ಜಿಎಸ್ಎಸ್ ಚಿಕ್ಕಮಗಳೂರಿನ ನಂಟು
ಚಿಕ್ಕಮಗಳೂರು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಚಿಕ್ಕಮಗಳೂರಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಇಲ್ಲಿನ ಸಾಹಿತ್ಯಾಸಕ್ತರು ಚಿಕ್ಕಮಗಳೂರಿಗೆ ಬರುವಂತೆ ಆಹ್ವಾನ ನೀಡಿದ ಸಂದರ್ಭದಲ್ಲಿ ಯಾವಾಗಲೂ ಕೂಡ ಅವರು ಬರುವುದಿಲ್ಲ ಎಂಬ ಮಾತನ್ನು ಆಡಿದವರಲ್ಲ. ಅವರು ಇಲ್ಲಿನ ಪ್ರಕೃತಿ ಸೌಂದರ್ಯ, ಇಲ್ಲಿನ ಜನರನ್ನು ಸದಾ ಇಷ್ಟಪಡುತ್ತಿದ್ದರು. ಹಲವು ಸಂದರ್ಭದಲ್ಲಿ ಇಲ್ಲಿಗೆ ಬಂದು ಹೋಗಿದ್ದಾರೆ.
2005 ಫೆಬ್ರವರಿ ತಿಂಗಳಲ್ಲಿ ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ನ ರಾಜ್ಯ ಸಮ್ಮೇಳನದ ಅಂಗವಾಗಿ ಗೀತೋತ್ಸವ- 5 ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಸಿ. ಅಶ್ವತ್ಥ್, ಸಿದ್ದಲಿಂಗಯ್ಯ, ಎಚ್.ಎಸ್. ವೆಂಕಟೇಶ್ ಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ನರಹಳ್ಳಿ ಬಾಲಸುಬ್ರಹ್ಮಣ್ಯ ಭಾಗವಹಿಸಿದ್ದರು.
ಪ್ರತಿಭೆಗಳಿಗೆ ಅವಕಾಶ ನೀಡಿ: ಮುಸ್ಸಂಜೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿ.ಎಸ್. ಶಿವರುದ್ರಪ್ಪರವರು ಉದ್ಘಾಟಿಸಿ, ನಂತರದಲ್ಲಿ ಭಾಷಣ ಮಾಡಿದ ಅವರು, ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಹೊಸ ಕವಿಗಳು ಬರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಸಾರ್ವಜನಿಕರೊಂದಿಗೆ ಕುಳಿತು ರಾತ್ರಿಯವರೆಗೆ ವೀಕ್ಷಿಸಿದರು. ಅಷ್ಟೇ ಅಲ್ಲಾ ಮೂರು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿಯೇ ಇದ್ದು, ಗೀತೋತ್ಸವದಲ್ಲಿ ನಡೆದ ವಿವಿಧ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
2007ರ ಸೆಪ್ಟಂಬರ್ 8 ರಂದು ಚಿಕ್ಕಮಗಳೂರಿನ ಸುಗಮ ಸಂಗೀತ ಗಂಗಾ ಇಲ್ಲಿನ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಿಎಸ್ಎಸ್ ಕಾವ್ಯ ಗಾಯನ- ಕವಿ ನಮನ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು.
ಮೈ ಮರೆತಿದ್ದ ಜಿಎಸ್ಸೆಸ್: ಈ ಕಾರ್ಯಕ್ರಮವನ್ನು ಜಿಎಸ್ಎಸ್ ಅವರು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ನಾಗರೀಕರ ಸನ್ಮಾನ ನೀಡಿ ಗೌರವಿಸಲಾಗಿತ್ತು. ಜಿಎಸ್ಎಸ್ ಮರು ದಿನ ಬೆಳಿಗ್ಗೆ ಇಲ್ಲಿಗೆ ಸಮೀಪದ ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ಅಲ್ಲೇ ಇದ್ದು, ಪ್ರಕೃತಿಯ ಸೌಂದರ್ಯವನ್ನು ಸವಿದರು. ಈ ಸಂಬಂಧದಲ್ಲಿ ತಮ್ಮೊಂದಿಗೆ ಇದ್ದವರೊಂದಿಗೆ ಮಾತನಾಡುವಾಗ ಇದೊಂದು ತುಂಬಾ ಸೊಗಸಾದ ಸ್ಥಳ, ನೋಡುತ್ತಾ ಇದ್ದರೆ, ಸಮಯ ಹೋಗುವುದೇ ತಿಳಿಯುವುದಿಲ್ಲ ಎಂದಿದ್ದರು.
ಜಿಎಸ್ಎಸ್ ಚಿಕ್ಕಮಗಳೂರಿಗೆ ಬಂದಾಗ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಸುಗಮ ಸಂಗೀತ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಕಾಮತ್ ಅವರು, ಜಿಎಸ್ಎಸ್ ಕುರಿತು ಹೇಳಿರುವ ಮಾತುಗಳು- ಅವರು ಮೌನಿ, ಅತ್ಯಂತ ಸರಳ ವ್ಯಕ್ತಿ, ಅವರಲ್ಲಿ ಆತ್ಮೀಯತೆ ಇತ್ತು. ಮುಖದಲ್ಲಿ ಸಾಹಿತ್ಯ ಕಳೆ ಇತ್ತು. ಅವರನ್ನು ನೋಡುವಾಗ ಗೌರವಿಸುವ ಮನೋಭಾವನೆ ಬರುತ್ತಿತ್ತು.
ಜಿಎಸ್ಎಸ್ ನಿಧನಕ್ಕೆ ಗಣ್ಯರ ಸಂತಾಪ
ಚಿಕ್ಕಮಗಳೂರು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಅಗಲುವಿಕೆಯಿಂದ ರಾಜ್ಯದ ಸಾಹಿತ್ಯ ಲೋಕ ಬರಡಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬ ವರ್ಗದವರಿಗೆ ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿ ದೇವರು ನೀಡಲೆಂದು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಅಭಯಚಂದ್ರ ಜೈನ್, ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಜಯಪ್ರಕಾಶ್ ಹೆಗ್ಡೆ ಹಾಗೂ ವಿಧಾನಸಭಾ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಶಾಸಕರಾದ ಜಿ.ಎಚ್. ಶ್ರೀನಿವಾಸ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಗಮ ಸಂಗೀತ ಗಂಗಾ: ನಾಡಿನ ಹಿರಿಯ ಚೇತನ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಅಗಲಿಕೆಗೆ ಸುಗಮ ಸಂಗೀತ ಗಂಗಾ ಸಂಸ್ಥೆ ಸಂತಾಪ ಸೂಚಿಸಿದೆ.
ಸಾಹಿತ್ಯ ಮತ್ತು ಸುಗಮ ಸಂಗೀತ ಕ್ಷೇತ್ರಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಹಣತೆಯ ಕವಿ ಜಿಎಸ್ಎಸ್ ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದಾಗ ಅವರ ಕವನಗಳ ಮೂಲಕ ಕವಿ ನಮನ ಸಲ್ಲಿಸಿ ಗೌರವಿಸಲಾಗಿತ್ತು. ರಾಷ್ಟ್ರಕವಿಯ ಅಗಲಿದ ಆತ್ಮಕ್ಕೆ ಸುಗಮ ಸಂಗೀತ ಗಂಗಾ ಅಧ್ಯಕ್ಷರಾದ ಡಾ. ಜೆ.ಪಿ. ಕೃಷ್ಣೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಮತ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ವೆಂಕಟೇಶ್, ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ, ನಾಗರಾಜ್ ರಾವ್ ಸಂತಾಪ ಸೂಚಿಸಿದ್ದಾರೆ.
ಕಸಾಪ: ಹಿರಿಯ ಸಾಹಿತಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶ್ರದ್ಧಾಂಜಲಿ ಸಲ್ಲಿಸಿದೆ.