

ಇರಾನ್: ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ಬೆಂಬಲಿಸಿ ಹಾಡು ಹಾಡಿದ್ದ ಪ್ರಸಿದ್ಧ ಗಾಯಕ ಹಾಗೂ ಸಂಗೀತಗಾರ ಮೆಹದಿ ಯರಾಹಿಗೆ (Yarrahi)74 ಛಡಿ ಏಟಿನ ಶಿಕ್ಷೆ ನೀಡಲಾಗಿದೆ.
ಈ ಕುರಿತು ಇಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರ ಪರ ವಕೀಲರಾದ ಜಹ್ರಾ ಮಿನೌಯಿ ಫೋಸ್ಟ್ ಮಾಡಿದ್ದು, ಶಿಕ್ಷೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
42 ವರ್ಷದ ಯರಾಹಿ ಅವರನ್ನು ಆಗಸ್ಟ್ 2023ರಲ್ಲಿ ಬಂಧಿಸಲಾಗಿತ್ತು. ತೆಹ್ರಾನ್ ಕ್ರಾಂತಿಕಾರಿ ನ್ಯಾಯಾಲಯದಿಂದ ಎರಡು ವರ್ಷ 8 ತಿಂಗಳ ಜೈಲು ಶಿಕ್ಷೆ ಹಾಗೂ 74 ಛಡಿ ಏಟಿನ ಶಿಕ್ಷೆ ವಿಧಿಸಲಾಗಿತ್ತು.
ಯರಾಹಿ ಇಸ್ಲಾಮಿಕ್ ಸಮಾಜದ ನೈತಿಕತೆ ಮತ್ತು ಪದ್ಧತಿಗಳಿಗೆ ವಿರುದ್ಧವಾದ ಕಾನೂನುಬಾಹಿರ ಹಾಡೊಂದನ್ನು ಬಿಡುಗಡೆ ಮಾಡಿರುವುದಾಗಿ ರಾಜ್ಯದ ನ್ಯೂಸ್ ಏಜೆನ್ಸಿ IRNA 2023ರಲ್ಲಿ ಹೇಳಿತ್ತು. ಅವರ ಪ್ರಸಿದ್ಧ ಹಾಡು "ರೂಸರಿಟೊ" ಬಿಡುಗಡೆಯಾದ ನಾಲ್ಕು ದಿನಗಳ ನಂತರ ಅವರನ್ನು ಬಂಧಿಸಲಾಗಿತ್ತು.
ಯರಾಹಿ ಬಂಧನವಾದ ಕೆಲ ತಿಂಗಳ ನಂತರ, ಇರಾನ್ ನ ನೈತಿಕ ಪೊಲೀಸರ ಕಸ್ಟಡಿಯಲ್ಲಿ ಮೃತಪಟ್ಟಿದ್ದ 22 ವರ್ಷದ ಮಾಹ್ಸಾ ಅಮಿನಿಯ ಒಂದು ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿಇರಾನ್‌ನಾದ್ಯಂತ ಪ್ರತಿಭಟನೆಗಳು ಭುಗಿಲೆದಿದ್ದವು.
ಶಿರಸ್ತ್ರಾಣವನ್ನು ಸರಿಯಾಗಿ ಧರಿಸಿಲ್ಲ ಎಂದು ಆರೋಪಿಸಿ ಮಾಹ್ಸಾ ಅಮಿನಿಯ ಅವರನ್ನು ಬಂಧಿಸಲಾಗಿತ್ತು. ಹಿಜಾಬ್ ಕಾನೂನು ಮತ್ತು ಕ್ರೂರ ವಿಧಾನಗಳ ಬಗ್ಗೆ ನಾಗರಿಕ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಯರಾಹಿ ಅಂತಿಮವಾಗಿ ಒಂದು ವರ್ಷದ ಶಿಕ್ಷೆಯನ್ನು ಪೂರ್ಣಗೊಳಿಸಿದ್ದು, ದಂಡ ಪಾವತಿಸಿದ ಬಳಿಕ ಕಳೆದ ವರ್ಷ ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇರಾನ್ ನ ಕ್ರಾಂತಿಕಾರಿ ನ್ಯಾಯಾಲಯ ಇತ್ತೀಚಿಗೆ ಆ ಪ್ರಕರಣದಲ್ಲಿ ನೀಡಿದ ತೀರ್ಪಿನ ಅಂತಿಮ ಭಾಗ-74 ಛಡಿಯೇಟುಗಳು ಎಂದು ಜಹ್ರಾ ಮಿನೌಯಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯರಾಹಿ, ಸ್ವಾತಂತ್ರ್ಯಕ್ಕಾಗಿ ಬೆಲೆ ತೆರಲು ಸಿದ್ದರಿಲ್ಲದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಹನಲ್ಲ ಎಂದಿದ್ದಾರೆ.
Advertisement