ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಬಾರಗೊಡ್ಲು ಸೇತುವೆ ಸ್ಥಳ ಬದಲಿಲ್ಲ

Srinivasa Murthy VN
Updated On : 13 Aug 2013, 11:00 am

ಸಾಗರ: ಅಂಬಾರಗೋಡ್ಲುವಿನಿಂದ ಕಳಸವಳ್ಳಿವರೆಗೆ ಸುಮಾರು 2.1ಕಿಲೋಮೀಟರ್ ಉದ್ದದ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಆರಂಭದಲ್ಲಿ 20 ಕೋಟಿ ರುಪಾಯಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
 ಸೇತುವೆ ಕಾಮಗಾರಿಗೆ ಸಂಬಂಧಪಟ್ಟಂತೆ ಸೋಮವಾರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ನಕಾಶೆಯನ್ನು ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೆ ಸೇತುವೆಗೆ ಸಂಬಂಧಪಟ್ಟಂತೆ ಟೆಂಡರ್ ಕರೆಯಲಾಗಿದ್ದು ಎಲ್‌ಎಂಡ್‌ಟಿ, ಅಫ್‌ಕಾಂ, ಗ್ಯಾಮನ್ ಇಂಡಿಯಾ, ಐಟಿಡಿ ಸಿಮೆಂಟ್ ಹಾಗೂ ಸಿಂಪೆಕ್ಸ್ ಕಂಪನಿಗಳು ಅರ್ಜಿ ಸಲ್ಲಿಸಿವೆ ಎಂದರು.
41 ಕಂಬಗಳು: ರಾಜ್ಯದ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ತುಮರಿ ಸೇತುವೆ ಸೇರ್ಪಡೆಯಾಗಲಿದ್ದು ಬಾಂಬೆಯ ವೆಯ್ಲಿಯನ್ನು ಹೊರತುಪಡಿಸಿದರೆ ಇತರೆ ಕಡೆಗಳಲ್ಲಿ 2 ಕಿ.ಮೀ.ಗೂ ಉದ್ದದ ಸೇತುವೆ ನಿರ್ಮಾಣವಾಗಿಲ್ಲ. ಸುಮಾರು 41 ಕಂಬಗಳು ನಿರ್ಮಾಣವಾಗಲಿದ್ದು, ಅದರಲ್ಲಿ 18 ಕಂಬಗಳು ನೀರಿನ ನಡುವೆ ಬರುತ್ತದೆ. ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣವನ್ನು ಹೊಂದಿರುವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕಂಪನಿಗಳು ಮಾತ್ರ ಇಂತಹ ಕಾಮಗಾರಿಯನ್ನು ನಿರ್ವಹಿಸಲು ಸಾಧ್ಯ ಎಂದರು.
ನಾಲ್ಕರಿಂದ ಐದು ವರ್ಷ: ಈಗಾಗಲೆ ಸೇತುವೆ ನಿರ್ಮಾಣಕ್ಕೆ 165 ಕೋಟಿ ರುಪಾಯಿ ಅಂದಾಜು ತಯಾರಿಸಿದ್ದು, ಉದ್ದೇಶಿತ ಯೋಜನೆಗಿಂತ ಶೇ.15ರಷ್ಟು ಹೆಚ್ಚು ಹಣ ಬೇಕಾಗಬಹುದು. ಕಾಮಗಾರಿಯನ್ನು ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹಿನ್ನೀರಿನಲ್ಲಿ ನೀರು ಇಳಿಮುಖವಾದಾಗ ಮಾತ್ರ ನಿರ್ವಹಿಸಬಹುದು. ಶೀಘ್ರವಾಗಿ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ ಮುಂದಿನ ವರ್ಷಾರಂಭದಲ್ಲಿಯೆ ಕಾಮಗಾರಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ. ಸೇತುವೆ ನಿರ್ಮಾಣಕ್ಕೆ ನಾಲ್ಕರಿಂದ ಐದು ವರ್ಷವಾಗಬಹುದು ಎಂದು ನಿರೀಕ್ಷೆ ಹೊಂದಲಾಗಿದೆ ಎಂದರು.
 ಸೇತುವೆ ಮೇಲ್ಬಾಗದಲ್ಲಿ ದ್ವಿಪಥ ರಸ್ತೆ ನಿರ್ಮಿಸುವ ಜೊತೆಗೆ ಈ ಭಾಗವನ್ನು ಪ್ರವಾಸಿತಾಣವಾಗಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೆ ಬೇರೆ ಕಡೆ ಸೇತುವೆ ನಿರ್ಮಾಣ ಮಾಡುತ್ತೇವೆ ಎಂದು ಸುದ್ದಿ ಹರಡಿದೆ. ಯಾವುದೆ ಕಾರಣಕ್ಕೂ ಉದ್ದೇಶಿತ ಸ್ಥಳ ಹೊರತುಪಡಿಸಿ ಬೇರೆ ಕಡೆ ನಿರ್ಮಾಣ ಮಾಡುವ ಪ್ರಸ್ತಾಪವಿಲ್ಲ. ಇದರ ಜೊತೆಗೆ ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಮುಗಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement