ಅಭ್ಯರ್ಥಿಗಳಲ್ಲಿ ಢವ ಢವ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.10
ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ 7ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಸೋಮವಾರ ಹೊರ ಬೀಳಲಿದೆ.
ಬೆಳಿಗ್ಗೆ 8 ಗಂಟೆಗೆ ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಈ ಬಾರಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಚುನಾವಣೆಗೆ ಬಳಸಿಕೊಂಡಿದ್ದರಿಂದ ಬೆಳಿಗ್ಗೆ 9.30 ಗಂಟೆಯೊಳಗೆ ಎಲ್ಲಾ ವಾರ್ಡ್‌ಗಳ ಮತ ಎಣಿಕೆ ಕಾರ್ಯ ಮುಗಿಯಲಿದೆ.
ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳ 148 ವಾರ್ಡ್‌ಗಳಿಗೆ 686 ಮಂದಿ ಸ್ಪರ್ಧೆ ಮಾಡಿದ್ದು, ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಚಿಕ್ಕಮಗಳೂರು ನಗರಸಭೆಯ 35 ವಾರ್ಡ್‌ಗಳಿಗೆ 198, ಕಡೂರು ಪುರಸಭೆಯ 23 ಸ್ಥಾನಗಳಿಗೆ 113, ಬೀರೂರು ಪುರಸಭೆಯ 23 ಸ್ಥಾನಗಳಿಗೆ 92, ತರೀಕೆರೆ ಪುರಸಭೆಯ 23 ಸ್ಥಾನಗಳಿಗೆ 119, ಮೂಡಿಗೆರೆ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಿಗೆ 56, ಶೃಂಗೇರಿ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಿಗೆ 31, ಕೊಪ್ಪ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಿಗೆ 39 ಹಾಗೂ ಎನ್.ಆರ್.ಪುರ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಿಗೆ 38 ಮಂದಿ ಸ್ಪರ್ಧೆ ಮಾಡಿದ್ದಾರೆ.
ಎಣಿಕೆ ಹೇಗೆ? ಮತ ಎಣಿಕೆ ಕೇಂದ್ರದೊಳಗೆ ಟೇಬಲ್‌ಗಳನ್ನು ಹಾಕಲಾಗಿದ್ದು, ಮೊದಲ ರೌಂಡ್‌ನ ಎಣಿಕೆಗೆ ಪ್ರಥಮ ಮತಗಟ್ಟೆಯನ್ನು ತೆಗೆದುಕೊಳ್ಳಲಾಗುವುದು. ಎರಡನೇ ರೌಂಡ್‌ಗೆ ಎರಡನೇ ಮತಗಟ್ಟೆಯನ್ನು ತೆಗೆದುಕೊಳ್ಳಲಾಗುವುದು. ಹಾಗೆಯೇ ಮೂರನೇ ರೌಂಡ್‌ನಲ್ಲಿ ಮೂರನೇ, ನಾಲ್ಕನೇ ರೌಂಡ್‌ನಲ್ಲಿ ನಾಲ್ಕನೇ ಮತಗಟ್ಟೆಯನ್ನು ತೆಗೆದುಕೊಳ್ಳಲಾಗುವುದು.
ಒಂದು ವಾರ್ಡ್‌ನಲ್ಲಿ ಎರಡು ಮತಗಟ್ಟೆ ಇದ್ದರೆ, ಅದರ ಫಲಿತಾಂಶ ಎರಡನೇ ರೌಂಡ್‌ನಲ್ಲಿ ಮುಕ್ತಾಯಗೊಂಡು ಫಲಿತಾಂಶ ಹೊರ ಬೀಳಲಿದೆ. ಚಿಕ್ಕಮಗಳೂರು ನಗರಸಭೆಯ ಮತ ಎಣಿಕೆಗೆ ನಗರದ ಬೇಲೂರು ರಸ್ತೆಯಲ್ಲಿರುವ ಎಸ್‌ಟಿಜೆ ಕಾಲೇಜಿನಲ್ಲಿ ನಡೆಯಲಿದೆ.
ಇಂದು ಮತ ಎಣಿಕೆ
ತರೀಕೆರೆ: ತರೀಕೆರೆ ಪುರಸಭಾ ಸದಸ್ಯರ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಪಟ್ಟಣದ ಎಸ್‌ಜೆಎಂ ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಪ್ರಾರಂಭವಾಗಲಿದೆ ಎಂದು ತಹಸೀಲ್ದಾರ್ ರಂಜಿತ ತಿಳಿಸಿದ್ದಾರೆ.
ಎರಡು ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, 1ರಿಂದ 11 ವಾರ್ಡುಗಳು ಒಂದು ಕೊಠಡಿಯಲ್ಲಿ 12 ರಿಂದ 23 ಮತ್ತೊಂದು ಕೊಠಡಿಯಲ್ಲಿ ಏಕಕಾಲಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಎಲ್ಲೆಲ್ಲಿ ಮತ ಎಣಿಕೆ
ಚಿಕ್ಕಮಗಳೂರು ಎಸ್‌ಟಿಜೆ ಮಹಿಳಾ ಕಾಲೇಜು, ಬೇಲೂರು ರಸ್ತೆ
ಕೊಪ್ಪ ಸರ್ಕಾರಿ ಪ್ರ.ದ ಕಾಲೇಜು, ಬಾಳಗಡಿ
ಶೃಂಗೇರಿ ಮಿನಿ ವಿಧಾನಸೌಧ
ಮೂಡಿಗೆರೆ ತಾಲೂಕು ಕಚೇರಿ
ಕಡೂರು,ಬೀರೂರು ಸರ್ಕಾರಿ ಪ.ಪೂ ಕಾಲೇಜು, ಕಡೂರು
ತರೀಕೆರೆ ಎಸ್‌ಜೆಎಂಪಿಯು ಕಾಲೇಜು
ಎನ್.ಆರ್.ಪುರ ತಾಲೂಕು ಪಂಚಾಯ್ತಿ ಕಚೇರಿ