದು ಹೇಳಿದೆ. ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲು ನೇಪಾಳಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಅಲ್ಲಿನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭಾರತ ತಿಳಿಸಿದೆ.