ಅಕಾಲಿಕ ಮಳೆ: ಕಾಫಿ ಬೆಳೆಗೆ ಹಾನಿ
ಚಿಕ್ಕಮಗಳೂರು: ಜಿಲ್ಲೆಯ ಇತ್ತೀಚೆಗೆ ಬಿದ್ದಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗೆ ಹಾನಿಯಾಗಿದ್ದು, ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಕಾಫಿ ಬೆಳೆಗಾರರು ಕಳೆದ ಹತ್ತಾರು ವರ್ಷಗಳಿಂದ ಹಲವು ಸಮಸ್ಯೆಗಳಿಗೆ ಸಿಲುಕಿದ್ದಾರೆ. ಇವುಗಳಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಫಿ ತೋಟಗಳನ್ನು ನಿರ್ವಹಿಸುವುದೇ ಕಷ್ಟಕರವಾಗಿದೆ. ಒಂದು ಕಡೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಕ್‌ಗಳಲ್ಲಿ ಮಾಡಿರುವ ಸಾಲದ ಬಡ್ಡಿ, ಚಕ್ರಬಡ್ಡಿ ಗಗನಕ್ಕೇರುತ್ತಿದೆ. ದುರಾದೃಷ್ಟವಶಾತ್ ಕಾಫಿ ಬೆಲೆ ದಿನೇ ದಿನೇ ಇಳಿಮುಖವಾಗುತ್ತಿದೆ. ಕೈಗೆ ದೊರಕುವ ಹಣ ಕಾಫಿ ಕಟಾವು ಮಾಡುವ ಕಾರ್ಮಿಕರಿಗೆ ಕೂಲಿ ಕೊಡಲು ಸರಿಯಾಗುತ್ತಿದೆ. ಇತ್ತೀಚೆಗೆ ಬೀಳುತ್ತಿರುವ ಧಾರಾಕಾರ ಮಳೆಯಿಂದ ಗಿಡದಲ್ಲಿದ್ದ ಫಸಲು ನೆಲಕ್ಕೆ ಬೀಳುತ್ತಿದೆ. ಕೊಯ್ದ ಕಾಫಿ ಒಣಗದೆ ಮಳೆಯಲ್ಲಿ ನೆನೆದು ಕಾಫಿಯ ಗುಣಮಟ್ಟ ಹಾಳಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 31 ರ ನಂತರ ಬೀಳುವ ಮಳೆಯಿಂದ ಕಾಫಿ ಗಿಡಗಳು ಹೂವು ಬಿಡುತ್ತವೆ. ಈಗ ಮಳೆ ಮುಂಚಿತವಾಗಿಯೇ ಬೀಳುತ್ತಿರುವುದರಿಂದ ಹೂ ಆಗುವ ಗೊಂಚಲಿನಲ್ಲಿ ಚಿಗುರೊಡೆಯುತ್ತಿದೆ ಎಂದು ಹೇಳಿದ್ದಾರೆ.
ಗಮನ ಹರಿಸುತ್ತಿಲ್ಲ: ಇಷ್ಟೆಲ್ಲಾ ಸಮಸ್ಯೆಗಳನ್ನು ಕಾಫಿ ಬೆಳೆಗಾರರು ಎದುರಿಸುತ್ತಿದ್ದರೂ ಸಹ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜಿಲ್ಲೆಯ ಮೂರು ಜನ ಕಾಫಿ ಮಂಡಳಿ ಸದಸ್ಯರುಗಳು ಮೂಕ ಪ್ರೇಕ್ಷಕರಂತೆ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯಲ್ಲಿ ಗಮನ ಕೊಡದೆ ಇರುವುದು ಬೆಳೆಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಕಾಫಿ ಮಂಡಳಿ ಅಧ್ಯಕ್ಷರನ್ನು ಬೆಳೆ ಹಾನಿಯಾಗಿರುವ ಪ್ರದೇಶಗಳಾದ ಮಲ್ಲಂದೂರು, ಆವುತಿ, ವಸ್ತಾರೆ, ಮಲ್ಲೇನಹಳ್ಳಿ, ಮೂಡಿಗೆರೆ, ಆಲ್ದೂರು, ಕೈಮರ, ಜಾಗರ ಇನ್ನೂ ಹಲವಾರು ಕಡೆಗಳಿಗೆ ಭೇಟಿ ನೀಡಿ ಸತ್ಯಾಸತ್ಯಾತೆ ವರದಿಯನ್ನು ಆಧರಿಸಿ ಸಂಕಷ್ಟದಲ್ಲಿರುವ ಬೆಳೆಗಾರರ ಸಾಲಮನ್ನಾ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಾಯಧನ ಕೊಡಿಸಲು ಮುಂದಾಗದಿದ್ದಲ್ಲಿ ತಾವು ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಾಲ ಮನ್ನಾ ಮಾಡಿ: ಸಂಸದರಾದ ಜಯಪ್ರಕಾಶ್ ಹೆಗಡೆಯವರಿಗೆ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅವರು ಕೇಂದ್ರ ಸರ್ಕಾರದ ಗಮನ ಸೆಳೆಯುವ ಮೂಲಕ ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸರ್ಕಾರವನ್ನು ಒತ್ತಾಯಿಸುವ ಮೂಲಕ ಬೆಳೆಗಾರರ ನೆರವಿಗೆ ಬರಬೇಕು ಎಂದಿರುವ ಗಿರೀಶ್, ಕಾಫಿ ಮಂಡಳಿ ಅಧ್ಯಕ್ಷರು ಈ ಕೂಡಲೇ ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡದಿದ್ದಲ್ಲಿ ಕಾಫಿ ಮಂಡಳಿ ಎದುರು ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.