ಯುದ್ಧಕ್ಕೆ ಮುಂದಾದರೆ ಭಾರತವನ್ನು ಸರ್ವನಾಶ ಮಾಡುತ್ತೇವೆ: ಪಾಕ್ ರಕ್ಷಣಾ ಸಚಿವ

ನಮ್ಮ ವಿರುದ್ಧ ಭಾರತ ಯಾವುದೇ ರೀತಿಯ ಯುದ್ಧಕ್ಕೆ ಮುಂದಾದರೆ ಖಂಡಿತಾ ಅದನ್ನು ಸರ್ವನಾಶ ಮಾಡುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ...
ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ)
ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ)
Updated on: 

ಇಸ್ಲಾಮಾಬಾದ್: ನಮ್ಮ ವಿರುದ್ಧ ಭಾರತ ಯಾವುದೇ ರೀತಿಯ ಯುದ್ಧಕ್ಕೆ ಮುಂದಾದರೆ ಖಂಡಿತಾ ಅದನ್ನು ಸರ್ವನಾಶ ಮಾಡುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಿ ನಾಯಕರ ಭಾರತ ವಿರೋಧಿ ಮತ್ತು ಪ್ರಚೋದನಾತ್ಮಕ ಹೇಳಿಕೆಗಳ ಸರಣಿ ಮುಂದುವರೆದಿದ್ದು, ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಎಜೀಜ್ ಬಳಿಕ ಇದೀಗ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಭಾರತದ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಖ್ವಾಜಾ, ನಾವು ಎಲ್ಲ ರೀತಿಯ ಪರಿಸ್ಥಿತಿಗಳಿಗೆ ಸಿದ್ಧರಾಗಿದ್ದು, ಭಾರತ ಒಂದು ವೇಳೆ ಯುದ್ಧ ಸಾರಿದರೆ ಖಂಡಿತಾ ಅದನ್ನು ಸರ್ವನಾಶ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇದೆ. ಪಾಕ್ ಸೇನೇ ಎಂತಹುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತ ಪರಮಾಣು ಶಸ್ತ್ರಾಸ್ತ್ರ ಕುರಿತು ಮಾತನಾಡಿದ ಖ್ವಾಜಾ, ನಮ್ಮಲ್ಲಿಯೂ ಕೂಡ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳಿವೆ. ಹಾಗೆಂದ ಮಾತ್ರಕ್ಕೆ ಅವೇನೂ ಪ್ರದರ್ಶನದ ವಸ್ತುಗಳಲ್ಲ. ಸಮಯ ಮತ್ತು ಅನಿವಾರ್ಯತೆ ಸೃಷ್ಟಿಯಾದರೆ ಅವುಗಳ ಬಳಕೆಗೆ ನಾವು ಹಿಂಜರಿಯುವುದಿಲ್ಲ ಎಂದು ಹೇಳಿದರು. ಅಂತೆಯೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಶಸ್ತ್ರಾಸ್ತ್ರ ಕಾರ್ಯಾಚರಣೆ ಸಂಬಂಧ ಹಬ್ಬಿರುವ ಸುದ್ದಿಗಳ ಕುರಿತು ಮಾತನಾಡಿದ ಖ್ವಾಜಾ, ಯಾವುದೇ ದೇಶ ಮತ್ತೊಂದು ದೇಶದ ಗಡಿಯೊಳಗೆ ನುಗ್ಗಿ ಅಷ್ಟು ಸುಲಭವಾಗಿ ಕಾರ್ಯಾಚರಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಪಿಒಕೆಯಲ್ಲಿ ಭಾರತೀಯ ಸೈನಿಕರು ನುಗ್ಗಿದರೆ ಅವರಿಗೆ ತಕ್ಕ ಉತ್ತರ ನೀಡಲು ನಮ್ಮ ವಾಯು ಸೇನೆ ಸಿದ್ಧವಾಗಿದೆ ಎಂದು ಹೇಳಿದರು.

"ಕಾಶ್ಮೀರ ವಿವಾದ ಬಗೆಹರಿಸಲು ಭಾರತ ಮುಂದಾಗುತ್ತಿಲ್ಲ. ಆದರೆ ಪಾಕಿಸ್ತಾನ ಆ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತಿದೆ ಎಂಬುದು ಇಡೀ ವಿಶ್ವಕ್ಕೇ ತಿಳಿದಿದೆ. ಭಾರತದ ನಡೆಯನ್ನು ಯಾವುದೇ ರಾಷ್ಟ್ರ ಕೂಡ ಬೆಂಬಲಿಸುತ್ತಿಲ್ಲ. ಚೀನಾ ಕೂಡ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ. ಉರಿ ಉಗ್ರ ದಾಳಿ ಭಾರತ ಪ್ರಾಯೋಜಿತವಾಗಿದ್ದು, ಪಾಕಿಸ್ತಾನದ ಮೇಲೆ ವಿನಾ ಕಾರಣ ಗೂಬೆ ಕೂರಿಸುತ್ತಿದೆ ಎಂದು ಖ್ವಾಜಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com