ಸಿನಿಮಾ ಸುದ್ದಿ

ಗ್ರೇಟ್ ಇಂಡಿಯನ್ ಕಿಚನ್ ಅತ್ಯುತ್ತಮ ಸಿನಿಮಾ: ನಿಮಿಷಾ ಸಜಯನ್ ಗೆ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕದ್ದಕ್ಕೆ ನಿರ್ದೇಶಕ ಬೇಸರ

Harshavardhan M

ಕೊಚ್ಚಿ: 2020ನೇ ಸಾಲಿನ ಕೇರಳ ರಾಜ್ಯ ಫಿಲ್ಮ್ ಅವಾರ್ಡ್ಸ್ ಘೋಷಣೆಯಾಗಿದ್ದು 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಿನಿಮಾದ ನಿರ್ದೇಶಕ ಹಾಗೂ ಕಥೆಗಾರ ಜಿಯೊ ಬೇಬಿ ಅತ್ಯುತ್ತಮ ಸ್ಕ್ರೀನ್ ರೈಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಸ್ತಿ ಬಗ್ಗೆ ಜಿಯೊ ಬೇಬಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಯನ್ನು ಅವರು ಸಮಾಜದ ಮಹಿಳಾ ವರ್ಗಕ್ಕೆ ಅರ್ಪಿಸಿದ್ದಾರೆ. ಸಿನಿಮಾ ಆನ್ ಲೈನಿನಲ್ಲಿ ಬಿಡುಗಡೆಯಾದಾಗ ಅಸಂಖ್ಯ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾಗೆ ರಾಜ್ಯ ಪ್ರಶಸ್ತಿ ಸಿಕ್ಕಿರುವ ಬಗ್ಗೆ ನಿರ್ದೇಶಕ ಜಿಯೊ ಬೇಬಿ ಹರ್ಷಚಿತ್ತರಾಗಿದ್ದರೂ ಸಿನಿಮಾ ನಾಯಕಿ ನಿಮಿಷಾ ಸಜಯನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗ್ರೇಟ್ ಇಂಡಿಯನ್ ಕಿಚನ್ ಸಿನಿಮಾ ಸಮಾಜದಲ್ಲಿ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ, ಸ್ಥಾನಮಾನದ ಕುರಿತು ಬೆಳಕು ಚೆಲ್ಲುತ್ತದೆ. ನಿಮಿಷಾ ಸಜಯನ್ ಈ ಸಿನಿಮಾದ ನಾಯಕ ಮತ್ತು ನಾಯಕಿಯೂ ಹೌದು. ಮಹಿಳೆಯನ್ನು ಸಮಾಜ ನಡೆಸಿಕ್ಜೊಳ್ಳುತ್ತಿರುವ ಬಗೆಯನ್ನು ಪರಾಮರ್ಶಿಸುತ್ತದೆ. ಹೆಣ್ಣುಮಗಳೊಬ್ಬಳು ಮದುವೆಯಾಗಿ ಗಂಡನ ಮನೆಗೆ ಬರುವಲ್ಲಿಂದ ತೆರೆದುಕೊಳ್ಳುವ ಸಿನಿಮಾ ನಂತರ ಅಕೆ ಹಾದು ಹೋಗುವ ಸಾಂಸಾರಿಕ ಮಾರ್ಪಾಡನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಈ ಬಾರಿ ಕೇರಳ ಫಿಲ್ಮ್ ಅವಾರ್ಡ್ಸ್ ಸಮಿತಿಯ ಅಧ್ಯಕ್ಷತೆಯನ್ನು ನಟಿ ಸುಹಾಸಿನಿ ವಹಿಸಿಕೊಂಡಿದ್ದರು. ಇನ್ನುಳಿದಂತೆ ಸಮಿತಿಯಲ್ಲಿ ಫಿಲಂ ಮೇಕರ್ ಗಳಾದ ಭದ್ರನ್, ಪಿ. ಶೇಷಾದ್ರಿ, ಚಿತ್ರ ವಿಮರ್ಶಕ ಶಶಿಧರನ್ ಮೊದಲಾದವರಿದ್ದರು. ಅತ್ಯುತ್ತಮ ನಟ ಪ್ರಶಸ್ತಿ ವೆಲ್ಲೆಂ ಸಿನಿಮಾದ ಜಯಸೂರ್ಯ ಅವರ ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಕಪ್ಪೆಲಾ ಸಿನಿಮಾ ನಟಿ ಅನಾ ಬೆನ್ ತಮ್ಮದಾಗಿಸಿಕೊಂಡಿದ್ದಾರೆ. ಅಯ್ಯಪ್ಪನುಂ ಕೋಶಿಯುಂ ಸಿನಿಮಾ ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಸೆನ್ನಾ ಹೆಗಡೆ ಗೆದ್ದುಕೊಂಡಿದ್ದಾರೆ. ಅವರು ಕನ್ನಡದಲ್ಲಿ ಈ ಹಿಂದೆ 'ಕಥೆಯೊಂದು ಶುರುವಾಗಿದೆ' ಸಿನಿಮಾ ನಿರ್ದೇಶಿಸಿದ್ದರು.

SCROLL FOR NEXT