

ನವದೆಹಲಿ: ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಭಾರತ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾಕ್ಕೆ ಭಾರಿ ಮುಖಭಂಗವಾಗಿದ್ದು, ಪಾಕಿಸ್ತಾನವನ್ನೂ ಎನ್ ಎಸ್ ಜಿ ಸೇರಿಸಬೇಕು ಎನ್ನುವ ಅದರ ವಾದಕ್ಕೆ ತೀವ್ರ ಹಿನ್ನಡೆಯಾಗಿದೆ.
ಪಾಕಿಸ್ತಾನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾಕ್ಕೆ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವ ರಹಸ್ಯ ವಿಚಾರವನ್ನು ಅಮೆರಿಕದ ತನಿಖಾಧಿಕಾರಿಗಳು ಬಯಲಿಗೆಳೆದಿದ್ದು, ಇದೀಗ ಭಾರತದೊಂದಿಗೆ ಪಾಕಿಸ್ತಾನವನ್ನೂ ಎನ್ ಎಸ್ ಜಿ ಒಕ್ಕೂಟಕ್ಕೆ ಸೇರಿಸುವ ಚೀನಾ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ. ಇದೀಗ ವಿಶ್ವಸಮುದಾಯದ ಎದುರು ಚೀನಾ ಇಕ್ಕಟ್ಟಿಗೆ ಸಿಲುಕಿದ್ದು, ಪರಮಾಣು ಒಕ್ಕೂಟಕ್ಕೆ ಪಾಕಿಸ್ತಾನವನ್ನು ಸೇರಿಸುವ ತನ್ನ ನಿಲುವಿಗೆ ಹೇಗೆ ಬದ್ಧವಾಗಿರುತ್ತದೆ ಎಂಬ ಕುತೂಹಲ ಮೂಡಿದೆ.
ನಿನ್ನೆಯಷ್ಟೇ ಅಮೆರಿಕ ಮತ್ತು ವಿಶ್ವಸಂಸ್ಥೆಯ ಮೂಲಗಳು ಪಾಕಿಸ್ತಾನ ಉತ್ತರ ಕೊರಿಯಾ ದೇಶಕ್ಕೆ ಅಣ್ವಸ್ತ್ರ ಮಾರಾಟದ ಕುರಿತಂತೆ ವರದಿ ಬಹಿರಂಗ ಪಡಿಸಿತ್ತು. ಎನ್ಎಸ್ ಜಿ ಸದಸ್ಯತ್ವ ಪಡೆಯಲು ಯತ್ನಿಸುತ್ತಿರುವ ಪಾಕಿಸ್ತಾನ ನಿಯಮ ಉಲ್ಲಂಘಿಸಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ ಮಾಡುತ್ತಿದೆ. ಪಾಕಿಸ್ತಾನ ಶಕ್ತಿ ಆಯೋಗ (ಪಿಎಇಸಿ) ನಿರಂತರವಾಗಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ತಯಾರಿ ವಸ್ತುಗಳ ಸರಬರಾಜು ಮಾಡುತ್ತಿದೆ ಎಂದು ಅಣ್ವಸ್ತ್ರಗಳ ಮಾರಾಟದ ಮೇಲೆ ನಿಗಾ ವಹಿಸುವ ವಿಶ್ವಸಂಸ್ಥೆಯ ತಂಡದಲ್ಲಿರುವ ಉನ್ನತ ಮೂಲಗಳು ತಿಳಿಸಿದ್ದವು.