ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಈಗ ಗೋದಿಯೂ 1ಕ್ಕೆ ಲಭ್ಯ!

Srinivasa Murthy VN
Updated On : 29 Jun 2013, 11:15 am

-ಆರ್. ತಾರಾನಾಥ್
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜೂ.29

ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಮಾತ್ರವಲ್ಲ ಗೋದಿಯ ಬೆಲೆಯನ್ನೂ ರಾಜ್ಯ ಸರ್ಕಾರ 1ಕ್ಕಿಳಿಸಿದೆ!
 ಇದಕ್ಕೆ ಸಂಬಂಧಿಸಿದಂತೆ ಜೂ.24ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಇದರ ಪ್ರತಿಯನ್ನು ರಾಜ್ಯದ ಎಲ್ಲ ಜಿಲ್ಲೆಗಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳಿಗೆ ಕಳುಹಿಸಿಕೊಟ್ಟಿದೆ. ಆದರೆ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ವಾಸವಾಗಿರುವ ಬಿಪಿಎಲ್ ಪಡಿತರ ಚೀಟಿದಾರರಿಗೆ ಮಾತ್ರ  ಈ ಸೌಲಭ್ಯ ಲಭ್ಯ.
 ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 1ಕ್ಕೆ ಕೆ.ಜಿಯಂತೆ 30 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿದರು. ಕೇಂದ್ರದಿಂದ ನಿರೀಕ್ಷಿಸಿದ ನೆರವು ಸಿಗದೋ, ಘೋಷಣೆ ಜಾರಿಯಾಗುವುದು ಕಷ್ಟವಾಗುತ್ತಿದೆ.
ಎಪಿಎಸ್ ಅಕ್ಕಿ ಮೇಲೆ ಕಣ್ಣು: ಆದರೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹಲವು ಮಾರ್ಗಗಳನ್ನು ಕಂಡು ಕೊಂಡಿದೆ. ಇದರಲ್ಲಿ ಸರ್ಕಾರದ ಕಣ್ಣಿಗೆ ಮೊದಲು ಕಾಣಿಸಿಕೊಂಡಿದ್ದು, ಎಪಿಎಲ್ ಪಡಿತರದಾರರಿಗೆ ವಿತರಣೆಯಾಗುತ್ತಿದ್ದ ಅಕ್ಕಿ. ಜುಲೈನಿಂದ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಿಲ್ಲ. ಇದರೊಂದಿಗೆ ಅಕ್ರಮವಾಗಿ ಪಡಿತರ ಚೀಟಿ ಹೊಂದಿರುವವರನ್ನು ಪತ್ತೆ ಹಚ್ಚಲು ಸರ್ಕಾರ ಆದೇಶಿಸಿದೆ.
 ಇದೀಗ ರಾಜ್ಯ ಸರ್ಕಾರ ಪಡಿತರ ವಿತರಣಾ ಪದ್ಧತಿಯನ್ನು ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಬೇರೆ ಬೇರೆಯಾಗಿ ವಿಂಗಡಿಸಿದೆ. ಈಗ ಘೋಷಣೆಯಾಗಿರುವ ಪ್ರಕಾರ 1ಕ್ಕೆ ಕೆ.ಜಿಯಂತೆ 30 ಕೆ.ಜಿ ಅಕ್ಕಿಯನ್ನು ಗ್ರಾಮಾಂತರ ಪ್ರದೇಶಕ್ಕೆ ವಿತರಿಸಲಾಗುವುದು. ಆದರೆ, ನಗರ ಮತ್ತು ಪಟ್ಟಣದ ಪಡಿತರ ಚೀಟಿದಾರರು ಅಪೇಕ್ಷಿಸಿದರೆ ಅಕ್ಕಿಯೊಂದಿಗೆ ಗೋದಿಯನ್ನೂ 1ಕ್ಕೆ ನೀಡಲಾಗುವುದು. ಭವಿಷ್ಯದಲ್ಲಿ ಅಕ್ಕಿಗೆ ಕೊರತೆಯಾಗದಂತೆ ಕ್ರಮ ವಹಿಸಲು ಸರ್ಕಾರ ಈ ಮುಂಜಾಗ್ರತಾ ಕ್ರಮಕ್ಕೆ ಮುಂದಾಗುತ್ತಿದೆ.
ಗೋದಿ ದರ ಇಳಿಕೆ: ಇದುವರೆಗೆ 3ಕ್ಕೆ ಕೆ.ಜಿ ಗೋದಿಯನ್ನು ಮಾರಲಾಗುತ್ತಿತ್ತು. ಈಗ ಅಕ್ಕಿ ಬಾರ ಇಳಿಸಲು ಗೋದಿಯ ದರವನ್ನು ಸರ್ಕಾರ ಇಳಿಸಿದೆ. ಬರುವ ಜುಲೈನಿಂದ ನಗರ, ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುವಂತೆ ಈ ಪದ್ಧತಿಯನ್ನು ಅನುಸರಿಸಲು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.
 ಆಹಾರ ಧಾನ್ಯದ ಒಟ್ಟು ಪ್ರಮಾಣದಲ್ಲಿ ವ್ಯತ್ಯಾಸವಾಗದಂತೆ ನಗರ, ಪಟ್ಟಣ ಪ್ರದೇಶ ಪಡಿತರ ಚೀಟಿದಾರರಿಗೆ ಒಂದು ಸದಸ್ಯ ಕುಟುಂಬಕ್ಕೆ ಈಗ ಆರ್ಹರಿರುವ 10 ಕೆ.ಜಿ. ಅಕ್ಕಿಯಲ್ಲಿ 5 ಕೆ.ಜಿ. ಅಕ್ಕಿ ಬದಲಿಗೆ 5 ಕೆ.ಜಿ. ಗೋದಿ, ಎರಡು ಸದಸ್ಯ ಕುಟುಂಬಕ್ಕೆ ಈಗ ಅರ್ಹರಿರುವ 20 ಕೆ.ಜಿ. ಅಕ್ಕಿ, 10 ಕೆ.ಜಿ. ಗೋದಿ ಹಾಗೂ ಮೂರು ಸದಸ್ಯರು ಅಥವಾ ಅದಕ್ಕಿಂತ ಹೆಚ್ಚಿರುವ ಕುಟುಂಬಗಳಿಗೆ 10 ಕೆ.ಜಿ. ಗೋದಿ ನೀಡಲು ದಾಸ್ತಾನು ಲಭ್ಯತೆ ಆಧರಿಸಿ ಜುಲೈನಿಂದಲೇ ವಿತರಿಸಬೇಕೆಂದು ತಿಳಿಸಲಾಗಿದೆ.
 ಇದರೊಂದಿಗೆ ಅನ್ನ ಅಂತ್ಯೋದಯ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ ನೀಡುತ್ತಿರುವ 6 ಕೆ.ಜಿ. ಗೋದಿಯ ದರವನ್ನು 2ರಿಂದ 1ಕ್ಕೆ ಇಳಿಸಿಯೂ ಸರ್ಕಾರ ಆದೇಶಿಸಿದೆ.  ನಗರ, ಪಟ್ಟಣ ಪ್ರದೇಶಗಳಲ್ಲಿರುವ ಪಡಿತರ ಚೀಟಿದಾರರು ಅಪೇಕ್ಷೆ ಪಟ್ಟರೆ ಮಾತ್ರ ಅಕ್ಕಿಯ ಬದಲಿಗೆ ಗೋದಿ ನೀಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement