

ವಿಶ್ವಸಂಸ್ಥೆ: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಿಂದ ಶಾಂತಿಯುತ ಸ್ಥಿತಿ ಹದಗೆಡುತ್ತಿದ್ದು, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ವಿಶ್ವಸಂಸ್ಥೆ ಕಾರ್ಯವೈಖರಿ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.
ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯ ನೂತನ ಮುಖಂಡ ಹೈಬತ್-ಉಲ್ಲಾಹ್ ನಿಗೆ ತಪ್ಪಿಸಿಕೊಳ್ಳಲು ವಿಶ್ವಸಂಸ್ಥೆ ಅವಕಾಶ ನೀಡಿದೆ ಎಂದು ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಾಲಿಬಾನ್ ಉಗ್ರ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದ್ದ ವಿಶ್ವಸಂಸ್ಥೆಯ ಕಾರ್ಯವೈಖರಿ ಬಗ್ಗೆಯೂ ಭಾರತದ ಖಾಯಂ ಪ್ರತಿನಿಧಿ ತನ್ಮಯ ಲಾಲ್ ಬುಧವಾರ ಅಫ್ಘಾನಿಸ್ತಾನದ ಬಗ್ಗೆ ವಿಶ್ವಸಂಸ್ಥೆ ಮಂಡಳಿಯಲ್ಲಿ ನಡೆದ ಸಭೆಯ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದು, ತಾಲಿಬಾನ್ ಉಗ್ರ ಸಂಘಟನೆಯ ಮುಖಂಡನನ್ನು ಈ ವರೆಗೂ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸದೆ ಇರುವುದು ನಮಗೆ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಕಾರ್ಯವೈಖರಿ ಉಗ್ರ ಸಂಘಟನೆಗಳು ಮಾಡುವ ಕೃತ್ಯಗಳಿಗೆ ಆ ಸಂಘಟನೆಗಳ ನಾಯಕರು ಹೊಣೆಗಾರರನ್ನಾಗಿ ಮಾಡದೆ ಇರಲು ಯೋಚಿಸುತ್ತಿರುವಂತಿದೆ ಎಂದಿರುವ ತನ್ಮಯ ಲಾಲ್, ಅಂತಾರಾಷ್ಟ್ರೀಯ ಶಾಂತಿ ಹಾಗು ಭದ್ರತೆ ವಿಚಾರವಾಗಿ ನಾವು ನಡೆದುಕೊಳ್ಳುತ್ತಿರುವ ರೀತಿ ಇದೇನಾ ಎಂದು ವಿಶ್ವಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ವಿರುದ್ಧದ ನಿಷೇಧವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ ಎಂದಿರುವ ಭಾರತದ ಪ್ರತಿನಿಧಿ, ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದಕ್ಕೆ ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಅಫ್ಘಾನಿಸ್ತಾನದ ನೆರೆಯ ರಾಷ್ಟ್ರಗಳು ಭಯೋತ್ಪಾದನೆಗೆ ಸುರಕ್ಷಿತ ವಾತಾವರಣ ಕಲ್ಪಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಪಾಕಿಸ್ತಾನದ ಹೆಸರು ಹೇಳದೇ ತನ್ಮಯ ಲಾಲ್ ಎಚ್ಚರಿಕೆ ನೀಡಿದ್ದಾರೆ.