

ಇಸ್ಲಾಮಾಬಾದ್: ಅಮೆರಿಕಾ ಆಜ್ಞೆಯಂತೆ ಕುಣಿಯುತ್ತಿದ್ದ ಪಾಕಿಸ್ತಾನ ಇದೀಗ ಅದೇ ಅಮೆರಿಕಾ ವಿರುದ್ಧ ಆಕ್ರೋಶ ಹೊರಹಾಕಿದೆ.
ಒಂದೆಡೆ ಪಾಕಿಸ್ತಾನದ ಪ್ರಧಾನಿ ಮತ್ತು ನಾಯಕರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೆಚ್ಚಿಸಲು ಸತತ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಮೆರಿಕಾ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ತಾಲಿಬಾನ್ ಬಗ್ಗೆ ಪ್ರಸ್ತಾಪ ಮಾಡಿ ಅಮೆರಿಕದ ಮೇಲೆ ವಾಗ್ದಾಳಿ ನಡೆಸಿರುವ ಅವರು, ಇಸ್ಲಾಂ ಅನ್ನು ರಕ್ಷಿಸಲು ಅಫ್ಘಾನಿಸ್ತಾನದ ನೆಲದಲ್ಲಿ ನಡೆದ ಎರಡೂ ಯುದ್ಧಗಳಲ್ಲಿ ಪಾಕಿಸ್ತಾನ ಭಾಗವಹಿಸಲಿಲ್ಲ. ಆದರೆ, ಈ ಯುದ್ಧಗಳಲ್ಲಿ, ಅಲ್ಲಿನ ಜನರನ್ನು ಜಿಹಾದ್ ಹೆಸರಿನಲ್ಲಿ ಕೊಲ್ಲಲಾಯಿತು, ಆದರೆ, ಪಾಕಿಸ್ತಾನ ಯಾವುದೇ ಪಾಠ ಕಲಿತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿರುವ ಆಸಿಫ್, 1999 ರ ನಂತರ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕಾದೊಂದಿಗೆ ನಾವು ಮಾಡಿಕೊಂಡ ಒಪ್ಪಂದವು ಪಾಕಿಸ್ತಾನಕ್ಕೆ ಶಾಶ್ವತ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಜಾಗತಿಕ ರಾಜಕಾರಣದಲ್ಲಿ ನಮಗೆ ಅಮೆರಿಕಾದ ಬೆಂಬಲ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ನಾವು, ಅವರು ಹೇಳಿದಂತೆ ಕೇಳಿದವು, ಇದರಿಂದಾಗಿ ಇಂದು ಪಾಕಿಸ್ತಾನ ಈ ದುಸ್ಥಿತಿಯನ್ನು ಅನುಭವಿಸುತ್ತಿದೆ. ಇದಕ್ಕೆ ನಮ್ಮ ಮತ್ತು ಅಮೆರಿಕಾ ನಡುವಿನ ಒಪ್ಪಂದವೇ ನೇರ ಕಾರಣವಾಗಿದೆ.
80ರ ದಶಕದಲ್ಲಿ ಅಫ್ಘಾನಿಸ್ತಾನದ ನೆಲದಲ್ಲಿ ನಡೆಯುತ್ತಿದ್ದ ಯುದ್ಧಕ್ಕೆ ಪಾಕಿಸ್ತಾನವದ ಭಾಗವಹಿಸುವಿಕೆಯು ಧಾರ್ಮಿಕ ಕರ್ತವ್ಯದ ಭಾಗವಾಗಿಸಲಾಯಿತು. ಜಿಹಾದ್ನ ಬ್ಯಾನರ್ ಅಡಿಯಲ್ಲಿ ಪಾಕಿಸ್ತಾನಿಗಳನ್ನು ಯುದ್ಧಕ್ಕೆ ಸಜ್ಜುಗೊಳಿಸಲಾಯಿತು, ಅಂದು ನಾವು ಮಾಡಿದ ತಪ್ಪಿನಿಂದಾಗಿ ಈಗಲೂ ನಾವು ಮೇಲೆಳಲು ಸಾಧ್ಯವಾಗುತ್ತಿಲ್ಲ. ಈ ಯುದ್ಧವನ್ನು ಕಾನೂನಾತ್ಮಕ ಗೊಳಿಸಲು ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯನ್ನು ಸಹ ಮರುರೂಪಿಸಿ, ಚಿಕ್ಕ-ಚಿಕ್ಕ ಮಕ್ಕಳಲ್ಲಿ ಧಾರ್ಮಿಕ ದ್ವೇಷ (ಜಿಹಾದ್) ವನ್ನು ತುಂಬಿದರಿಂದ ನಮ್ಮ ದೇಶ ಏಳಿಗೆಯನ್ನು ಕಾಣಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
1980 ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಸೋವಿಯತ್ ವಿರೋಧಿ ಯುದ್ಧಕ್ಕೂ ಇಸ್ಲಾಂಗೂ ಯಾವುದೇ ಸಂಬಂಧವೇ ಇರಲಿಲ್ಲ. ಇದು ಕೇವಲ ಅಮೆರಿಕಾದ ಪ್ರತಿಷ್ಟೆಗೆ ನಡೆದ ಯದ್ಧವಾಗಿತ್ತು. ಈ ಯುದ್ಧದಲ್ಲಿ ಜಿಹಾದ್ ಘೋಷಣೆ ಮಾಡುವ ಅಗತ್ಯವೇ ಇರಲಿಲ್ಲ. ಯಾವುದೇ ಲಾಭವಿಲ್ಲದಿದ್ದರೂ ಈ ಯುದ್ಧದಲ್ಲಿ ಭಾಗವಹಿಸಿದರಿಂದ ಪಾಕಿಸ್ತಾನವು ದೀರ್ಘಕಾಲೀನ ಅಸ್ಥಿರತೆ ಮತ್ತು ಸಾಮಾಜಿಕ ಹಾನಿಯನ್ನು ಎದುರಿಸಬೇಕಾಗಿದೆ, ಇದನ್ನೂ ಇನ್ನು ಮುಂದಾದರೂ ನಿಲ್ಲಿಸಬೇಕು ಎಂದರು.
ಇದೇ ವೇಳೆ ಅಮೆರಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸೆಪ್ಟೆಂಬರ್ 11, 2001 ರ ದಾಳಿಯ ನಂತರ, ಅಮೆರಿಕಾ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಲು ಮುಂದಾಯಿತು. ಇದಕ್ಕೆ ಪಾಕಿಸ್ತಾನವನ್ನು ಬಳಸಿಕೊಂಡಿತು. ಈ ಒಪ್ಪಂದವನ್ನು ಒಪ್ಪಿಕೊಂಡ ಅಗೀನ ಮಿಲಿಟರಿ ಆಡಳಿತಗಾರರಾದ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಪಾಕಿಸ್ತಾನವನ್ನು, ತನ್ನದಲ್ಲದ ಯುದ್ಧಗಳಲ್ಲಿ ಸಿಲುಕುವಂತೆ ಮಾಡಿದರು ಎಂದು ಆರೋಪಿಸಿದರು.
ನಂತರದ ದಿನಗಳಲ್ಲಿ ಅಫ್ಘಾನಿಸ್ತಾನದ ಜತೆ ಹೊಂದಾಣಿಕೆ ಮಾಡಿಕೊಂಡ ಅಮೆರಿಕಾ, ಪಾಕಿಸ್ತಾನವನ್ನು ಟಾಯ್ಲೇಟ್ ಪೇಪರನ್ನು ಬಳಸಿ ಎಸೆದಂದೆ, ನಮ್ಮನ್ನು ದೂರವಿಟ್ಟರು. ಅಮೆರಿಕಾದ ಕಾರ್ಯಸಾಧನೆಯಾದ ನಂತರ ನಾವು ಅನುಭವಿಸಿದ ಕಷ್ಟಕ್ಕೆ ಯಾವುದೇ ಸಹಾಯ ಅವರಿಂದ ಬರಲಿಲ್ಲ. ಇಬ್ಬರ ನಡುವಿನ ಜಗಳದಲ್ಲಿ ಪಾಕಿಸ್ತಾನವನ್ನು ಕೈಗೊಂಬೆಯಂತೆ ಮಾಡಲಾಯಿತು ಎಂದು ಕಿಡಿಕಾರಿದರು.
Advertisement