

ಇಸ್ಲಾಮಾಬಾದ್: ಪಾಕಿಸ್ತಾನದ ಭದ್ರತೆಗೆ ತೊಡಕಾಗಿರುವ ಭಾರತದ ವಿರುದ್ಧ ಮುಜಾಹಿದ್ದೀನ್ ಗಳ ದಾಳಿಗೆ ಮಾರ್ಗ ತೆರೆಯಿರಿ ಎಂದು ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್ ಹೇಳಿದ್ದಾನೆ.
ಉರಿ ಉಗ್ರ ದಾಳಿ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸೀಮಿತ ದಾಳಿ ಹಿನ್ನಲೆಯಲ್ಲಿ ಮಾತನಾಡಿರುವ ಉಗ್ರ ಮಸೂದ್ ಅಜರ್, ತನ್ನ ಸಂಘಟನೆಯ ಮುಖವಾಣಿ ಅಲ್ ಕಲಮ್ ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. "ಪಾಕಿಸ್ತಾನ ಸರ್ಕಾರಕ್ಕೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಕೊರತೆ ಕಾಡುತ್ತಿದ್ದು, ಭವಿಷ್ಯದಲ್ಲೇ ಇದೇ ಪಾಕಿಸ್ತಾನದ ಹಿತಾಸಕ್ತಿಗೆ ದೊಡ್ಡ ಪರಿಣಾಮ ಬೀರಲಿದೆ. ಪಾಕಿಸ್ತಾನವನ್ನು ದೋಚುವ ಮತ್ತು ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಐತಿಹಾಸಿಕ ಅವಕಾಶವನ್ನು ಪಾಕಿಸ್ತಾನ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾನೆ.
"ಪಾಕಿಸ್ತಾನ ಸರ್ಕಾರ ಯಾವುದೇ ದೊಡ್ಡ ಪ್ರಮಾಣದ ಸೈನಿಕ ಕಾರ್ಯಾಚರಣೆ ನಡೆಸುವುದು ಬೇಡ. ಅದರ ಬದಲಿಗೆ ಕೇವಲ ನಮ್ಮ ಮುಜಾಹಿದ್ದೀನ್ ಯೋಧರಿಗೆ ಭಾರತದ ವಿರುದ್ಧ ದಾಳಿ ಮಾಡುವ ಅವಕಾಶ ಮಾಡಿಕೊಟ್ಟರೆ ಸಾಕು. ಆಗ ದೇವರೇ 1971ರ ಕಹಿ ನೆನಪನ್ನು ಮರೆಸುವ ಅವಕಾಶ ಮಾಡಿಕೊಡುತ್ತಾನೆ. 2016ರಲ್ಲಿ ಭಾರತದ ವಿರುದ್ಧ ದಾಳಿ ಮಾಡಿ ಜಯಭೇರಿ ಭಾರಿಸಿ ಈ ಹಿಂದಿನ ಎಲ್ಲ ಕಹಿ ನೆನಪುಗಳನ್ನು ಮುಜಾಹಿದ್ದೀನ್ ಗಳೇ ಮರೆಸುತ್ತಾರೆ. ಎರೆ ಹುಳುಗಳನ್ನು ಹೊಸಕಿ ಹಾಕಿದ ಹಾಗೆ ಭಾರತವನ್ನು ಹೊಸಕಿ ಹಾಕುತ್ತಾರೆ ಎಂದು ಹೇಳಿದ್ದಾನೆ.
ನಿನ್ನೆಯಷ್ಟೇ ಪಾಕಿಸ್ತಾನ ಖ್ಯಾತ ಪತ್ರಿಕೆ ದಿ ನೇಷನ್ ತನ್ನ ಸಂಪಾದಕೀಯದಲ್ಲಿ ಪಾಕಿಸ್ತಾನ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಪಾಕಿಸ್ತಾನದ ಭದ್ರತೆಗೆ ತೊಡಕಾಗಿರುವ ಉಗ್ರ ಹಫೀಜ್ ಸಯ್ಯೀದ್ ಹಾಗೂ ಅಜರ್ ಮಸೂದ್ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿತ್ತು. ಅಂತೆಯೇ ಡಾನ್ ಪತ್ರಿಕೆಯ ಪತ್ರಕರ್ತನ ದಿಗ್ಭಂಧನ ಪ್ರಶ್ನಿಸಿದ್ದ ಪತ್ರಿಕೆ. ವರದಿಗಾರನ ಮೇಲೆ ನಿಷೇಧ ಹೇರುವ ಪಾಕಿಸ್ತಾನ ಸರ್ಕಾರ ಸರ್ಕಾರಕ್ಕೆ ಯಕ್ಷ ಪ್ರಶ್ನೆಯಾಗಿರುವ ಇಂತಹ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನಿಸಿತ್ತು. ಇದು ಪಾಕಿಸ್ತಾನ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು.