ಸಂಸ್ಕೃತಿ ಬೆಳೆಸುವ ಸಂಸ್ಥೆಗಳು ಕ್ರಿಯಾಶೀಲರಾಗಿರುವುದು ಸಮಾಧಾನ
ಭದ್ರಾವತಿ: ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುವಲ್ಲಿ ಆಸಕ್ತಿ ತೋರಿದಾಗ ಸಹ್ಯಾದ್ರಿ ಸುಗಮ ಸಂಗೀತ ಅಕಾಡೆಮಿಯಂತಹ ಸಾವಿರಾರು ಸಂಸ್ಥೆಗಳು ನಾಡಿನ ಉದ್ದಗಲಕ್ಕೆ ಈ ಕೆಲಸವನ್ನು ಮಾಡಲು ಕ್ರಿಯಾಶೀಲರಾಗಿರುವುದು ಸಮಾಧಾನ ತರುವ ವಿಷಯವೆಂದು ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ನುಡಿದರು.
ಅವರು ಪಟ್ಟಣದ ಸಹ್ಯಾದ್ರಿ ಸುಗಮ ಸಂಗೀತ ಅಕಾಡೆಮಿ ಶುಕ್ರವಾರ ಸಂಜೆ ಜಯಶ್ರೀ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಕಾಡೆಮಿಯ 8ನೇ ವಾರ್ಷಿಕೋತ್ಸವ ಹಾಗೂ ಬಾಲಗಂಗಾಧರನಾಥ ಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೇಗೆ ತಾನೇ ಉದ್ಧಾರವಾದಿತು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾಲಿ ಬಿದ್ದಿರುವ ಯಾವುದೇ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ತುಂಬುವ ಕೆಲಸ ಮಾಡುತ್ತಿಲ್ಲ. ಅಧ್ಯಕ್ಷರಿರುವ ಕಡೆ ಸದಸ್ಯರಿಲ್ಲ. ಪರಿಸ್ಥಿತಿ ಹೀಗಿರುವಾಗ ಭಾಷೆ, ಸಂಸ್ಕೃತಿ ಹೇಗೆ ತಾನೆ ಉದ್ಧಾರವಾದೀತು ಎಂದು ಪ್ರಶ್ನಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಬಿ.ಕೆ. ಸಂಗಮೇಶ್ವರ ಏಕಾಂಗಿಯಾಗಿ ಎಂಟು ವರ್ಷಗಳಿಂದ ಅಕಾಡೆಮಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವ ಸಹ್ಯಾದ್ರಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಎಸ್.ಬಿ. ಶಿವಲಿಂಗಪ್ಪ ಅವರ ವ್ಯಕ್ತಿತ್ವ ಮತ್ತು ನಾಯಕತ್ವ ಗುಣಗಳನ್ನು ಕೊಂಡಾಡಿದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿ ಸಂಗೀತ, ಕಲೆ ಮತ್ತು ಸಾಹಿತ್ಯ ಪ್ರೋತ್ಸಾಹದಿಂದ ಮಾತ್ರ ಬೆಳೆಯಲು ಸಾಧ್ಯವೆಂದರು.
ಸನ್ಮಾನ, ಪ್ರಶಸ್ತಿ: ಹುಬ್ಬಳ್ಳಿಯ ಹಿಂದೂಸ್ತಾನಿ ಸಂಗೀತ ಗಾಯಕ ಅಶೋಕ್ ನಾಡಿಗೇರರಿಗೆ ಡಾ. ಗಂಗೂಬಾಯಿ ಹಾನಗಲ್ ಸ್ಮರಣ ಪ್ರಶಸ್ತಿ, ಇಂದುಕುಮಾರ್ಗೆ ಪಿ. ಕಾಳಿಂಗರಾವ್ ಸ್ಮರಣ ಪ್ರಶಸ್ತಿ, ನಾಗಪ್ಪ ಇವರಿಗೆ ನಾಗೇಗೌಡ ಸ್ಮರಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.