

ಢಾಕಾ: ಪವಿತ್ರ ರಂಜಾನ್ ಸಾಮೂಹಿಕ ಪ್ರಾರ್ಥನೆ ವೇಳೆ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಢಾಕಾದ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಇಂದು ಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ಈ ದಾಳಿ ನಡೆದಿದ್ದು, ಬಾಂಬ್ ದಾಳಿ ಬಳಿಕ ಶಸ್ತ್ರಸಜ್ಜಿತ ಉಗ್ರರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಅಲ್ಲದೆ ಭದ್ರತಾ ಸಿಬ್ಬಂದಿಗಳತ್ತ ಉಗ್ರರು ಕೈಬಾಂಬ್ ಗಳನ್ನು ಎಸೆದಿದ್ದು, ಈ ವೇಳೆ ಹಲವು ಪೊಲೀಸರಿಗೆ ಗಾಯಗಳಾಗಿವೆ. ಬಾಂಗ್ಲಾ ಸೈನಿಕರ ದಾಳಿ ತಪ್ಪಿಸಿಕೊಳ್ಳುವ ವೇಳೆ ಉಗ್ರರು ಸ್ಥಳೀಯ ಶಾಲೆ ಮೇಲೆ ಬಾಂಬ್ ಎಸೆದಿದ್ದು, ಶಾಲಾ ಆವರಣದಲ್ಲಿ ಉಗ್ರರು ಅವಿತಿದ್ದಾರೆ ಎಂದು ತಿಳಿದುಬಂದಿದೆ. ಇಂದು ರಜಾ ದಿನವಾದ್ದರಿಂದ ಶಾಲೆಯಲ್ಲಿ ಮಕ್ಕಳಿರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ. ಮೂಲಗಳ ಪ್ರಕಾರ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.
ಓರ್ವ ಉಗ್ರ ಹತ್ಯೆ ಮತ್ತೋರ್ವ ಜೀವಂತ ಸೆರೆ
ಇಂದು ದಾಳಿ ನಡೆಸಿದ ಉಗ್ರರ ಪೈಕಿ ಓರ್ವ ಉಗ್ರನನ್ನು ಭದ್ರತಾ ಸಿಬ್ಬಂದಿಗಳು ಹೊಡೆದುರುಳಿಸಿದ್ದು, ಮತ್ತೋರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಬಾಂಗ್ಲಾ ಸೈನಿಕರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಮಹಬುಬೂರ್ ರೆಹಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಧಾರ್ಮಿಕ ಮುಖಂಡನೇ ಪ್ರಮುಖ ಉಗ್ರರ ಗುರಿ
ಬಾಂಗ್ಲಾ ಗುಪ್ತಚರ ಮೂಲಗಳ ಪ್ರಕಾರ ದಾಳಿ ನಡೆಸಿದ ಉಗ್ರರು ಕಿಶೋರ್ ಘಂಜಡ್ ನಲ್ಲಿನ ಧಾರ್ಮಿಕ ಮುಖಂಡನನ್ನು ಕೊಲ್ಲಲೆಂದೇ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಪ್ರಭಾವಿ ಮುಸ್ಲಿಂ ಮುಖಂಡ ಮತ್ತು ಧಾರ್ಮಿಕ ಗುರು ಟಾರ್ಗೆಟ್ ಆಗಿದ್ದು, ಸಾಮೂಹಿಕ ಪ್ರಾರ್ಥನೆ ವೇಳೆ ಅವರು ಕೂಡ ಇದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರಧಾನ ಧರ್ಮಗುರು ಅಪಾಯದಿಂದ ಪಾರಾಗಿದ್ದು, ಅವಿತಿರುವ ಉಗ್ರರಿಗಾಗಿ ಸೈನಿಕರು ಶೋಧ ನಡೆಸುತ್ತಿದ್ದಾರೆ.