ನಾಳೆ ಮಹಿಳಾ ದಿನಾಚರಣೆ
ಶಿವಮೊಗ್ಗ: ಸುವರ್ಣ ಲೇಡಿಸ್ ಕ್ಲಬ್ ಮಾರ್ಚ್ 12ರಂದು ಮಧ್ಯಾಹ್ನ 2.30ಕ್ಕೆ ಅಂಬೇಡ್ಕರ್ ಭವನದಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಂಡಿದೆ. ಮುಖ್ಯ ಅತಿಥಿಯಾಗಿ ಜೆಡಿಎಸ್ನ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮನೋವೈದ್ಯೆ ಡಾ.ಕೆ.ಎಸ್. ಪವಿತ್ರ, ಸುವರ್ಣ ವಾಹಿನಿಯ ಆಡಳಿತಾಧಿಕಾರಿ ಕೆ.ಬಿ. ವೈದ್ಯ ಪಾಲ್ಗೊಳ್ಳುವರು. ಇದೇ ವೇಳೆ ಸಮಾಜ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಸನ್ಮಾನಿಸಲಾಗುವುದು. ಕ್ಲಬ್ನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕ್ಲಬ್ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಕ್ಲಬ್ನ ಅಧ್ಯಕ್ಷೆ ಉಮಾಮೂರ್ತಿ ತಿಳಿಸಿದ್ದಾರೆ. ವಿವರಗಳಿಗಾಗಿ- 9731315284.
ಹೊರನಾಡಿನಲ್ಲಿ ರಥೋತ್ಸವ
ಶಿವಮೊಗ್ಗ: ಹೊರನಾಡು ಆದಿ ಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಮಾ.12ರಿಂದ 16ರ ವರೆಗೆ ಶ್ರೀಮನ್ ಮಹಾರಥೋತ್ಸವ ಕಾರ್ಯಕ್ರಮ ಏರ್ಪಡಿಸಿದೆ. 12ರಂದು ರಥೋತ್ಸವಾಂಗ ಗಣಪತಿ ಪೂಜೆ, ಗಣಪತಿ ಹೋಮ ಮತ್ತು ರಾತ್ರಿ ರಂಗಪೂಜೆ. 13ರಂದು ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ, 14ರಂದು ಶ್ರೀಮನ್ ಮಹಾರಥೋತ್ಸವ, 15ರಂದು ಕುಂಕುಮೋತ್ಸವ, ರಾತ್ರಿ ಇಡಿಗಾಯಿ ಸೇವೆ, 16ರಂದು ಸಂಪ್ರೋಕ್ಷಣೆ ಹಮ್ಮಿಕೊಂಡಿದೆ ಎಂದು ದೇವಾಲಯದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಜೆಡಿಎಸ್ ವರ್ತನೆಗೆ ಕಾಂಗ್ರೆಸ್ ಖಂಡನೆ
ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವ ಹೊಸನಗರ ತಾಲೂಕು ಜೆಡಿಎಸ್ ಪ್ರಮುಖರ ವರ್ತನೆಯನ್ನು ಸಾಗರ ತಾಲೂಕು ಯುವ ಕಾಂಗ್ರೆಸ್ ಘಟಕ ಖಂಡಿಸಿದೆ. ಸರ್ವಾಧಿಕಾರಿ ಎಂಬ ಹೇಳಿಕೆ ನೀಡಿದ್ದನ್ನು ಯುವ ಕಾಂಗ್ರೆಸ್ ಘಟಕ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ.
ಮಲಹಾನಿಕರೇಶ್ವರ ಸ್ವಾಮಿ ರಥೋತ್ಸವ
ಕ.ಪ್ರ ವಾರ್ತೆ, ಶೃಂಗೇರಿ, ಮಾ.10
ಇಲ್ಲಿನ ಶ್ರೀ ಶಾರದಾ ಪೀಠದಲ್ಲಿ ಭಾನುವಾರ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಹರ್ಷಿ ವಿಭಾಂಡಕ ಮುನಿಗಳ ತಪೋಭೂಮಿ ಞಬೆಟ್ಟದ ಮಲಹಾನಿಕರೇಶ್ವರ ದೇವಾಲಯದಲ್ಲಿ ಭವಾನಿ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು.ಶಿವರಾತ್ರಿ ಅಂಗವಾಗಿ ಗುರುವಾರದಿಂದ ಬೆಟ್ಟದ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಹೋಮ ಹವನಗಳು ಜರುಗಿತು.
ಭಾನುವಾರ ಪಟ್ಟಣವನ್ನು ತಳಿರು ತೋರಣಗಳು, ರಸ್ತೆ ಶುಭ್ರಗೊಳಿಸಿ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಧಾಮಿಕ ಕಾರ್ಯಕ್ರಮಗಳು, ಪೂಜೆಗಳು ಆರಂಭವಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧೆ ಭಕ್ತಿಯಿಂದ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರ ಮಲಹಾನಿಕರೇಶ್ವರಸ್ವಾಮಿ ಮಹಾರಥೋತ್ಸವ ನಡೆಯಲಿದೆ. ಮರುದಿನ ಭವಾನಿ ಮಲಹಾನಿಕರೇಶ್ವರ ಸ್ವಾಮಿಯವರ ಸಂದಾನೋತ್ಸವ, ಅದರ ಮರುದಿನ ತುಂಗಾನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಇದರೊಂದಿಗೆ ಶಿವರಾತ್ರಿಯ ಎಲ್ಲಾ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತದೆ.
ಸಂಭ್ರಮದ ಶಿವರಾತ್ರಿ ಆಚರಣೆ
ಮೂಡಿಗೆರೆ: ಶಿವರಾತ್ರಿ ಹಬ್ಬದ ದಿನಾದ ಭಾನುವಾರ ತಾಲೂಕಿನ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿಯಾಗಿರುವ ಕಳಸದ ಕಲಶೇಸ್ವರ, ದೇವವೃಂದದ ರಾಮೇಶ್ವರ, ಬೈರಾಪುರದ ನಾಣ್ಯದ ಬೈರವೇಶ್ವರ, ದೇವರ ಮನೆಯ ಕಾಲಬೈರವೇಶ್ವರ, ಹಳೇ ಮೂಡಿಗೆರೆಯ ಈಶ್ವರ, ಪಟ್ಟಣದ ಗಂಗಾಧರೇಶ್ವರ, ಮೇಗಲಪೇಟೆಯ ಬಸವೇಶ್ವರ ದೇವಾಲಯಗಳು ಸೇರಿದಂತೆ 26 ದೇವಾಲಯ ಗಳಲ್ಲಿ ಶಿವರಾತ್ರಿ ಆಚರಿಸಲಾಯಿತು. ಬೆಳಗ್ಗಿನಿಂದಲೆ ಭಕ್ತರು ದೇವಾಲಯಗಳಿಗೆ ಹೋಗಿ ಅರ್ಚನೆ ಮಾಡಿಸಿ ಪುನೀತರಾದರು. ಕಾಶಿ ವಿಶ್ವನಾಥನ ಸನ್ನಿಧಿಯಿಂದ ಆಗಮಿಸಿದ ಗಂಗೆಯನ್ನು ತಹಸೀಲ್ದಾರ್ ರುದ್ರಾಪ್ಪಾಜಿ ರಾವ್ ಸ್ವೀಕರಿಸಿ ಮುಜರಾಯಿ ದೇವಾಲಯಗಳಿಗೆ ವಿತರಿಸಿದರು.
ಶುಭಾ ಮರವಂತೆಗೆ ಫೆಲೋಶಿಪ್
ಶಿವಮೊಗ್ಗ: ಕರ್ನಾಟಕ ಸರಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಡಾ. ಶುಭಾ ಮರವಂತೆ ಅವರಿಗೆ 2012-13ನೇ ಸಾಲಿನ ಸಂಶೋಧನ ಫೇಲೋಶಿಪ್ ನೀಡಿದೆ. ಕನಕ ಕೃತಿಗಳ ಮಧ್ಯಕಾಲೀನ ಚರಿತ್ರೆಯ ಪುನಾರಚನೆ ವಿಷಯದ ಮೇಲಿನ ಸಂಶೋಧನೆಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗಿದ್ದು, ಅದಕ್ಕಾಗಿ ಒಂದು ಲಕ್ಷ ರು. ಫೆಲೋಶಿಪ್ ನೀಡಿದೆ. ಒಟ್ಟು ಮೂರು ಜನರನ್ನು ಪ್ರಸ್ತುತ ವರ್ಷದಲ್ಲಿ ಕೇಂದ್ರ ಆಯ್ಕೆ ಮಾಡಿದೆ ಎಂದು ಕೇಂದ್ರದ ಸಮನ್ವಯ ಅಧಿಕಾರಿ ಕಾ.ತಾ. ಚಿಕ್ಕಣ್ಣ ತಿಳಿಸಿದ್ದಾರೆ. ಡಾ. ಶುಭಾ ಮರವಂತೆ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.
ತೆಂಗಿನಕಾಯಿ ಕೀಳುವ ತರಬೇತಿ
ಶಿವಮೊಗ್ಗ: ಕೃಷಿ ವಿಜ್ಞಾನ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ 18ರಿಂದ 23ರ ವರೆಗೆ ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತಿ ಕಾಯಿ ಕೀಳುವ ಮತ್ತು ಸಸ್ಯ ಸಂರಕ್ಷಣಾ ಪ್ರಾತ್ಯಕ್ಷಿಕಾ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಯುವಕ, ಯುವತಿಯರು, ಕೃಷಿ ಕಾರ್ಮಿಕರು ಭಾಗವಹಿಸಬಹುದು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಧೈರ್ಯಶಾಲಿಗಳಾಗಿದ್ದು, 18ರಿಂದ 35 ವರ್ಷದ ವಯೋವುತಿಯವರಾಗಿರಬೇಕು. ಭಾಗವಹಿಸಲು ಇಚ್ಚಿಸುವವರು ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇವರನ್ನು 15ರೊಳಗೆ ಖುದ್ದಾಗಿ ಬಂದು ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಮಾಹಿತಿಗಾಗಿ ದೂ- 295516 ಸಂಪರ್ಕಿಸಬಹುದು.
ಶನೈಶ್ಚರ ಮಹಾತ್ಮೆ ಯಕ್ಷಗಾನ
ಭದ್ರಾವತಿ: ಪಟ್ಟಣದ ಎಸ್ಎವಿ ಶಾಲಾ ಆವರಣದಲ್ಲಿ ಯಕ್ಷಕಾರಂಜಿ ಮತ್ತು ಭಕ್ತರು ಏರ್ಪಡಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಶನೈಶ್ಚರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರಸಂಗ ಯಶಸ್ವಿಯಾಗಿ ನಡೆಯಿತು. ಧರ್ಮಸ್ಥಳದಿಂದ ತರಲಾಗಿದ್ದ ಶ್ರೀ ಮಹಾಗಣಪತಿಯ ಪೂಜೆ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಗ್ಗೆ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿನಿಯೋಗಿಸಲಾಯಿತು. ನಂತರ ಸಂಜೆ 5.30ಕ್ಕೆ ಅಲ್ಲಿ ಸ್ಥಾಪಿಸಿದ್ದ ಮಹಾಗಣಪತಿಯನ್ನು ರಾಜಬೀದಿ ಉತ್ಸವದಲ್ಲಿ ಕೊಂಡೊಯ್ದು ಎಸ್ಎವಿ ಶಾಲಾ ಅವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಯೂ ಪೂಜೆ ಮುಗಿದ ನಂತರ ರಾತ್ರಿ 9.30ಕ್ಕೆ ಯಕ್ಷಗಾನ ಪ್ರಾರಂಭವಾಯಿತು.
ಪ.ಗೋ. ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದವತಿಯಿಂದ ನೀಡಲಾಗುವ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಯ ಯುವ ಪತ್ರಕರ್ತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. 2012ನೇ ಸಾಲಿನಲ್ಲಿ ಪ್ರಕಟವಾದ ವರದಿಗಳನ್ನು ಪರಿಗಣಿಸಲಾಗುವುದು. ವಯಸ್ಸು 45 ಮೀರಿರಬಾರದು. ಗ್ರಾಮೀಣ ವರದಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಪ್ರಶಸ್ತಿ 5001 ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಅರ್ಜಿ ಸಲ್ಲಿಸಲು ಮಾ.30 ಕೊನೆಯ ದಿನ. ಪ್ರವೇಶ ಪತ್ರಗಳನ್ನು ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಉರ್ವ ಮಾರ್ಕೆಟ್, ಮಂಗಳೂರು ಸಲ್ಲಿಸಬಹುದು. ಮಾಹಿತಿಗೆ ದೂ-0824245011 ಸಂಪರ್ಕಿಸಿ.
ಎಣಿಕೆ ಕೊಠಡಿಗೆ ಒಬ್ಬರಿಗೆ ಪ್ರವೇಶ
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತಎಣಿಕೆ ಕಾರ್ಯ ಮಾರ್ಚ್ 11ರಂದು ಬೆಳಗ್ಗೆ 8 ಗಂಟೆಗೆ ನಗರದ ಎಸ್.ಆರ್. ನಾಗಪ್ಪ ಶ್ರೇಷ್ಠಿ ಅನ್ವಯಿಕ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಸಂಬಂಧ ಮತ ಎಣಿಕೆ ಕೇಂದ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಅಭ್ಯರ್ಥಿಯಿಂದ ನೇಮಕವಾದ ಏಜೆಂಟ್ ಯಾರಾದರೊಬ್ಬರು ಎಣಿಕೆ ಕೊಠಡಿಯ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಮತಎಣಿಕೆ ಕೇಂದ್ರದ ಒಳಗೆ ಬರುವ ವ್ಯಕ್ತಿಗಳು ಯಾವುದೇ ಮಾರಕಾಸ್ತ್ರ, ಬೀಡಿ, ಸಿಗರೇಟು, ಮೊಬೈಲ್ ಮತ್ತು ಸಿಡಿಮದ್ದು, ಇತರೆ ವಸ್ತುಗಳನ್ನು ತರುವುದನ್ನು ನಿಷೇಧಿಸಿದೆ. ಮತ ಎಣಿಕೆ ಕೇಂದ್ರದೊಳಗೆ ಚುನಾಯಿತ ಪ್ರತಿನಿಧಿಗಳೂ ಸೇರಿ ಯಾವುದೇ ವ್ಯಕ್ತಿಗಳು ಪ್ರವೇಶಿಸುವುದಕ್ಕೆ ಅವಕಾಶವಿಲ್ಲ.