ಬೆಳೆ ನಾಶ: ಪರಿಹಾರಕ್ಕೆ ಮನವಿ
ಕೊಪ್ಪ: ಭಾರೀ ಮಳೆಗೆ ರೈತರು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವುದರಿಂದ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ 5030 ಹೆಕ್ಟೇರ್ ಅಡಿಕೆ ತೋಟಗಳ ಪೈಕಿಯಲ್ಲಿ ಶೇ.80 ರಷ್ಟು ತೋಟಗಳಿಗೆ ಕೊಳೆ ರೋಗ ತಗುಲಿ ಅಡಿಕೆ ಕಾಯಿಗಳು ಉದುರಿವೆ.
5800 ಹೆಕ್ಟೇರ್ ಬತ್ತದ ಗದ್ದೆಗಳ ಪೈಕಿ ಶೇ.50ರಷ್ಟು ಗದ್ದೆಯಲ್ಲಿ ಸಸಿ ಮಡಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಗದ್ದೆಗಳಲ್ಲಿ ಮರಳು ಶೇಖರಣೆಯಾಗಿರುವುದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದ ಪರಿಣಾಮ ರಾಜ್ಯ ಎಲ್ಲಾ ಅಣೆಕಟ್ಟುಗಳು ತುಂಬಿರುವುದು ರಾಜ್ಯ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿದೆ. ಮಳೆಯಿಂದ ಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಮಲೆನಾಡಿನ ಅರ್ಥಿಕ ಮೂಲವಾದ ಅಡಿಕೆ, ಕಾಫಿ, ಕಾಳು ಮೆಣಸು, ಕೋಕೋಗಳಂತಹ ಬೆಳೆಗಳು ನಾಶವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ಅವಲಂಬಿಸಿರುವ ಕೂಲಿಕಾರ್ಮಿಕರು ಮತ್ತು ವ್ಯಾಪಾರಸ್ಥರು ತುಂಬಾ ತೊಂದರೆ ಒಳಗಾಗುವ ಲಕ್ಷಣಗಳು ಕಂಡು ಬರುತ್ತಿದೆ. ಆದ್ದರಿಂದ ಶೀಘ್ರದಲ್ಲಿ ರೈತರಿಗೆ ಪರಿಹಾರ ನೀಡುವ ಮೂಲಕ ರಾಜ್ಯ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಕ್ಷೀಣಿಸಿದ ಮಳೆ: ಅಡಕೆಗೆ ವ್ಯಾಪಕ ಕೊಳೆ
ಶೃಂಗೇರಿ: ತಾಲೂಕಿನಾದ್ಯಂತ ಮಳೆಯ ಆರ್ಭಟ ಕ್ಷೀಣಿಸಿದ್ದು ವ್ಯಾಪಕ ಹಾನಿಯುಂಟಾಗಿದೆ.
ಭೂಕುಸಿತದಿಂದ ಮನೆಗಳಿಗೆ, ರಸ್ತೆಗಳಿಗೆ ಹಾನಿಯುಂಟಾಗಿದೆ. ಅಡಕೆ ತೋಟಗಳಿಗೆ ಕೊಳೆರೋಗ, ಬೇರುಹುಳ ರೋಗ ತಗುಲಿದೆ. ಅಲ್ಲದೇ ಗಾಳಿಗೆ ಗೊನೆ ಸಹಿತ ಅಡಕೆ ಮರಗಳು ತುಂಡಾಗಿ ಧರೆಗುರುಳಿವೆ. ಬಹುತೇಕ ತೋಟಗಳು ಗಾಳಿ, ಮಳೆಗೆ ಅಹುತಿಯಾಗಿವೆ.
ಈ ಭಾಗದಲ್ಲಿ ಬಹುತೇಕ ತೋಟಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದು, ಈಗ ಅಳಿದುಳಿದ ತೋಟಗಳು ಗಾಳಿ ಮಳೆಯಿಂದ ಹಾನಿಗೊಳಗಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಹಳ್ಳದ ದಂಡೆಗಳು ತುಡಾಗಿದ್ದರಿಂದ ಕಾಲು ಸಂಕ ಸೇತುವೆಗಳು ನೀರುಪಾಲಾಗಿವೆ. ಕೆಲ ಹಳ್ಳಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಒಟ್ಟಾರೆಯಾಗಿ ತಾಲೂಕಿನಾದ್ಯಂತ ವ್ಯಾಪಕ ಹಾನಿಯುಂಟಾಗಿದೆ. ಭಾನುವಾರ ಸಂಜೆಯವರೆಗೂ ಮಳೆಯ ಪ್ರಮಾಣ ಕಡಿಮೆಯಾಗಿತ್ತು.