ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಎ. ಗೋಪಾಲಕೃಷ್ಣ, ಖಜಾಂಚಿಯಾಗಿ ದೇವೇಂದ್ರ, ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ಬಿ. ಪರಮೇಶ್ವರಪ್ಪ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಚುನಾವಣೆ ನಡೆಯಿತು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆ.ಎ. ಗೋಪಾಲಕೃಷ್ಣ ಹಾಗೂ ಸಿ.ಎಸ್. ಮಂಜುನಾಥ್‌ಸ್ವಾಮಿ ಸ್ಪರ್ಧೆ ಮಾಡಿದ್ದರು. ಗೋಪಾಲಕೃಷ್ಣ ಅವರು 33 ಮತಗಳನ್ನು ಪಡೆದುಕೊಂಡು ಜಯಗಳಿಸಿದರು. ಪ್ರತಿ ಸ್ಪರ್ಧಿ ಸಿ.ಎಸ್. ಮಂಜುನಾಥ್‌ಸ್ವಾಮಿ 32 ಮತಗಳನ್ನು ಪಡೆದಿದ್ದಾರೆ. ಅಂದರೆ ಕೇವಲ ಒಂದು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ದೇವೇಂದ್ರ 37 ಮತಗಳನ್ನು ಪಡೆದು ಜಯಗಳಿಸಿದ್ದು, ಪ್ರತಿಸ್ಪರ್ಧಿ ಎಂ.ಪಿ. ಲೋಕೇಶಪ್ಪ 28 ಮತಗಳನ್ನು ಪಡೆದಿದ್ದಾರೆ.
ರಾಜ್ಯ ಪರಿಷತ್‌ಗೆ ಸ್ಪರ್ಧೆ ಮಾಡಿದ್ದ ಎಸ್.ಬಿ. ಪರಮೇಶ್ವರಪ್ಪ 34 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಬಿ.ಎನ್. ರಾಜು 30 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಚುನಾವಣಾಧಿಕಾರಿ ಎಸ್.ವಿ. ಸತ್ಯನಾರಾಯಣ ಅವರು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹಲವರು ಇದ್ದರು.
ಜೇಸಿ ಚಂದನ ಪ್ರಶಸ್ತಿಗೆ ಡಾ. ಧರ್ಮಪ್ಪ ಆಯ್ಕೆ
ಬಾಳೆಹೊನ್ನೂರು: ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ನೀಡುವ ಸಂಸ್ಥೆಯ ಪ್ರತಿಷ್ಠಿತ ಜೇಸಿ ಚಂದನ ಪ್ರಶಸ್ತಿಗೆ ಇಲ್ಲಿನ ಪಶು ವೈದ್ಯಾಧಿಕಾರಿ ಡಾ. ಧರ್ಮಪ್ಪ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಸ್ಥೆಯ ಸಭೆಯಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು. ಜೇಸಿ ಸಂಸ್ಥೆಯಿಂದ 2007 ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿಗೆ ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಈ ವರೆಗೆ ಒಟ್ಟು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಟ್ಟು ಆರು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಆ. 15ರಂದು ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ಗ್ರಾ.ಪಂ.ವತಿಯಿಂದ ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಡಾ. ಧರ್ಮಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜೇಸಿ ಅಧ್ಯಕ್ಷ ಮಂಜುನಾಥ್ ತುಪ್ಪೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಸರುಗದ್ದೆ ಆಟೋಟ: ಜೇಸಿ ಸಂಸ್ಥೆಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ. 15ರಂದು ಇಲ್ಲಿನ ನ.ರಾ.ಪುರ ರಸ್ತೆಯ ಸಲೀಂರವರ ಗದ್ದೆಯಲ್ಲಿ ಸಾರ್ವಜನಿಕರಿಗಾಗಿ ವಿವಿಧ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಕೆಸರುಗದ್ದೆ ವಾಲಿಬಾಲ್ ಪಂದ್ಯಾವಳಿ, ಕೆಸರುಗದ್ದೆ ಹಗ್ಗಜಗ್ಗಾಟ ಸ್ಪರ್ಧೆ, ಕೆಸರುಗದ್ದೆ ಓಟ ಹಾಗೂ ಮಹಿಳೆಯರಿಗಾಗಿ ಕೆಸರುಗದ್ದೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸುವವರು ಆ. 13 ರೊಳಗಾಗಿ ಎಂ.ಡಿ. ಪ್ರಕಾಶ್ ( 94496 20425) ಸಂಪರ್ಕಿಸಬಹುದಾಗಿದೆ.