ಗನ್ ತೋರಿಸಿ ಬಲವಂತದ ಮದುವೆ: ತವರಿಗೆ ಮರಳಲು ಭಾರತೀಯ ಮಹಿಳೆಗೆ ಪಾಕ್ ನ್ಯಾಯಾಲಯ ಅನುಮತಿ
ಗನ್ ತೋರಿಸಿ ಬೆದರಿಕೆಯೊಡ್ಡಿ ಪಾಕಿಸ್ತಾನಿ ಮೂಲಕ ವ್ಯಕ್ತಿಯೊಬ್ಬ ತನ್ನನ್ನು ಮದುವೆಯಾಗಿದ್ದು, ನೆರವಿಗೆ ಧಾವಿಸುವಂತೆ ಭಾರತೀಯ ಹೈ ಕಮಿಷನ್ ಮೊರೆ ಹೋಗಿದ್ದ ಭಾರತೀಯ ಮಹಿಳೆಗೆ ತವರಿಗೆ ಮರಳಲು ಪಾಕಿಸ್ತಾನ ನ್ಯಾಯಾಲಯ ಬುಧವಾರ...
ಇಸ್ಲಾಮಾಬಾದ್: ಗನ್ ತೋರಿಸಿ ಬೆದರಿಕೆಯೊಡ್ಡಿ ಪಾಕಿಸ್ತಾನಿ ಮೂಲಕ ವ್ಯಕ್ತಿಯೊಬ್ಬ ತನ್ನನ್ನು ಮದುವೆಯಾಗಿದ್ದು, ನೆರವಿಗೆ ಧಾವಿಸುವಂತೆ ಭಾರತೀಯ ಹೈ ಕಮಿಷನ್ ಮೊರೆ ಹೋಗಿದ್ದ ಭಾರತೀಯ ಮಹಿಳೆಗೆ ತವರಿಗೆ ಮರಳಲು ಪಾಕಿಸ್ತಾನ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.
ಕೆಲ ದಿನಗಳ ಹಿಂದಷ್ಟೇ 20 ವರ್ಷದ ಭಾರತೀಯ ಮಹಿಳೆ ಉಜ್ಮಾ ಎಂಬುವವರು ಪಾಕಿಸ್ತಾನ ಮೂಲದ ತಾಹಿರ್ ಅಲಿ ಎಂಬಾತ ಗನ್ ತೋರಿಸಿ ಬಲವಂತದಿಂದ ವಿವಾಹವಾಗಿದ್ದು, ಕಿರುಕುಳ ನೀಡುತ್ತಿದ್ದಾನೆಂದು ಆರೋಪ ಮಾಡಿದ್ದರು. ಈ ಸಂಬಂಧ ಪತಿ ತಾಹಿರ್ ಅಲಿ ವಿರುದ್ದ ಇಸ್ಲಾಮಾಬಾದ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ತಾಹಿಲ್ ಅಲಿ ಎಂಬ ಪಾಕಿಸ್ತಾನ ಮೂಲದ ವ್ಯಕ್ತಿ ತನಗೆ ಗನ್ ತೋರಿಸಿ ಬೆದರಿಕೆಯೊಡ್ಡಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡರು. ನನ್ನ ವಲಸೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆಂದು ಹೇಳಿಕೊಂಡಿದ್ದರು. ಅಲ್ಲದೆ, ನೆರವಿಗೆ ಧಾವಿಸುವಂತೆ ಭಾರತೀಯ ರಾಯಭಾರಿ ಕಚೇರಿ ಬಳಿ ಮನವಿ ಮಾಡಿಕೊಂಡಿದ್ದರು.
ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ಇಸ್ಲಾಮಾಬಾದ್ ಹೈಕೋರ್ಟ್'ನ ನ್ಯಾಯಾಧೀಶ ಮೊಹ್ಸಿನ್ ಅಖ್ತರ್ ಕಯಾನಿ ಅವರಿದ್ದ ಪೀಠ, ಉಜ್ಮಾ ಭಾರತಕ್ಕೆ ಮರಳಲು ಅನುಮತಿ ನೀಡಿದ್ದಾರೆ.
ವಿಚಾರಣೆ ವೇಳೆ ತಾಹಿರ್, ಉಜ್ಮಾ ಅವರ ವಲಸೆ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, ಉಜ್ಮಾ ಖಾಸಗಿ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ.
ತಾಹಿರ್ ನೀಡಿದ್ದ ಅರ್ಜಿಯನ್ನು ನ್ಯಾಯಾಲಯ ಉಜ್ಮಾ ಅವರಿಗೆ ಹಸ್ತಾಂತರ ಮಾಡಿದೆ. ಅಲ್ಲದೆ, ಉಜ್ಮಾ ಖಾಸಗಿ ಭೇಟಿಗೆ ಅವಕಾಶ ನೀಡುವಂತೆ ತಾಹಿರ್ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ತಾಹಿರ್ ಭೇಟಿಗೆ ಉಜ್ಮಾ ನಿರಾಕರಿಸುತ್ತಿದ್ದು, ಭೇಟಿಗೆ ಆಕೆಯನ್ನು ಒತ್ತಾಯ ಮಾಡುವಂತಿಲ್ಲ. ವಾಘಾ ಗಡಿಗೆ ಹೋಗುವವರೆಗೂ ಉಜ್ಮಾ ಅವರಿಗೆ ಅಧಿಕಾರಿಗಳು ಭದ್ರತೆ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ ಮೂಲಗಳು ತಿಳಿಸಿವೆ.