ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಿ

Srinivasa Murthy VN
Updated On : 11 Mar 2013, 2:23 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 10
ಭಾರತ, ಜ್ಞಾನಿಗಳ ತವರೂರು. ಜ್ಞಾನ ಬಲದಿಂದ ಅಜ್ಞಾನವನ್ನು ಅಳಿಸಿ ಮಠ, ಮಂದಿರ, ಗುರುಗಳ ಮಾರ್ಗದರ್ಶನದೊಂದಿಗೆ ಉತ್ತಮ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ  ಹೇಳಿದ್ದಾರೆ.
ಲಿಂಗೈಕ್ಯ ಶ್ರೀ ಜಯಚಂದ್ರಶೇಖರ ಮಹಾಸ್ವಾಮಿಗಳ 18ನೇ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ 158ನೇ ಜಯಂತಿ ಮಹೋತ್ಸವದ ಅಂಗವಾಗಿ ಇಲ್ಲಿನ ಕಲ್ಯಾಣ ನಗರದಲ್ಲಿ ಭಾನುವಾರ ನಡೆದ ಬಸವತತ್ತ್ವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಲವೂ ಸಂಸ್ಕಾರದಿಂದ ತೀರ್ಥವಾಗುತ್ತದೆ. ಹೂವು ಪ್ರಸಾದವಾಗುತ್ತದೆ. ಮನುಷ್ಯನು ಸಂಸ್ಕಾರದಿಂದ ಒಳ್ಳೆಯ ವ್ಯಕ್ತಿಯಾಗುತ್ತಾನೆ. ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಸಂಸ್ಕಾರವನ್ನು ಮರೆಯದೇ ಮುಂದುವರೆಸಬೇಕು,  ಆ ಮೂಲಕ ಬದುಕನ್ನು ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಆ ಶಕ್ತಿ ಮನುಷ್ಯನಲ್ಲಿದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಮನುಷ್ಯ ಕಾಲು ದಾರಿಯಲ್ಲಿ ನಡೆಯುತ್ತಿದ್ದ ನಂತರದಲ್ಲಿ ಎತ್ತಿನ ಗಾಡಿಗೆ ಹಾಗೆಯೇ ರೈಲು, ವಿಮಾನದಲ್ಲಿ ಪ್ರಯಾಣಿಸುವ ಹಂತಕ್ಕೆ ಬಂದಿದ್ದಾನೆ. ಇದೀಗ ಇನ್ನಷ್ಟು ಬೇಗ ಹೋಗುವಂತಹ ಸಾಧನವನ್ನು ಹುಡುಕುತ್ತಿದ್ದಾನೆ. ಇಷ್ಟೆಲ್ಲಾ ಮುಂದುವರಿದ್ದರೂ ಮನುಷ್ಯ ಬಾಹ್ಯ ಲೋಕಕ್ಕೆ ಒಳಗಾಗಿ ಮನಸ್ಸಿನಲ್ಲಿ ಸಮಧಾನ ಇಲ್ಲದೆ ಚಡಪಡಿಸುತ್ತಿದ್ದಾನೆ. ಅಂತಹವರು ಮಠ, ಮಂದಿರ ಮತ್ತು ಗುರುಗಳ ಆಶೀರ್ವಚನ ಪಡೆದು, ಸಂಸ್ಕಾರಗಳ ಮೂಲಕ ಇತರರಿಗೆ ಮಾರ್ಗದರ್ಶಕರಾಗಬೇಕು ಎಂದರು.
ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಬಸವಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ, ಗೌರಮ್ಮ ಬಸವೇಗೌಡ, ಶ್ಯಾಂಸುಂದರ್, ಡಾ. ವೇದಮೂರ್ತಿ, ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಕಲ್ಮರಡಪ್ಪ, ಎಚ್.ಎಚ್. ದೇವರಾಜ್, ರಂಗಪ್ಪ, ಶೇಖರಪ್ಪ, ಉಪ್ಪಳ್ಳಿ ಲೋಕೇಶ್ ಉಪಸ್ಥಿತರಿದ್ದರು.
ನಗರಸಭೆಯ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್‌ಕುಮಾರ್ ಸ್ವಾಗತಿಸಿದರು.

ವಿಶೇಷ ಪೂಜೆ
ಕ.ಪ್ರ ವಾರ್ತೆ, ಮೂಡಿಗೆರೆ, ಮಾ.10
ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕನ್ನಾಪುರ ಇಂದಿರಾನಗರದಲ್ಲಿರುವ ಶನೈಶ್ಚರ ದೇವಾಲಯದಲ್ಲಿ 14ನೇ  ವರ್ಷದ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ 9009 ದೀಪಗಳನ್ನು ಬೆಳಗುವುದರ ಮೂಲಕ ದೀಪಾರಾಧನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶನೈಶ್ಚರಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನಡೆಯಿತು. ಪಂಚಾಮೃತ ಅಭಿಷೇಕ ನೆರವೇರಿತು.
ಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ಗಂಜಲಗೋಡಿನ ಶಾಂತೇಗೌಡರು ಮತ್ತು ತಂಡದವರಿಂದ ಶನಿಪ್ರಭಾವ ಅಥವಾ ರಾಜ ಸತ್ಯವಂತ ಹರಿಕಥೆ ಜರುಗಿತು.
------
ಕಾಫಿ ಕಣಿವೆಯಲ್ಲಿ ಸಂಭ್ರಮದ ಶಿವರಾತ್ರಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.10
ಮಹಾ ಶಿವರಾತ್ರಿ ಹಬ್ಬವನ್ನು ಕಾಫಿ ಕಣಿವೆ ಚಿಕ್ಕಮಗಳೂರಿನಲ್ಲಿ ಭಾನುವಾರ ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ನಗರದ ವಿವಿಧ ಶಿವ ದೇವಾಲಯಗಳಲ್ಲಿ ಬೆಳಗಿನಿಂದ ರುದ್ರಾಭಿಷೇಕ, ವಿಶೇಷ ಪೂಜೆ, ಹೋಮ ಹವನ ಭಕ್ತರಿಂದ ಸಾಮೂಹಿಕ ಭಜನೆ ಜರುಗಿದವು. ಬೆಳಗಿನಿಂದ ಭಕ್ತರು ವಿವಿಧ ಶಿವ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಪ್ರಾರ್ಥಿಸಿದರು. ಸಂಜೆಯ ನಂತರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಇತಿಹಾಸ ಪ್ರಸಿದ್ಧ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ರಾತ್ರಿ 8 ಗಂಟೆಗೆ ಆರಂಭಗೊಂಡ ಅಭಿಷೇಕ, ರಾತ್ರಿ ಇಡೀ ನಿರಂತರವಾಗಿ ನಡೆಯಿತು.
ಇದೇ ವೇಳೆ ಬೆಳಗಿನಿಂದ ಉಪವಾಸ ವೃತ ಕೈಗೊಂಡಿದ್ದ ಭಕ್ತರು ದೇವಾಲಯಗಳಲ್ಲಿ ರಾತ್ರಿ ಇಡೀ ಸಾಮೂಹಿಕವಾಗಿ ಭಜನೆಯಲ್ಲಿ ತೊಡಗಿದ್ದರು. ನಗರದ ನಾಲ್ಕು ದಿಕ್ಕಿನಲ್ಲಿರುವ ಕೋಟೆ ಬಡಾವಣೆಯ ಶ್ರೀ ವಿರೂಪಾಕ್ಷೆಶ್ವರ, ರಾಮನಹಳ್ಳಿಯ ರಾಮೇಶ್ವರ, ಕೆ.ಎಂ. ರಸ್ತೆಯ ಕಣಿವೆ ರುದ್ರೇಶ್ವರ, ಬಸವನಹಳ್ಳಿಯ ಶ್ರೀ ಓಂಕಾರೇಶ್ವರ ಮತ್ತು ಶಂಕರಮಠ ಸೇರಿದಂತೆ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳು ಜರುಗಿದವು.
ಗಂಗಾಜಲ ವಿತರಣೆ: ರಾಜ್ಯ ಮುಜರಾಯಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಾಲೂರು ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರು ಕಳೆದ ಕೆಲ ವರ್ಷಗಳಿಂದ ಹರಿದ್ವಾರದಿಂದ ಶಿವರಾತ್ರಿ ವೇಳೆ ಗಂಗಾಜಲವನ್ನು ತರಿಸಿ ಅಭಿಷೇಕಕ್ಕಾಗಿ ರಾಜ್ಯದ ಮುಜರಾಯಿ ಶಿವ ದೇವಾಲಯಗಳಿಗೆ ವಿತರಿಸುತ್ತಿರುವ ಗಂಗಾಜಲ ಈ ಬಾರಿಯೂ ಜಿಲ್ಲೆಯಲ್ಲಿ ವಿತರಿಸಲಾಯಿತು.
 ಭಾನುವಾರ ಬೆಳಗಿನ ಜಾವ ನಗರದ ಶ್ರೀ ಬೋಳರಾಮೇಶ್ವರ ದೇವಾಲಯಕ್ಕೆ ಗಂಗಾಜಲದ ಕ್ಯಾನ್‌ಗಳನ್ನು ಹೊತ್ತ ವಾಹನ ಹರಿದ್ವಾರದಿಂದ ಆಗಮಿಸಿತು. ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಅವುಗಳಿಗೆ ಪೂಜೆ ಸಲ್ಲಿಸಿ ನಂತರ ಜಿಲ್ಲೆಯ ಶಿವ ದೇವಾಲಯಗಳಿಗೆ ಅಭಿಷೇಕಕ್ಕಾಗಿ ವಿತರಿಸಲಾಯಿತು. ಮಹಾ ಶಿವರಾತ್ರಿ ಪ್ರಯುಕ್ತ ಚಿಕ್ಕಮಗಳೂರಿನ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಹಾ ಶಿವರಾತ್ರಿ ಪ್ರಯುಕ್ತ ಚಿಕ್ಕಮಗಳೂರಿನ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಭಾನುವಾರ ವಿಶೇಷ ಪೂಜೆ ನಡೆಯಿತು.

ತಾಲೂಕಿನ ವಿವಿಧೆಡೆ ಶಿವರಾತ್ರಿ
ನರಸಿಂಹರಾಜಪುರ: ತಾಲೂಕಿನ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿಯ ಪ್ರಯುಕ್ತ ರುದ್ರಾಭಿಷೇಕ, ವಿಶೇಷ ಪೂಜೆ, ಮಂಗಳಾರತಿ ನಡೆಯಿತು. ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು. ಪಟ್ಟಣದ ಹಳೇ ಮಂಡಗದ್ದೆ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಮೆಣಸೂರು ಮುಕ್ತಿ ದಾಮದ ಸಮೀಪವಿರುವ ಮಲ್ಲಿಕಾರ್ಜುನ ದೇವಸ್ಥಾನ, ಮುತ್ತಿನಕೊಪ್ಪ ಈಶ್ವರ ದೇವಸ್ಥಾನ, ಗಡಿಗೇಶ್ವರ ಭವಾನಿ ಶಂಕರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು. ಬಾಳೆಹೊನ್ನೂರಿನ ಮಾರ್ಕೇಂಡೇಶ್ವರ ದೇವಸ್ಥಾನದಲ್ಲಿ ರುದ್ರ ಹೋಮ, ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ಕುದುರೆಗುಂಡಿ ಅಶ್ವಗುಂಡೇಶ್ವರ ದೇವಸ್ಥಾನ, ಯಡಗೆರೆ ರಾಮನಾಥೇಶ್ವರ ದೇವಸ್ಥಾನದಲ್ಲಿ ರಂಗಪೂಜೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement