

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಮುಂದುವರೆದಿರುವಂತೆಯೇ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಸರಣಿ ಕೂಡ ಮುಂದುವರೆದಿದೆ.
ಈ ಹಿಂದೆ ನಾಲ್ಕು ಮಂದಿ ಮಹಿಳೆಯರು ಟ್ರಂಪ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಇದೀಗ ಈ ಪಟ್ಟಿಗೆ ಮತ್ತಿಬ್ಬರು ಮಹಿಳೆಯರ ಸೇರ್ಪಡೆಯಾಗಿದ್ದು, 90ರ ದಶಕದಲ್ಲಿ ಟ್ರಂಪ್ ತಮಗೂ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ. 1990ರ ದಶಕದಲ್ಲಿ ಮ್ಯಾನ್ ಹಟನ್ ನಲ್ಲಿರುವ ನೈಟ್ ಕ್ಲಬ್ ನಲ್ಲಿ ತಾನು ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಾಗ ವ್ಯಕ್ತಿಯೊಬ್ಬ ದಿಢೀರ್ ತನ್ನ ಬಳಿಗೆ ಬಂದು ನಾನು ತೊಟ್ಟಿದ್ದ ಟೀಶರ್ಟ್ ಒಳಗೆ ಕೈಹಾಕಿದ. ಇದರಿಂದ ಗಾಬರಿಗೊಂಡ ನಾನು ಆತನ್ನು ತಳ್ಳಿ ಅಲ್ಲಿಂದ ಓಡಿ ಹೋದೆ. ಬಳಿಕ ಆ ವ್ಯಕ್ತಿ ಡೋನಾಲ್ಡ್ ಟ್ರಂಪ್ ಎಂದು ತಿಳಿಯಿತು ಎಂದು 46 ವರ್ಷದ ಕ್ಯಾಲಿಫೋರ್ನಿಯಾ ಮೂಲದ ಫೋಟೋಗ್ರಾಫರ್ ಕ್ರಿಸ್ಟಿನ್ ಆ್ಯಂಡರ್ಸನ್ ಆರೋಪಿಸಿದ್ದಾರೆ.
ಅಂತೆಯೇ ಮತ್ತೊಂದು ಆರೋಪದಂತೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಮಾಜಿ ಅಪ್ರೆಂಟಿಸ್ ಸಮ್ಮರ್ ಜೆರ್ವೋಸ್ ಎಂಬುವವರು, 2007ರಲ್ಲಿ ತಾವು ಟ್ರಂಪ್ ಸಂಸ್ಥೆಯಲ್ಲಿ ಅಪ್ರೆಂಟಿಸ್ ಶಿಪ್ ಗಾಗಿ ತೆರಳಿದ್ದೆ. ನ್ಯೂಯಾರ್ಕ್ ನಲ್ಲಿರುವ ಬೆವರ್ಲಿ ಹಿಲ್ಸ್ ನಲ್ಲಿರುವ ಟ್ರಂಪ್ ಕಚೇರಿಯಲ್ಲಿ ಊಟಕ್ಕೆ ತೆರಳಿದ್ದಾಗ ಟ್ರಂಪ್ ಬಲವಂತವಾಗಿ ತನಗೆ ಮುತ್ತಿಟ್ಟಿದ್ದರು. ಅಲ್ಲದೆ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು. ಆ ಬಳಿಕವೇ ನನಗೆ ಟ್ರಂಪ್ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಿ ಆಗಾಗ ನನಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ನಾನು ಒಂದು ದಿನ ಟ್ರಂಪ್ ಗೆ ನೇರವಾಗಿ ನೀವು ನನಗೆ ಕರೆ ಮಾಡಬೇಡಿ ಎಂದು ಹೇಳಿ ಸಂಸ್ಥೆಯಿಂದ ಹೊರಬಂದೆ ಎಂದು ಆರೋಪಿಸಿದ್ದಾರೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದ್ದು, ಟ್ರಂಪ್ ಅವರ ವಕ್ತಾರರು ಈ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನ ಬೇಕಾದ್ದನ್ನು ಬರೆಯಬಹುದು. ಅವರು ಬರೆದದ್ದೇಲ್ಲಾ ಸತ್ಯವೆಂದು ಹೇಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.