ಟ್ರಂಪ್ ಮೆಚ್ಚಿಸಲು ಭಾರತ ನಮ್ಮೊಂದಿಗೆ ದ್ವೇಷಕಟ್ಟಿಕೊಳ್ಳುತ್ತಿದೆ: ಚೀನಾ

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮೇಲೆ ಪ್ರಭಾವ ಬೀರಲು ಹಾಗೂ ಮೆಚ್ಚುಗೆ ಗಳಿಸುವ ಸಲುವಾಗಿ ಡೊಕ್ಲಾಮ್ ವಿಚಾರದ ಸಂಬಂಧ ನಮ್ಮೊಂದಿಗೆ ಭಾರತ ದ್ವೇಷಕಟ್ಟಿಕೊಳ್ಳುತ್ತಿದೆ ಎಂದು ಚೀನಾ ಹೇಳಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌
Updated on: 
ಬೀಜಿಂಗ್: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮೇಲೆ ಪ್ರಭಾವ ಬೀರಲು ಹಾಗೂ ಮೆಚ್ಚುಗೆ ಗಳಿಸುವ ಸಲುವಾಗಿ ಡೊಕ್ಲಾಮ್ ವಿಚಾರದ ಸಂಬಂಧ ನಮ್ಮೊಂದಿಗೆ ಭಾರತ ದ್ವೇಷಕಟ್ಟಿಕೊಳ್ಳುತ್ತಿದೆ ಎಂದು ಚೀನಾ ಹೇಳಿದೆ. 
ಸಿಕ್ಕಿಂ ವಲಯದಲ್ಲಿ ರಸ್ತೆ ನಿರ್ಮಿಸಲು ಚೀನಾ ಮುಂದಾಗಿತ್ತು. ಇದೊಂದು ಅಭಿವೃದ್ಧಿ ಕಾರ್ಯ ಎಂದು ಚೀನಾ ಹೇಳಿದ್ದರೂ ರಸ್ತೆ ನಿರ್ಮಾಣದ ಹೆಸರಿನಲ್ಲಿ ಭಾರತದ ಭೂಭಾಗವನ್ನು ಕಬಳಿಸುವ ಉದ್ದೇಶ ಇರುವುದರಿಂದ ಭಾರತ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. 
ಕೆಲ ದಿನಗಳ ಹಿಂದಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕ ರಾಷ್ಟ್ರಕ್ಕೆ ಭೇಟಿ ನೀಡಿದ ಟ್ರಂಪ್ ಅವರೊಂದಿಗೆ ಐತಿಹಾಸಿಕ ಮಾತುಕತೆ ನಡೆಸಿ ಭಾರತಕ್ಕೆ ವಾಪಸ್ಸಾಗಿದ್ದರು. ಟ್ರಂಪ್ ಹಾಗೂ ಮೋದಿಯವರ ನಡುವೆ ನಡೆದ ಆತ್ಮೀಯ ಮಾತುಕತೆ ಚೀನಾದ ನೆಮ್ಮದಿಗೆ ಭಂಗ ತಂದಿದೆ. ಇದೀಗ ತನ್ನ ಹೊಟ್ಟೆಕಿಚ್ಚನ್ನು ಹೊರಹಾಕಿರುವ ಚೀನಾ ಟ್ರಂಪ್ ಅವರನ್ನು ಮೆಚ್ಚಿಸುವ ಸಲುವಾಗಿಯೇ ಭಾರತ ಚೀನಾದೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಿದೆ ಎಂದು ಹೇಳಿಕೊಂಡಿದೆ. 
ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಈ ಕುರಿತಂತೆ ಲೇಖನ ಪ್ರಕಟಿಸಿದ್ದು, ಟ್ರಂಪ್ ಅವರನ್ನು ಮೆಚ್ಚಿಸಲು ಭಾರತ ಯತ್ನ ನಡೆಸುತ್ತಿದೆ. ಸಿಕ್ಕಿಂ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು, ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುತ್ತಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಅಮೆರಿಕವನ್ನು ಮೆಚ್ಚಿಸುವುದಕ್ಕಾಗಿ ಭಾರತ ನಡೆದುಕೊಳ್ಳುತ್ತಿರುವ ರೀತಿಗೆ ಮುಂದೆ ಬಾರತ ತಕ್ಕ ಬೆಲೆ ತೆರಬೇಕಾಗುತ್ತದೆ. ಭಾರತ ಏನೇ ಮಾಡಿದರೂ ಟ್ರಂಪ್ ಮನಗೆಲ್ಲುವುದು ಕಷ್ಟ. ಏಕೆಂದರೆ, ಭಾರತವು ಅಮೆರಿಕ ಹಾಗೂ ಚೀನಾದಿಂದ ಬಹಳಷ್ಟು ಹಿಂದೆ ಉಳಿದಿದೆ. 
ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದಾಗ ದೂರವಾಣಿ ಕರೆ ಮೂಲಕ ಅಭಿನಂದಿಸಿದ 5ನೇ ವಿದೇಶಿ ನಾಯಕರು ಮೋದಿಯಾಗಿದ್ದರು. ಹಾಗಿದ್ದರೂ ಇಬ್ಬರ ಭೇಟಿ ಬಹಳ ತಡವಾಗಿ ನಡೆಯಿತು. 20 ರಾಷ್ಟ್ರಗಳ ಮುಖ್ಯಸ್ಥರ ಭೇಟಿ ಬಳಿಕ ಟ್ರಂಪ್-ಮೋದಿ ಭೇಟಿ ನಡೆಯಿತು. ಟ್ರಂಪ್-ಮೋದಿ ಭೇಟಿ ಸಂಪೂರ್ಣ ಯಶಸ್ವಿಯಾಗಿದ್ದರೂ, ಭಾರತಕ್ಕೆ ಇದರ ಪ್ರಯೋಜನ ಮಾತ್ರ ಶೂನ್ಯ ಎಂದು ಹೇಳುವ ಮೂಲಕ ಸಮಾಧಾನಪಟ್ಟುಕೊಳ್ಳುವ ಯತ್ನವನ್ನು ಚೀನಾ ಮಾಡಿದೆ. 
ಭೂತಾನ್-ಭಾರತ-ಚೀನಾ ಪರಸ್ಪರ ಸಂಧಿಸುವ ಸಂಧಿ ಸ್ಥಳ ಎಂದು ಹೇಳಲಾದ ಸಿಕ್ಕಿಂ ವಲಯದ ಡೊಕ್ಲಾಮ್ ಪ್ರದೇಶದ ಮಾಲೀಕತ್ವ ಯಾರದ್ದು ಎಂಬ ಬಗ್ಗೆ ಈಗ ಭಾರತ-ಚೀನಾ ಜಟಾಪಟಿ ಆರಂಭಿಸಿವೆ. ಈ ವಲಯ ಭೂತಾನ್ ಗೆ ಸೇರಿದ್ದು ಎನ್ನಲಾಗಿದ್ದು, ಭೂತಾನ್ ಬೆಂಬಲಕ್ಕೆ ನಿಂತಿರುವ ಭಾರತೀಯ ಸೇನೆಯು, ಡೊಕ್ಲಾಮ್'ಗೆ ತನ್ನ ಸೇನೆಯನ್ನು ರವಾನಿಸಿದೆ. ಇದು ಚೀನಾವನ್ನು ಸಿಟ್ಟಿಗೆಬ್ಬಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com