ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಲು ದೇವರಾಜ್ ಮನವಿ
ಚಿಕ್ಕಮಗಳೂರು: ಪ್ರಾಮಾಣಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಕೆಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಕೆಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೆಚ್.ಹೆಚ್. ದೇವರಾಜ್ ಮನವಿ ಮಾಡಿದ್ದಾರೆ.
ಇಲ್ಲಿನ ಟಿಪ್ಪುನಗರದಲ್ಲಿ ಶುಕ್ರವಾರ ಸಂಜೆ ನಡೆದ ಪಕ್ಷದ ನಗರಸಭೆ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದಾರೆ. ರೈತರ, ಬಡವರ ಸಮಸ್ಯೆಯನ್ನು ಅರಿತು ಕೆಲಸ ಮಾಡುವ ಏಕೈಕ ವ್ಯಕ್ತಿ ಯಡಿಯೂರಪ್ಪರಾಗಿದ್ದಾರೆ ಎಂದು ಹೇಳಿದರು.
ಸ್ಥಳೀಯ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ನಗರದ ಎಲ್ಲಾ ರಸ್ತೆಗಳನ್ನು ಹಾಳುಮಾಡಿ ಜನರಿಗೆ ಸಮಸ್ಯೆ ಸೃಷ್ಟಿಸಿದ್ದಾರೆ. ಬಿಜೆಪಿಯ ನಗರಸಭೆ ಸದಸ್ಯರು 5 ವರ್ಷದಲ್ಲಿ ಯಾವ ರೀತಿಯ ಸ್ವ ಅಭಿವೃದ್ಧಿ ಆಗಿದ್ದಾರೆ ಎಂದು ಜನ ಸಾಮಾನ್ಯರಿಗೆ ಗೊತ್ತಿದೆ ಎಂದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಲೋಕೇಶ್ ಮಾತನಾಡಿ, ಭಾಗ್ಯಲಕ್ಷ್ಮಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ, ಮಕ್ಕಳಿಗೆ ಸೈಕಲ್ ವಿತರಣೆಗಳಂತಹ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾರಿ ಮಾಡಿ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜಮೀರ್ ಅಹಮ್ಮದ್, ವಿಧಾನಸಭೆ ಕ್ಷೇತ್ರ ಅಧ್ಯಕ್ಷ ಹರೀಶ್, ನಗರಾಧ್ಯಕ್ಷ ರವಿಕುಮಾರ್, ಸಾಫೀಯಾ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಲ್ಲ ಸ್ಥಾನಗಳಿಗೆ ಸ್ಪರ್ಧೆ: ಮಹೇಶ್
ತರೀಕೆರೆ: ಜಿಲ್ಲೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಎಲ್ಲ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ತಿಳಿಸಿದ್ದಾರೆ.
ಅವರು ಶನಿವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯ ನಡುವೆ ಏರ್ಪಾಡಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುರಸಭಾ ಚುನಾವಣೆಗ ಮಹಿಳಾ ಮೀಸಲಾತಿ ಬಗ್ಗೆ ಒತ್ತಾಯ ಇತ್ತು. ಮುಂದಿನ ವಿಧಾನಸಭಾ ಚುನಾವಣೆಯ ಎಲ್ಲ ಆಕಾಂಕ್ಷಿಗಳು ಒಟ್ಟಿಗೆ ಸೇರಿ ಪುರಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಬೇಕು. ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಸಾವಿತ್ರಿ ಗಂಗಪ್ಪ, ಗಂಗಾಧರ್, ಮಾಜಿ ಶಾಸಕರಾದ ಬಿ.ಆರ್. ನೀಲಕಂಠಪ್ಪ, ಟಿ.ಎಚ್. ಶಿವಶಂಕರಪ್ಪ, ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ, ಜಿಪಂ ಸದಸ್ಯ ಕೆ.ಪಿ. ಕುಮಾರ್, ಮುಖಂಡರಾದ ಟಿ.ಎನ್. ಗೋಪಿನಾಥ್, ರಂಗಪ್ಪ, ಟಿ.ಕೆ. ಪ್ರಕಾಶ್, ಟಿ.ಆರ್. ಬಸವರಾಜ್, ರವಿ ಶ್ಯಾನುಬೋಗ್, ಪರುಶುರಾಂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎ.ಎನ್. ಮಹೇಶ್, ಪುರಸಭಾ ಚುನಾವಣಾ ವೀಕ್ಷಕರಾದ ಸಾವಿತ್ರಿ ಗಂಗಪ್ಪ, ಗಂಗಾಧರ ಗೌಡ ಅವರನ್ನು ಸ್ವಾಗತಿಸಲಾಯಿತು.