ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗಾಳಿಯಂತ್ರ ಪರಿಸರಕ್ಕೆ ಮಾರಕ

Srinivasa Murthy VN
Updated On : 17 Feb 2013, 1:45 am

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಸಮೀಪ ಮುಂಡ್ರೆ ಮತ್ತು ಕರಡಿ ಕೊತ್ಲು ಗುಡ್ಡಗಳಲ್ಲಿ ಗಾಳಿಯಂತ್ರ ಅಳವಡಿಸಲು ಮುಂದಾಗಿರುವುದು ಪರಿಸರಕ್ಕೆ ಮಾರಕವಾಗಲಿದೆ ಎಂದು ಅಲ್ಲಿನ ಸುತ್ತಲಿನ ಸಾರ್ವಜನಿಕರು ಹೇಳಿದ್ದಾರೆ.
   ಬೆಟ್ಟದ ಹಳ್ಳಿಯ ಸರ್ವೇ ನಂ.46 ಮತ್ತು 48ರಲ್ಲಿ ಇರುವ ಗೋಮಾಳದಲ್ಲಿ ಒಟ್ಟು 27 ಎಕರೆ ಪ್ರದೇಶವನ್ನು  ಕಂದಾಯ ಇಲಾಖೆ ಗಾಳಿಯಂತ್ರ ಸ್ಥಾಪಿಸಲು ಖಾಸಗಿ ಕಂಪನಿಯೊಂದಕ್ಕೆ ನೀಡಿದೆ. ಈ ಕಂಪನಿ ಈಗಾಗಲೇ  ಅರಣ್ಯ ಇಲಾಖೆ ಆಕ್ಷೇಪ ಲೆಕ್ಕಿಸದೆ 2 ಕಿ.ಮೀಗಳವರೆಗೆ 50 ಅಡಿ ಅಗಲದ ರಸ್ತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೀಸಲು ಅರಣ್ಯ: ಈ ಗುಡ್ಡಗಳು ಪಶ್ಚಿಮಘಟ್ಟದ ಸಮೀಪದಲ್ಲೆ ಇರುವ ಹೊಗರೆಕಾನ್ ಗಿರಿಗೆ ಎದುರಾಗಿ ಎದ್ದು ನಿಂತಿವೆ. ಪಕ್ಕದಲ್ಲೆ ಮೀಸಲು ಅರಣ್ಯ ಇದ್ದು ಬೆಟ್ಟದಲ್ಲೂ ಸಾಕಷ್ಟು ಕಾಡು ಸಮೃದ್ಧವಾಗಿದೆ.
   ಈ ಗುಡ್ಡಗಳು ಪಶ್ಚಿಮಘಟ್ಟದ ಪ್ರಾಣಿ ವೈವಿಧ್ಯಕ್ಕೆ ಪೂರಕವಾಗಿದ್ದು ಚಿರತೆ, ನರಿ, ಬೆಟ್ಟಾಡು ಎಂಬ ಅಪರೂಪದ ಸಾರಂಗ, ಜಿಂಕೆ ಸೇರಿದಂತೆ  ಹಲವು ಪ್ರಾಣಿ ಪಕ್ಷಿಗಳ ಓಡಾಟಕ್ಕೆ ಬಳಕೆಯಾಗುತ್ತಿದೆ. ಈ ಬೆಟ್ಟಗಳು ಹುಲಿ ದಾಟುವ ಪ್ರದೇಶ ಆಗಿರುವುದು ವಿಶೇಷ.
ಗುಡ್ಡಗಳು ಬೋಳು ಗುಡ್ಡಗಳಾಗದೆ ಸಮೃದ್ಧ ಹಸಿರನ್ನು ಹಿಡಿದಿಟ್ಟುಕೊಂಡಿರುವುದರಿಂದ ತಗ್ಗಿನ ಪ್ರದೇಶದಲ್ಲಿರುವ ಹಳ್ಳಿಗಳ ಕೆರೆಗಳಿಗೆ ಜಲಾನಯನ ಪ್ರದೇಶಗಳಾಗಿ ಅವುಗಳಿಗೆ ನೀರೊದಗಿಸುತ್ತವೆ.
   ಈ ಸೂಕ್ಷ್ಮತೆಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ರಸ್ತೆಗಳನ್ನು ನಿರ್ಮಿಸಿ ಗಾಳಿಯಂತ್ರ ಅಳವಡಿಸಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
   ಬಯಲು ಸೀಮೆಯಂತಹ ಒಣ ಪ್ರದೇಶದಲ್ಲಿ ಈ ರೀತಿ ಗುಡ್ಡಗಳು ಕಾಡಿನಿಂದ ಕೂಡಿರುವುದು ಜಲಾನಯನದ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯತೆ ಪಡೆಯುತ್ತವೆ ಎಂಬುದನ್ನು ಗಮನಿಸಬೇಕು ಎಂದು ಈ ಗ್ರಾಮಸ್ಥರುಹೇಳಿದ್ದಾರೆ.
ಏಕಾಏಕಿ ಅನುಮತಿ: ಮೀಸಲು ಅರಣ್ಯಕ್ಕೆ ಒತ್ತಿಕೊಂಡಿರುವ ಈ ಗುಡ್ಡಗಳಲ್ಲಿ ಗಾಳಿಯಂತ್ರ ಅಳವಡಿಸಿದಲ್ಲಿ ಆಗುವ ಪರಿಸರದ ಮೇಲಿನ ಪರಿಣಾಮಗಳನ್ನು ಅಧ್ಯಯನ ಮಾಡದೆ ಏಕಾಏಕಿ ಅನುಮತಿ ನೀಡಲಾಗಿದೆ. ಭದ್ರಾವತಿ ಅರಣ್ಯ ವಿಭಾಗಕ್ಕೆ ಸೇರಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅರಣ್ಯ ವಲಯಕ್ಕೆ ಈ ಪ್ರದೇಶಗಳು ಸೇರುತ್ತವೆ.
     ಈ ಅರಣ್ಯಗಳಿಗೆ ಒತ್ತಿಕೊಂಡಿರುವ ಈ ಗುಡ್ಡಗಳಲ್ಲಿ ಯಾವುದೇ ರೀತಿ ರಸ್ತೆ ಅಥವಾ ಅರಣ್ಯೇತರ ಚಟುವಟಿಕೆಗಳನ್ನು ನಡೆಸಬಾರದೆಂದು ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಲಿಂಗರಾಜು ನೀಡಿದ್ದ ವರದಿಯನ್ನು ಆಧರಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಗಾಳಿಯಂತ್ರ ಸ್ಥಾಪನೆಗೆ ಅನುಮತಿ ನೀಡಿರಲಿಲ್ಲ.
ಅನುಮಾನಕ್ಕೆ ಕಾರಣ:  ಆದರೆ, ಲಿಂಗರಾಜು ಅವರು ವರ್ಗಾವಣೆಯಾದಾಕ್ಷಣ ಅನುಮತಿ ನೀಡಿ ರಸ್ತೆ ಮಾಡಲು ಅವಕಾಶ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ರಸ್ತೆ ಕಾಮಗಾರಿಗೆ ತಡೆವೊಡ್ಡಿದೆ.
   ಆದರೆ, ಕಂದಾಯ ಇಲಾಖೆ ಈ ಬಗ್ಗೆ ಮೌನವಾಗಿಯೇ ಇದೆ. ಗಾಳಿಯಂತ್ರ ಅಳವಡಿಸಿದಲ್ಲಿ ಗುಡ್ಡದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಪ್ರಾಣಿ,  ಪಕ್ಷಿಗಳ ನಿರಾತಂಕ ಓಡಾಟಕ್ಕೆ ಆಗುವ ಸಮಸ್ಯೆಗಳ ಬಗ್ಗೆ ಯೋಚಿಸಬೇಕೆನ್ನುವ ಜನ, ಈ ಗುಡ್ಡಗಳಲ್ಲಿ ಚಿರತೆ ಹಾಗೂ ಕೆಲವೊಮ್ಮೆ ಕರಡಿಗಳನ್ನು ನೋಡಿದ್ದೇವೆ.
  ರಸ್ತೆ ನಿರ್ಮಾಣ, ಕಾಡುನಾಶ, ವಾಹನ ಓಡಾಟದಿಂದ ಮನುಷ್ಯ- ಪ್ರಾಣಿ ಸಂಘರ್ಷ ಹೆಚ್ಚಾಗುವ ಆತಂಕವಿದೆ ಎಂದು ಹೇಳಿದ್ದಾರೆ.
ಪೂರ್ಣ ಅವಲೋಕಿಸಿ: ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಈ ಪರಿಸರದ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಗಾಳಿಯಂತ್ರ ಸ್ಥಾಪನೆ ಮಾಡಿದಲ್ಲಿ ಆಗುವ ಪರಿಸರ ಸಂಬಂಧಿ ಪರಿಣಾಮಗಳನ್ನು ಪೂರ್ಣವಾಗಿ ಅವಲೋಕಿಸಬೇಕು. ಭದ್ರಾವತಿ ಪ್ರಾದೇಶಿಕ ಅರಣ್ಯ ವಿಭಾಗದ ಹೇಳಿಕೆಯಂತೆ ಈಗಾಗಲೆ ರಸ್ತೆ ಮಾಡುವ ಕಾಮಗಾರಿ ನಿಲ್ಲಿಸಲಾಗಿದೆ.
 ಜನ ಹೇಳುವುದು ಗೋಮಾಳವನ್ನು ಜಾನುವಾರು ಮೇವಿಗೆ ಹೊರತಾಗಿ ಬಳಸುವುದು ಮುಂದಿನ ದಿನಗಳಲ್ಲಿ  ಗ್ರಾಮೀಣ ಪ್ರದೇಶದಲ್ಲಿ ಹೊಸ ಸಮಸ್ಯೆಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯೋಚಿಸಿ, ಅರಣ್ಯೇತರ ಚಟುವಟಿಕೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement