ಬತ್ತ, ರಬ್ಬರ್ ಬೆಳೆಗಾರರಿಗೆ ಪರಿಹಾರ ನೀಡುತ್ತಿಲ್ಲ: ಆರೋಪ
ನರಸಿಂಹರಾಜಪುರ: ಈ ವರ್ಷ ಅತಿ ವೃಷ್ಟಿಯಿಂದ ಬತ್ತ, ಅಡಕೆ, ರಬ್ಬರ್‌ಗಳಿಗೆ ಹಾನಿಯಾಗಿದ್ದರೂ, ಸರ್ಕಾರ ಅಡಕೆ ಬೆಳೆಗಾರರಿಗೆ ಮಾತ್ರ ಪರಿಹಾರ ನೀಡಿದೆ. ಬತ್ತ ಮತ್ತು ರಬ್ಬರ್ ಬೆಳೆಗಾರರಿಗೆ ಪರಿಹಾರ ನೀಡಿಲ್ಲ ಎಂದು ತಾಲೂಕು ಕೃಷಿಕ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ. ಸೋಮವಾರ ನಡೆದ ರೈತ ದಿನಾಚರಣೆ ಸಮಾರಂಭದಲ್ಲಿ ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ಈ ವಿಷಯ ಪ್ರಸ್ತಾಪ ಮಾಡಿ, ಮಲೆನಾಡಿನಲ್ಲಿ ಈ ವರ್ಷ ಸುರಿದ ಭಾರೀ ವರ್ಷಧಾರೆಯಲ್ಲಿ ಅಡಕೆ ಜೊತೆಗೆ ಬತ್ತ, ರಬ್ಬರ್ ಬೆಳೆಗಳಿಗೂ ಹಾನಿಯಾಗಿತ್ತು.
ಅಡಕೆ ಬೆಳೆಗಾರರ ಜೊತೆಯಲ್ಲೇ ಬತ್ತ, ರಬ್ಬರ್ ಬೆಳೆದ ರೈತರು ಸಹ ಸರ್ಕಾರಕ್ಕೆ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದರೂ ಇದುವರೆಗೂ ಅಡಕೆ ಬೆಳೆಗಾರರಿಗೆ ಮಾತ್ರ ಪರಿಹಾರ ನೀಡಿ ಉಳಿದ ರೈತರಿಗೆ ಪರಿಹಾರ ನೀಡಿಲ್ಲ. ಸರ್ಕಾರವ ತಕ್ಷಣ ಎಲ್ಲಾ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ ಬತ್ತ ಬೆಳೆದ ರೈತರಿಗೆ ಬೆಂಬಲ ಬೆಲೆ ನೀಡುವ ಬತ್ತ ಖರೀದಿ ಕೇಂದ್ರವನ್ನು ತಡವಾಗಿ ಪ್ರಾರಂಭಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲೇ ಬತ್ತ ಖರೀದಿ ಕೇಂದ್ರ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.