

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಮಾರಾಟ ಮಾಡುವ ಅಮೆರಿಕ ನಿರ್ಧಾರದ ವಿರುದ್ಧ ಭಾರತ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ಯುದ್ಧ ವಿಮಾನಕ್ಕಾಗಿ ಪಾಕಿಸ್ತಾನ ಸರ್ಕಾರ ಪಟ್ಟು ಹಿಡಿದಿದೆ.
ಮೂಲಗಳ ಪ್ರಕಾರ ಪಾಕಿಸ್ತಾನಕ್ಕೆ ಸುಮಾರು 700 ಮಿಲಿಯನ್ ಡಾಲರ್ ವೆಚ್ಚದ ಎಫ್-16 ಯುದ್ಧ ವಿಮಾನ ಮಾರಾಟ ಮಾಡುವ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಭಾರತದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಭಾರತದ ಒತ್ತಡಕ್ಕೆ ಮಣಿದು ಮತ್ತೆ ಅಮೆರಿಕ ಸರ್ಕಾರ ಎಲ್ಲಿ ತನ್ನ ನಿರ್ಧಾರವನ್ನು ಬದಲಿಸುತ್ತದೆಯೋ ಎಂದು ಎಣಿಸಿರುವ ಪಾಕಿಸ್ತಾನ ತನ್ನ ನೆಲದಲ್ಲಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಎಫ್-16 ಯುದ್ಧ ವಿಮಾನ ಅತ್ಯಗತ್ಯ ಎಂದು ಹೇಳಿದೆ.
ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿರುವಂತೆ ಅಮೆರಿಕದಲ್ಲಿರುವ ಪಾಕಿಸ್ತಾನ ಸರ್ಕಾರದ ಪ್ರತಿನಿಧಿಗಳು ಉಗ್ರ ವಿರೋಧಿ ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯಲು ಎಫ್-16 ಯುದ್ಧ ವಿಮಾನ ಖರೀದಿ ಅನಿವಾರ್ಯವಾಗಿದೆ ಎಂದು ಅಮೆರಿಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದೆ. ಇದಕ್ಕೆ ಅಮೆರಿಕ ಸರ್ಕಾರದ ಪ್ರತಿನಿಧಿಗಳೂ ಕೂಡ ಸಕಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಸಲಹೆಗಾರ ಸರ್ತಾಜ್ ಎಜಾಜ್ ಅವರು ಅಮೆರಿಕ ನಿಲುವನ್ನು ಶ್ಲಾಘಿಸಿದ್ದಾರೆ. ಮತ್ತು ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಚಿತ್ರಣ ನೀಡುವಂತೆ ಒಬಾಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಒಟ್ಟಾರೆ ಅಮೆರಿಕದಿಂದ ಎಫ್-16 ಯುದ್ಧ ವಿಮಾನವನ್ನು ಶತಾಯಗತಾಯ ಖರೀದಿ ಮಾಡಲೇಬೇಕು ಎಂದು ನಿರ್ಧರಿಸಿರುವ ಪಾಕಿಸ್ತಾನ ಸರ್ಕಾರ ಉಗ್ರ ಹೆಸರಿನಲ್ಲಿ ಖರೀದಿ ಒಪ್ಪಂದ ಪೂರ್ಣಗೊಳಿಸುವ ಮೂಲಕ ಭಾರತಕ್ಕೆ ಪರೋಕ್ಷ ಟಾಂಗ್ ನೀಡಲು ಸಜ್ಜಾಗಿದೆ.