ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

Srinivasa Murthy VN
Updated On : 17 Feb 2013, 1:47 am

ಚಿಕ್ಕಮಗಳೂರು:ಜಿಲ್ಲೆಯ ಅನುದಾನರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳನ್ನು (ಅಲ್ಪಸಂಖ್ಯಾತರ ಶಾಲೆಗಳನ್ನು ಹೊರತುಪಡಿಸಿ) ಕಡ್ಡಾಯ ಶಿಕ್ಷಣ ಕಾಯಿದೆ (ಆರ್.ಟಿ.ಇ) ಅಡಿ ಶೇ.25 ಮೀಸಲಾತಿ ಸೀಟುಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 19ರವರೆಗೆ ಅವಧಿ ವಿಸ್ತರಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ದೌರ್ಜನ್ಯ ತಡೆಗೆ ಸಂಘಟನೆ ಅಗತ್ಯ
ಸೊರಬ: ಬಹು ಹಿಂದಿನಿಂದಲೂ ಇರುವ ಮಹಿಳೆಯರ ಮೇಲಿನ ದೌರ್ಜನ್ಯ ಹೋಗಲಾಡಿಸಲು ಸಂಘಟನೆ ಅತಿ ಅವಶ್ಯಕ ಎಂದು ತಾಪಂ ಸದಸ್ಯ ಕೆ. ಅಜ್ಜಪ್ಪ ತಿಳಿಸಿದರು.
ಅವರು ತಾಲೂಕು ಹೊಸಬಾಳೆ ಗ್ರಾಮದಲ್ಲಿ ನಡೆದ ಮಹಿಳಾ ದೌರ್ಜನ್ಯ ತಡೆ ಕುರಿತ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿ ವಕೀಲ ಪ್ರಶಾಂತ್ ಎಚ್.ಎಂ. ಮಾತನಾಡಿ, ದೈಹಿಕ, ಆರ್ಥಿಕ, ವರದಕ್ಷಿಣೆ, ಭಾವನಾತ್ಮಕ ಹಿಂಸೆಗಳೆಲ್ಲವೂ ಕೌಟುಂಬಿಕ ಹಿಂಸೆ ಎಂದು ಕರೆಯಲ್ಪಡುತ್ತದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಭಾರತಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಲಾವತಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯ ಬಾಲಚಂದ್ರಪ್ಪ, ಅಂಗನವಾಡಿ ಮೇಲ್ವಿಚಾರಕಿ ಶೈಲ, ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು ಉಪಸ್ಥಿತರಿದ್ದರು.


ಅರ್ಧ ಗಂಟೆಗೂ ಹೆಚ್ಚು ಸತತ  ಮಳೆ
ನರಸಿಂಹರಾಜಪುರ: ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.  ಕಳೆದ ಎರಡು ದಿನಗಳಿಂದಲೂ ಮೋಡದ ವಾತಾವರಣ, ಕೆಲಮೊಮ್ಮೆ ತುಂತುರು ಮಳೆ ಬಂದಿತ್ತು. ಕಳೆದ ಶನಿವಾರ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು ಒಂದು ವಾರದಲ್ಲೇ ಮತ್ತೆ ಮಳೆ ಬಂದಿರುವುದರಿಂದ ತೋಟಗಳಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಿದೆ. ಆಕಾಲಿಕ ಮಳೆಯಿಂದಾಗಿ ಮಳೆಗಾಲದ ವಾತಾವರಣ ಕಂಡು ಬಂದಿದೆ.

ಇಂದು ವಿವಿಧ ಕಾಮಗಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆ
ನರಸಿಂಹರಾಜಪುರ: ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಹಾರ ಪಡಿತರ ಚೀಟಿ ವಿತರಣೆ, ವಿವಿಧ ಕಾಮಗಾರಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ, ಶಿಲಾನ್ಯಾಸ, ಉದ್ಘಾಟನಾ ಸಮಾರಂಭ ಫೆ.17ರ ಭಾನುವಾರ ಮದ್ಯಾಹ್ನ 2.30ಕ್ಕೆ  ಕಟ್ಟಿನಮನೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಉದ್ಘಾಟಿಸಲಿದ್ದಾರೆ. ಸಂಕ್ಸೆ -ಚಿಟ್ಟಿಕೊಡಿಗೆ  ದೊಡ್ಡಮನೆ ರಸ್ತೆ ಡಾಂಬರೀಕರಣ ಉದ್ಘಾಟನೆ, ಸಂಕ್ಸೆ ಗುಡ್ಡೇಹಳ್ಳದಿಂದ ಮೇಲಿನ ಗುಡ್ಡೇಹಳ್ಳ ರಸ್ತೆ  ಡಾಂಬರೀಕರಣ, ಸಂಕ್ಸೆ - ಚಿಟ್ಟಿಕೊಡಿಗೆ ಕುಡಿವ ನೀರಿನ ಯೋಜನೆ, ನೇರಲೆ ಕಿರು ನೀರಿನ ಯೋಜನೆ, ಕಾನೂರು ಗ್ರಾಮದ ಸೋನಿಯಾ ನಗರ ಪ.ಜಾ ಕಾಲೋನಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ, ಹೊಳೆಕೊಪ್ಪ ರಸ್ತೆ ನಿರ್ಮಾಣ, ಕಟ್ಟಿನಮನೆ ಕಿರುನೀರು ಸರಬರಾಜು ಯೋಜನೆ, ಕಟ್ಟಿನಮನೆ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟನೆ, ಕಟ್ಟಿನಮನೆ ಪ್ರೌಢಶಾಲೆಯ ಬಿಸಿಯೂಟ ಕೊಠಡಿಯ ಉದ್ಘಾಟನೆ ಸೇರಿದಂತೆ ವಿವಿಧ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ. ಸಮಾರಂಭದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ
ಚಿಕ್ಕಮಗಳೂರು: ಈ ಬಾರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಅಗತ್ಯವಿರುವಷ್ಟು ಮತಯಂತ್ರಗಳನ್ನು ರಾಜ್ಯ ಚುನಾವಣಾ ಆಯೋಗ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯಿಂದ ಪೂರೈಕೆ ಮಾಡಿದೆ. ಮಾ.7ರಂದು ರಾಜ್ಯದ 7 ನಗರಪಾಲಿಕೆ, 43 ನಗರಸಭೆ, 93 ಪುರಸಭೆ ಹಾಗೂ 65 ಪಟ್ಟಣ ಪಂಚಾಯ್ತಿಗಳಿಗೆ  ನಡೆಯಲಿರುವ ಮತದಾನಕ್ಕೆ ಈ ಯಂತ್ರಗಳನ್ನು ಬಳಸಿಕೊಳ್ಳಲಾಗುವುದು.  ಎಲೆಕ್ಟ್ರಾನಿಕ್  ಮತ ಯಂತ್ರಗಳನ್ನು ಪೂರೈಕೆ ಮಾಡಿರುವ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳನ್ನು ಪರಿಶೀಲಿಸಿದ್ದಾರೆ.
2007ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿತ್ತು. ಆದರೆ, ಈ ಬಾರಿಯ ಚುನಾವಣೆಗೆ ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಒಟ್ಟು 8 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನಕ್ಕಾಗಿ 900 ಯಂತ್ರಗಳು ಬಂದಿವೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪೂರೈಕೆ ಮಾಡಿದೆ. ಇವುಗಳನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಿಕೊಳ್ಳುವಂತಿಲ್ಲ. ಆದುದರಿಂದ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಪ್ರತ್ಯೇಕವಾಗಿ ಮತಯಂತ್ರಗಳನ್ನು ಸರಬರಾಜು ಮಾಡಿದೆ.  

ಕರಾಟೆ  ಅವಾರ್ಡ್
ಶೃಂಗೇರಿ: ಪಟ್ಟಣದ ಟೇಕ್ವಾಂಡೋ ಮಾರ್ಷಲ್ ಆರ್ಟ್ ಕರಾಟೆ ಸ್ಕೂಲ್ ವಿದ್ಯಾರ್ಥಿಗಳ ಬೆಲ್ಟ್ ಬಸ್ಟ್ ಅವಾರ್ಡ್ ಸಮಾರಂಭ ಫೆ. 24 ರಂದು ನಡೆಯಲಿದೆ. ಪಟ್ಟಣಜ ಜೆಸಿಬಿಎಂ ಕಾಲೇಜಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಿಪಿಐ ಎಸ್.ಎಸ್. ಹಿರೇಮಠ ಸಮಾರಂಭ ಉದ್ಘಾಟಿಸಲಿದ್ದಾರೆ. ಪಪಂ ಅಧ್ಯಕ್ಷ ಟಿ.ಕೆ ಪರಾಶರ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಕುಮಾರ್, ಗೀರೀಶ್, ವೀರಪ್ಪಗೌಡ, ರಾಜಶೇಖರ್  ಪಾಲ್ಗೊಳ್ಳಲಿದ್ದಾರೆ.

ಆದಿ ಸುಬ್ರಹ್ಮಣ್ಯೇಶ್ವರ ರಥೋತ್ಸವ
ಮೂಡಿಗೆರೆ: ನಂದನನಾಮ ಸಂವತ್ಸರದ ಮಾಘ ಶುದ್ಧ ಷಷ್ಠಿಯ ದಿನ ಪುರಾತನ ಪ್ರಸಿದ್ದಿಯಾದ ತಾಲೂಕಿನ ಗೋಣಿಬೀಡಿನ ಆದಿ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಸುಬ್ರಹ್ಮಣ್ಯೇಶ್ವರ ಸ್ವಾಮಿಯನ್ನು ದಿವ್ಯ ರಥೋತ್ಸವದಲ್ಲಿ ಕೂರಿಸಿ, ಗರುಡ ಬಂದು ಮೂರು ಪ್ರದಕ್ಷಿಣೆ ಹಾಕಿದ ನಂತರ ರಥ ಎಳೆಯಲಾಯಿತು. ತಹಸೀಲ್ದಾರ್ ಸೈಯದ್ ಮುನೀರ್, ಶಾಸಕ ಎಂ.ಪಿ. ಕುಮಾರಸ್ವಾಮಿ. ಆರ್. ಬಾಲಸುಬ್ರಹ್ಮಣ್ಯ, ಸದಸ್ಯರಾದ ಕೆ.ಟಿ. ಜಗದೀಶ್, ಸಿ.ವಿ. ಸುದೀಪ್,  ಕೆ.ಆರ್. ಮಂಜುನಾಥ್, ವಿ.ಕೆ. ಶಿವೇಗೌಡ, ರಮೆಶ್, ಪಿ.ಎಸ್. ಪ್ರಕಾಶ್ ಭಟ್ ಸೇರಿದಂತೆ ಗಣ್ಯರು ಮತ್ತು ಊರಿನ ಪ್ರಮುಖರು, ಭಕ್ತಾದಿಗಳು ರಥ ಎಳೆದು ಪುನೀತರಾದರು.

ಗುಡುಗು ಸಹಿತ ಮಳೆ
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಫೆ.16ರಂದು ಮಧ್ಯಾಹ್ನ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ.
ಶುಕ್ರವಾರ ಕೆಲವೆಡೆ ಸಾಧಾರಣ ಮಳೆ ಬಂದಿತ್ತು. ಕಳೆದೆರೆಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಅಕಾಲಿಕ ಮಳೆಯಿಂದಾಗಿ ಅಡಕೆ ಕೊಯಿಲಿಗೆ ತೊಂದರೆಯಾಗುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ.

ವಸ್ತು ಪ್ರದರ್ಶನ
ಶೃಂಗೇರಿ: ಪಟ್ಟಣದ ಬಿಆರ್‌ವಿ ಮಾದರಿ ಶಾಲೆಯಲ್ಲಿ ವಿವಿಧ ವಸ್ತುಗಳ ವಸ್ತುಪ್ರದರ್ಶನ ಕಾರ್ಯಕ್ರಮ ನಡೆಯಿತು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಜಿ. ಸಿದ್ದಲಿಂಗೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ವಸ್ತುಪ್ರದರ್ಶನಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಹೊರ ಹೊಮ್ಮುತ್ತವೆ. ಅವರ ಪ್ರತಿಭೆಗಳಿಗೆ ವೇದಿಕೆಯಾಗುತ್ತದೆ. ಇಂತಹ ವಸ್ತು ಪ್ರದರ್ಶನಗಳಲ್ಲಿ ಪಾಲ್ಗೊಳಿಳುವುದರಿಂದ ವಿದ್ಯಾರ್ಥಿಗಳ ಭೌದ್ಧಿಕ ಗುಣಮಟ್ಟ ಹೆಚ್ಚುತ್ತದೆ ಎಂದರು. ತ್ಯಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement