ವಾಣಿಜ್ಯ

ಡೀಮಾನಿಟೈಸೇಷನ್ ಗೆ 5 ವರ್ಷ: ಸಂಗ್ರಹಗೊಂಡ 800 ಟನ್ ಅಮಾನ್ಯ ಕರೆನ್ಸಿ ನೋಟುಗಳನ್ನು RBI ಮಾಡಿದ್ದೇನು?

Harshavardhan M

ನವದೆಹಲಿ: ಪ್ರಧಾನಿ ಮೋದಿ ನವೆಂಬರ್ 8, 2016 ರಾತ್ರಿ 8.30ಕ್ಕೆ ಡೀಮಾನಿಟೈಸೇಷನ್(ಅಪನಗದೀಕರಣ) ಘೋಷಣೆ ಮಾಡಿದರು. ಆ ಕ್ಷಣವೇ 15.41 ಲಕ್ಷ ಕೋಟಿ ಕರೆನ್ಸಿ ಮೊತ್ತದ ಹಣ ಬೆಲೆ ಕಳೆದುಕೊಂಡು ಕಸಕ್ಕೆ ಸಮನಾಯಿತು. ಈ ಪ್ರಕ್ರಿಯೆಯಿಂದ ಸಂಗ್ರಹಗೊಂಡ ನೋಟುಗಳು ಏನಾದುವು ಎಂದು ಯಾವತ್ತಾದರೂ ಯೋಚಿಸಿದ್ದೀರಾ? 

ಬ್ಯಾಂಕುಗಳಲ್ಲಿ ಅಮಾನ್ಯಗೊಂಡ ಅಗಾಧ ಪ್ರಮಾಣದ ಹಣದಲ್ಲಿ ಒಂದು ಭಾಗವನ್ನು ಅಂದರೆ 800 ಟನ್ ತೂಕದ ಅಮಾನ್ಯ ನೋಟುಗಳನ್ನು ಆರ್ ಬಿ ಐ  ಪರಿಷ್ಕರಣೆಗೆ ಒಳಪಡಿಸಿ, ವಿಭಜಿಸಿ ಅವುಗಳನ್ನು ಯಾಂತ್ರೀಕೃತವಾಗಿ ಚೂರು ಚೂರು(shred) ಮಾಡಿ ನಂತರ ರೀಸೈಕಲ್ ಮಾಡಿ ಅವುಗಳನ್ನು ಕೇರಳದ ಉತ್ತರ ಭಾಗದಲ್ಲಿದ್ದ ಕಾರ್ಖಾನೆಗೆ ಸಾಗಿಸಲಾಗಿತ್ತು. ಅಲ್ಲಿ ಅವುಗಳಿಂದ ಪೇಪರ್ ಪಲ್ಪ್ ಮಾಡುವ ಪ್ರಕ್ರಿಯೆಗೆ ಒಳಪಡಿಸಲಾಯಿತು. 

ಕೇರಳ ಕಾರ್ಖಾನೆಯಲ್ಲಿ ತಯಾರಾದ ಪಲ್ಪ್ ನಿಂದ ಗಟ್ಟಿಯಾದ ರಟ್ಟುಗಳನ್ನು (ಹಾರ್ಡ್ ಬೋರ್ಡ್) ತಯಾರಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸಿದ್ಧಗೊಂಡ ಈ ರಟ್ಟುಗಳನ್ನು ಕಳಿಸಿದ್ದು ಎಲ್ಲಿಗೆ ಗೊತ್ತಾ? ದಕ್ಷಿಣ ಆಫ್ರಿಕಾಗೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರವಿರುವ ನೋಟುಗಳಿಂದ ತಯಾರಾದ ರಟ್ಟುಗಳು ಗಾಂಧಿ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ದಕ್ಷಿಣ ಆಫ್ರಿಕಾ ರಾಷ್ಟ್ರಕ್ಕೆ ತೆರಳಿದ್ದು ನಿಜಕ್ಕೂ ಅಚ್ಚರಿಯೇ ಸರಿ. ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ಯಾಂತ್ರೀಕೃತವಾಗಿ ಚೂರು ಚೂರು ಮಾಡಲೆಂದೇ ಆರ್ ಬಿ ಐ 27 ಕಚೇರಿಗಳನ್ನು ತೆರೆದಿತ್ತು.

ಡೀಮಾನಿಟೈಸೇಷನ್ ಮಾಡುವುದಕ್ಕೂ ಒಂದು ತಿಂಗಳು ಹಿಂದೆಯೇ ಆರ್ ಬಿ ಐ ಟೆಂಡರ್ ಕರೆದು ಚೂರಾದ ನೋಟುಗಳ ವಿಲೇವಾರಿ ಮತ್ತು ಗಟ್ಟಿ ರಟ್ಟು ತಯಾರಿಗೆ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಲಿಮಿಟೆಡ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿತ್ತು. 

ಆರ್ ಬಿ ಐ ವಹಿಸಿದ ಜವಾಬ್ದಾರಿಯನ್ನು ಸಂಸ್ಥೆ ಅಚ್ಚುಕಟ್ತಾಗಿ ನಿರ್ವಹಿಸಿ ಆರ್ ಬಿ ಐ ವಿಶ್ವಾಸವನ್ನು ಉಳಿಸಿಕೊಂಡಿತು. ಆರ್ ಬಿ ಐ ಸರಬರಾಜು ಮಾಡಿದ್ದ 500 ರೂ, 1,000 ರೂ. ನೋಟುಗಳ ಚೂರನ್ನು ರಟ್ಟಾಗಿ ಪರಿವರ್ತಿಸಿ ರಫ್ತು ಮಾಡಿತ್ತು.

SCROLL FOR NEXT